ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬವೆಂಬ ಕರ್ಮಕ್ಷೇತ್ರ

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಹಿರಿಯರು, ವಯಸ್ಸಾದವರನ್ನು ನೋಡಿಕೊಳ್ಳುವ, ಶುಶ್ರೂಷೆ ಮಾಡುವ ವಿಚಾರವನ್ನು ಕುರಿತು ಬಹಳಷ್ಟು ಸಮಸ್ಯೆಗಳು ಏಳುತ್ತಿವೆ. ಇದರಲ್ಲಿ ಪ್ರತಿಯೊಂದು ಸಮಸ್ಯೆಯನ್ನೂ ಬಿಡಿಬಿಡಿಯಾಗಿ ನೋಡಿದರೆ ಹಲವಾರು ಕಥೆಗಳು ಹೊರಬರಬಹುದು. ಒಬ್ಬರ ಮನೆಯಲ್ಲಿ ಸೊಸೆಯ ಕಾರಣದಿಂದ ತಂದೆ–ತಾಯಂದಿರನ್ನು ದೂರ ಮಾಡಬೇಕಾಗಿ ಬಂದರೆ ಮತ್ತೊಂದು ಮನೆಯಲ್ಲಿ ಆ ತಂದೆ–ತಾಯಂದಿರೇ ಮಕ್ಕಳ ವಿರುದ್ಧ ಮುನಿಸಿಕೊಂಡು ಬೇರೆ ಇರಲು ನಿರ್ಧರಿಸಿರಬಹುದು.

ಇನ್ನು ಮೂರನೇ ಮನೆಯಲ್ಲಿ, ಮಕ್ಕಳು ಎಲ್ಲೋ ಇದ್ದು, ತಂದೆ ತಾಯಂದಿರು ಇನ್ನೆಲ್ಲೋ ಇದ್ದು ಅದರಿಂದ ಸಮಸ್ಯೆಗಳು ಬರಬಹುದು. ಅಥವಾ, ಮಕ್ಕಳೇ ದುಷ್ಟತನದಿಂದ ತಂದೆತಾಯಂದಿರನ್ನು ಕಡೆಗಣಿಸಿರಬಹುದು. ಅಥವಾ, ಕೆಲವೊಮ್ಮೆ ವಯಸ್ಸಾದವರೇ ತಮ್ಮ ಸಣ್ಣಬುದ್ಧಿಯಿಂದ ಇತರರಿಗೆ ಸಮಸ್ಯೆ ಆಗುವ ರೀತಿಯಲ್ಲಿ ನಡೆದುಕೊಳ್ಳಬಹುದು.

ಹಾಗಾಗಿ, ಇಂತಹ ಸಮಸ್ಯೆಗಳನ್ನು ಒಂದು ಕಾಯ್ದೆ ಅಥವಾ ಕಾನೂನಿನ ಮೂಲಕ ಪರಿಹರಿಸಲು ಬರುವುದಿಲ್ಲ. ಹೆಚ್ಚೆಂದರೆ, ಆರೈಕೆ ಇಲ್ಲದೇ ವಯಸ್ಸಾದವರು ಸಮಸ್ಯೆ ಅನುಭವಿಸಿದರೆ, ಅದಕ್ಕೆ ಕುಟುಂಬದ ಯಾರನ್ನಾದರೂ ಹೊಣೆ ಮಾಡುವ ಕಾನೂನು ಮಾಡಬಹುದೇ ವಿನಾ ಈ ಸಮಸ್ಯೆಯನ್ನು ಕೇವಲ ಕಾಯ್ದೆಯ ಮಟ್ಟದಲ್ಲಿ ಪರಿಹರಿಸುವುದು ಕಷ್ಟವೇ ಸರಿ.

ಇಂತಹ ಹಲವಾರು ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ ಎನ್ನುವ ಮಾತನ್ನು ನಾವು ಕೇಳಿರುತ್ತೇವೆ. ಯಾಕೆ ಹೀಗಾಗುತ್ತಿದೆ ಎಂದರೆ ಅದಕ್ಕೆ ಉತ್ತರವಾಗಿ, ಕೂಡುಕುಟುಂಬಗಳು ಕಡಿಮೆಯಾಗುತ್ತಿರುವುದು ಅಥವಾ ಜನ ಹೆಚ್ಚು ಹೆಚ್ಚು ತಮ್ಮ ಖಾಸಗಿ ಆಸೆಗಳ ಪೂರೈಕೆಗೇ ಒತ್ತು ಕೊಟ್ಟು, ತಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ಮರೆಯುತ್ತಿರುವುದು – ಹೀಗೆ ಹಲವು ಕಾರಣಗಳನ್ನೂ ಕೊಡುತ್ತೇವೆ.

ಕೂಡುಕುಟುಂಬಗಳಿಗಿಂತ ಚಿಕ್ಕ ಕುಟುಂಬಗಳಲ್ಲಿ ತಮ್ಮ ತಂದೆತಾಯಂದಿರನ್ನು ನೋಡಿಕೊಳ್ಳುವುದು ಸುಲಭವಾಗಬೇಕಲ್ಲ? ಆದರೆ, ಹಾಗೆ ಹೇಳಿದ ತಕ್ಷಣ, ಇತ್ತೀಚಿನ ಜನ ತುಂಬಾ ಲೋಭಿಗಳಾಗಿ ತಮ್ಮ ಹಿರಿಯರನ್ನು ಮರೆಯುತ್ತಿದ್ದಾರೆ ಎಂದುಬಿಡುತ್ತೇವೆ.

ಒಟ್ಟಾರೆಯಾಗಿ, ಸಮಾಜದ ಮಟ್ಟದಲ್ಲಿ ಆಗುತ್ತಿರುವ ಒಂದು ಬೃಹದಾಕಾರದ ಬದಲಾವಣೆಗೆ ವ್ಯಕ್ತಿಗಳ ಗುಣಾವಗುಣಗಳ ಮೇಲೆ ಅವಲಂಬಿತವಾದ ಒಂದು ನೈತಿಕ ಕಾರಣ ಕೊಡುತ್ತೇವೆ. ನೈತಿಕ ಕಾರಣಗಳನ್ನು ವ್ಯಕ್ತಿ-ವ್ಯಕ್ತಿಗಳ ಮಟ್ಟದಲ್ಲಿ ಕೊಡಬಹುದೇ ವಿನಾ ಇಡೀ ಸಮಾಜಗಳ ಮಟ್ಟದಲ್ಲಿ ಕೊಡಲಾಗುವುದಿಲ್ಲವಷ್ಟೆ.

ಹಾಗಾದರೆ ನಿಜಕ್ಕೂ ಬದಲಾಗಿರುವುದೇನು? ಬದಲಾಗಿರುವುದು ಕುಟುಂಬದ ಗಾತ್ರವಷ್ಟೇ ಅಲ್ಲ. ಕುಟುಂಬದ ಪಾತ್ರ ಕೂಡ. ಒಂದು ಕುಟುಂಬದ ಪಾತ್ರ ಬದಲಾಗಿರುವುದರಿಂದ ಮಾತ್ರ ಇಂತಹ ಹಲವಾರು ಸಮಸ್ಯೆಗಳು ಉಲ್ಬಣಿಸುತ್ತಿರುವುದು.

ಹಿರಿಯರನ್ನು ಕಡೆಗಣಿಸುತ್ತಿರುವುದು ಕುಟುಂಬದ ಈ ಬದಲಾದ ಪಾತ್ರದ ಒಂದು ಪರಿಣಾಮ. ವಿಚ್ಛೇದನಗಳು ಹೆಚ್ಚಾಗುತ್ತಿರುವುದೂ, ಮಕ್ಕಳು ಬೆಳೆದು ಮನೆ ಬಿಟ್ಟ ಮೇಲೆ, ಅವು ಖಾಲಿ ಗೂಡುಗಳಾಗುತ್ತಿರುವುದು ಇವೆಲ್ಲದಕ್ಕೆ ಆಧುನಿಕ ಕುಟುಂಬದ ಒಂದು ಮೂಲಭೂತ ಲಕ್ಷಣವೇ ಕಾರಣವಾಗಿರುವುದು.

ಆಧುನಿಕ ಕುಟುಂಬಗಳನ್ನು ಒಮ್ಮೆ ಗಮನಿಸಿ. ಇವು ಮಾಡುವ ಕೆಲಸಗಳೇನು ಎಂದು ಒಮ್ಮೆ ಲೆಕ್ಕ ಮಾಡಿ. ಒಬ್ಬರು ಅಥವಾ ಇಬ್ಬರು ಕೆಲಸಕ್ಕೆ ಹೋಗಿ ದುಡಿಯುತ್ತಾರೆ. ಮಕ್ಕಳು ಸ್ಕೂಲು–ಕಾಲೇಜಿಗೆ ಹೋಗುತ್ತಾರೆ. ಒಟ್ಟಾಗಿ ಒಂದಷ್ಟು ಹಬ್ಬ–ಹರಿದಿನ, ಪ್ರವಾಸ, ಸಮಾರಂಭ ಇತ್ಯಾದಿ ಮಾಡುತ್ತಾರೆ. ತಂತಮ್ಮಲ್ಲೇ ಒಂದಷ್ಟು ಪ್ರೀತಿ–ವಿಶ್ವಾಸದಿಂದ ಇರುತ್ತಾರೆ. ತಮ್ಮವರಿಗೆ ಆದಷ್ಟೂ ಸಮಸ್ಯೆಯಾಗದಂತೆ ಅವರನ್ನು ರಕ್ಷಿಸುತ್ತಾರೆ. ಅಂದರೆ, ಆಧುನಿಕ ಕುಟುಂಬಗಳಲ್ಲಿ ವ್ಯಕ್ತಿಗಳು ಪರಸ್ಪರ ಸಹಕಾರದ ಮೂಲಕ ಹಲವು ಪ್ರಯೋಜನಗಳನ್ನೂ ಸುಖಗಳನ್ನೂ ಪಡೆಯುತ್ತಾರೆ.

ಆದರೆ ಒಂದು ಕುಟುಂಬವಾಗಿ ಇವರು ಒಟ್ಟಿಗೆ ಬರುವುದು ಯಾವುದೋ ವಸ್ತುವಿನ ಅಥವಾ ಸೇವೆಯ ಗ್ರಾಹಕರಾದಾಗ ಮಾತ್ರ. ಒಟ್ಟಿಗೆ ಸಿನಿಮಾಕ್ಕೆ ಹೋದೆವು, ಒಟ್ಟಿಗೆ ಪ್ರವಾಸಕ್ಕೆ ಹೋದೆವು, ಒಟ್ಟಿಗೆ ದೇವಸ್ಥಾನಕ್ಕೆ ಹೋದೆವು – ಹೀಗೆ ಮಾತ್ರ ಒಂದು ಆಧುನಿಕ ಕುಟುಂಬ ಒಂದು ಘಟಕವಾಗಿ ಕೆಲಸಮಾಡುವುದು.

ಅಂದರೆ ಅದರರ್ಥ, ಒಂದು ಆಧುನಿಕ ಕುಟುಂಬ ಕೇವಲ ಭೋಗ್ಯಕ್ಕೆ, ಅಂದರೆ ಏನನ್ನಾದರೂ ಭೋಗಿಸುವುದಕ್ಕೆ ಮಾತ್ರ ಒಂದಾಗುವ ಘಟಕ. ಭೋಗಿಸುವುದು ಎಂದರೆ ಕೆಟ್ಟದ್ದು ಎಂದೇನೂ ಅರ್ಥವಲ್ಲ. ಸಂಗೀತದ ಸುಖವನ್ನು ಭೋಗಿಸುವುದು, ದೇವಸ್ಥಾನದಲ್ಲಿ ಶ್ರೇಯಸ್ಸನ್ನು ಭೋಗಿಸುವುದು ಇದು ಯಾವುದು ಕೆಟ್ಟದ್ದಲ್ಲವಲ್ಲ. ಆದರೆ, ಭೋಗ್ಯದಲ್ಲಿ ಮಾತ್ರ ಒಂದು ಕುಟುಂಬ ಒಟ್ಟಾಗಿ ಬರುವುದು ಎನ್ನುವುದು ಮಾತ್ರ ಇಲ್ಲಿ ಮುಖ್ಯ.

ಆದರೆ, ಪಾರಂಪರಿಕವಾದ ಕುಟುಂಬಗಳನ್ನು ಗಮನಿಸಿ. ಅವು ಕೂಡುಕುಟುಂಬಗಳಾಗಿದ್ದವು ಎನ್ನುವುದೇನೋ ನಿಜ. ಅದಕ್ಕೆ ಕಾರಣ ಹಿಂದಿನವರೆಲ್ಲಾ ಒಬ್ಬರಿಗೊಬ್ಬರು ಪ್ರೀತಿ–ವಿಶ್ವಾಸದಿಂದ ಇರುತ್ತಿದ್ದರು ಎಂದೇನೂ ಅಲ್ಲ. ಕೂಡುಕುಟುಂಬಗಳ ರಾಜಕೀಯ, ಒಳಜಗಳ, ಸಣ್ಣತನ ಇವೆಲ್ಲಾ ಬಲ್ಲವರೇ ಬಲ್ಲರು. ಆದರೆ, ಪಾರಂಪರಿಕ ಕುಟುಂಬಗಳು ಕೂಡುಕುಟುಂಬಗಳಾಗಿದ್ದವು ಎನ್ನುವುದಷ್ಟೇ ಅಲ್ಲಿ ಮುಖ್ಯವಲ್ಲ.

ಅದಕ್ಕಿಂತ ಮುಖ್ಯ ಆ ಕುಟುಂಬಗಳು ಒಂದು ಘಟಕವಾಗಿ ಒಟ್ಟಾಗಿ ಬರುತ್ತಿದ್ದುದು ಕೇವಲ ಭೋಗ್ಯದ ಸಂದರ್ಭದಲ್ಲಿ ಮಾತ್ರ ಅಲ್ಲ. ಒಂದು ಕೂಡುಕುಟುಂಬವೆಂದರೆ ಒಂದು ಕಸುಬಿನಲ್ಲಿ ತೊಡಗಿಸಿಕೊಂಡಿರುವ ಘಟಕ. ಕೃಷಿಯೋ, ವ್ಯಾಪಾರವೋ, ಇಲ್ಲಾ ಕೆಲವೊಮ್ಮೆ ಕಳ್ಳತನವೋ, ಅಥವಾ ಮತ್ತ್ಯಾವುದೋ ಕಸುಬು – ಇಡೀ ಕುಟುಂಬವೇ ಇಂತಹ ಒಂದು ವ್ಯವಸಾಯದಲ್ಲಿ ಒಟ್ಟಿಗೆ ತೊಡಗಿಕೊಂಡಿರುತ್ತದೆ.

ಅವರವರ ಶಕ್ತಿ–ಯುಕ್ತಿಗೆ ತಕ್ಕಂತೆ ಕುಟುಂಬದ ಪ್ರತಿಯೊಬ್ಬರಿಗೂ ಆ ವ್ಯವಸಾಯದ ಒಂದಲ್ಲಾ ಒಂದು ಜವಾಬುದಾರಿ ಇರುತ್ತದೆ. ಅಂದರೆ, ಪಾರಂಪರಿಕ ರೀತಿಯ ಕೂಡುಕುಟುಂಬ ಎಂದರೆ ಒಂದು ಸಂಕೀರ್ಣವಾದ ಆಧುನಿಕ ಸಂಸ್ಥೆ ಇದ್ದಂತೆ. ಆ ಇಡೀ ಕುಟುಂಬವನ್ನು ರಕ್ಷಿಸುವುದು ಎಂದರೆ, ಕುಟುಂಬದವರ ವ್ಯವಸಾಯವನ್ನು ರಕ್ಷಿಸುವುದು ಎಂದೇ ಅರ್ಥ.

ಹಾಗೆಯೇ, ಕುಟುಂಬದವರ ವ್ಯವಸಾಯವನ್ನು ರಕ್ಷಿಸುವುದು ಎಂದರೆ ಇಡೀ ಕುಟುಂಬವನ್ನು ರಕ್ಷಿಸುವುದು ಎಂದರ್ಥ. ಅಂದಮೇಲೆ, ಪಾರಂಪರಿಕ ಕುಟುಂಬಗಳಲ್ಲಿ ವ್ಯಕ್ತಿಯ ಶ್ರೇಯಸ್ಸಿಗೂ ಕುಟುಂಬದ ಶ್ರೇಯಸ್ಸಿಗೂ ಒಂದು ಅವಿನಾಭಾವದ, ಕೊಡುಕೊಳೆಯ ಸಂಬಂಧವಿದೆ. ಈ ಎರಡರಲ್ಲಿ ಒಂದಕ್ಕೆ ಹಾನಿಯಾದರೆ ಇನ್ನೊಂದಕ್ಕೂ ಹಾನಿಯಾಗುತ್ತದೆ. 


ಈ ಕಾರಣದಿಂದಾಗಿಯೇ, ಕೂಡುಕುಟುಂಬಗಳು ಬಹಳ ಬೇರೆ ರೀತಿಯ ಕುಟುಂಬಗಳ ಜೊತೆ ವಿವಾಹಸಂಬಂಧ ಬೆಳೆಸಿಕೊಳ್ಳುತ್ತಿರಲಿಲ್ಲ. ಆಗ ಒಂದು ಘಟಕವಾಗಿ ಇವು ಕೆಲಸಮಾಡುವುದು ಕಷ್ಟವಾಗುತ್ತಿತ್ತು. ಹಾಗೆಯೇ, ತಂತಮ್ಮ ಜಾತಿಗಳ ಬಗ್ಗೆ ಅವು ಒಂದು ರೀತಿಯ ಜಿಗುಟುತನವನ್ನು ತೋರಿಸುತ್ತಿದ್ದವು. ಯಾಕೆಂದರೆ, ತಮ್ಮನ್ನು ರಕ್ಷಿಸಿಕೊಳ್ಳುವುದು ಎಂದರೆ ತಮ್ಮ ಕಸುಬುಗಳು ಅಥವಾ ಸಂಪ್ರದಾಯಗಳನ್ನು ರಕ್ಷಿಸಿಕೊಳ್ಳುವುದು ಎಂದೇ ಅರ್ಥ.

ಅದು ಒಂದು ಕುಟುಂಬದ ಮಟ್ಟದಲ್ಲಿ ಮಾತ್ರ ಆಗುವ ಕೆಲಸವಲ್ಲ. ಅದು ಒಟ್ಟಾರೆಯಾಗಿ, ಒಂದು ಇಡೀ ಜಾತಿಯೋ ಸಮುದಾಯವೋ ಮಾಡಬೇಕಾದ ಕೆಲಸ. ಇವತ್ತು ಕುಟುಂಬಗಳ ಈ ಪಾತ್ರ ಬದಲಾಗಿರುವುದರಿಂದ ಆ ಹಳೆಯ ಕಾಳಜಿಗಳನ್ನು ಇವತ್ತಿನ ಆಧುನಿಕ ಪರಿಭಾಷೆಯಲ್ಲಿ ನೋಡಿದರೆ, ಅದು ಜಾತೀಯತೆ ಎಂದೋ, ಮೌಢ್ಯವೆಂದೋ, ಸ್ವಜನಪಕ್ಷಪಾತವೆಂದೋ, ವರ್ಗ ಸಂರ್ಘಷವೆಂದೋ, ಅಥವಾ ಕೆಲವೊಮ್ಮೆ ಭ್ರಷ್ಟಾಚಾರವೆಂದೋ ಕಾಣುತ್ತದೆ.

ಆದರೆ ಆಧುನಿಕ ಕುಟುಂಬಗಳು ಹೀಗಲ್ಲ. ಅವುಗಳು ಭೋಗ್ಯದ ಸಂದರ್ಭವೊಂದನ್ನು ಹೊರತುಪಡಿಸಿ ಬೇರೆ ಯಾವ ರೀತಿಯಲ್ಲೂ ಒಂದು ಘಟಕವಲ್ಲದೇ ಇರುವುದರಿಂದ, ಅವುಗಳಿಗೆ ಯಾವ ಆಂತರಿಕ ಬಂಧವೂ ಇಲ್ಲ. ನಾವು ಇದರ ಬಗ್ಗೆ ಮಾತನಾಡುವಾಗ ಕೂಡ ಪರೋಕ್ಷವಾಗಿ ಇದು ಗೊತ್ತಾಗುತ್ತದೆ. ಉದಾಹರಣೆಗೆ, ಮಕ್ಕಳು ಒಳ್ಳೆಯವರಾಗಿದ್ದರೆ ಅವರ ತಂದೆತಾಯಂದಿರನ್ನು ನೋಡಿಕೊಳ್ಳುತ್ತಾರೆ. ಇಲ್ಲದಿದ್ದರೆ ಇಲ್ಲ ಎನ್ನುವ ತೆಳುವಾದ, ಖಾಸಗಿ ನೈತಿಕ ಮಟ್ಟಕ್ಕೆ ನಮ್ಮ ಚರ್ಚೆ ಇಳಿದುಬಿಡುತ್ತದೆ.

ಮಕ್ಕಳು, ಸೊಸೆಯಂದಿರು, ಮೊಮಕ್ಕಳು ಒಳ್ಳೆಯವರು ಅಥವಾ ಕೆಟ್ಟವರಾಗಿರುವುದು ನಿಜವಾದ ಸಮಸ್ಯೆಯಲ್ಲ. ಅದು ಸಮಸ್ಯೆಯ ಹೊರರೂಪ ಅಷ್ಟೆ. ನಿಜವಾದ ಸಮಸ್ಯೆ ಎಂದರೆ, ಒಂದು ಕುಟುಂಬದ ಪಾತ್ರವೇ ಬದಲಾಗಿರುವುದು. ಪಾರಂಪರಿಕ ಕುಟುಂಬಗಳ ರೀತಿಯ ವ್ಯವಸ್ಥೆಗಳಿಗೆ ನಮ್ಮ ಕಾಲದಲ್ಲಿರುವ ಉದಾಹರಣೆಗಳೆಲ್ಲಾ ಒಂದೋ ಬಹಳ ಶ್ರೀಮಂತರ ಅಥವಾ ಬಹಳ ಬಡವರ ಹಿನ್ನೆಲೆಯ ಕುಟುಂಬಗಳವು. ಹಲವಾರು ಮಾರವಾಡಿ ಕುಟುಂಬಗಳಲ್ಲಿ ಇಂದಿಗೂ ಈ ವ್ಯವಸ್ಥೆ ಇರುವುದನ್ನು ನೋಡಬಹುದು. ಇಡೀ ಕುಟುಂಬವೇ ಒಂದು ವ್ಯವಸಾಯದ ಘಟಕವಾಗಿ ಕೆಲಸಮಾಡುತ್ತದೆ.

ಹಾಗೆಯೇ, ಕೆಲವು ದೊಡ್ಡ ಕಂಪೆನಿಗಳನ್ನು ನಡೆಸುವ ಕುಟುಂಬಗಳು, ರಾಜಕೀಯದಲ್ಲಿ ಮುನ್ನೆಲೆಯಲ್ಲಿರುವ ಕುಟುಂಬಗಳು ಇವು ಒಂದೆಡೆಯಾದರೆ, ಇನ್ನು ಊರೂರಿಗೆ ಹೋಗಿ ಪಾತ್ರೆಪಗಡೆ ಮಾರುವ ಕೆಲವು ಜಾತಿಯವರು, ಅಲ್ಲಲ್ಲಿ ಉಳಿದಿರುವ ಕೃಷಿ ಆಧಾರಿತ ಕುಟುಂಬಗಳು –ಇವು ಇನ್ನೊಂದು ತುದಿಯ ಉದಾಹರಣೆಗಳು.  ಇವೆಲ್ಲಾ ವಿವರಣೆಯಾಯಿತು. ಪ್ರಾಯೋಗಿಕವಾಗಿ ನಾವು ಮಾಡಬೇಕಿರುವುದೇನು? ಆ ಹಳೆಯ ಪರಂಪರೆಯ ಕುಟುಂಬ ವ್ಯವಸ್ಥೆಯನ್ನೇನೂ ನಾವು ವಾಪಸ್ಸು ತರಬೇಕಿಲ್ಲ.

ಅದು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ಬದಲಾಗಿ, ಈಗಿರುವ ಆಧುನಿಕ ತಂತ್ರಜ್ಞಾನ, ಶಿಕ್ಷಣ, ಸೌಲಭ್ಯದ ನೆರವು ಪಡೆದುಕೊಂಡು ಕುಟುಂಬದ ಹಲವು ಸದಸ್ಯರನ್ನು ತೊಡಗಿಸುವ ಪ್ರಯೋಗಗಳನ್ನು ಮಾಡುವುದು. ಅವೆಲ್ಲ ಏನೂ ಮಾರವಾಡಿ ಕುಟುಂಬಗಳ ರೀತಿಯಲ್ಲಿ ವ್ಯಾಪಾರ ವಹಿವಾಟೇ ಆಗಬೇಕು ಎಂದೇನೂ ಇಲ್ಲ. ನಮ್ಮ ಸುತ್ತದ ಸಣ್ಣಪುಟ್ಟ ಸಾಮುದಾಯಿಕ ಅಗತ್ಯಗಳನ್ನು ಪೂರೈಸುವ ಯೋಜನೆಯಾದರೂ ಸರಿಯೇ.

ಅವು ಏನು, ಯಾವುದು ಎನ್ನುವ ವಿವರಗಳನ್ನು ಹುಡುಕಬೇಕಷ್ಟೆ. ಈಗ ಎಷ್ಟೋ ಕಡೆಗಳಲ್ಲಿ ವಯಸ್ಸಾದವರ ಸಹಾಯದಿಂದ ಚಿಕ್ಕ ಮಕ್ಕಳಿಗೆ ಬಾಲಪಾಠಗಳನ್ನು ಹೇಳಿಕೊಡುವ ವ್ಯವಸ್ಥೆಯಾಗುತ್ತಿದೆ. ನಿಮ್ಮ ಅಮ್ಮನೋ, ಅತ್ತೆಯೋ, ಅಜ್ಜಿಯೋ ಉಪ್ಪಿನಕಾಯಿ ಹಾಕವುದರಲ್ಲಿ ಪ್ರವೀಣರಾದರೆ ಮನೆಯವರಿಗೆಲ್ಲಾ ಅವರೇ ತಾನೇ ಅದನ್ನು ಹಾಕಿ ಸರಬರಾಜು ಮಾಡುತ್ತಿದ್ದದ್ದು? ನಿಮ್ಮ ಕುಟುಂಬದಲ್ಲೇ ಇರುವ ದಕ್ಷ ಲೆಕ್ಕಪರಿಶೋಧಕರು, ಈಗ ನಿವೃತ್ತಿಯಾಗಿರುವವರು, ಅವರೇ ತಾನೇ ನಿಮ್ಮ ಮನೆಯಲ್ಲಿ ಹಲವರಿಗೆ ತೆರಿಗೆ ನಮೂನೆಗಳನ್ನು ಭರ್ತಿ ಮಾಡಿಕೊಡುತ್ತಿದ್ದವರು? ಇವೆಲ್ಲಾ ಒಂದು ರೀತಿಯಲ್ಲಿ ಬಿಡಿಬಿಡಿ ಉದಾಹರಣೆಗಳು.

ಆದರೆ, ಇಂತಹ ಹಲವಾರು ರೀತಿಗಳಲ್ಲಿ ವಯಸ್ಸಾದವರು ನಮ್ಮ ಜೀವನದ ಭಾಗವಾಗಬೇಕು. ಹಾಗಾದಾಗ, ಅವರ ಬಗೆಗಿನ ಕಾಳಜಿ ತಂತಾನೇ ಬೆಳೆಯುತ್ತದೆ. ಈಗಿನ ಸಮಸ್ಯೆ ಎಂದರೆ, ಆಧುನಿಕ ಕುಟುಂಬಗಳಲ್ಲಿ ವಯಸ್ಸಾದವರಿಗೆ ಒಂದು ಪ್ರಮುಖ ಪಾತ್ರವೇ ಇಲ್ಲ. ಲೆಕ್ಕಕ್ಕೆ ಇಲ್ಲದವರು ಆಟದಲ್ಲಿ ಇದ್ದರೂ ಇಲ್ಲದಂತೆಯೇ ತಾನೆ? 

ಸಮರ್ಥೇಶ ಕರ್ಣಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT