ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೆ ತಿಪ್ಪೆಗುಂಡಿಯಾದ ಉದ್ಯಾನ

Last Updated 19 ಮೇ 2017, 5:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಜೈಶಂಕರ ಕಾಲೊನಿಯಲ್ಲಿರುವ  ಸ್ವಾತಂತ್ರ್ಯ  ಸುವರ್ಣ ಮಹೋತ್ಸವದ  ನೆನಪಿಗಾಗಿ ನಿರ್ಮಿಸಿದ ಉದ್ಯಾನ ಸಮರ್ಪಕ ನಿರ್ವಹಣೆ ಇಲ್ಲದೆ  ತಿಪ್ಪೆಗುಂಡಿಯಾಗಿ ಮಾರ್ಪಟ್ಟಿದೆ.

ಕಾಲೊನಿಯ ಮಧ್ಯಭಾಗದಲ್ಲಿ 1997ರಲ್ಲಿ ಉದ್ಯಾನ ನಿರ್ಮಿಸಲಾಗಿದ್ದು, ಒಂದು ಎಕರೆ ವಿಸ್ತೀರ್ಣ ಇದೆ. ಸಮೀಪದ ಶಾಂತಿನಿಕೇತನ ಶಾಲೆಯ ಸಿಬ್ಬಂದಿ ಮತ್ತು ಓಣಿಯ ಕೆಲವರು ಸಮಿತಿ ರಚಿಸಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸುವರ್ಣ ಮಹೋತ್ಸವದ ನೆನಪಿಗಾಗಿ ಉದ್ಯಾನ ನಿರ್ಮಿಸಿದ್ದರು. ಮಕ್ಕಳ ಆಟಿಕೆ ಪರಿಕರಗಳು, ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕೂಡ ಮಾಡಲಾಗಿತ್ತು.

ನಂತರ ನಿರ್ವಹಣೆಗಾಗಿ ಉದ್ಯಾನವನ್ನು ನಗರಸಭೆಗೆ ಹಸ್ತಾಂತರಿಸಲಾಯಿತು. ನಗರಸಭೆಯಿಂದ ಉದ್ಯಾನದ ಸುತ್ತ ಆವರಣಗೋಡೆ ಕಟ್ಟಲಾಗಿದೆ. ಸಸಿಗಳು, ಹೂವಿನ ಗಿಡಗಳನ್ನು ನೆಡಲಾಗಿತ್ತು. ಹೊರಗಿನ ನೀರು ಒಳಗೆ ಬಾರದಂತೆ ಚರಂಡಿ ನಿರ್ಮಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಸಂರಕ್ಷಣೆ ಮಾಡದ ಕಾರಣ ಉದ್ಯಾನ ಹಾಳು ಬಿದ್ದಿದೆ.

‘ಆವರಣಗೋಡೆಗೆ ಹತ್ತಿಕೊಂಡು ಹೊರಗಡೆ ನಿರ್ಮಿಸಿದ ಚರಂಡಿ ನೀರು ಮುಂದಕ್ಕೆ ಸಾಗದೆ ಅಲ್ಲಲ್ಲಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ಒಳಗಡೆ ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿಲ್ಲ.  ಓಣಿಯವರು ಕೂಡ ಮನೆಯ ಕಸ ಕಡ್ಡಿಯನ್ನು ತಂದು ಇಲ್ಲಿ ಚೆಲ್ಲುತ್ತಿದ್ದಾರೆ.

ಮೂತ್ರವಿಸರ್ಜನೆ, ಬಹಿರ್ದೆಸೆಗೆ ಜನರು ಇಲ್ಲಿಗೆ ಬರುತ್ತಾರೆ. ಹಂದಿ, ನಾಯಿ ಓಡಾಡುತ್ತಿವೆ. ವಾಸನೆಯಿಂದಾಗಿ  ಬೆಳಿಗ್ಗೆ ವಾಕಿಂಗ್ ಬರುವವರು  ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ’ ಎಂಬುದು ಪ್ರೇಮಸಾಗರ ಅವರ ಅಳಲು.

‘ಮಕ್ಕಳ ಆಟಿಕೆ ಸಾಮಾನುಗಳನ್ನು ಕೂಡ ಅಳವಡಿಸಲಾಗಿದೆ. ಹೀಗಾಗಿ, ಸಂಜೆ ಓಣಿಯ ಮಕ್ಕಳು ಆಟ ಅಡುತ್ತಿದ್ದರು. ಈಗ ಅವೆಲ್ಲ ಹಾಳಾಗಿವೆ. ಉದ್ಯಾನದಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಹುಲ್ಲು ಬೆಳೆಸಬೇಕು. ಅಲ್ಲದೆ, ಅದರ ಸಂರಕ್ಷಣೆಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕು ಎಂದು ನಗರಸಭೆಯವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ  ಪ್ರಯೋಜನವಾಗಿಲ್ಲ’ ಎಂದು ಮುಕ್ತಾರಸಾಬ್ ಅವರು ದೂರಿದರು.

‘ಸುವರ್ಣ ಮಹೋತ್ಸವ ಉದ್ಯಾನ ತಿಪ್ಪೆಗುಂಡಿಯಂತಾದರೂ ಸಂಬಂಧಿತ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಸರಿಯಲ್ಲ. ಇನ್ನು ಮುಂದೆಯೂ ಪರಿಸ್ಥಿತಿ ಹಿಗೇಯೇ ಮುಂದುವರೆದರೆ ನಗರಸಭೆ ಎದುರು ಧರಣಿ ನಡೆಸಲಾಗುವುದು’ ಎಂದು ಓಣಿ ನಿವಾಸಿ  ಶಿವಶಂಕರಪ್ಪ ಎಚ್ಚರಿಸಿದರು.

‘ಜೈಶಂಕರ ಕಾಲೊನಿಯ  ಉದ್ಯಾನದ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಪ್ರಮುಖ ಉದ್ಯಾನಗಳಲ್ಲಿ ಅಭಿವೃದ್ಧಿ ನಡೆಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಅಜರಅಲಿ ನವರಂಗ ಹೇಳಿದರು.

*

ಉದ್ಯಾನದಲ್ಲಿ ಕಸ ಹಾಕುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ಉದ್ಯಾನ ಹಂದಿ, ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಸೊಳ್ಳೆ ಕಾಟ ಹೆಚ್ಚಾಗಿದೆ
ನಾಗರಾಜ ಪಾಟೀಲ
ಕಾಲೊನಿ  ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT