ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹಾಳಾಗಿ ರೈತರು ಕಂಗಾಲು

Last Updated 19 ಮೇ 2017, 5:48 IST
ಅಕ್ಷರ ಗಾತ್ರ

ಬೀದರ್‌: ಭಾಲ್ಕಿ ತಾಲ್ಲೂಕಿನ ಹುಪಳಾದಲ್ಲಿ ದೊಡ್ಡ ಕೆರೆ ಒಡೆದು 50 ಎಕರೆ ಕೃಷಿ ಭೂಮಿಯಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ಆರು ತಿಂಗಳಾದರೂ ರಾಜ್ಯ ಸರ್ಕಾರ ಜಮೀನು ಸಮತಟ್ಟುಗೊಳಿಸಲು ರೈತರಿಗೆ ಪರಿಹಾರ ಕೊಟ್ಟಿಲ್ಲ.

ಹತ್ತು ದಿನಗಳ ನಂತರ ಮುಂಗಾರು ಆರಂಭವಾಗಲಿದೆ. ಜಿಲ್ಲೆಯ ಎಲ್ಲೆಡೆ ಬಿತ್ತನೆಗೆ ಭೂಮಿ ಹದಗೊಳಿಸುವ ಕಾರ್ಯ ಆರಂಭವಾಗಿದೆ. ಆದರೆ ಹುಪಳಾದಲ್ಲಿ ಹೊಲಗಳಲ್ಲಿ ಕೆರೆ ಕೊಚ್ಚಿಕೊಂಡು ಬಂದು ಕಲ್ಲುಗಳು ರಾಶಿರಾಶಿಯಾಗಿ ಬಿದ್ದುಕೊಂಡಿರುವ ಕಾರಣ ಉಳುಮೆ ಮಾಡಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ.

ಕೆರೆಯ ಕೆಳಭಾಗದ ಪ್ರದೇಶದಲ್ಲಿ ಜಮೀನು ಹೊಂದಿರುವ ರೈತರು ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಿದ್ದರು. 2016ರ ಮುಂಗಾರಿನ ಅಂತ್ಯದಲ್ಲಿ ಮೊದಲ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ, ಹಿಂಗಾರಿನಲ್ಲಿ ಹಾಳುಬಿದ್ದ ಜಮೀನಿನಲ್ಲಿ ಏನೂ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

2016ರ ಸೆಪ್ಟೆಂಬರ್‌ 23ರಂದು ಅತಿವೃಷ್ಟಿಯಿಂದಾಗಿ ಹುಪಳಾ ಕೆರೆ ಒಡೆದು ಕೆರೆಯ ಕೆಳ ಪ್ರದೇಶದಲ್ಲಿದ್ದ ಮೂರು ಬಾವಿಗಳು ಮುಚ್ಚಿ ಹೋಗಿದ್ದವು. ತೊಗರಿ ಹಾಗೂ ಸೋಯಾ ನೀರು ಪಾಲಾಗಿದ್ದವು. ಹೊಲದಲ್ಲಿ ರಾಶಿ ರಾಶಿ ಕಲ್ಲುಗಳು ಬಿದ್ದುಕೊಂಡಿವೆ. ಉಳುಮೆ ಮಾಡಲು ಸಾಧ್ಯವಾಗದಷ್ಟು ತಗ್ಗುಗುಂಡಿಗಳು ನಿರ್ಮಾಣವಾಗಿವೆ. ಬಿತ್ತನೆ ಮಾಡಲು ಸಾಧ್ಯವಾಗದಿದ್ದರೆ ರೈತರು ಹೇಗೆ ಬದುಕು ಸಾಗಿಸಬೇಕು ಎಂದು ಪ್ರಶ್ನಿಸುತ್ತಾರೆ ರೈತ ವಿನಾಯಕ ಬಿರಾದಾರ.

ಜಿಲ್ಲಾ ಆಡಳಿತ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಪರಿಹಾರ ದೊರಕುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಹೇಳುತ್ತಾರೆ ರೈತರು.

‘ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮೇ 13ರಂದು ಕೆರೆ ದುರಸ್ತಿ ಕಾರ್ಯ ಕೈಗೊಳ್ಳಲು ಗ್ರಾಮಕ್ಕೆ ಬಂದಿದ್ದರು. ರೈತರಿಗೆ ಪರಿಹಾರ ಕೊಡದ ಕಾರಣ ಕಾಮಗಾರಿ ನಡೆಸಲು ಆವಕಾಶ ನೀಡಿರಲಿಲ್ಲ. ತಹಶೀಲ್ದಾರರು ಗ್ರಾಮಕ್ಕೆ ಪೊಲೀಸರನ್ನು ಕರೆಯಿಸಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ಆರಂಭಿಸಿದ್ದಾರೆ. ಹೊಲ ಇಲ್ಲದಿದ್ದರೆ ಕೆರೆ ನಿರ್ಮಾಣ ಮಾಡಿ ಏನು ಪ್ರಯೋಜನ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ರಾಜ್ಯ ಸರ್ಕಾರ ಕೆರೆ ದುರಸ್ತಿಗೆ ₹ 85 ಲಕ್ಷ ಬಿಡುಗಡೆ ಮಾಡಿದೆ. ಕೃಷಿ ಜಮೀನು ಸಮತಟ್ಟುಗೊಳಿಸಿದ ನಂತರ ಕೆರೆ ದುರಸ್ತಿ ಕಾರ್ಯ ಆರಂಭಿಸುವಂತೆ ರೈತರು ಪಟ್ಟು ಹಿಡಿದಿದ್ದರು. ರೈತರ ಮನವೊಲಿಸಿ ಗುರುವಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಲಾಸ ಮಾಶೆಟ್ಟಿ.

‘ರೈತರ ಖಾತೆಗಳಿಗೆ ಮೂರು ದಿನಗಳ ಹಿಂದೆ ಬೆಳೆ ವಿಮೆ ಪರಿಹಾರ ಜಮಾ ಮಾಡಲಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಗಳಿಂದ ಜಂಟಿ ಸಮೀಕ್ಷೆ ನಡೆಸಿ ಹಾಳಾದ ಜಮೀನು ಸಮಪಾತಳಿಗೊಳಿಸಲು ವಿಶೇಷ ಪರಿಹಾರಧನ ಕೊಡುವಂತೆ ನವೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಪರಿಹಾರ ಮಂಜೂರಾದರೆ  ಸಂಬಂಧ ಪಟ್ಟ ರೈತರಿಗೆ ವಿತರಿಸ ಲಾಗುವುದು’ ಎಂದು ಭಾಲ್ಕಿ ತಹಶೀಲ್ದಾರ್‌ ಮನೋಹರ ಸ್ವಾಮಿ ಹೇಳುತ್ತಾರೆ.

*

ಕೆರೆ ಒಡೆದು ಕೃಷಿ ಭೂಮಿಯಲ್ಲಿನ ಮಣ್ಣು ಕೊಚ್ಚಿಕೊಂಡ ಹೋದ ರೈತರಿಗೆ  ಪ್ರತ್ಯೇಕ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಮನೋಹರ ಸ್ವಾಮಿ
ಭಾಲ್ಕಿ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT