ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತರಿ ಯೋಜನೆಯಡಿ ಕೆಲಸ ನೀಡಲು ಆಗ್ರಹ

Last Updated 19 ಮೇ 2017, 6:27 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನಲ್ಲಿ ಬರಗಾಲ ಆರಂಭವಾಗಿ ಕೂಲಿಕಾರರು ಸೇರಿದಂತೆ ಸಣ್ಣ ಪ್ರಮಾಣದ ರೈತರು ಕೆಲಸವರಸಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಎನ್ಆರ್ಇಜಿ ಕಾಮಗಾರಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಕೂಲಿಕಾರರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಗಂಗಾವತಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ತಾಲ್ಲೂಕಿನ 12ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ಬಂದಿದ್ದ ಕೂಲಿಕಾರರು, ರೈತರು ಕೃಷಿ ಬಳಕೆಗೆ ಉಪಯೋಗಿಸುವ ಸಲಕರಣೆಗಳೊಂದಿಗೆ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಶ್ರೀನಿವಾಸ್, ಕಳೆದ ಎರಡು ವರ್ಷದಿಂದ ಸರಿಯಾಗಿ ಮಳೆಯಾಗದೇ ರೈತರು ಹಾಗೂ ಕೂಲಿಕಾರರು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ನಗರ ಪಟ್ಟಣಗಳಲ್ಲಿಯೂ ಜನರಿಗೆ ಉದ್ಯೋಗ ದೊರಕದೇ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಕೂಡಲೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಬೇಕು. ಕೂಲಿಕಾರರ, ಗೇಣಿದಾರರ ಹಾಗೂ ರೈತರ ಮಕ್ಕಳ ಶಾಲಾ– ಕಾಲೇಜುಗಳಲ್ಲಿನ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕೋಬಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ ಮಾತನಾಡಿ, ಶುಕ್ರವಾರದಿಂದ (ಮೇ19) ಗ್ರಾಮಗಳಲ್ಲಿ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದರು.

ಚಿಕ್ಕಜಂತಕಲ್, ಢಣಾಪುರ, ಮುಸ್ಟೂರು, ಮರಳಿ, ಬರಗೂರು, ಬೂದಗುಂಪಾ, ಸುಳೇಕಲ್, ವೆಂಕಟಗಿರಿ, ವಡ್ಡರಹಟ್ಟಿ, ಸಂಗಾಪುರ, ಮಲ್ಲಾಪುರ, ಚಿಕ್ಕಜಂತಕಲ್, ಚಿಕ್ಕಬೆಣಕಲ್ ಗ್ರಾಮದ ಸುಮಾರು ಸಾವಿರಕ್ಕೂ ಅಧಿಕ ಕೂಲಿಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಶೇಖಮ್ಮ, ಶಿವಣ್ಣ ಬೆಣಕಲ್, ನಿರುಪಾದಿ ಬೆಣಕಲ್, ಕನಕರಾಯ, ಲಕ್ಷ್ಮಮ್ಮ, ವೀರರಾಜು, ನಾಗರಾಜ, ಮುತ್ತಣ್ಣ, ಗಂಗಮ್ಮ, ಹೊನ್ನಮ್ಮ, ಶೇಖ್ಬ್, ಸಣ್ಣ ಹುಲಿಗೆಮ್ಮ, ಬಸವರಾಜ, ಲಕ್ಷ್ಮಣ್ಣ, ಹುಲುಗಪ್ಪ, ವಿರುಪಣ್ಣ ಇದ್ದರು.

*

ಗ್ರಾಮೀಣ ಜನರು ಗುಳೆ ಹೋದರೂ ಪಟ್ಟಣ ಪ್ರದೇಶಗಳಲ್ಲಿ ಕೆಲಸ ಸಿಗುತ್ತಿಲ್ಲ. ತಕ್ಷಣ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭಿಸದಿದ್ದಲ್ಲಿ ಜನ ಉಪವಾಸದಿಂದ  ಸಾಯುವ ದಿನಗಳು ದೂರವಿಲ್ಲ
ನಿರುಪಾದಿ ಬೆಣಕಲ್
ಕರ್ನಾಟಕ ಪ್ರಾಂತ ರೈತ ಸಂಘದ  ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT