ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40+ ಅಪ್ಪ ಅರಿಯಬೇಕಾದ್ದು

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ವಯಸ್ಸಾದ ನಂತರ ಪುರುಷರು  ಮಗುವನ್ನು ಪಡೆಯುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿತ್ತು. ಇಂಥ ಸಂದರ್ಭದಲ್ಲಿ ಮಗುವಿನ ಮೇಲಾಗುವ ಆರೋಗ್ಯಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಬಾರಿ ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ವಯಸ್ಸಾಗುತ್ತಿದ್ದಂತೆ ಆಗುವ ಡಿಎನ್‌ಎ ರೂಪಾಂತರಗಳು ಮಗುವಿಗೆ ಖಂಡಿತವಾಗಿ ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುವಂತಿಲ್ಲವಾದರೂ ಕೆಲವು ಬದಲಾವಣೆಗಳು ಗರ್ಭಧಾರಣೆಗೆ ತೊಂದರೆ ಮಾಡುವುದಂತೂ ಹೌದು.

ಇತ್ತೀಚಿನ ‘ಮಣಿಪಾಲ್ ಫರ್ಟಿಲಿಟಿ’ ಅಧ್ಯಯನದ ಪ್ರಕಾರ, ಭಾರತದ 25 ವಯಸ್ಸಿನ ಪುರುಷರಿಗೆ ಹೋಲಿಸಿದರೆ, 35 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಪುರುಷರಲ್ಲಿ ಮಕ್ಕಳಾಗುವ ಸಾಧ್ಯತೆ ಶೇ. 50ರಷ್ಟು ಕ್ಷೀಣಿಸುವುದು ಕಂಡುಬಂದಿದೆ.

‘ಅಮೆರಿಕ ಜರ್ನಲ್ ಆಫ್ ಎಪಿಡೆಮಿಯಾಲಜಿ’ಯಲ್ಲಿನ ಅಧ್ಯಯನವು 35 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಸಂಗಾತಿ ಹೊಂದಿರುವ ಮಹಿಳೆಯರಿಗೆ ಗರ್ಭಪಾತವಾಗುವ ಸಾಧ್ಯತೆಯು ಶೇ. 27ರಷ್ಟು  ಹೆಚ್ಚಿರುವುದಾಗಿ ಹೇಳಿದೆ.

ಡಿಎನ್‌ಎ ರೂಪಾಂತರವು ಗರ್ಭಧಾರಣೆಗೆ ಹಾಗೂ ಭ್ರೂಣದ ಬೆಳವಣಿಗೆ ಮೇಲೆ ಅಷ್ಟಾಗಿ ಪರಿಣಾಮ ಬೀರದೇ ಇದ್ದರೂ, ಮಗುವಿಗೆ ಕೆಲವು ಜನ್ಮಜಾತ ದೋಷಗಳು, ಅಸಹಜತೆ ಹಾಗೂ ಇನ್ನಿತರ ಆನುವಂಶಿಕ ಸಮಸ್ಯೆಗಳನ್ನು ತರಬಹುದು.

‘ಬೇಯ್ಲರ್ ಕಾಲೇಜ್  ಆಫ್ ಮೆಡಿಸಿನ್ ವಿಮರ್ಶೆ ಮಾಡಿರುವ ಪ್ರಕಾರ, 40ಕ್ಕಿಂತ ಮೇಲ್ಪಟ್ಟ ವಯಸ್ಸಿನ ಪುರುಷರಿಗೆ ಜನಿಸಿದ ಮಕ್ಕಳಲ್ಲಿ ಕೆಲವು ಜನ್ಮಜಾತದೋಷಗಳು 42ರಲ್ಲಿ 1 ಮಗುವಿಗೆ ಕಾಣಿಸಿಕೊಳ್ಳುತ್ತವೆ. ಈ ಪ್ರಮಾಣ ಸಾಮಾನ್ಯರಲ್ಲಿ 50ಕ್ಕೆ ಒಬ್ಬರಲ್ಲಿರುತ್ತದೆ. ವಯಸ್ಸಾದ ಪುರುಷರಿಗೆ ಜನಿಸಿದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಇನ್ನಿತರ ಸಮಸ್ಯೆಗಳೆಂದರೆ...

*50 ವರ್ಷಕ್ಕಿಂತ ಕಡಿಮೆ ವಯೋಮಾನದ ತಂದೆಯರಿಗೆ ಜನಿಸುವ 15,000 ಮಕ್ಕಳಲ್ಲಿ ಒಂದು ಮಗುವಿಗೆ ಕುಬ್ಜತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. 50 ವಯಸ್ಸು ದಾಟಿದ ತಂದೆಗೆ ಜನಿಸಿದ 1,932 ಮಕ್ಕಳಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಇರುತ್ತದೆ.

*ಮಕ್ಕಳಲ್ಲಿ ಸ್ಕಿಝೊಫ್ರೆನಿಯಾ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಿದ್ದು, ಸಾಮಾನ್ಯರಲ್ಲಿ ನೂರರಲ್ಲಿ ಒಬ್ಬರಿಗಿದ್ದರೆ, 50 + ವಯಸ್ಸಿನ ಪುರುಷರಿಗೆ ಜನಿಸಿದ ಮಕ್ಕಳಲ್ಲಿ ಈ ಸಾಧ್ಯತೆಯ ಪ್ರಮಾಣ 22ರಲ್ಲಿ ಒಬ್ಬರು.

*ಪ್ರಸ್ತುತ ಮುಖ್ಯ ಸಮಸ್ಯೆಗಳ ಪಟ್ಟಿಯಲ್ಲಿ ಮುಂದಿರುವುದು ಆಟಿಸಂ.  1000ದಲ್ಲಿ ಒಂದು ಮಗುವಿಗೆ ಆಟಿಸಂ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, 40 ವಯಸ್ಸು ದಾಟಿದ ಪುರುಷರಿಗೆ ಜನಿಸಿದ ಮಕ್ಕಳಲ್ಲಿ ಇದರ ಪ್ರಮಾಣ  174ರಲ್ಲಿ ಒಂದು ಮಗುವಿಗೆ ಕಂಡುಬರುತ್ತದೆ.

*ದುರದೃಷ್ಟಕರ ವಿಷಯವೆಂದರೆ, ವಯಸ್ಸಾದ ತಂದೆಗೆ ಹುಟ್ಟಿದ ಮಕ್ಕಳಲ್ಲಿ ಕ್ಯಾನ್ಸರ್‌ ಪ್ರಮಾಣವೂ ಹೆಚ್ಚಾಗಿರುವುದು ಕಂಡುಬಂದಿದೆ. ಡಿಎನ್‌ಎ ರೂಪಾಂತರಗಳು ಇದಕ್ಕೆ ಕಾರಣವಾಗಬಹುದು ಎಂದು ತಿಳಿಯಲಾಗಿದೆ.

*ಬಾಲ್ಯದಲ್ಲಿನ ರಕ್ತಕ್ಯಾನ್ಸರ್‌ ಸಮಸ್ಯೆಯು ಸಾಮಾನ್ಯರಲ್ಲಿ  36,000ರಲ್ಲಿ ಒಂದು ಮಗುವಿಗೆ ಇದ್ದರೆ,  40+ ವಯಸ್ಸಾದವರಿಗೆ ಹುಟ್ಟಿದ ಮಕ್ಕಳಲ್ಲಿ 21,302ರಲ್ಲಿ ಒಬ್ಬರಿಗೆ ಇರುತ್ತದೆ.

ಹಾಗಿದ್ದರೆ ವಯಸ್ಸಾದ ತಂದೆ ಏನು ಮಾಡಬಹುದು?
ವಯಸ್ಸಾದ ಪುರುಷರೂ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.  ಪುರುಷನ ವಯಸ್ಸಿಗಿಂತ ಮಹಿಳೆಯ ವಯಸ್ಸೇ ಮಗುವಿನ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ; 35 ವಯಸ್ಸು ದಾಟಿದ ನಂತರ ಗರ್ಭಧಾರಣೆ ಸಮಯದಲ್ಲಿ ಹೆಚ್ಚು ಅವರು ಜಾಗರೂಕವಾಗಿರುವಂತೆ ಈ ಮೊದಲು ಸಲಹೆ ನೀಡಲಾಗುತ್ತಿತ್ತು. ಇತ್ತೀಚೆಗೆ ಪುರುಷರ ವಯಸ್ಸಿನ ಪಾಲೂ ಮಕ್ಕಳ ಆರೋಗ್ಯವನ್ನು ನಿರ್ಧರಿಸುತ್ತದೆ ಎಂಬ ವಿವರಗಳು ಬೆಳಕಿಗೆ ಬರುತ್ತಿವೆ. 

ಈ ಕುರಿತು ಡಿಎನ್‌ಎ ವಿಘಟನೆಯ ವೀರ್ಯ ಪರೀಕ್ಷೆ ಹೊರತುಪಡಿಸಿದರೆ, ಸೂಕ್ತ ಪರೀಕ್ಷೆಯ ಲಭ್ಯತೆ ಇಲ್ಲ. ಆದ್ದರಿಂದ  ನಿಖರ ಪರೀಕ್ಷೆಯಿಂದ ಸಾಧ್ಯತೆಗಳನ್ನು ಮುಂಚಿತವಾಗಿಯೇ ಕಂಡುಕೊಳ್ಳಬೇಕಾದ ತಂತ್ರಜ್ಞಾನದ ಅವಶ್ಯಕತೆಯಿದೆ. ಸದ್ಯಕ್ಕೆ ವೈದ್ಯರು, ವೀರ್ಯದ ಡಿಎನ್‌ಎ ರೂಪಾಂತರದ ಪರೀಕ್ಷೆ ನಡೆಸುತ್ತಾರೆ.

ಜೊತೆಗೆ ‘ಫ್ಲೋ ಸೈಟೊಮೆಟ್ರಿಕ್‌’ ಚಿಕಿತ್ಸೆ ಲಭ್ಯವಿದೆ. ದಂಪತಿಗೆ ಮತ್ತೂ ಒಂದು ಆಯ್ಕೆ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್/ಐಸಿಎಸ್‌ಐ). ಇದರಲ್ಲಿ ಪ್ರಿ ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೊಸಿಸ್/ ಸ್ಕ್ರೀನಿಂಗ್ (ಪಿಜಿಡಿ/ಪಿಜಿಎಸ್) ಚಿಕಿತ್ಸೆ ಅನುಸರಿಸಬಹುದು.  ಮಕ್ಕಳನ್ನು ಪಡೆಯಬೇಕೆಂಬ ಬಯಕೆಗೆ ವಯಸ್ಸು  ಅಡ್ಡಿಯಾಗಬಾರದಲ್ಲವೇ? ಹಾಗಿದ್ದರೆ ಆರೋಗ್ಯವಂತ ಮಗುವನ್ನು ಪಡೆಯಲು ಕೆಲವು ದಾರಿಗಳೂ ಇವೆ. ಅವೆಂದರೆ:

*ವೀರ್ಯಪರೀಕ್ಷೆಯನ್ನು ಮಾಡಿಸಿಕೊಳ್ಳಿ,

*ಡಿಎನ್‌ಎ, ಡಿಎನ್‌ಎ ವಿಘಟನೆ ಸ್ಥಿತಿಗತಿಗಳನ್ನು ಅರಿತುಕೊಳ್ಳಿ.

*ವೀರ್ಯದ ಡಿಎನ್‌ಎ ಪರೀಕ್ಷೆಗೆ ಸೂಕ್ತ ತಂತ್ರಜ್ಞಾನ ಆಯ್ಕೆ ಮಾಡಿಕೊಳ್ಳಿ.

*ಸುರಕ್ಷಿತ ಗರ್ಭಧಾರಣೆಗೆ ಇರುವ ಸೂಕ್ತ ಆಯ್ಕೆಯನ್ನು ಕುರಿತು ಚರ್ಚಿಸಿ.

*ವೀರ್ಯದ ಡಿಎನ್‌ಎ ದೋಷ ಕಡಿಮೆ ಮಾಡುವ ಜೀವನಶೈಲಿ ಅಳವಡಿಸಿಕೊಳ್ಳಿ

*ಆರೋಗ್ಯಯುತ ವೀರ್ಯ ಕಾಪಾಡುವ ಔಷಧಗಳ ಆಯ್ಕೆಯನ್ನು ಕುರಿತು ತಿಳಿದುಕೊಳ್ಳಿ.

*ಹೆಚ್ಚು ಕಾಲ ವೀರ್ಯ ಆರೋಗ್ಯಯುತವಾಗಿ ಉಳಿಯುವುದಿಲ್ಲ ಎನ್ನಿಸಿದರೆ, ಅದನ್ನು ಶೈತ್ಯೀಕರಣ ಪ್ರಕ್ರಿಯೆಯಲ್ಲಿ ಸುರಕ್ಷಿತವಾಗಿರಿಸಿ.  ಮುಂದೆ ಅದನ್ನು ಬಳಸಿ ಮಗುವನ್ನು  ಪಡೆಯಬಹುದು. 

ಡಾ. ವಾಸನ್
ಆ್ಯಂಡ್ರೊಲಜಿಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT