ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ ಬೇಡವೇ?

Last Updated 19 ಮೇ 2017, 20:29 IST
ಅಕ್ಷರ ಗಾತ್ರ

‘ಯಾರು ತಮ್ಮ ಹೆಂಡಂದಿರ ಮೇಲೆ ಅತೀವ ಕರುಣೆವುಳ್ಳವರಾಗಿರುತ್ತಾರೋ ಅವರೇ ನಿಮ್ಮೊಳಗಿನ ಶ್ರೇಷ್ಠರು’ ಎಂಬ ಪೈಗಂಬರ್ ಮಾತನ್ನು ಉದ್ಧರಿಸಿ ರಂಜಾನ್ ದರ್ಗಾ ಅವರು ( ಸಂಗತ, ಪ್ರ.ವಾ., ಮೇ 17) ಹೇಳಿರುವುದು ಸರಿ. ಆದರೆ ಪುರುಷ ಜಗತ್ತಿನ ಕಿವಿಯೇ ತೂತುಬಿದ್ದಿದೆಯಲ್ಲ, ಏನು ಮಾಡುವುದು? ಇದಕ್ಕೆ ಛಡಿಯೇಟು ಬೇಕಾಗುತ್ತದೆ.

ಅದೇ ಈಗಿನ ಬಹು ನಿರೀಕ್ಷೆಯಲ್ಲಿರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೋಷಕ ತೀರ್ಪು. ಮುಸ್ಲಿಂ ಸಮುದಾಯದಲ್ಲಿನ ಕೆಲವರ ವಾದವಾಗಲಿ, ಮನುವಾದವಾಗಲಿ ಜನ್ಮ ನೀಡುವ ಮಾತೃವನ್ನೇ ಅನಾಥೆಯಾಗಿಸಿದ ರೂಪಕಗಳು.

ಸಾರಾ ಅಬೂಬಕ್ಕರ್ ಅವರೂ ತ್ರಿವಳಿ ತಲಾಖ್ ಹಾಗೂ ಏಕರೂಪ ನಾಗರಿಕ ಸಂಹಿತೆ ಬಗ್ಗೆ (ಪ್ರ.ವಾ., ಏ. 22) ಹೇಳುತ್ತಾ, ‘ನಮ್ಮ ಚರಿತ್ರೆ ಮತ್ತು ಪುರಾಣಗಳೆಲ್ಲವನ್ನೂ ಇಂದು ತಿರುಚಲಾಗಿದೆ’ ಎಂದು ಧರ್ಮಾತೀತವಾಗಿ ಮಾತನಾಡಿದ್ದಾರೆ. ‘ನಾನು ಹೆಣ್ಣಿನಿಂದ ಗಂಡನ್ನು ಗಂಡಿನಿಂದ ಹೆಣ್ಣನ್ನು ಸೃಷ್ಟಿಸಿದೆ’ ಎಂಬ ಕುರ್‌ಆನ್‌ನ ಮಾತು ಅಲ್ಲಿ ಪ್ರಮುಖ. ಅದು ಎರಡು ಕೈ ಸೇರಿ ಚಪ್ಪಾಳೆಯಾಗುವ ಜಗದ ಅರಿವು.

ಕುರುಕ್ಷೇತ್ರ ಯುದ್ಧ ಸ್ಮಶಾನ ಸೃಷ್ಟಿಸಿದಾಗ ಪಾಂಡವರು ವಿಧವಾ ಸಾಮ್ರಾಜ್ಯಕ್ಕೆ ಅಧಿಪತಿಗಳಾಗುವ ಕಾಲ ಒದಗಿತು. ಭೂಮಿಯನ್ನು ಗೋವಿಗೆ ಹೋಲಿಸಿದ ವ್ಯಾಸನು,  ನರಮನುಷ್ಯರು ಭೂತಾಯಿಗೆ ಕೆಚ್ಚಲು ಬಾವು ತರಿಸಿದ ದೂರನ್ನು ವಿಷ್ಣುವಿನ ಬಳಿಗೆ ಒಯ್ಯುವ ವಿಚಾರ ತರುತ್ತಾನೆ. ಇದು ಹೆಣ್ಣನ್ನು ನರಳಿಸಿದ ಭೂಪರಿಗೊಡ್ಡಿದ ರೂಪಕ. ಮುಂದೆ ಇದೇ ಸನ್ನಿವೇಶವು ಚರಿತ್ರೆಯಲ್ಲಿ ಮಧ್ಯ ಏಷ್ಯಾದಲ್ಲಿ ಒದಗುತ್ತದೆ. 

ಅಲ್ಲಿನ ಸಮರ ಕ್ಷೇತ್ರ ಮಾದರಿ ಕೂಡ ವಿಧವಾ ಸಮಾಜವಾಗುತ್ತಾ ಹೋಗುತ್ತದೆ. ಈ ಅನಾಥೆಯರಿಗೆ ರಕ್ಷಣೆ ನೀಡುವುದು ಈ ಬರ್ಬರತೆಗೆ ನೂಕಿದ ಗಂಡಸಿನ ಕರ್ತವ್ಯವೆಂದು ಮುಹಮ್ಮದ್ ಹೇಳಿದ ಅಲಿಖಿತ ಮಾದರಿಗಳನ್ನು ಬಹು ಪತ್ನಿತ್ವಕ್ಕೆ ನಿರೂಪಿಸಿಕೊಂಡವರು ಇದೇ ಪುರುಷ ಸಮಾಜದವರು. ಮುಹಮ್ಮದ್ ಹೇಳಿದ ಪ್ರವಚನಗಳು ಶತಮಾನದ ನಂತರ ಲಿಖಿತಗೊಳ್ಳುತ್ತವೆ. ಕಾಲವು ಗಂಡಸಿನ ಪರವಾಗಿಯೇ ಕೆಲಸ ಮಾಡುತ್ತದೆ.

ವೇದಕಾಲದ ಮನುವಿರಬಹುದು, ಇಸ್ಲಾಂ ಕಾಲದ ಷರಿಯತ್ ವಾಕ್ಯ ನಿರ್ಮಾತೃಗಳಿರಬಹುದು ಇವರೆಲ್ಲರೂ ಸ್ತ್ರೀಯರನ್ನು ಒಂದು ವಸ್ತುವಾಗಿ ಕಂಡವರು. ಜಗತ್ತಿಗೇ ಜೀವ ನೀಡುವ ಭ್ರೂಣ ಇವರಿಗೊಂದು ಆಳುವ ಪ್ರತಿಷ್ಠೆಯದು. ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ರಾಜಾರಾಮ ಮೋಹನರಾಯಾದಿಗಳು ಬ್ರಿಟಿಷರ ನೆರಳಿನಲ್ಲಿಯೇ ಪರಿಷ್ಕರಿಸಲು ಹೊರಟಾಗ ಅಂದು ನೇಮನಿಷ್ಠೆಗಳನ್ನು ಇಸ್ಲಾಮಿಗೂ ಒಡ್ಡಬಹುದಿತ್ತು.

ಮೇಜಿನ ಮೇಲೆ ಭಕ್ಷ್ಯಭೋಜ್ಯಗಳನ್ನು ಸವಿಯುತ್ತಿದ್ದ ಆಳುವ ಬಿಳಿಯರಿಗೆ ಈ ತಂಟೆ ಬೇಕಿರಲಿಲ್ಲ. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ಹಾಗೇ ಉಳಿಯಿತು. ಇಸ್ಲಾಂ ವಿಚಾರದಲ್ಲಿ ವಿಭಜನೆಗೆ ತಯಾರಾಗಿದ್ದ ಗಾಂಧಿ ಕಾಲದ ಭಾರತವು ಆಳುವವರ ಆಶ್ರಯದಲ್ಲಿಯೇ ಪುರುಷ ಪರ ಕಾನೂನು ಮಾಡಿಕೊಳ್ಳುತ್ತದೆ. ಅದೇ ಈಗಲೂ ಬಿಡಿಸಿಕೊಳ್ಳಲಾರದ ಸ್ತ್ರೀಸಂಕಟ.

ಭೂಮಿಯ ಮೇಲಣ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ ಎಂಬ ಮಾತು ಬೊಳುವಾರು ಬರೆದ ‘ಓದಿರಿ’ ಎಂಬ ಮುಹಮ್ಮದ್‌ ಕುರಿತ ಕಾದಂಬರಿಯದು. ಇದು ಮಹಾಭಾರತದ ನುಡಿಗೆ ಏಕರೂಪವೂ ಹೌದು. ಮಹಾಭಾರತ ಬಹುಪತಿತ್ವ ಹಾಗೂ ಬಹುಪತ್ನಿತ್ವಗಳನ್ನು ಅನುಸರಿಸುತ್ತಿದ್ದ ಕಾಲ.

ಮುಂದೆ ವಾಲ್ಮೀಕಿಯು ರಾಮಾಯಣದ ಹೊಸ ಮಾಲೆ ಕಟ್ಟುವಾಗ ನೀಡಿದ ನಿದರ್ಶನಗಳೆಲ್ಲವೂ ಭಾವನಾತ್ಮಕವಾಗಿ ಇಡೀ ಭರತ ಖಂಡವನ್ನು ಒಂದುಗೂಡಿಸಲು ಅನುವು ಮಾಡಿರುವುದು ಸರಿ.

ಅದು ಜಗತ್ತು ಮಹಾಭಾರತದ ಸಮರ ತತ್ವ ಮೀರಿ ರಾಮಾಯಣದ ರಾವಣನಲ್ಲೂ ಮಾತೃ ಬಯಕೆಯನ್ನು ಸ್ಥಿರೀಕರಣಗೊಳಿಸುತ್ತಾ ಹೋಗುವ ವಿಧಾನ. ಏಕಪತಿ, ಏಕಪತ್ನಿ ಸ್ವರೂಪದ ಕೌಟುಂಬಿಕ ನಿಲುವು ಅಲ್ಲಿ ಸಾಮಾಜಿಕವಾಗಿ ಒಪ್ಪಿತವಾಗುತ್ತಾ ಹೋಗುವುದೇ ಭಾರತೀಕರಣವೆಂದಾಗುತ್ತದೆ.

ಕುರ್‌ಆನ್ ಆಗಲೀ, ರಾಮಾಯಣ– ಮಹಾಭಾರತಗಳಾಗಲೀ ಜನಾಂಗೀಯ ಮಾರ್ಗದರ್ಶಿಯಾಗಿರಬೇಕು. ಕಾಲಕ್ಕೆ ಹೊಂದಿಕೊಳ್ಳುವ ಸೂತ್ರಗಳನ್ನು ಹೊಂದಿರಬೇಕು. ಬರೆದಿಟ್ಟಿರುವ ಅಕ್ಷರಗಳಲ್ಲಿ ಅವು ಬಂದಿಯಾಗಬಾರದು. ಅದನ್ನು ನದಿಯಂತೆ ಹರಿಯುವ ಬದುಕಿನ ಮಾರ್ಗಕ್ಕೊಡ್ಡಿಕೊಳ್ಳುವುದೇ ಬದಲಾಗುವ ಸಮಾಜದ ಬಯಕೆ.

ಇಸ್ಲಾಂ ಪರ ರಾಷ್ಟ್ರಗಳಾದ ಇರಾನ್, ಈಜಿಪ್ಟ್, ಪಾಕಿಸ್ತಾನ, ಸಿರಿಯಾ ಇವೆಲ್ಲವೂ ಏಕರೂಪ ಸಂಹಿತೆ ಪರವಿರುವಾಗ ಭಾರತ ಇದಕ್ಕೆ ಹೊರತಾಗುವುದು ಅವಮಾನಕರ. ಗಾಂಧೀಜಿ ‘ನಾನು ದೇವಾಲಯದಿಂದ ಕಲಿಯದಿದ್ದುದನ್ನು ನಮ್ಮ ಕುಟುಂಬದ ಬಹುಕಾಲದ ನೌಕರಳಾದ ಸೇವಕಿಯಿಂದ ಅರಿತೆ’ ಎನ್ನುತ್ತಾರೆ.

ಬಾಲ ಗಾಂಧಿಗಿದ್ದ ಭೂತಪ್ರೇತಗಳ ಹೆದರಿಕೆಯನ್ನು ರಾಮನಾಮವೆಂಬ ಔಷಧಿಯಿಂದ ಆ ಸೇವಕಿ ಪರಿಹರಿಸುತ್ತಿದ್ದಳಂತೆ. ಇದೇ ಸ್ತ್ರೀತನ. ದೇವರ ನಾಮವೆಂಬುದು ಆಸ್ತಿಕರು ಹಾಗೂ ನಾಸ್ತಿಕರ ನಡುವಿನ ಗುದ್ದಾಟವಲ್ಲ. ಅದೊಂದು ಅರಿವು. ಕುವೆಂಪು ಎಳೆವಯಸ್ಸಿನಲ್ಲಿ ತೊರವೆ ರಾಮಾಯಣವನ್ನು ವಾಟಗಾರು ಮಂಜಪ್ಪಗೌಡರಿಂದ ಆಲಿಸಿದ್ದರು.

ಅಲ್ಲಿ ಬಿದ್ದ ಬೀಜದ ಅಂತರತಮ ಗರ್ಭದಲ್ಲಿ ಮಹಾವಟವೃಕ್ಷವಾಗಿ ಮುಂದೆ ‘ಶ್ರೀ ರಾಮಾಯಣ ದರ್ಶನಂ’ ಆಗಿ ಹೊರಬಂದ ನೆನಪನ್ನು ಅವರ ಆತ್ಮಚರಿತ್ರೆಯಲ್ಲಿ ಮಾಡಿಕೊಳ್ಳುತ್ತಾರೆ. ಅಂದರೆ ಗಾಂಧಿಗೂ ಕುವೆಂಪುವಿಗೂ ಸುತ್ತಿಕೊಂಡ ರಾಮಾಯಣವೆಂಬ ಎಳೆ ಅದು ಭಾರತೀಕರಣವಾದ ಬೆಳೆ. 

‘ಗುಡಿ, ಮಸೀದಿ, ಚರ್ಚುಗಳನ್ನು ಬಿಟ್ಟು ಬನ್ನಿ’ ಎನ್ನುವ ಕುವೆಂಪು; ಶ್ರೀರಾಮನಲ್ಲಿ ಅಲ್ಲಾಹ್‌ನಲ್ಲಿ ಭೇದ ಕಾಣದ ಗಾಂಧಿ; ಸಾಮಾಜಿಕ ಕಾನೂನುಗಳ ಪ್ರವರ್ತಕರು. ಮುಹಮ್ಮದ್  ಬಹುಪತ್ನಿತ್ವ ಕುರಿತು ಹೇಳಿರುವ ಪ್ರವಚನಗಳನ್ನು ಭಾರತದ ಪುರಾಣ ಗ್ರಂಥಗಳನ್ನು ಪರಿಷ್ಕರಿಸಿಕೊಂಡ ಮಾದರಿಯಲ್ಲೇ ನೋಡಬೇಕು. ಅದು ಕಾಲದ ನಿಯಮ. ಮನುಷ್ಯ ಕಾಲದ ಬಂದಿ.

ಮಾನವೀಯತೆ ಎಂಬುದು ಗಂಡು ಹೆಣ್ಣುಗಳೆಂಬ ಅಭೇದ ಸ್ಥಿತಿ. ಅದು ಏಕಧರ್ಮದ ಹಂಗನ್ನು ಕಳಚಿಕೊಳ್ಳುವ ಮಾದರಿ. ಅದೇ ವಿಶ್ವಮಾನವತ್ವದ ಗುರಿ. ನಮ್ಮ ದೇಶವೇ ಏಕೆ, ಇಂದು ಜಗತ್ತೇ ರಾಷ್ಟ್ರೀಯತೆ ಎಂದು ವಿಶ್ವಮಾನವತ್ವವನ್ನು ಒಡೆದಾಳುವ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವವೆಂಬ ವ್ಯಾಖ್ಯೆಯನ್ನು ಮುಂದಿಟ್ಟುಕೊಂಡು ಸ್ತ್ರೀಗೆ ಜಾಗ ನೀಡದ ಅಮೆರಿಕ ನಮ್ಮ ಮುಂದಿದೆ.

ಒಂದೇ ಒಂದು ಶಾಸಕ ಸ್ಥಾನವನ್ನೂ ಅಲ್ಪಸಂಖ್ಯಾತರಿಗೆ ನೀಡದೆ ನಿರಾಕರಿಸಿ ರಾಜ್ಯವಾಳುವ ಭಾರತವೂ ನಮ್ಮ ಮುಂದೆ ಮಾನವೀಯತೆಯ ಪಾಠ ಹೇಳುತ್ತಿದೆ. ಯಾವ ನ್ಯಾಯಾಧೀಶನಿಗಿಂತಲೂ ಹೆಚ್ಚಿನ ಅಧಿಕಾರವನ್ನು ಧರ್ಮಗುರು ಜನಸಾಮಾನ್ಯರ ಮೇಲೆ ಚಲಾಯಿಸುತ್ತಾನೆ ಎಂಬ ಅಂಬೇಡ್ಕರ್ ಮಾತು ಕೇವಲ ಧರ್ಮದ ಮೇಲೆ ರಾಜ್ಯವಾಳುವ ಸ್ಥಿತಿ ಸೂಚಿಸುವುದಿಲ್ಲ.

ಸ್ತ್ರೀ ಎಂಬ ಸಮಾಜದ ಅರ್ಧಭಾಗವನ್ನು ನಿರಾಕರಿಸಿ ರಾಜ್ಯಭಾರ ಮಾಡುವ ಪುರುಷ ಪ್ರಾಬಲ್ಯವನ್ನು ಹೇಳುತ್ತದೆ. ತಲಾಖ್ ವಿಚಾರದಲ್ಲಿ ಸಮಾರ್ಧ ಮುಸ್ಲಿಂ ಮಹಿಳೆಯರ ಹಕ್ಕು ಸಹ ಇದೆ ಎಂಬುದನ್ನು ವಿಸ್ತಾರವಾಗಿ ನೋಡುವುದು ಸಂವಿಧಾನದ ಕರ್ತವ್ಯವೂ ಆಗಿದೆ. ಈ ಬಗ್ಗೆ  ಸುಪ್ರೀಂ ಕೋರ್ಟ್‌ನ ತೀರ್ಪನ್ನು  ಈ ದೇಶ ಕುತೂಹಲದಿಂದ ನಿರೀಕ್ಷಿಸುತ್ತಿದೆ (ಪ್ರ.ವಾ., ಏ. 27) ಎಂದು ಬಾನು ಮುಷ್ತಾಕ್ ಅವರು ಪ್ರಸ್ತುತ ವಿಚಾರವನ್ನು ಜನರ ಮುಂದಿಟ್ಟಿರುವುದು ಕೂಡ ಸಹಜವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT