ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಿದ್ರ ಮನಸ್ಸಿನ ಆರ್ತನಾದ

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ವಿನಾಶನಿಗೆ 20ರ ಹರೆಯ: ನಗರದ ಖ್ಯಾತ ಇಂಜಿನಿಯರಿಂಗ್ ಕಾಲೇಜಿನ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ, ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ.   ಸ್ಫುರದ್ರೂಪಿಯಾಗಿದ್ದ ಆತ, ಓದು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ – ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದರಿಂದ, ಅವನ ವ್ಯಕ್ತಿತ್ವಕ್ಕೆ ಮರುಳಾಗದವರೇ ಇರಲಿಲ್ಲ. ಕುಟುಂಬ, ಮಿತ್ರವೃಂದ , ಶಿಕ್ಷಕವೃಂದ ಹಾಗೂ  ನೆರೆಹೊರೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದ. ಹೀಗೆ ಸಾಗಿತ್ತು ಅವಿನಾಶನ ಸುಂದರ ಬದುಕು.

ಒಂದು ದಿನ ತನ್ನ ಬೈಕ್ ಮೇಲೆ ಕಾಲೇಜಿಗೆ ಹೊರಟಾಗ, ದಾರಿಯುದ್ದಕ್ಕೂ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆಂದು ಅವಿನಾಶನಿಗೆ ಅನ್ನಿಸತೊಡಗಿತು. ಎರಡು-ಮೂರು ಬಾರಿ ನಿಂತು ಹಿಂದೆ ನೋಡಿದರೆ ಯಾರೂ ಕಾಣಿಸಲಿಲ್ಲ. ಆದರೂ ಅವನಿಗೆ ಸಮಾಧಾನವಾಗಲಿಲ್ಲ.

ತರಗತಿಯಲ್ಲಿ ಕುಳಿತಾಗಲೂ, ಯಾರೋ ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂಬ ಸಂಶಯ ಕಾಡತೊಡಗಿತು. ಆತನ ಸಹಪಾಠಿಗಳು ತಮ್ಮೊಳಗೆ ಮಾತನಾಡಿಕೊಂಡರೂ, ಅವರು ತನ್ನ ಬಗ್ಗೆಯೇ ಚರ್ಚಿಸುತ್ತಿದ್ದಾರೆ ಎಂದೆನಿಸುತ್ತಿತ್ತು. ಕ್ರಮೇಣ ಅವಿನಾಶನ ನಡುವಳಿಕೆ, ಹಾವಭಾವಗಳು ಬದಲಾದವು. ಕಾಲೇಜಿಗೆ ಹೋಗುವುದನ್ನೂ ನಿಲ್ಲಿಸಿದ. ಓದು, ಕ್ರೀಡೆಗಳಲ್ಲಿ ಆಸಕ್ತಿ ಕುಂದಿತು. ಮೊದಲಿನ ಅವಿನಾಶ ಕಳೆದುಹೋಗಿಬಿಟ್ಟಿದ್ದ.

ಕೆಲವು ವಾರಗಳ ನಂತರ, ಅವನು ತನ್ನ ಕೋಣೆಗಷ್ಟೇ ಸಿಮೀತಗೊಂಡಿದ್ದ. ಒಬ್ಬೊಬ್ಬನೇ ಮಾತನಾಡುವುದು, ಕಾಣದ ಧ್ವನಿಗಳೊಡನೆ ಸಂಭಾಷಣೆಗಳು ಸಾಮಾನ್ಯವಾಯಿತು. ಕಾರಣವಿಲ್ಲದೇ ಹೆದರುವುದು, ಪೇಚಾಡುವುದು ಹಾಗೂ  ಒಬ್ಬಂಟಿಯಾಗಿರುವುದು ಹೆಚ್ಚಾಗತೊಡಗಿತು. ತಂದೆ–ತಾಯಿಗಳ ಒಡನಾಟವೂ ನಿಂತುಹೋಗಿತ್ತು. ಸ್ನಾನ, ಸ್ವಚ್ಛತೆಯ ಪರಿವೆಯೇ ಇರುತ್ತಿರಲಿಲ್ಲ.

ಏನೇ ಕೇಳಿದರೂ ‘ಅವರು ನನ್ನನ್ನು ಅವ್ಯಾಚ್ಯವಾಗಿ ನಿಂದಿಸುತ್ತಾರೆ, ನನ್ನನ್ನು ಕೊಲ್ಲಲು ಸಂಚು ಮಾಡುತ್ತಿದ್ದಾರೆ. ನನ್ನನ್ನು ಕೊಂದೆ ಬಿಡುತ್ತಾರೆ’ ಎಂದೆಲ್ಲ ಹೇಳುತ್ತಿದ್ದ. ‘ಅವರು ಯಾರು?’ ಎಂದು ಕೇಳಿದರೆ ಆತನಲ್ಲಿ ಸ್ಷಷ್ಟ ಉತ್ತರವಿರಲಿಲ್ಲ. ಅವಿನಾಶನ  ನೆರೆಹೊರೆಯವರು ಹಾಗೂ ಸಂಬಂಧಿಗಳು ಆತನಿಗೆ ಹುಚ್ಚು ಹಿಡಿದಿದೆ ಎಂದು ಮಾತನಾಡತೊಡಗಿದರು. ಅವಿನಾಶನ ತಂದೆ ಅವನನ್ನು ಮನೋರೋಗತಜ್ಞರ ಬಳಿ ಕರೆದೋಯ್ದಾಗ, ಆತ ‘ಸ್ಕಿಝೋಫ್ರೇನಿಯಾ’ ಎಂಬ ಮನೋವ್ಯಾಧಿಯಿಂದ ಬಳಲುತ್ತಿದ್ದಾನೆ ಎಂದು ತಿಳಿಯಿತು.

ಮನುಕುಲ ಕಂಡ ಭಯಾನಕ ವ್ಯಾಧಿಗಳಲ್ಲಿ ಸ್ಕಿಝೋಫ್ರೇನಿಯಾ ಕೂಡ ಒಂದು. ಅದನ್ನು ‘ಮನಸ್ಸಿನ ಕಾನ್ಸರ್’ ಎಂದೂ ಸಹ ಕರೆಯುತ್ತಾರೆ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅವಿನಾಶನಂತಹ ವ್ಯಕ್ತಿಗಳನ್ನು ನೋಡಿರುತ್ತೇವೆ. ಆದರೆ ಅವರನ್ನು ಹುಚ್ಚರೆಂದು ಸಂಬೋಧಿಸಿ, ನಿರ್ಲಕ್ಷಿಸುತ್ತೇವೆ. ಪ್ರತಿ ವರ್ಷ ಮೇ 24ರಂದು ‘ವಿಶ್ವ ಸ್ಕಿಝೋಫ್ರೇನಿಯಾ ಜಾಗೃತಿ ದಿನ’ವೆಂದು ಆಚರಿಸಿ, ಈ ರೋಗದ ಬಗ್ಗೆ ಸಾಮಾನ್ಯಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.

ಇತಿಹಾಸ
ಸ್ವಿರ್ಡ್ಜ್‌ಲೆಂಡ್‌ನ ಮನೋರೋಗತಜ್ಞ ಯೂಜಿನ್ ಬ್ಲೂಲರ್ 1911ರಲ್ಲಿ ಸ್ಕಿಝೋಫ್ರೇನಿಯಾ ಎಂಬ ಪದದ ಬಳಕೆಯನ್ನು ಮೊದಲ ಬಾರಿಗೆ ಮಾಡಿದರೂ, 1887ರಲ್ಲಿಯೇ ಎಮಿಲ್ ಕ್ರೆಪಲೀನ್ ಎಂಬ ನರರೋಗತಜ್ಞ ಇದರ ರೋಗಲಕ್ಷಣಗಳ ಬಗ್ಗೆ ತಿಳಿಸಿದ್ದ.ಗ್ರೀಕ್‌ಭಾಷೆಯಲ್ಲಿ ‘ಸ್ಕಿಝೋ’ ಎಂದರೆ ‘ಛಿದ್ರ’; ‘ಫ್ರೆನ್’ ಎಂದರೆ ‘ಮನಸ್ಸು’ ಎಂದರ್ಥ. ಸಾಮಾನ್ಯಜನರಲ್ಲಿ ಇರುವ ಕಲ್ಪನೆಯಂತೆ ಇದು ಬಹು ವ್ಯಕ್ತಿತ್ವದ ರೋಗವಲ್ಲ. ಸ್ಕಿಝೋಫ್ರೇನಿಯಾಗೆ ತನ್ನದೇ ಆದ ರೋಗಲಕ್ಷಣಗಳಿವೆ. ಇದು ಮನುಕುಲವನ್ನು ಕಾಡುತ್ತಿರುವ ಗಂಭೀರರೋಗಗಳಲ್ಲಿ ಒಂದು.

ಸ್ಕಿಝೋಪ್ರೇನಿಯಾ ಲಿಂಗ, ಜನಾಂಗ, ಸಾಮಾಜಿಕ, ಆರ್ಥಿಕ ಮಟ್ಟ ಹಾಗೂ ಭೌಗೋಳಿಕ ಪ್ರದೇಶಗಳ ಭೇದವಿಲ್ಲದೇ , ಯಾರಲ್ಲಾದರೂ ಕಾಣಿಸಿಕೊಳ್ಳಬಹುದು. ಇತ್ತೀಚಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನಗಳ ಸಂಸ್ಥೆ (ನಿಮ್ಹ್ಯಾನ್ಸ್) ನಡೆಸಿದ ಸಮೀಕ್ಷೆಯ ಪ್ರಕಾರ,  ಭಾರತದಲ್ಲಿ  ಸಾವಿರಕ್ಕೆ ನಾಲ್ಕು (ಶೇ. 0.4) ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ.

ಕಾರಣಗಳು
ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿದ್ದರೂ, ಈ ರೋಗಕ್ಕೆ ನಿಖರ ಹಾಗೂ ನಿರ್ದಿಷ್ಟವಾದ ಕಾರಣಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆನುವಂಶೀಯತೆ, ಜನನದ ಸಮಯದಲ್ಲಿ ಉಂಟಾಗುವ ತೊಂದರೆಗಳು, ನರಮಂಡಲದ ನಂಜು, ಮಾದಕ ವಸ್ತುಗಳ ಉಪಯೋಗ (ಗಾಂಜಾ, ಮದ್ಯಪಾನ, ಕೊಕೇನ್ ಇತ್ಯಾದಿ), ಜೆನೆಟಿಕ್ ಕಾರಣಗಳಿಂದ ಈ ರೋಗವು ಬರಬಹುದೆಂದು ಸಂಶೋಧನೆಗಳು ತಿಳಿಸಿವೆ.ಸ್ಕಿಝೋಫ್ರೇನಿಯಾ ರೋಗದಲ್ಲಿ ಮಿದುಳಿನಲ್ಲಿ ಡೋಪಮಿನ್ ಎಂಬ ರಾಸಾಯನಿಕದ ಪ್ರಮಾಣ ಹೆಚ್ಚಾಗುತ್ತದೆ. ಸೆರೊಟೊನಿನ್ ಹಾಗೂ ಇನ್ನಿತರ ರಾಸಾಯನಿಕಗಳ ಮಟ್ಟದಲ್ಲಿ ಏರುಪೇರು ಕಂಡು ಬರುತ್ತದೆ.

ರೋಗಲಕ್ಷಣಗಳು
ಸ್ಕಿಝೋಫ್ರೇನಿಯಾವು ವ್ಯಕ್ತಿಯ ಗ್ರಹಿಕೆ, ಚಿಂತನೆ, ಮಾತು ಹಾಗೂ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿಗೆ ಅತಿಮಾನುಷ ಅನುಭವಗಳಾಗುತ್ತವೆ. ವ್ಯಕ್ತಿ, ವಸ್ತುಗಳು ಅಗೋಚರವಾಗಿದ್ದರೂ ಸಹ ಅವರ/ಅವುಗಳ ಧ್ವನಿ, ಶಬ್ದಗಳು ಕೇಳಿಸುವುದು, ಧ್ವನಿಗಳು ತಮ್ಮೊಳಗೆ ವ್ಯಕ್ತಿಯ ಬಗ್ಗೆ ಚರ್ಚಿಸುವುದು, ಆತನನ್ನು ನಿಂದಿಸುವುದು, ಕುಚೋದ್ಯ ಮಾಡುವುದು ಸಹ ಕೇಳಿಸಬಹುದು (hallucinations). ರೋಗಪೀಡಿತರು ಕೆಲವೊಮ್ಮೆ ಅಗೋಚರ ಮನುಷ್ಯರ ಜೊತೆ ಸಂಭಾಷಣೆಯನ್ನೂ ನಡೆಸಬಹುದು.

ಭ್ರಮೆ (delusion) ಸಂಶಯಗಳು ಈ ರೋಗದ ಮುಖ್ಯ ಲಕ್ಷಣಗಳು. ರೋಗಿಯು ಯಾವುದೇ ವಾಸ್ತವಿಕ ಸಾಕ್ಷಿ ಇಲ್ಲದಿದ್ದರೂ ತನಗೆ ಯಾರಿಂದಲೋ ಜೀವ ಭಯವಿದೆ ಎಂದು ತಿಳಿಯಬಹುದು. ತಿನ್ನುವ ಅನ್ನದಲ್ಲಿ ವಿಷ ಹಾಕಿರಬಹುದೆಂದು ಅನುಮಾನ ವ್ಯಕ್ತಪಡಿಸಿ ದಿನಗಳಗಟ್ಟಲೇ ಊಟ ಮಾಡದೇ ಇರಬಹುದು. ತಾನು ಆಗರ್ಭ ಶ್ರೀಮಂತ; ತನ್ನಲ್ಲಿ ಅಗಾಧವಾದ ಶಕ್ತಿಯಿದೆ ಎಂದುಕೊಳ್ಳಬಹುದು.

ತನ್ನ ಸಂಗಾತಿಯ ಶೀಲದ ಬಗ್ಗೆ ಸಂಶಯ ಪಡಬಹುದು. ಕೆಲವೊಮ್ಮೆ ಇಂತಹ ಸಂಶಯ ವಿಕೋಪಕ್ಕೆ ತಿರುಗಿ ಅದು ಕೊಲೆಯಲ್ಲಿ ಕೊನೆಯಾದ ನಿದರ್ಶನಗಳಿವೆ.  ವ್ಯಕ್ತಿಗೆ ಅವನ ಸಂಶಯಗಳ ವಿರುದ್ಧ ಎಷ್ಟೇ ಸಾಕ್ಷಿ, ಪುರಾವೆಗಳನ್ನು ನೀಡಿದರೂ ಒಪ್ಪಿಕೊಳ್ಳುವುದಿಲ್ಲ.ಈ ಕಾಯಿಲೆಯಲ್ಲಿ ರೋಗಿಯು ತನ್ನನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸುತ್ತಿದ್ದು, ತನ್ನೆಲ್ಲ ಮಾತು, ಚಟುವಟಿಕೆಗಳಿಗೆ ಬಾಹ್ಯ ಶಕ್ತಿಯೇ ಕಾರಣ ಎಂದು ಭಾವಿಸುತ್ತಾನೆ. ವ್ಯಕ್ತಿಯ ಯೋಚನೆಯ ಹರಿವಿನಲ್ಲಿ ಅಡೆತಡೆಗಳುಂಟಾಗಿ, ಮಾತು ಅರ್ಥಹೀನವಾಗುತ್ತದೆ ಅಥವಾ ಆತ ಸಂಪೂರ್ಣ ಸ್ತಬ್ಧನಾಗಬಹುದು.

ಇಂತಹ ವಿಚಿತ್ರ ಅನುಭವಗಳು, ನಿಂದಿಸುತ್ತಿರುವ ಅಗೋಚರ ಮನುಷ್ಯರ ಧ್ವನಿಗಳು ಹಾಗೂ ಕಲ್ಪಿತ ಪ್ರಾಣಭಯಗಳಿಂದ, ಕೆಲವೊಮ್ಮೆ ಆ ವ್ಯಕ್ತಿಯು ಆಕ್ರಮಣಶೀಲ ಹಾಗೂ ಹಿಂಸಾತ್ಮಕನಾಗಬಹುದು. ಕೆಲವೊಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಬಹುದು. ಸಿಝೋಫ್ರೇನಿಯಾವು ವ್ಯಕ್ತಿಯನ್ನು ಅಂಧಕಾರದ ಕೂಪಕ್ಕೆ ತಳ್ಳಿ, ಆತನ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಜೀವನವನ್ನು ಅಧೋಗತಿಗಿಳಿಸುತ್ತದೆ.

ಕುಟುಂಬದ ಪಾತ್ರ
ದೀರ್ಘಾವಧಿಯ ಮತ್ತು ಅವಲಂಬನೆಯನ್ನು ಅಪೇಕ್ಷಿಸುವ ಕಾಯಿಲೆ ಸ್ಕಿಜೋಫ್ರೇನಿಯಾ. ಹೀಗಾಗಿ ಇದು ವ್ಯಕ್ತಿಯ ಕುಟುಂಬದ ಮೇಲೆ ಅತೀವ ಒತ್ತಡವನ್ನು ಬೀರುತ್ತದೆ. ರೋಗಿಯ ಕಾಳಜಿಗಾಗಿ ಒಬ್ಬಿಬ್ಬರು ಸತತವಾಗಿ ಜೊತೆಗಿರಲೇಬೇಕಾಗುತ್ತದೆ. ಕೆಲವೊಮ್ಮೆ ವ್ಯಕ್ತಿಯ ಹಿಂಸಾತ್ಮಕ ಹಾಗೂ ಸಾಮಾಜಿಕವಾಗಿ ಮುಜುಗರ ತರುವಂಥ ನಡುವಳಿಕೆಯಿಂದ ಕುಟುಂಬದ ಸದಸ್ಯರಿಗೆ ತೊಂದರೆಗಳು ಎದುರಾಗಬಹುದು.

ನಮ್ಮ ದೇಶದಲ್ಲಿ ಕುಟುಂಬ ವ್ಯವಸ್ಥೆ ಹಾಗೂ ಸದಸ್ಯರ ನಡುವಿನ ಪ್ರೀತಿ–ಬಾಂಧವ್ಯಗಳು ಈ ರೋಗದ ನಿರ್ವಹಣೆಯಲ್ಲಿ ಸಹಕಾರಿಯಾಗಿವೆ. ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ದೇಶಗಳ ಹಾಗೂ ಪಾಶ್ಚಾತ್ಯದೇಶಗಳ ಸ್ಕಿಝೋಫ್ರೇನಿಯಾ ರೋಗಿಗಳ ಚೇತರಿಕೆಗೆ ಕಾರಣವಾದ ಅಂಶಗಳ ಬಗ್ಗೆ ಅಭ್ಯಸಿಸಿದಾಗ, ಭಾರತದ ರೋಗಿಗಳು ಬೇಗನೇ ಚೇತರಿಸಿಕೊಂಡದ್ದು ಕಂಡುಬಂದಿದೆ. ಇದಕ್ಕೆ ಭಾರತದಲ್ಲಿನ ಕುಟುಂಬ ವ್ಯವಸ್ಥೆಯೂ ಕಾರಣವೆಂದು ಊಹಿಸಲಾಗಿದೆ.

ಮನೋರೋಗಗಳು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಶತಮಾನಗಳಿಂದ ಸಮಾಜಕ್ಕೆ ಹಾಗೂ ಸರಕಾರಗಳಿಗೆ ಇರುವ ಅಸಡ್ಡೆ, ಉದಾಸೀನಗಳಿಂದ ಲಕ್ಷಾಂತರ ಜನರು ವೇದನೆ ಅನುಭವಿಸುತ್ತಿದ್ದಾರೆ. ನಿಯಮಗಳ ಪ್ರಕಾರ ಕನಿಷ್ಟ ಒಂದು ಲಕ್ಷ ಜನಸಂಖ್ಯೆಗೆ ಒಬ್ಬ ಮನೋರೋಗ ತಜ್ಞರಿರಬೇಕು. ಆದರೆ, ನಮ್ಮ ದೇಶದಲ್ಲಿ ಮನೋರೋಗ ತಜ್ಞರ ಸಂಖ್ಯೆ ಪ್ರತಿ ಎರಡರಿಂದ ಮೂರು ಲಕ್ಷ  ಜನಸಂಖ್ಯೆಗೆ ಒಬ್ಬರಂತೆ ಇದೆ. ಸರಕಾರಗಳು ಇತ್ತೀಚಿಗೆ ಎಚ್ಚೆತ್ತುಕೊಂಡು, ಮಾನಸಿಕ ಆರೋಗ್ಯದ ಬಗ್ಗೆ ಅನೇಕ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸುತ್ತಿವೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳು ಜಾರಿಯಲ್ಲಿವೆ.  

ಸ್ಕಿಝೋಫ್ರೇನಿಯಾವು ದುಬಾರಿ ರೋಗ. ಇದುವರೆಗೆ ಯಾವುದೇ ಆರೋಗ್ಯ ವಿಮಾ ಸಂಸ್ಥೆಗಳು, ಮನೋರೋಗಗಳಿಗೆ ವಿಮೆ ನೀಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಭಾರತ ಸರ್ಕಾರವು ಜಾರಿಗೆ ತಂದಿರುವಂತಹ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾಳಜಿ ಕಾಯಿದೆಯ ಪ್ರಕಾರ ಎಲ್ಲ ಮನೋರೋಗಗಳನ್ನು ಆರೋಗ್ಯ ವಿಮೆಯಡಿ ತರಲಾಗಿದೆ.
ಬೆಂಗಳೂರಿನ ‘ನಿಮ್ಹ್ಯಾನ್ಸ್’,  ಚೆನ್ನೈನ ‘ಸ್ಕಾರ್ಫ್’ (SCARF))ನಂತಹ ಸಂಸ್ಥೆಗಳು ಸ್ಕಿಜೋಫ್ರೇನಿಯಾ ರೋಗಿಗಳ ಬಗ್ಗೆ ವಿಶೇಷ ಕಾಳಜಿ ತೋರುತ್ತಿವೆ. ಮನೋರೋಗಗಳ ಬಗ್ಗೆ ಅರಿವು ಮೂಡಿಸುವುದರ ಬಗ್ಗೆ ಸಂಘ, ಸಂಸ್ಥೆಗಳು ತಮ್ಮನ್ನು  ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕಾಗಿದೆ.

ಇತಿಹಾಸದಲ್ಲಿ ಅನೇಕ ಕಲಾವಿದರು, ವಿಜ್ಞಾನಿಗಳು ಹಾಗೂ ವಿದ್ವಾಂಸರು ಈ ರೋಗದಿಂದ ಬಳಲುತ್ತಿದ್ದರೂ, ಸಾಧನೆಯ ಉತ್ತುಂಗಕ್ಕೇರಿದ್ದರು. ಇತ್ತೀಚೆಗೆ ನಿಧನರಾದ ಮಹಾನ್ ಗಣಿತ ಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಶ್ ಇದಕ್ಕೆ ಜ್ವಲಂತ ಉದಾಹರಣೆ. ನಿಯಮಿತ ಔಷಧೋಪಚಾರ, ಚಟುವಟಿಕೆಯುಕ್ತ ಜೀವನ ಹಾಗೂ ಧನಾತ್ಮಕ ಯೋಚನೆಯಿಂದ ತಾವೂ ಸಹ ಇತರರಂತೆ ಸಾಮಾನ್ಯ ಜೀವನವನ್ನು ನಡೆಸಬಹುದು.

ಚಿಕಿತ್ಸೆ
1952ರಲ್ಲಿ ‘ಕ್ಲೋರ್‌ಪ್ರೋಮಾಜಿನ್’ ಎಂಬ ಔಷಧಿಯ ಸಂಶ್ಲೇಶಣೆಗೂ ಮೊದಲು ಸ್ಕಿಝೊಫ್ರೇನಿಯಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿರಲಿಲ್ಲ. ಹೀಗಾಗಿ ರೋಗಿಗಳು ತಮ್ಮ ಉಳಿದ ಜೀವನವನ್ನು ಸೆರೆಮನೆಯಂತಹ ಕೋಣೆಯಲ್ಲಿ, ಕೆಲವು ಹಿಂಸಾತ್ಮಕವಾದ ಚಿಕಿತ್ಸಾ ಪದ್ಧತಿಗಳಿಗೊಳಗಾಗುತ್ತ ಕಳೆಯಬೇಕಾಗಿತ್ತು.  ಅನಂತರದ ವರ್ಷಗಳಲ್ಲಿ ಅನೇಕ ಮನೋರೋಗಗಳಿಗೆ ಸಂಬಂಧಿಸಿದ ಔಷಧಗಳ ಆವಿಷ್ಕಾರವಾಗಿದ್ದು, ಇದರಿಂದ ಸ್ಕಿಝೋಫ್ರೇನಿಯಾದ ಚಿಕಿತ್ಸೆ ಪರಿಣಾಮಕಾರಿ ಹಾಗೂ ತೃಪ್ತಿದಾಯಕವಾಗಿದೆ.

ಇತ್ತೀಚಿಗೆ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡುವಂತಹ ಚುಚ್ಚುಮದ್ದುಗಳ (depot injections)) ಆವಿಷ್ಕಾರವಾದಾಗಿನಿಂದ, ದಿನನಿತ್ಯ ಮಾತ್ರೆಗಳ ಸೇವನೆಯ ತೊಂದರೆ ತಪ್ಪುತ್ತಿದೆ. ಅರಿವಳಿಕೆಯೊಂದಿಗೆ ನೀಡುವ ವಿದ್ಯುತ್ ಕಂಪನ ಚಿಕಿತ್ಸೆಯು (Electroconvulsivetherapy) ಉಲ್ಬಣಗೊಂಡಿರುವ ಹಾಗೂ ದೀರ್ಘಾವಧಿಯ ರೋಗ ನಿಯಂತ್ರಣಕ್ಕೆ ನೆರವಾಗುತ್ತದೆ. ನಿಯಮಿತ ಔಷಧೋಪಚಾರದೊಂದಿಗೆ, ಸೂಕ್ತವಾದ ಸಾಮಾಜಿಕ ಹಾಗೂ ಔದ್ಯೋಗಿಕ ಪುನರ್ವಸತಿ (rehabilitation) ಒದಗಿಸುವುದರಿಂದ, ಈ ರೋಗವು ನಿಯಂತ್ರಣದಲ್ಲಿದ್ದು, ವ್ಯಕ್ತಿಯು ಬಹುತೇಕ ಇತರರಂತೆ ಸಾಮಾನ್ಯಜೀವನ ನಡೆಸಬಹುದಾಗಿದೆ.

ಡಾ. ಶಿವಾನಂದ ಬಿ. ಹಿರೇಮಠ, ಮನೋರೋಗತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT