ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಸಮುದಾಯ ಭವನಕ್ಕೆ 1ಕೋಟಿ ಅನುದಾನ

Last Updated 19 ಮೇ 2017, 6:32 IST
ಅಕ್ಷರ ಗಾತ್ರ

ಯಲಬುರ್ಗಾ: ‘ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಉಪ್ಪಾರ ಸಮಾಜದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸಮಾಜದ ಬಹುದಿನಗಳ ಬೇಡಿಕೆಯಾದ ಭಗೀರಥ ಮಹರ್ಷಿ ಸಮುದಾಯ ಭವನಕ್ಕೆ ₹1ಕೋಟಿ ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮನುಕುಲಕದ ಕಲ್ಯಾಣಕ್ಕೆ ಶ್ರಮಿಸಿದ ಭಗೀರಥರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಇವರ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಉಪ್ಪಾರ ಸಮಾಜದಲ್ಲಿಯೂ ಕೆಲವರು ಉತ್ತಮ ಸ್ಥಾನಮಾನ ಹೊಂದಿದ್ದಾರೆ. 

ಅಂಥವರು ಹಿಂದುಳಿದವರನ್ನು ಮುಂದೆ ತರುವ ಪ್ರಯತ್ನ ಮಾಡಬೇಕು ಆಗ ಮಾತ್ರ ಸಮಾಜದ ಎಲ್ಲ ಜನರು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮುಖ್ಯವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಪ್ರಯತ್ನಿಸಬೇಕು ಆಗ ಮಾತ್ರ ಇತರೆ ಕ್ಷೇತ್ರದಲ್ಲಿಯೂ ಅಭಿವೃದ್ಧಿಗೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪ ಆಚಾರ ಮಾತನಾಡಿ, ಭಗೀರಥ ಮಹರ್ಷಿ ಬಗ್ಗೆ ಅನೇಕ ಕಥೆಗಳು, ಐತಿಹ್ಯಗಳಿವೆ. ನೀರನ್ನು ತಂದ ಮಹಾನ್‌ ಪುರುಷ ಎಂದೆ ಕರೆಯಿಸಿಕೊಳ್ಳುವ ಭಗೀರಥ ಮಹರ್ಷಿಯವರು ಅನೇಕ ಕಷ್ಟ ಕಾರ್ಪಣ್ಯ ಅನುಭವಿಸಿ ನಂತರ ಖ್ಯಾತರಾಗಿದ್ದಾರೆ ಎಂದು ನುಡಿದರು. 

ಹೊಸದುರ್ಗದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಸ್ಥಳೀಯ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಉಪ್ಪಾರ ಸಮಾಜದವರು ನಿರೀಕ್ಷೆಗೂ ಮೀರಿ ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಬರಗಾಲದ ಸನ್ನಿವೇಶದಲ್ಲಿ ಸರ್ಕಾರದ ನೆರವು ಪಡೆಯದೇ ಹಿಂದುಳಿದ ಉಪ್ಪಾರ ಸಮಾಜವು  ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮೆಚ್ಚುವಂತಹದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪೂಜಾರ, ಉಪನ್ಯಾಸಕ ಮಲ್ಲಪ್ಪ ಹೊಸೂರ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಭಗೀರಥ ಮಹರ್ಷಿ ಅವರ ಭಾವಚಿತ್ರದ ಮೆರವಣಿಗೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಜಯಶ್ರೀ ಅರಕೇರಿ, ಹನುಮಂತಗೌಡ ಪಾಟೀಲ, ಗಿರಿಜಾ ಸಂಗಟಿ, ನೀಲಮ್ಮ ಭಾವಿಮನಿ, ಈರಪ್ಪ ಕುಡಗುಂಟಿ, ನವೀನಕುಮಾರ ಗುಳಗಣ್ಣನವರ್,  ವೀರಣ್ಣ ಹುಬ್ಬಳ್ಳಿ, ರತನ ದೇಸಾಯಿ, ಶರಣಪ್ಪ ವಜ್ರಬಂಡಿ, ವೀರನಗೌಡ ಬಳೂಟಗಿ, ಈರಪ್ಪ ಉಪ್ಪಾರ, ಹನುಮಂತಪ್ಪ ಉಪ್ಪಾರ, ವೈ.ಬಿ.ಮೇಟಿ, ಯಂಕನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT