ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆವರಿನ ಹಂಗಿಲ್ಲದ ‘ಬಂಗಾರದ ಮನುಷ್ಯ’

ಬಂಗಾರ s/o ಬಂಗಾರದ ಮನುಷ್ಯ
Last Updated 19 ಮೇ 2017, 12:09 IST
ಅಕ್ಷರ ಗಾತ್ರ

ನಾವು ನೋಡಿದ ಸಿನಿಮಾ
ನಿರ್ಮಾಣ: ಜಯಣ್ಣ–ಭೋಗೇಂದ್ರ
ನಿರ್ದೇಶನ: 
ಯೋಗಿ ಜಿ. ರಾಜ್
ತಾರಾಗಣ: ಶಿವರಾಜ್‌ಕುಮಾರ್‌, ವಿದ್ಯಾ ಪ್ರದೀಪ್, ಶ್ರೀನಿವಾಸಮೂರ್ತಿ

‘ಬಂಗಾರ s/o ಬಂಗಾರದ ಮನುಷ್ಯ’ ಸಿನಿಮಾ ನೋಡಿದ ನಂತರ ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ ಹಾಗೂ ಅಭಾವ ವೈರಾಗ್ಯಗಳ ಪಾಲಿಗೆ ‘ಸಿನಿಮಾ ವೈರಾಗ್ಯ’ವನ್ನು ಸೇರಿಸಬಹುದು. ಯೋಗಿ ಜಿ. ರಾಜ್‌ ನಿರ್ದೇಶನದ ಈ ಸಿನಿಮಾ ಎರಡು ಬಗೆಯ ವಿರಕ್ತಿಯನ್ನು ಉಂಟುಮಾಡುತ್ತದೆ. ಮೊದಲನೆಯದು, ಒಟ್ಟಾರೆ ಸಿನಿಮಾ ಉಂಟುಮಾಡುವ ನಿರಾಶೆಗೆ ಸಂಬಂಧಿಸಿದ್ದು; ಮತ್ತೊಂದು, ಕನ್ನಡ ಸಿನಿಮಾದ ಕ್ಲಾಸಿಕ್‌ಗಳಲ್ಲೊಂದಾದ ‘ಬಂಗಾರದ ಮನುಷ್ಯ’ ಚಿತ್ರದ ಛಾಯೆಯನ್ನು ಅಪಬಳಕೆ ಮಾಡಿಕೊಂಡಿರುವುದು.

ರೈತರ ಸಮಸ್ಯೆಗಳನ್ನು ಚರ್ಚಿಸುವ ಚಿತ್ರತಂಡದ ಉದ್ದೇಶ–ಪ್ರಾಮಾಣಿಕತೆಯನ್ನು ಅನುಮಾನಿಸಬೇಕಿಲ್ಲ. ಆದರೆ, ಚಿತ್ರತಂಡಕ್ಕೆ ಕೃಷಿ ಸಂಸ್ಕೃತಿಯ ನಾಡಿಮಿಡಿತ ಹಾಗೂ ಗ್ರಾಮೀಣ ಸಂಸ್ಕೃತಿ ಅರ್ಥವಾಗಿಲ್ಲ ಎನ್ನುವುದಕ್ಕೆ ಇಡೀ ಸಿನಿಮಾ ಒಂದು ಉದಾಹರಣೆಯಂತಿದೆ. ಗಂಭೀರ ಸಮಸ್ಯೆಯನ್ನು ಚಿತ್ರತಂಡ ನಿರ್ವಹಿಸಿರುವ ರೀತಿ ಪ್ರೌಢವಾಗಿಲ್ಲ. ನೆಲದ ವಾಸ್ತವಗಳ ಅರಿವೇ ಇಲ್ಲದ ಭಾವುಕ ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ವೀರಾವೇಶ ಚಿತ್ರದಲ್ಲಿದೆ.

ಸಿನಿಮಾದ ಕೊನೆಯಲ್ಲಿನ ಗೀತೆಯೊಂದನ್ನು ಹೊರತುಪಡಿಸಿದರೆ ಉಳಿದ ಯಾವ ಸಂದರ್ಭದಲ್ಲೂ ನೇಗಿಲಾಗಲೀ ತೆನೆಯಾಗಲೀ ಚಿತ್ರದಲ್ಲಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಕೆಲವು ದಿನಗಳ ಕಾಲ ಮಾರಾಟ ಮಾಡದಿರುವುದರಿಂದ ಸಮಾಜದಲ್ಲಿ ಕ್ಷೋಭೆ ಉಂಟಾಗುತ್ತದೆಂದು ಭಾವಿಸುವ ಮೂಲಕ ಸಮಸ್ಯೆಯನ್ನು ಸರಳೀಕರಿಸಲಾಗಿದೆ. ತಮಿಳಿನ ‘ಕತ್ತಿ’ ಸಿನಿಮಾದಲ್ಲಿ ರೈತರು ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ತಪ್ಪಿಸುವ ಮೂಲಕ ಪ್ರತಿಭಟಿಸುತ್ತಾರೆ. ಅಲ್ಲಿನ ಹೋರಾಟ ವಾಸ್ತವಕ್ಕೆ ಹತ್ತಿರವಾದುದು.

ಇಲ್ಲಿನ ರೈತರು ನಗರಗಳ ಜನರ ವಿರುದ್ಧ ಸಿಟ್ಟು ಮಾಡಿಕೊಳ್ಳುತ್ತಾರೆ. ಆದರೆ, ನಗರಗಳಲ್ಲಿ ಇರುವ ಬಹುಸಂಖ್ಯಾತರು ಕೂಡ ರೈತರ ಮಕ್ಕಳು ಎನ್ನುವ ವಾಸ್ತವವನ್ನು ಮರೆಯುತ್ತಾರೆ. ರೈತರ ಬದುಕಿನ ಜೊತೆಗೆ ಹಾಸುಹೊಕ್ಕಾದ ಗ್ರಾಮೀಣ ಬದುಕು ಸಿನಿಮಾದಲ್ಲಿ ಗೈರುಹಾಜರಾಗಿದೆ. ರೈತ ದಂಪತಿಯ ಶವವನ್ನು ಇರಿಸಿಕೊಂಡು ಪ್ರತಿಭಟನೆ ನಡೆಸುವುದು ಸಿನಿಮಾದಲ್ಲಿನ ಗಟ್ಟಿಯಾದ ಹಾಗೂ ಪ್ರೌಢವಾದ ದೃಶ್ಯ. ಈ ರೂಪಕಶಕ್ತಿಯನ್ನು ಚಿತ್ರದುದ್ದಕ್ಕೂ ಉಳಿಸಿಕೊಂಡಿದ್ದರೆ ಯೋಗಿ ಮತ್ತೊಂದು ‘ಬಂಗಾರದ ಮನುಷ್ಯ’ನನ್ನು ಸೃಷ್ಟಿಸಬಹುದಿತ್ತು.

ಈ ಕ್ಷಣದ ಬದುಕನ್ನಷ್ಟೇ ನಂಬುವ ಅನಿವಾಸಿ ಭಾರತೀಯನೊಬ್ಬನಿಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ತವರಿಗೆ ಮರಳುವುದು, ರೈತರ ತಲ್ಲಣಗಳಿಗೆ ಮಿಡಿಯುವುದು ಚಿತ್ರದ ಕಥೆ. ಈ ಮಿಡಿತವನ್ನು ಘೋಷಣೆಗಳು–ಭಾಷಣಗಳ ಮೂಲಕ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ರೈತರನ್ನು ಸಂಘಟಿಸುವ ತರುಣನ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ಹಾಗೂ ನಾಯಕನ ಪೊಳ್ಳು ವ್ಯಕ್ತಿತ್ವವನ್ನು ಆರಾಧಿಸುವ ಪ್ರೇಮಿಯ ಪಾತ್ರದಲ್ಲಿ ವಿದ್ಯಾ ಪ್ರದೀಪ್‌ ಉತ್ಸಾಹದಿಂದ ನಟಿಸಿದ್ದಾರೆ.

ಸಿನಿಮಾದ ಮೊದಲ ಭಾಗದ ಕಥೆ ವಿದೇಶದಲ್ಲಿ ನಡೆಯುತ್ತದೆ. ನಮ್ಮ ಸಿನಿಮಾಗಳ ನಾಯಕರು ವಿದೇಶಗಳಲ್ಲಿ ಬೆಳೆಯುವ ಮೂಲಕ ತವರಿನ ತವಕ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವ ಸಂವೇದನೆ ರೂಪಿಸಿಕೊಳ್ಳುವ ಸೂತ್ರವೊಂದು ಚಿತ್ರರಂಗದಲ್ಲಿ ರೂಪುಗೊಳ್ಳುತ್ತಿರುವಂತಿದೆ.
ಹಾಡು, ಕುಣಿತ, ಹೊಡೆದಾಟದ ಮಗ್ಗಿಪುಸ್ತಕವನ್ನು ಕೈಯಲ್ಲಿ ಹಿಡಿದೇ ನಿರ್ದೇಶಕರು ರೈತರ ಬಗ್ಗೆ ಮಾತನಾಡಲು ಹೊರಟಿದ್ದಾರೆ. ತಾವು ಹೇಳುತ್ತಿರುವ ವಿಚಾರದ ಬಗ್ಗೆ ಅವರಿಗೆ ಖಚಿತ ನಂಬಿಕೆ ಇರುವಂತಿಲ್ಲ. ಚಿತ್ರದ ನಾಯಕನನ್ನು ಅವರು ಕ್ಯಾನ್ಸರ್‌ರೋಗಿ ಆಗಿಸಿದ್ದಾರೆ. ಜನರ ಪಾಲಿಗೆ ಅವನು ವಾಸ್ತವ ಅಲ್ಲ – ಆತ ಒಂದು ಸುಂದರ ಕನಸು ಅಥವಾ ಭ್ರಮೆ ಮಾತ್ರ ಎನ್ನುವುದನ್ನು ಅವರು ನಾಯಕನ ಅಂತ್ಯದ ಮೂಲಕ ಸೂಚಿಸುತ್ತಿರುವಂತಿದೆ.

ರಾಜ್ ಪ್ರಭಾವಳಿ, ‘ಬಂಗಾರದ ಮನುಷ್ಯ’ನ ನೆನಪು ಯೋಗಿ ಅವರ ಚಿತ್ರಕ್ಕೆ ಭಾರವಾಗಿ ಪರಿಣಮಿಸಿದ್ದು, ‘ಹೊಳೆಯುವುದೆಲ್ಲ ಬಂಗಾರವಲ್ಲ’ ಎನ್ನುವ ಮಾತನ್ನು ನೆನಪಿಸುವಂತಿದೆ. ನೆನಪುಗಳ ಹಂಗಿಲ್ಲದೆ ರೈತರ ಕಥೆಯನ್ನು ಸರಳವಾಗಿ ಹೇಳಹೊರಟಿದ್ದರೆ ಸಹ್ಯವಾದ ಚಿತ್ರವೊಂದನ್ನು ರೂಪಿಸುವ ಅವಕಾಶ ಅವರಿಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT