ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿ ಫಿಟ್‌ನೆಸ್ ಗುಟ್ಟು ಬ್ಯಾಡ್ಮಿಂಟನ್

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ಕ್ರೀಸ್‌ನಿಂದ ಮುನ್ನುಗ್ಗಿ ಆಡಲು ಯತ್ನಿಸುವ ಬ್ಯಾಟ್ಸ್‌ಮನ್ ಕಣ್ತಪ್ಪಿಸಿ ಸ್ಟಂಪ್‌ಗಳ ಪಕ್ಕದಿಂದ ನುಸುಳಿ ಹೋಗಲು ಚೆಂಡನ್ನು ಹಿಡಿದು ಚಕ್ಕನೆ ಬೇಲ್ಸ್‌ ಎಗರಿಸುವ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿ ಅವರ ಮಿಂಚಿನಾಟ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.

ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಎರಡು ವರ್ಷಗಳ ನಂತರವು ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಕೀಪಿಂಗ್ ಮತ್ತು ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಇತ್ತೀಚೆಗೆ  ಟ್ವೆಂಟಿ–20 ಮಾದರಿಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್‌ಕೀಪರ್ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ ರೈಸಿಂಗ್ ಪುಣೆ ತಂಡವು ಫೈನಲ್ ತಲುಪಲು ಮಹತ್ವದ ಕಾಣಿಕೆ ನೀಡಿದ್ದರು. ಅವರ ಈ ಅಮೋಘ ಸಾಮರ್ಥ್ಯ, ಅವರ ಚುರುಕಿನ ಚಲನೆ ಮತ್ತು ಕಣ್ಣೋಟದ ಹಿಂದಿರುವ ಗುಟ್ಟು ಗೊತ್ತೆ?

ಅವರೇ ಹೇಳಿಕೊಳ್ಳುವಂತೆ ‘ಬ್ಯಾಡ್ಮಿಂಟನ್’ ಆಟ. ಅವರು ಬಾಲ್ಯದಲ್ಲಿ ಫುಟ್‌ಬಾಲ್ ಗೋಲ್‌ಕೀಪರ್ ಆಗಿದ್ದು ಬಹಳಷ್ಟು ಜನರಿಗೆ ಗೊತ್ತಿದೆ. ಅವರ ಕುರಿತ ಚಲನಚಿತ್ರದಲ್ಲಿಯೂ ಅದನ್ನು ತೋರಿಸಲಾಗಿದೆ. ಆದರೆ ಇವತ್ತಿಗೂ ಕ್ರಿಕೆಟ್‌ ಅಂಗಳದಿಂದ ಹೊರಗುಳಿದಾಗ ಮಹಿ ಕೈಗೆತ್ತಿಕೊಳ್ಳುವುದು ಬ್ಯಾಡ್ಮಿಂಟನ್ ರ್‌್ಯಾಕೆಟ್. 

ರಾಂಚಿಯಲ್ಲಿದ್ದಾಗಲಂತೂ ತಮ್ಮ ಹಳೆಯ ಸ್ನೇಹಿತ ಚೋಟು, ಬಾಲ್ಯದ ಕೋಚ್ ಕೇಶವ್‌ ರಂಜನ್ ಬ್ಯಾನರ್ಜಿ ಅವರೊಂದಿಗೆ ಪ್ರತಿದಿನ 2–3 ತಾಸು ಬ್ಯಾಡ್ಮಿಂಟನ್ ಆಡುವುದು ಕಡ್ಡಾಯ ದಿನಚರಿ. ಚುರುಕಾದ ಪಾದಚಲನೆ, ಮೊನಚಾದ ದೃಷ್ಟಿಯನ್ನು ವೃದ್ಧಿಸಲು ಬ್ಯಾಡ್ಮಿಂಟನ್ ಆಟ ಸಹಾಯಕ ಎಂಬುದು ಅವರ ನಂಬಿಕೆ.

‘ಕ್ರೀಡಾಪಟುಗಳಿಗೆ ವಯಸ್ಸು ಹೆಚ್ಚಾದಂತೆ ದೈಹಿಕ ಕ್ಷಮತೆ ಕಡಿಮೆಯಾಗುವುದು ಸಹಜ. ಆದರೆ, 36ರ ಹರೆಯದಲ್ಲಿಯೂ ಮಹಿ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ.  ಅವರಲ್ಲಿ ಒಬ್ಬ ಒಳ್ಳೆಯ ಕ್ರೀಡಾಪಟುವಿನ ಸಾಮರ್ಥ್ಯ ಇದೆ. ಅವರು  ಬ್ಯಾಡ್ಮಿಂಟನ್ ಆಟಗಾರ ಕೂಡ ಹೌದು.  ಇಲ್ಲಿಗೆ ಬಂದಾಗಲೆಲ್ಲ  ಜೆಎಸ್‌ಸಿಎನಲ್ಲಿ ನಾವು ಬ್ಯಾಡ್ಮಿಂಟನ್ ಆಡಲು ಜೊತೆಗೂಡುತ್ತೇವೆ’ ಎಂದು ಬ್ಯಾನರ್ಜಿ ಸಂತಸ ವ್ಯಕ್ತಪಡಿಸುತ್ತಾರೆ.

ಮುಂದಿನ ಜುಲೈ ಏಳಕ್ಕೆ 36 ವಸಂತಗಳನ್ನು ಪೂರೈಸಲಿರುವ ಮಹಿ 2004ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಅವರು ಗಾಯದ ಸಮಸ್ಯೆಯಿಂದ ವಿಶ್ರಾಂತಿ ಪಡೆದಿರುವುದು ತೀರಾ ಕಡಿಮೆ.

ವಿಕೆಟ್‌ ಕೀಪಿಂಗ್‌ನಂತಹ ಅತಿ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ತಣ್ಣನೆಯ ಮುಗುಳ್ನಗೆಯೊಂದಿಗೆ ನಿರ್ವಹಿಸುತ್ತಿದ್ದಾರೆ.  ವಯಸ್ಸು ಹೆಚ್ಚಿದಂತೆ ಅವರ ಕಾಲುಗಳು ಸೋತಿಲ್ಲ. ಬದಲಿಗೆ ಮತ್ತಷ್ಟು ಚುರುಕಾಗಿವೆ. ಅವರ ಕೈಚಳಕ ಮತ್ತು ಹದ್ದಿನ ಕಣ್ಣಿನ ನೋಟಕ್ಕೆ ಹಲವು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರುತ್ತಲೇ ಇದ್ದಾರೆ.

ಆಹಾರ ಸೇವನೆ ವಿಷಯದಲ್ಲಿಯೂ ಅತ್ಯಂತ ಕಟ್ಟುನಿಟ್ಟಿನ  ಕ್ರಮ ಅನುಸರಿಸುವ ದೋನಿ ಅವರಿಗೆ ಪ್ರತಿದಿನವೂ ಚಿಕನ್‌  ಬೇಕಂತೆ. ಅದರೊಂದಿಗೆ ದಾಲ್‌ ಚಾವಲ್ (ಬೇಳೆ ಸಾರು, ಅನ್ನ) ಇದ್ದರೆ ತುಂಬ ಇಷ್ಟ ಎಂದು ಅವರು ಕ್ರಿಕೆಟ್‌ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.

ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್,  ರವೀಂದ್ರ ಜಡೇಜ, ಚೇತೇಶ್ವರ್ ಪೂಜಾರ  ಅವರಂತಹ ಹಲವಾರು ಪ್ರತಿಭಾನ್ವಿತ ಯುವ ಆಟಗಾರರ ದಂಡು ಇವತ್ತು ತಂಡ ಸೇರಲು ತುದಿಗಾಲಿನಲ್ಲಿ ನಿಂತಿದೆ. ಅವರೆಲ್ಲರೊಂದಿಗೆ ಪೈಪೋಟಿ ನಡೆಸುತ್ತ ತಮ್ಮ ಸ್ಥಾನ ಮತ್ತು ಘನತೆ ಉಳಿಸಿಕೊಂಡಿರುವ ದೋನಿ ಯಶಸ್ಸಿನ ಗುಟ್ಟು ಅವರ ಫಿಟ್‌ನೆಸ್ ಮಾತ್ರ.  

ಟ್ವೆಂಟಿ–20ಯಲ್ಲಿ ಕ್ಯಾಚ್‌  ದಾಖಲೆ
ಟ್ವೆಂಟಿ–20 ಕ್ರಿಕೆಟ್ ಮಾದರಿಯಲ್ಲಿ ಅತಿಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ  ದೋನಿ  ಪಾತ್ರರಾಗಿದ್ದಾರೆ. ಅವರು 124 ಕ್ಯಾಚ್‌ಗಳನ್ನು ಪಡೆದಿದ್ದಾರೆ.  ಮೇ 13ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಅವರು ಈ ಸಾಧನೆಯ ಮೈಲಿಗಲ್ಲು ಮುಟ್ಟಿದರು.  ಅವರು ಒಟ್ಟು 261 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅದರೊಂದಿಗೆ ಶ್ರೀಲಂಕಾದ ಕುಮಾರ ಸಂಗಕ್ಕಾರ (123 ಕ್ಯಾಚ್; 235 ಪಂದ್ಯಗಳು) ಅವರ ದಾಖಲೆಯನ್ನು ಮೀರಿ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT