ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ತಬಲಾ ಹಬ್ಬ ‘ಲಯಶ್ರೀ ಕಮಲ’ ಪ್ರದಾನ

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ಅವನದ್ದ ವಾದ್ಯ ತಬಲಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅವಿಭಾಜ್ಯ ಅಂಗ. ವಿಶಿಷ್ಟ ಬೋಲ್‌ಗಳಿಂದ ಕೂಡಿದ ಲಯವನ್ನು ತಿಹಾಯ್, ತುಕಡಾ, ಮುಕಡಾ, ಪೇಶ್‌ಕಾರ್, ಠೇಕಾಗಳೊಂದಿಗೆ ಪ್ರಸ್ತುತಪಡಿಸುವ ಇದರ ವಾದನವನ್ನು ಕೇಳಲು ಬಹಳ ಆಪ್ಯಾಯಮಾನ. ತಬಲಾ ಡಗ್ಗಾಗಳ ಮೇಲೆ ಸರಸರನೆ ಓಡಾಡುವ ಬೆರಳುಗಳನ್ನು ನೋಡುವುದೂ ಕಣ್ಣಿಗೆ ಹಬ್ಬ.

ಸ್ವತಃ ತಬಲಾ ವಾದಕರಾದ ಪಂ. ರಾಜಗೋಪಾಲ್ ಕಲ್ಲೂರಕರ್ ಅವರು ತಬಲಾದ ನುಡಿಸಾಣಿಕೆ ಕ್ರಮವನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವ ಸಲುವಾಗಿಯೇ  ಕತ್ರಿಗುಪ್ಪೆಯಲ್ಲಿ 1975ರಲ್ಲಿ ನಾದದೇಗುಲ ಆರಂಭಿಸಿದರು. ತಬಲಾ ನಾದವನ್ನು ನಾಡಿನಾದ್ಯಂತ ಪಸರಿಸುವ ಮಹತ್ತರ ಉದ್ದೇಶದಿಂದ ಆರಂಭಿಸಿದ ಈ ತಬಲಾ ಸಂಸ್ಥೆ ಪ್ರತಿ ವರ್ಷವೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

‘ತಬಲಾ ಪಠ್ಯಕ್ರಮದಂತೆಯೇ ಇಲ್ಲಿ ತಬಲಾ ಬೋಧನೆ ನಡೆಯುತ್ತದೆ. ಹಿರಿಯ ವಿದ್ವಾಂಸರನ್ನು ಕರೆಸಲಾಗುತ್ತದೆ. ಪ್ರತಿ ತಿಂಗಳು ಬೈಠಕ್ ಇರುತ್ತದೆ. ಮಕ್ಕಳು ಕಲಿತ ತಬಲಾ ಪಾಠಗಳನ್ನು ವೇದಿಕೆ ಮೇಲೆ ನುಡಿಸಲು ಅವಕಾಶ ಇರುತ್ತದೆ. ಇದಕ್ಕಾಗಿಯೇ ‘ಲಯಕಾರಿ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ ಪ್ರತಿಯೊಬ್ಬ ಶಿಷ್ಯನಿಗೂ ವೇದಿಕೆ ಮೇಲೆ ನುಡಿಸಲು ಪ್ರೇರೇಪಿಸುತ್ತೇವೆ. ಇದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ’ ಎಂದು ಹೇಳುತ್ತಾರೆ ಪಂ. ರಾಜಗೋಪಾಲ್ ಕಲ್ಲೂರಕರ್.

ತಬಲಾ ವಿದ್ವಾಂಸ ಪಂ. ಗಿರೀಶ್ ಆವಟೆ ಅವರಿಂದ ತಬಲಾ ಕಲಿತ ಪಂ. ಕಲ್ಲೂರಕರ್, ಮೂರು ಹೊಸ ತಾಳಗಳನ್ನು ಸೃಷ್ಟಿಸಿದ್ದಾರೆ. ಲಯದಲ್ಲಿ ಇವರು ನಡೆಸಿದ ಪ್ರಯೋಗಗಳು ಕೂಡ ಜನಪ್ರಿಯವಾಗಿವೆ. ತಬಲಾ ಪಾಠಕ್ಕೆ ಪೂರಕವಾದ ‘ಅವನದ್ದ’ ಎಂಬ ಪುಸ್ತಕ ಬರೆದಿದ್ದಾರೆ.

ತಬಲಾದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ‘ಲಯಶ್ರೀ ಕಮಲ’ ಪ್ರಶಸ್ತಿ ನೀಡಿ ಸತ್ಕರಿಸುವ ಮತ್ತು ಪ್ರಶಸ್ತಿ ಪಡೆದ ಕಲಾವಿದರಿಂದ ತಬಲಾ ವಾದನ ನಡೆಸಿಕೊಡುವ ಕಾರ್ಯಕ್ರಮವನ್ನು ಪಂ.ಕಲ್ಲೂರಕರ್ ಪ್ರತಿ ವರ್ಷವೂ ಆಯೋಜಿಸುತ್ತಾರೆ. 

ತಬಲಾ ವಾದಕನ ಧ್ಯಾನಸ್ಥ ಗುಣ
ಮೂಲತಃ ಧಾರವಾಡದವರಾದ ಪಂ.ರಘುನಾಥ್‌ ನಾಕೋಡ್ ನಾಡಿನ ಹಿರಿಯ ತಬಲಾ ವಾದಕರು. ಹಿಂದೂಸ್ತಾನಿ ಸಂಗೀತದಲ್ಲಿ ಹೆಸರುವಾಸಿಯಾಗಿದ್ದ ದಿ.ಪಂ. ಅರ್ಜುನಸಾ ನಾಕೋಡ್ ಅವರ ಪುತ್ರರಾದ ರಘುನಾಥ್ ನಾಕೋಡ್, ಸಂಗೀತದ ಆರಂಭದ ಶಿಕ್ಷಣವನ್ನು ತಮ್ಮ ತಂದೆಯವರ ಬಳಿಯೇ ಕಲಿತರು.

ಮುಂದೆ ವೀರಣ್ಣ ಕಮ್ಕರ್ ಅವರ ಬಳಿ ಎಂಟು ವರ್ಷಗಳ ಕಾಲ ತಬಲಾ ಅಭ್ಯಾಸ ಮಾಡಿದರು. ತಮ್ಮ 10ನೇ ವಯಸ್ಸಿನಿಂದಲೇ ತಂದೆಯ ಗಾಯನಕ್ಕೆ ತಬಲಾ ಸಾಥಿ ನೀಡುತ್ತಿದ್ದರು. ಮುಂದೆ ಹೈದರಾಬಾದಿನಲ್ಲಿ ಉಸ್ತಾದ್ ಶೇಖ್ ದಾವೂದ್ ಖಾನ್, ಶಬ್ಬೀರ್ ನಿಸಾರ್ ಹಾಗೂ ನಂದಕುಮಾರ್ ಅವರ ಬಳಿ ತಬಲಾದ ಹೆಚ್ಚಿನ ಲಯಕಾರಿ ಹಾಗೂ ತತ್ವಕಾರಿ ಅಂಶಗಳನ್ನು ಕಲಿತರು. ತಮ್ಮ 21ನೇ ವಯಸ್ಸಿಗೆ ಪರಿಪೂರ್ಣ ತಬಲಾ ವಾದಕರಾಗಿ ರೂಪುಗೊಂಡರು.

ಇದೀಗ ಕಲ್ಲೂರ ಮಹಾಲಕ್ಷ್ಮಿ ತಬಲಾ ವಿದ್ಯಾಲಯದ ವತಿಯಿಂದ ‘ಲಯಶ್ರೀ ಕಮಲ’ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿರುವ ಪಂ.ರಘುನಾಥ ನಾಕೋಡ್ ಅವರು ತಬಲಾ ವಾದನದ ಮಟ್ಟಿಗೆ ‘ಗಟ್ಟಿ ಕುಳ’ ಎನ್ನಬಹುದು.   

ಸಂಗೀತ ಸಂಭ್ರಮ
ಕಲ್ಲೂರ ಮಹಾಲಕ್ಷ್ಮಿ ತಬಲಾ ವಿದ್ಯಾಲಯ ತನ್ನ 32ನೇ ವಾರ್ಷಿಕ ತಬಲಾ ಹಬ್ಬವನ್ನು ಮೇ 20ರಂದು ಶನಿವಾರ ಜಯನಗರದಲ್ಲಿರುವ ಜೆಎಸ್‌ಎಸ್ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಆಚರಿಸಲಿದೆ. ಈ ಸಲ ಹಿರಿಯ ತಬಲಾ ವಾದಕ ಪಂ. ರಘುನಾಥ ನಾಕೋಡ ಅವರಿಗೆ ‘ಲಯಶ್ರೀ ಕಮಲ’ ಪ್ರಶಸ್ತಿ ಸಂದಿದೆ.

ಅತಿಥಿ: ವಿದ್ವಾನ್ ಎ.ವಿ. ಆನಂದ. ಸಭಾ ಕಾರ್ಯಕ್ರಮದ ನಂತರ ಪಂ. ರಘುನಾಥ ನಾಕೋಡ ಅವರ ತಬಲಾ ವಾದನವಿದೆ. ಸತೀಶ್‌ಕೊಳ್ಳಿ ಹಾರ್ಮೋನಿಯಂ ಲೆಹರಾ ನೀಡುವರು. ಅದಾಗಿ ಉಸ್ತಾದ್ ಶಫೀಕ್ ಖಾನ್ ಹಾಗೂ ಪಂ. ರಂಜನ್ ಕುಮಾರ್ ಬೇವೂರ್ ಅವರಿಂದ ಸಿತಾರ್–ವಯೊಲಿನ್ ಜುಗಲ್‌ಬಂದಿ ಕಾರ್ಯಕ್ರಮವೂ ಕೇಳುಗರನ್ನು ರಂಜಿಸಲಿದೆ. ಇವರಿಗೆ ರೂಪಕ್ ಕಲ್ಲೂರಕರ್ ತಬಲಾ ಸಾಥಿ ನೀಡುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT