ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿಗಳ ಸಂಕಷ್ಟಕ್ಕೆ ಇನ್ನೂ ಸಿಗದ ಮುಕ್ತಿ

Last Updated 19 ಮೇ 2017, 5:49 IST
ಅಕ್ಷರ ಗಾತ್ರ

ಕೋಟ(ಬ್ರಹ್ಮಾವರ):  ಇನ್ನೇನು ಕೆಲ ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳುತ್ತವೆ. ಒಂದೆಡೆ ಬಸ್ಸಿನಲ್ಲಿ ವಿದ್ಯಾರ್ಥಿಗಳ ನಿತ್ಯ ಪಯಣ ಇನ್ನೊಂದೆಡೆ ಮಳೆರಾಯನ ನಡುವೆ ಶಾಲಾ ಕಾಲೇಜಿಗೆ ಬರುವ ಸಮಸ್ಯೆ. ಇವೆರಡು ಜಿಲ್ಲೆಯಲ್ಲಿ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಕೆಲವೆಡೆ ಸಮಸ್ಯೆಗಳು ಇನ್ನೂ ಜೀವಂತವಾಗಿಯೇ ಇದೆ. ಸರ್ವಿಸ್ ರಸ್ತೆ, ಮೇಲ್ಸೇತುವೆ, ಬಸ್‌ ನಿಲ್ದಾಣ, ತಂಗುದಾಣ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆಗೆ ಯಾವುದೇ ಸ್ಪಂದನೆ ಇದುವರೆಗೆ ದೊರೆಯದೇ ಇರುವುದರಿಂದ ಪಾದಾಚಾರಿಗಳು ಮತ್ತು ವಿದ್ಯಾರ್ಥಿಗಳು ಈ ವರ್ಷವೂ ಸಮಸ್ಯೆಯನ್ನು ಎದುರಿಸಬೇಕಾಗಿದೆ. 

ಕೋಟ ಆತಂಕದಲ್ಲಿ  ರಸ್ತೆ ದಾಟುವ ವಿದ್ಯಾರ್ಥಿಗಳು: ಪ್ರಮುಖ ವಿದ್ಯಾ ಸಂಸ್ಥೆಗಳು, ಧಾರ್ಮಿಕ  ಕೇಂದ್ರ, ಆಸ್ಪತ್ರೆ ಹಾಗೂ  ಕೋಟ- ಬನ್ನಾಡಿ ಸಾಯಿಬ್ರಕಟ್ಟೆ ರಾಜ್ಯ ರಸ್ತೆಯನ್ನು ಸಂಧಿಸುವ ವೃತ್ತ ಹೊಂದಿರುವ ಪ್ರಮುಖ ಕೇಂದ್ರ ಸ್ಥಳ ಕೋಟ ಮೂರುಕೈ. ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿ ಕರು ಕುಂದಾಪುರ, ಉಡುಪಿ, ಬನ್ನಾಡಿ ಕಡೆಗೆ ಸಂಚರಿಸಲು ರಸ್ತೆ ದಾಟುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಇಲ್ಲದ ಕುರಿತು ಕಾಮಗಾರಿ ಆರಂಭವಾದ ದಿನದಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ದ್ದರೂ ಇಲ್ಲಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ಇನ್ನೂ ನಿರ್ಮಿಸಲು ಹೆದ್ದಾರಿ ಇಲಾಖೆಯಾಗಲೀ, ಜನಪ್ರತಿ ನಿಧಿಗಳಾಗಲೀ ಮನಸ್ಸು ಮಾಡಿಲ್ಲ.

ಕೋಟ ವಿವೇಕ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಬನ್ನಾಡಿ, ಕುಂದಾಪುರ, ಉಡುಪಿ ಕಡೆಯಿಂದ ವಿದ್ಯಾರ್ಜನೆಗೆ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರ ಹೋಗುವ ವಾಹನಗಳ ನಡುವೆ ವಿದ್ಯಾರ್ಥಿಗಳು ಪ್ರಾಣಭಯಬಿಟ್ಟು ರಸ್ತೆ ದಾಟಿ ಬರಲು ಹರಸಾಹಸ ಪಡಬೇಕಾದ ಸನ್ನಿವೇಶ ವನ್ನು ನೋಡಿದರೆ ಭಯ ಹುಟ್ಟಿಸುತ್ತೆ. ಇಲ್ಲಿಯ ಸಮಸ್ಯೆ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಂಗುದಾಣದ ಸಮಸ್ಯೆ:  ಸಾವಿರಾರು ವಿದ್ಯಾರ್ಥಿಗಳು, ಜನರು ಪ್ರತಿದಿನ ಇಲ್ಲಿಂದ ಬಸ್‌ಗಳ ಮೂಲಕ ಪ್ರಯಾಣ ಮಾಡುತ್ತಿದ್ದರೂ ಸರಿಯಾದ ಬಸ್‌ ನಿಲ್ದಾಣದ ವ್ಯವಸ್ಥೆ ಇಲ್ಲಿ ಕಲ್ಪಿಸಲಾಗಿಲ್ಲ. ಬಸ್ಸಿಗಾಗಿ ರಸ್ತೆ ಬದಿಯಲ್ಲಿಯೇ ಕಾಯುವ ಪರಿಸ್ಥಿತಿ ಇದೆ. ವಾಹನ ಚಾಲಕರು ಮತ್ತು ಪಾದಾ ಚಾರಿಗಳು ಸ್ವಲ್ಪ ಎಡವಿದರೂ ಅಪಘಾತ ಗಳು ಸಂಭವಿಸುವ ಅಪಾಯವಿದೆ. ಮಳೆಗಾಲದಲ್ಲಂತೂ ಪೂರ್ತಿ ಒದ್ದೆ ಮಾಡಿಕೊಂಡು ಬಸ್ಸಿಗಾಗಿ ಕಾಯುವ ಗೋಳು ಇಲ್ಲಿಯ ವಿದ್ಯಾರ್ಥಿಗಳದ್ದು. ಸಾಯಿಬ್ರಕಟ್ಟೆ ಬನ್ನಾಡಿ ಕಡೆಯಿಂದ ಪ್ರತಿದಿನ ಉಡುಪಿ ಕುಂದಾಪುರಕ್ಕೆ ಸಾವಿರಾರು ಪ್ರಯಾಣಿಕರು ಹೋಗುತ್ತಿ ದ್ದರೂ ಇಲ್ಲೊಂದು ಉತ್ತಮ ತಂಗು ದಾಣವನ್ನು ನಿರ್ಮಿಸುವ ಗೋಜಿಗೆ ಹೆದ್ದಾರಿ ಪ್ರಾಧಿಕಾರ ಮಾಡದೇ ಇರು ವುದು ವಿಷಾಧನೀಯ. ಇನ್ನಾದರೂ ಹೆದ್ದಾರಿ ಇಲಾಕೆ/ಜನಪ್ರತಿನಿಧಿಗಳು ಎಚ್ಚೆತ್ತು ಇಲ್ಲಿಯ ಸಮಸ್ಯೆಗಳ ನಿವಾರಣೆಗೆ ಮುಂದಾಗಲಿ ಎನ್ನುವುದು ಸ್ಥಳೀಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT