ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ಸಂಜೆಯ ನಶೆಗೆ ಕುಡಿಯಿರಿ ಶೇರ್ವ

Last Updated 20 ಮೇ 2017, 10:02 IST
ಅಕ್ಷರ ಗಾತ್ರ

ಏಡಿ ಶೇರ್ವ
ಶೇರ್ವ ಮಾಡುವುದಕ್ಕೆ ಸಮುದ್ರದ ಕೆಂಪು ಏಡಿಗಿಂತ, ನದಿ, ಹಳ್ಳದಲ್ಲಿ ಸಿಗುವ  ಕಪ್ಪು ಏಡಿ ಸೂಕ್ತ. (ಸಮುದ್ರದ ಏಡಿ ಹೆಚ್ಚು ಮಾಂಸದಿಂದ ಕೂಡಿದ್ದು ಫ್ರೈಗೆ ಚೆನ್ನಾಗಿರುತ್ತದೆ) ನದಿ ಏಡಿ ಸಣ್ಣದಾಗಿದ್ದು, ಎಳೆಎಳೆಯಾದ ಮಾಂಸ ಶೇರ್ವ ಮಾಡಲು ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಸಾರು, ಫ್ರೈ ಮಾಡುವಾಗ ಏಡಿಯ ಸಣ್ಣ ಕಾಲುಗಳನ್ನು ಬಳಸುವುದಿಲ್ಲ. ಆದರೆ ಶೇರ್ವಕ್ಕೆ ಈ ಸಣ್ಣ ಕಾಲುಗಳೇ ಹೆಚ್ಚು ರುಚಿ ನೀಡುತ್ತವೆ.

ಮಾಡುವ ವಿಧಾನ (ಇಬ್ಬರಿಗೆ): ಏಡಿ ಸಣ್ಣದಾದರೆ ಆರು, ಮಧ್ಯಮ ಗಾತ್ರದ್ದಾದರೆ ನಾಲ್ಕು ಏಡಿಗಳನ್ನು ಬಳಸಬಹುದು. ಏಡಿಯ ದೊಡ್ಡ ಎರಡು ಕಾಲು, ಉಳಿದ ಆರು ಸಣ್ಣ ಕಾಲು, ಹೊಟ್ಟೆ ಕವಚ ಭಾಗ ಎಲ್ಲವನ್ನು ಉಪ್ಪಿನ ಪುಡಿಯಲ್ಲಿ ಉಜ್ಜಿ ತೊಳೆಯಬೇಕು.

ಬೆಳ್ಳುಳ್ಳಿ, ಕರಿಮೆಣಸಿನಕಾಳಿನ ಪುಡಿ ಸ್ವಲ್ಪ ಉಪ್ಪು ಸೇರಿಸಿ ಪೇಸ್ಟ್‌ ಮಾಡಿಕೊಂಡು  ಏಡಿಯನ್ನು 15ನಿಮಿಷ ಈ ಮಿಶ್ರಣದಲ್ಲಿ ನೆನೆಸಿ ಇಡಬೇಕು. ನಂತರ ನಾಲ್ಕು ಏಡಿಗಳು ಮುಳುಗುವಷ್ಟು ನೀರುಹಾಕಿ ಕುಕ್ಕರ್‌ನಲ್ಲಿ 2 ಸೀಟಿ ತೆಗೆದು ಬೆಂದ ಏಡಿಯನ್ನು ನೀರಿನಿಂದ  ಹೊರತೆಗೆದು ಇಟ್ಟುಕೊಳ್ಳಿ.

ಒಂದು ಪಾತ್ರೆಗೆ 10 ಚಮಚ ತುಪ್ಪ (ಏಡಿಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಇರುವುದಿಲ್ಲ ಹಾಗಾಗಿ ಧಾರಾಳವಾಗಿ ತುಪ್ಪವನ್ನು ಬಳಸಬಹುದು) ಹಾಕಿ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ತುಂಡು ಹಾಕಿ ಬಾಡಿಸಿ. ಇದಕ್ಕೆ ಬೆಂದ ಏಡಿಯನ್ನು ಸೇರಿಸಿ. ಎಲ್ಲಾ ಪದಾರ್ಥಗಳು ಬಾಡಿದ ನಂತರ ಏಡಿಯೊಂದಿಗೆ ಬೆಂದ ನೀರನ್ನು ಸೇರಿಸಿ. ಒಂದು ಕುದಿ ಬಂದ ಮೇಲೆ, ಕೊತ್ತಂಬರಿ ಸೊಪ್ಪು, ಈರುಳ್ಳಿ ಹೂ ಮೇಲೆ ಹರಡಿ.

ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದು ತಿರುಳನ್ನು ನಾಲ್ಕು ತುಂಡು ಮಾಡಿ ಶೇರ್ವ ಒಳಗೆ ಹಾಕಿ. ಇದರಿಂದ ನಿಂಬೆ ರಸ ಅಂಶ ಶೇರ್ವದೊಳಗೆ ಹೆಚ್ಚಾಗಿ ಸೇರದೆ ನಿಂಬೆ ಸ್ವಾದ ಮಾತ್ರ ಶೇರ್ವದಲ್ಲಿ ಬೆರತಿರುತ್ತದೆ. ಗಾರ್ಲಿಕ್‌ ಬ್ರೆಡ್‌, ಕೆಂಡದಲ್ಲಿ ಸುಟ್ಟ ಇಟಾಲಿಯನ್ ಚೀಸ್‌ ತಿನ್ನುತ್ತಾ ಏಡಿ ಶೇರ್ವ ಕುಡಿಯಲು ಮಜವಾಗಿರುತ್ತದೆ.

ಮೀನಿನ ತಲೆ ಶೇರ್ವ
ಇದಕ್ಕೆ ಸಮುದ್ರ ಅಥವ ನದಿ ಯಾವುದಾದರೂ ಮೀನಿನ ತಲೆ ಬಳಸಬಹುದು. ಅರ್ಧ ಕೆ.ಜಿ.ಗಿಂತ ದೊಡ್ಡದಾದ ಮೀನಿನ ತಲೆಯಾದರೆ ಹೆಚ್ಚು ರುಚಿಯಾಗಿರುತ್ತದೆ.
ಮಾಡುವ ವಿಧಾನ: ದೊಡ್ಡದಾದ ಎರಡು ಮೀನಿನ ತಲೆಯನ್ನು ಸ್ವಚ್ಚ ಮಾಡಿ. ಹುಣಸೆ ರಸ, ಬೆಳ್ಳುಳ್ಳಿ, ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ ಒಂದು ಚಮಚ, ಅರಿಶಿಣದ ಪುಡಿ ಅರ್ಧ ಚಮಚ ಹಾಕಿ 20 ನಿಮಿಷ ನೆನೆಸಿಡಿ. 2 ಈರುಳ್ಳಿಯನ್ನು ರುಬ್ಬಿ ರಸ ತೆಗೆದುಕೊಳ್ಳಿ.

ನಾಲ್ಕು ಚಮಚ ಬೆಣ್ಣೆ ಹಾಕಿ. ಇದಕ್ಕೆ ಎರಡು ಚಮಚ ಈರುಳ್ಳಿ ತುಂಡು ಹಾಕಿ ಬಾಡಿಸಿ. ಮಾಸಾಲೆಯೊಂದಿಗೆ ನೆನಸಿಟ್ಟ ಮೀನಿನ ತಲೆ ಹಾಕಿ ಬಾಡಿಸಿ, ಇದಕ್ಕೆ ಈರುಳ್ಳಿ ರಸ ಸೇರಿಸಿ. ಮೀನು ಬೇಗ ಬೆಂದುಬಿಡುತ್ತದೆ, ಹಾಗಾಗಿ ಸಣ್ಣ ಉರಿಯಲ್ಲೇ ಬಾಡಿಸಬೇಕು.

ತಲೆಯ ಹೊರಭಾಗ ಚೆನ್ನಾಗಿ ರೋಸ್ಟ್‌ ಆದ ನಂತರ ಇದಕ್ಕೆ ಒಂದು ಬಟ್ಟಲು ತೆಂಗಿನ ಹಾಲು; ನಾಲ್ಕು ಬಟ್ಟಲು ನೀರು ಸೇರಿಸಿ. ಚೆನ್ನಾಗಿ ಕುದಿ ಬಂದ ನಂತರ ತಲೆಯನ್ನು ಹೊರತೆಗೆಯಿರಿ. ಬಡಿಸುವಾಗ ಮೀನಿನ ತಲೆ ಮತ್ತು ಶೇರ್ವ ಬೇರೆ ಬೇರೆಯಾಗಿ ಬಡಿಸಬೇಕು. ಈರುಳ್ಳಿ, ನಿಂಬೆ ಹೋಳಿನಿಂದ ಮೀನಿನ ತಲೆಯನ್ನು ಅಲಂಕರಿಸಿ. ಸೇರ್ವಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಜೊತೆಗೆ ಮೀನಿನ ಫಿಂಗರ್ ಚಿಪ್ಸ್‌ ಕೂಡ ಬಡಿಸಬಹುದು.

ಕೋಳಿ ಕಾಲಿನ ಶೇರ್ವ
ಕೋಳಿ ಶೇರ್ವ ಮಾಡಲು ಕಾಲುಗಳ ಜೊತೆ ತಲೆಯನ್ನು ಬಳಸಬಹುದು. ಮನೆಯಲ್ಲೇ ಕತ್ತರಿಸದ ಕೋಳಿಯಾದರೆ ಬೆಂಕಿಯಲ್ಲಿ ಸುಟ್ಟಿರುತ್ತೇವೆ. ಅಂಗಡಿಯಿಂದ ತಂದ ಕೋಳಿ ಕಾಲಾದರೆ ನೀರಿನಿಂದ ತೊಳೆಯುವ ಮೊದಲು ಬೆಂಕಿಯಲ್ಲಿಟ್ಟು ಚರ್ಮ ಮೇಲ್ಭಾಗವನ್ನು ಸ್ವಲ್ಪ ಸುಡಬೇಕು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.

ಶೇರ್ವ ಮಾಡುವ ವಿಧಾನ: ಪಾತ್ರೆಯಲ್ಲಿ ನಾಲ್ಕು ಚಮಚ ತುಪ್ಪ ಹಾಕಿ, ನಾಲ್ಕು ಕೋಳಿ ಕಾಲು ಮತ್ತು ಎರಡು ತಲೆ, ಒಂದು ಚಮಚ ಅರಿಶಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಬಾಡಿಸಿ.ಒಂದು ಪಾತ್ರೆಯಲ್ಲಿ ಮೂರು ಈರುಳ್ಳಿ, ಒಂದು ಇಂಚು ಶುಂಠಿ, ಎರಡು ಬೆಳ್ಳುಳ್ಳಿ, ನಾಲ್ಕು ಚಮಚ ಕೆಂಪು ಮೆಣಸಿನಕಾಯಿ ಪುಡಿ, ಎರಡು ಚಮಚ ಕೊತ್ತಂಬರಿ ಬೀಜದ ಪುಡಿ ಹಾಕಿ ಫ್ರೈ ಮಾಡಿ. ನಂತರ ಇದನ್ನು ರುಬ್ಬಿ ಕೋಳಿಯೊಂದಿಗೆ ಹಾಕಿ. ಈ ಮಸಾಲೆಯೊಂದಿಗೆ ಕೋಳಿಕಾಲು ಮತ್ತು ತಲೆ ಚೆನ್ನಾಗಿ ಫ್ರೈ ಆದ ನಂತರ ಒಂದು ಬಟ್ಟಲು ತೆಂಗಿನಕಾಯಿ ಹಾಲು ನಾಲ್ಕು ಬಟ್ಟಲು ನೀರು ಸೇರಿಸಿ. ಕೋಳಿಕಾಲಿನ ಶೇರ್ವದೊಂದಿಗೆ ಅಕ್ಕಿ ಶಾವಿಗೆ ಸವಿಯಬಹುದು.

ಕುರಿ ಕಾಲಿನ ಶೇರ್ವ (ಪಾಯಾ)
ಬೇಕಾಗುವ ಪದಾರ್ಥಗಳು: ನಾಲ್ಕು ಕುರಿ ಕಾಲು, ಮೂರು ಈರುಳ್ಳಿ, ತೆಂಗಿನಕಾಯಿ ಹಾಲು, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, 3 ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಪುಡಿ 2 ಚಮಚ, ಕೊತ್ತಂಬರಿ ಬೀಜದ ಪುಡಿ 2 ಚಮಚ, ಜೀರಿಗೆ ಪುಡಿ, ಅರಿಶಿನ ಪುಡಿ, ಕರಂ ಮಸಾಲ ಪುಡಿ, ನಿಂಬೆ ರಸ, ಉಪ್ಪು.

ಮಾಡುವ ವಿಧಾನ: ಕುರಿ ಕಾಲುಗಳನ್ನು ಬೆಂಕಿಯಲ್ಲಿ ಸುಟ್ಟು, ಅಕ್ಕಿಹಿಟ್ಟು ಬಳಸಿ ಚರ್ಮವನ್ನು ಉಜ್ಜಿ ತೊಳೆಯಬೇಕು. ನಂತರ ಕುಕ್ಕರ್‌ನಲ್ಲಿ ಎರಡು ಚಮಚ ಬೆಣ್ಣೆ ಹಾಕಿ, ಇದಕ್ಕೆ ಈರುಳ್ಳಿ, ಕೊಬ್ಬರಿ ತುರಿ ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಮೇಲಿನ ಮಸಾಲೆ  ಸೇರಿಸಿ ರುಬ್ಬಿಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ರುಬ್ಬಿದ ಮಸಾಲೆಯನ್ನು ಹಾಕಿ ಬಾಡಿಸಿ, ನಂತರ ಹಸಿಮೆಣಸಿನಕಾಯಿ ತುಂಡು, ಕುರಿ ಕಾಲುಗಳನ್ನು ಇದರೊಂದಿಗೆ ಹಾಕಿ ಬಾಡಿಸಿ. ಚೆನ್ನಾಗಿ ಬೆಂದ ನಂತರ. ಕಾಲುಗಳು ಮುಳುಗುವಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ ನಾಲ್ಕು ಸೀಟಿ ಹಾಕಿಸಿ. ನಂತರ ಇದಕ್ಕೆ 2 ಬಟ್ಟಲು ತೆಂಗಿನಕಾಯಿ ಹಾಲು ಸೇರಿಸಿ ಬೇಯಿಸಿ. ಬಡಿಸುವಾಗ ಕೊತ್ತಂಬರಿ ಸೊಪ್ಪು, ನಿಂಬೆ ರಸ ಸೇರಿಸಿ. ಶೇರ್ವ ಇಡ್ಲಿ, ಅಕ್ಕಿ ರೊಟ್ಟಿಯೊಂದಿಗೆ ಸವಿಯಲು ಚೆಂದ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT