ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಪಯಣದ ತಂಪು ನೆನಪು

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ವಾಸವೆಂದರೆ ದಿನನಿತ್ಯದ ಆಗುಹೋಗುಗಳಿಗೆ, ದಿನಚರಿಗೆ ಒಂದು ವಿರಾಮ ಅಥವಾ ಬದಲಾವಣೆ ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ. ಅದರೆ ನಾನು ನನಗೊಂದು ಸುಯೋಗ, ಜೀವನದ ಸಂತೋಷಕ್ಷಣವೆಂದು ಭಾವಿಸುತ್ತೇನೆ. ಪ್ರಯಾಣದಲ್ಲಿ ಶಕ್ತಿಯ ಸಂಚಯನ ಆಗುವಷ್ಟು ನನಗೆ ಬೇರೆ ಇನ್ಯಾವುದೇ ವಿಧದಿಂದಲೂ ಆಗದು ಎಂಬುದು ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ.

ನಾನೊಬ್ಬಳು ಹುಟ್ಟು ಅಲೆಮಾರಿ, ಈ ಮಾತಿಗೆ ಉದಾಹರಣೆಯನ್ನು ಕೊಡುತ್ತೇನೆ. ನಾನು ಹುಟ್ಟಿದ್ದು, ಬೆಳೆದದ್ದು, ಬಾಲ್ಯದ ಸುಂದರ ದಿನಗಳನ್ನು ಅನುಭವಿಸಿದ್ದು ನನ್ನ ಹಳ್ಳಿ  ‘ದಿಡುಪೆ’ ಎನ್ನುವ ಕುಗ್ರಾಮದಲ್ಲಿ. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಪ್ರಕೃತಿಯ ಮಡಿಲಲ್ಲಿ ಬೆಚ್ಚಗೆ ಕುಳಿತಿರುವ ಸಣ್ಣ ಊರು ದಿಡುಪೆ.

ಕವಿ ಕೆ.ಎಸ್‌. ನಿಸಾರ್ ಅಹ್ಮದ್ ಅವರ ಕವಿತೆಯ ಸಾಲುಗಳಾದ ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ...’

ಈ ಸಾಲುಗಳು ಕೇವಲ ಶಿವಮೊಗ್ಗ ಜಿಲ್ಲೆಯ ಜೋಗಕ್ಕೆ ಮಾತ್ರ ಸೀಮಿತವಲ್ಲ, ನನ್ನ ಸ್ವಂತ ಊರಾದ ದಿಡುಪೆ ಕೂಡ ಈ ಹಾಡಿನ ಸಾಲುಗಳ ಬಣ್ಣನೆಯಿಂದ ಹೊರತಾಗಿಲ್ಲ. ರಸ್ತೆಗಳನ್ನು ಕಾಣದ, ವಿದ್ಯುತ್ ಕಂಬಗಳನ್ನು ನೋಡದ ಭತ್ತದ ಗದ್ದೆಯ ನಡುವಿನ  ಓಣಿಗಳ ಮೇಲೆ ನಡೆದುಕೊಂಡೇ ನನ್ನ ಮನೆಗೆ ಸೇರಬೇಕಾದ ಅನಿವಾರ್ಯ.

ಮನೆಯ ತೋಟಕ್ಕೆ ಅಂಟಿಕೊಂಡಿರುವ ಆನಡ್ಕ ಜಲಪಾತ ವರ್ಷದುದ್ದಕ್ಕೂ ಧೋ ಎಂದು ನೀರನ್ನು ಕಲ್ಲುಬಂಡೆಗಳ ಮೇಲೆ ಅಪ್ಪಳಿಸಿ ಇಡೀ ಊರಿಗೆ 365 ದಿನಗಳಲ್ಲಿ ಒಂದು ದಿನವೂ ಬಿಡುವಿಲ್ಲದೆ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಡುವ ಜಲಪಾತವದು.

ಇಂತಹ ಪ್ರಕೃತಿ ಸೌಂದರ್ಯವುಳ್ಳ ಸ್ಥಳದಲ್ಲಿ ಹುಟ್ಟಿ ಬೆಳೆದ ನನಗೆ ಆ ಹಸಿರು ಕಾನನವೇ ಸ್ವರ್ಗ. ಆ ನೀರೇ ಅಮೃತ , ನನ್ನ ಆ ಮನೆಯೇ ಅರಮನೆ. ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಹೇಳದೆ ಕೇಳದೆ ಕಾಡುಮೇಡು ಅಲೆಯಲು ಹೋಗುತ್ತಿದ್ದೆನಂತೆ. ಮನೆಯಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಾಗಿದ್ದಾಗ ನಾನು ಎಲ್ಲಾದರೂ ತಪ್ಪಿಸಿಕೊಂಡು ಹೋಗುತ್ತಿದ್ದುದು ವಾಡಿಕೆಯಂತೆ.

ನಂತರ ಎಲ್ಲರೂ ಸೇರಿ ಮನೆಯ ತೋಟದ ಕೆಲಸದ ಸಹಾಯಕರಿಂದ ಹಿಡಿದು ನನ್ನ ಶೋಧಕಾರ್ಯದಲ್ಲಿ ತೊಡಗುತ್ತಿದ್ದರಂತೆ. ನಾನು ಆರಾಮವಾಗಿ ತೊರೆಯ ಬಳಿ ಕುಳಿತು ನೀರಿನಲ್ಲಿ ಆಟವಾಡುತ್ತಿರುತ್ತಿದ್ದೆ ಎಂದು ಅಮ್ಮ ಈಗಲೂ ನೆನಪಿಸಿಕೊಳ್ಳುತ್ತಾರೆ.

ಅಷ್ಟೇ ಅಲ್ಲದೆ ಈಗಲೂ ನನಗೆ ಎಲ್ಲಾದರೂ ಹೊರಗೆ ಹೋಗಬೇಕೆಂದೆನಿಸಿದಾಗ ಎದ್ದು ಹೋಗುವ ಸ್ವಭಾವವನ್ನು ಈಗಲೂ ಬಿಟ್ಟಿಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ.  ಇರಲಿ, ಈಗ ಮಹಿಳೆಯರ ಒಂಟಿ ಪ್ರವಾಸದ ಬಗ್ಗೆ ಬರೆಯಲು ಹೊರಟಾಗ ನನ್ನಂತಹ ಅಲೆಮಾರಿಗಳ ಕಿರು ಪರಿಚಯದ ಪೀಠಿಕೆ ಬರೆದರೆ ಚೆನ್ನ ಅನಿಸಿತು.

ಪ್ರವಾಸ ಪ್ರಯಾಸಕರ ಆಗದಂತೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನಾವು ಒಬ್ಬರೇ ಬಂದಿರವುದು ಎಂದು ನಾವು ಸಾರ್ವಜನಿಕ ವಾಹನಗಳಲ್ಲಿ ಓಡಾಡುವಾಗ ಯಾರಿಗೂ ತಿಳಿಯಗೊಡಬಾರದು.

ನನ್ನ ಅನೇಕ ಒಂಟಿ ಪ್ರವಾಸದ ಸಂದರ್ಭಗಳಲ್ಲಿ ನಾನು ಬಸ್ಸಿನಲ್ಲಿ ಯಾರಾದರೂ ಮಾತಿಗಿಳಿದರೆ ಮುಂದಿನ ನಿಲ್ದಾಣದಲ್ಲಿ ಅಥವಾ ನಾನು ಇಳಿಯುವ ಜಾಗದಲ್ಲಿ ನನ್ನ ಅಣ್ಣ, ನನ್ನ ತಮ್ಮ ಅಥವಾ ನನ್ನ ಚಿಕ್ಕಪ್ಪ... ಹೀಗೆ ಯಾರಾದರೂ ಬರುತ್ತಾರೆ ಎಂಬ ಸಂದರ್ಭಯೋಚಿತ ಸುಳ್ಳನ್ನು ಹೇಳುತ್ತೇನೆ; ಅದು ಅಲ್ಲಿ ಅನಿವಾರ್ಯ. ಇದರಿಂದ ಸಾಕಷ್ಟು ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.

ಸಾಮಾನ್ಯವಾಗಿ ನಾನು, ನನ್ನ ಗಂಡ, ಮಗಳೊಡನೆ ಪ್ರವಾಸ ಹೋಗುತ್ತಿರುತ್ತೇವೆ. ಸೋಲೋ ಟ್ರಾವೆಲ್ಲರ್ ಅಥವಾ ಒಂಟಿ ಪ್ರಯಾಣ ನನ್ನ ಮೊದಲ ಆಯ್ಕೆ. ಇಲ್ಲಿ ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ, ನನ್ನದೇ ಸಾಮ್ರಾಜ್ಯ ಎನ್ನುವಷ್ಟು ಖುಷಿ. 

ನನ್ನ ಪತಿದೇವರು ಕೂಡ  ಪ್ರವಾಸಪ್ರಿಯರು, ಮಾತ್ರವಲ್ಲದೆ ಅವರು ತಮ್ಮ ಮೋಟಾರ್ ಬೈಕ್‌ನಲ್ಲಿ ಭಾರತದ ಉದ್ದಗಲ ಹಾಗೂ ನೆರೆಯ ಐದು ರಾಷ್ಟ್ರಗಳನ್ನು ಶಿಕ್ಷಣದ ಸಂದೇಶ ಸಾರುತ್ತ ಸುಮಾರು 25 ಸಾವಿರ ಕಿಲೋಮೀಟರ್‌ಗಳ ಅಂತರವನ್ನು ಆರು ತಿಂಗಳ ಅವಧಿಯಲ್ಲಿ ಸವಾರಿ ಮಾಡಿ ಬಂದಿದ್ದಾರೆ.

ಆದರೆ ಆ ಸಂದರ್ಭದಲ್ಲಿ ನನ್ನ ಮಗು ಒಂದು ತಿಂಗಳ ಹಸುಗೂಸು ಹಾಗಾಗಿ ಅವಳನ್ನು ಬಿಟ್ಟು ಅಥವಾ ಕರೆದುಕೊಂಡು ನಾನು ಎಲ್ಲಿಯೂ ಹೋಗಲಾಗಲಿಲ್ಲ. ಆದರೆ ಆನಂತರ ಅವರು ಪ್ರವಾಸ ಹೊರಟಾಗಲೆಲ್ಲ ನಾನೂ ನನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಹಲವು ಪ್ರವಾಸಗಳನ್ನು ಮಾಡಿ ಬಂದ ಅನುಭವ ನನಗಿದೆ.

ನನ್ನ ಯಜಮಾನರು ಟ್ರಿಪ್ ಹೊರಟರೆ ಕೂಡಲೇ ನಾನೂ ನನ್ನ ಟ್ರಿಪ್ ನಿರ್ಧರಿಸುತ್ತೇನೆ. ಏಕೆಂದರೆ ಅವರು ಊರಲ್ಲಿದ್ದಾಗ ನಾನು ಒಬ್ಬಳೇ ಊರೂರು ಸುತ್ತುವುದು ಅವರಿಗೆ ಸುತರಾಂ ಇಷ್ಟವಿಲ್ಲದ ಸಂಗತಿ, ಇದೊಂದು ಪುರುಷರ ಅಹಂಗೆ ಸವಾಲು ಇರಬಹುದೇನೋ? ಇರಲಿ, ಸಂಸಾರದಲ್ಲಿದ್ದುಕೊಂಡು ಇಂಥವನ್ನು ನಿಭಾಯಿಸಿಕೊಂಡು ಹೋಗುವುದು ಹೆಣ್ಣಿಗೆ ಪ್ರಕೃತಿ ಕೊಟ್ಟ ವರ.

ಹೀಗೆ ಒಂದು ಬಾರಿ ನನ್ನ ಪತಿದೇವರು ನೇಪಾಳದ ಮುಸ್ತಾಂಗ್ ಎನ್ನುವ ಪ್ರದೇಶಕ್ಕೆ ಹೊರಟಿದ್ದರು. ಅದರ ಬೆನ್ನಲ್ಲೇ ನಾನು ನನ್ನ ಮೂರು ವರ್ಷದ ಮಗಳು (ಆಗ) ಆಪ್ತಿ ಪಂಜಾಬ್‌ಗೆ ಹೊರಟೆವು. ಅದೊಂದು ಮರೆಯಲಾರದ ಅನುಭವ. ಬೆಂಗಳೂರಿನಿಂದ ದೆಹಲಿಯ ಮುಖಾಂತರ ಪಂಜಾಬ್‌ನ ಅಮೃತಸರ್‌ಗೆ ವಿಮಾನದಲ್ಲಿ ಹೋಗಿಳಿದೆವು. ಅಲ್ಲಿ ನನ್ನ ಗೆಳತಿ ರಾಧಿಕಾಳ ಮನೆಯಿತ್ತು. ನಾನು ಏಕಾಏಕಿ ಅವಳಲ್ಲಿಗೆ ಹೋದದ್ದನ್ನು ಕಂಡು ಖುಷಿ ಹಾಗೂ ಗಾಬರಿ – ಎರಡನ್ನೂ ಪಟ್ಟಳು.

ನಾನು ರಾಧಿಕಾ ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಸಹಪಾಠಿಗಳಾಗಿದ್ದೆವಲ್ಲದೆ, ಹಾಸ್ಟೆಲ್‌ನಲ್ಲಿ ಕೂಡ ಜೊತೆಗಿದ್ದೆವು, ಹಾಗಾಗಿ ನನ್ನ ತಿರುಗಾಟದ ಚಾಳಿ ಅವಳಿಗೆ ಗೊತ್ತಿತ್ತು. ಆದರೆ ಅನಿರೀಕ್ಷಿತವಾಗಿ ಹೋಗಿದ್ದಕ್ಕೆ ಗಾಬರಿಯಾಯಿತಂತೆ.

ಅಲ್ಲಿ ಸುಮಾರು ಐದು ದಿನ ಪಂಜಾಬ್ ಸುತ್ತುವುದರಲ್ಲೇ ಕಳೆದು ಹೋಯಿತು. ನಂತರ ನಾವು ಉತ್ತರಾಖಂಡಕ್ಕೆ ಹೊರಟೆವು. ಹೃಷಿಕೇಶಕ್ಕೆ ಹೋದಾಗ ಪ್ರಕೃತಿಮಾತೆ ನನ್ನ ಮೇಲೆ ಮುನಿಸಿಕೊಂಡಂತೆ ಅನಿಸಿತು. ಏಕೆಂದರೆ ಒಂದು ಕ್ಷಣವೂ ಬಿಡದೆ ಧೋ ಎಂದು ಮಳೆ ಸುರಿಯುತ್ತಿದ್ದುದರಿಂದ ನೀರಿನ ಮಟ್ಟ ಏರಿತ್ತು. ಅದ್ದರಿಂದ ರಾಫ್ಟಿಂಗ್‌ಗೆ ಹೋಗಲು ಆಗಲೇ ಇಲ್ಲ.

ಆದರೂ ನೈಜ ಪ್ರಕೃತಿ ಸೌಂದರ್ಯವನ್ನು ಕಣ್ಣುತುಂಬಿಸಿಕೊಂಡೆ. ಹರಿದ್ವಾರ ಹೃಷಿಕೇಶ ನೋಡಿ ಅಲ್ಲಿಂದ ಡೆಹ್ರಾಡೂನ್ ನೋಡಿ, ಅಲ್ಲಿನ ವಿಶೇಷ ಬಾಸುಮತಿ ಅಕ್ಕಿಯನ್ನು ಸವಿದು, ನಂತರ ದೆಹಲಿಗೆ ಹೋಗಿಳಿದೆ. ಖಾಸಗಿ ಬಸ್ ಒಂದರಲ್ಲಿ ಹರಿದ್ವಾರದಿಂದ ಡೆಲ್ಲಿಗೆ ಹೋದೆ. ನಮ್ಮ ಇಲ್ಲಿಯ ಸುಸಜ್ಜಿತ ಬಸ್‌ಗಳು, ಇಲ್ಲಿನ ಶಿಸ್ತು ಅಲ್ಲಿ ಯಾವುದು ಕಾಣಿಸಲಿಲ್ಲ.

ಬಸ್‌ನ ಚಾಲಕ ಅವ್ಯಾಹತವಾಗಿ ಕಿವಿ ಹರಿದೇ ಹೋಗುವಷ್ಟು ಹಾರನ್ ಹೊಡೆಯುತ್ತಿದ್ದ; ಮಾತ್ರವಲ್ಲದೆ ಒಂದರ ಮೇಲೊಂದೆನ್ನುವಂತೆ ಬೀಡಿ ಹೊಡೆಯುತ್ತಿದ್ದ, ರಾತ್ರಿ 9 ಗಂಟೆಗೆ ದೆಹಲಿಯ ಆನಂದವಿಹಾರ ನಿಲ್ದಾಣದಲ್ಲಿ ಇಳಿದು ಆಟೋದಲ್ಲಿ ನನ್ನ ಗೆಸ್ಟ್ ಹೌಸ್‌ಗೆ ಹೋದೆ. ನಾನು ಹೋಗಿ ಬಂದು 4-5 ದಿನಗಳಲ್ಲಿಯೇ ನಿರ್ಭಯಾಳ ದುರಂತ ನಡೆಯಿತು, ತದನಂತರ ತಡರಾತ್ರಿಯ ಏಕಾಂಗಿ ಪ್ರಯಾಣ. ಅದೂ ಡೆಲ್ಲಿಯಲ್ಲಿ ಈಗಲೂ ನಡುಕ ಹುಟ್ಟಿಸುತ್ತದೆ. ಇದೇ ತರಹದ ಅನುಭವದ ಬುತ್ತಿಯಲ್ಲಿ ಹಲವಾರು ಸವಿನೆನಪುಗಳಿವೆ. ಬರೆಯುತ್ತ ಹೋದರೆ ಇದೇ ಒಂದು ಕಾದಂಬರಿಯಾಗುವುದು ಖಂಡಿತ!

ರಶ್ಮಿ ಗೋಖಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT