ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ ಗಲ್ಲು ಶಿಕ್ಷೆಗೆ ತಡೆ ಭಾರತಕ್ಕೆ ಸಿಕ್ಕ ದೊಡ್ಡ ಜಯ

Last Updated 19 ಮೇ 2017, 20:29 IST
ಅಕ್ಷರ ಗಾತ್ರ

ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಅವರನ್ನು ನೇಣುಗಂಬಕ್ಕೆ ಏರಿಸುವ ಪಾಕಿಸ್ತಾನದ ಹುನ್ನಾರಕ್ಕೆ ಸದ್ಯಕ್ಕಂತೂ ತಡೆ ಬಿದ್ದಿದೆ. ತಾನು ಅಂತಿಮ ತೀರ್ಪು ನೀಡುವವರೆಗೂ ಮರಣ ದಂಡನೆಯನ್ನು ಜಾರಿಗೊಳಿಸಬಾರದು ಎಂದು ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ ಪಾಕ್‌ ಸರ್ಕಾರಕ್ಕೆ ಸೂಚಿಸಿದೆ.

ವಿಶ್ವ ಮಟ್ಟದಲ್ಲಿ ಇದು ಆ ದೇಶಕ್ಕೆ ಮತ್ತೊಂದು ಹಿನ್ನಡೆ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಸರ್ಕಾರದ ನಿರಂತರ ಪ್ರಯತ್ನಕ್ಕೆ ಸಿಕ್ಕ ದೊಡ್ಡ ಗೆಲುವು. ಈ ವಿಷಯದಲ್ಲಿ ಬರೀ ₹ 1 ಶುಲ್ಕ ತೆಗೆದುಕೊಂಡು ಸಮರ್ಥವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಮತ್ತು ಅವರ ತಂಡ ಅಭಿನಂದನೆಗೆ ಅರ್ಹ.

11 ನ್ಯಾಯಮೂರ್ತಿಗಳಿರುವ ಅಂತರರಾಷ್ಟ್ರೀಯ ನ್ಯಾಯಾಲಯವು ಭಾರತದ ವಾದವನ್ನು ಒಪ್ಪಿಕೊಂಡು ಒಮ್ಮತದಿಂದ ತಡೆಯಾಜ್ಞೆ ನೀಡಿರುವುದು ಸಣ್ಣ ಸಂಗತಿಯೇನಲ್ಲ. ಇದಕ್ಕೂ ಮುನ್ನ, ಅಂದರೆ ಇದೇ 9ರಂದು ಸಹ ಅದು ಗಲ್ಲು ಶಿಕ್ಷೆ ಜಾರಿಗೆ ತಾತ್ಕಾಲಿಕ ತಡೆ ನೀಡಿತ್ತು. ಗೂಢಚರ್ಯೆ ಆರೋಪ ಹೊರಿಸಿ ಜಾಧವ್‌ ಅವರನ್ನು ಅಕ್ರಮವಾಗಿ ಇರಾನ್‌ನಿಂದ ಅಪಹರಿಸಿ ತಂದು ಅತ್ಯಂತ ತರಾತುರಿಯಲ್ಲಿ ವಿಚಾರಣೆಗೆ ಒಳಪಡಿಸಿದ, ಗಲ್ಲು ಶಿಕ್ಷೆ ಪ್ರಕಟಿಸಿದ ಪಾಕಿಸ್ತಾನದ ನಡೆಯೇ ಅನುಮಾನಾಸ್ಪದವಾಗಿದೆ.

ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೂ ಜಾಧವ್‌ ಅವರನ್ನು ಭೇಟಿ ಮಾಡಲು ಅನುಮತಿ ಕೊಟ್ಟಿಲ್ಲ. ಕಾನೂನು ನೆರವು ಪಡೆಯಲೂ ಬಿಟ್ಟಿಲ್ಲ. ಜಾಧವ್‌ ಅವರನ್ನು ನೇಣುಗಂಬಕ್ಕೆ ಏರಿಸಲೇಬೇಕು ಎಂದು ಹಟ ತೊಟ್ಟಂತೆ ಪಾಕ್‌ ಆಡಳಿತ ವರ್ತಿಸುತ್ತಿದೆ.

ಒಬ್ಬ ವ್ಯಕ್ತಿಗೆ ನ್ಯಾಯದ ಎಲ್ಲ ಅವಕಾಶಗಳನ್ನು ಮುಚ್ಚಿ ಮನಬಂದಂತೆ ತೀರ್ಪು ಕೊಡುವುದು ನ್ಯಾಯಕ್ಕೆ ಅಪಚಾರ ಎಸಗಿದಂತೆ. ಇದು ಬೇರೊಂದು ದೇಶದ ಪ್ರಜೆಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ವಿಯೆನ್ನಾ ಒಪ್ಪಂದದ ಸಂಪೂರ್ಣ ಉಲ್ಲಂಘನೆ. ಈ ವಿಷಯದಲ್ಲಿ ಭಾರತ ಮಂಡಿಸಿದ ವಾದಕ್ಕೆ ನ್ಯಾಯಾಲಯ ಮನ್ನಣೆ ನೀಡಿರುವುದು ಸಮಾಧಾನದ ವಿಷಯ.

ಜಾಧವ್‌ ಸದ್ಯಕ್ಕೆ ನಿರಾಳರಾಗಿರಬಹುದು. ಆದರೆ ಗಲ್ಲಿನ ತೂಗುಕತ್ತಿ ತೂಗುತ್ತಲೇ ಇದೆ. ಮಗನ ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಮತ್ತು  ಬಿಡುಗಡೆ ಮಾಡುವಂತೆ ಕೋರಿ ಪಾಕ್‌ ಸರ್ಕಾರ ಮತ್ತು ಸೇನಾ ಕೋರ್ಟ್‌ಗೆ ಜಾಧವ್‌  ಅವರ ತಾಯಿ ಲಿಖಿತ ಮನವಿ ಮಾಡಿಕೊಂಡಿದ್ದಾರೆ.

ಈ ಪತ್ರಗಳನ್ನು ಸಂಬಂಧಪಟ್ಟವರಿಗೆ ಕಳೆದ ತಿಂಗಳು 26ರಂದೇ ಅಲ್ಲಿನ ನಮ್ಮ ರಾಯಭಾರಿ ಸಲ್ಲಿಸಿದ್ದಾರೆ. ಆದರೂ ಅನುಕೂಲಕರ ಪ್ರತಿಕ್ರಿಯೆ ಬಂದಿಲ್ಲ. ಸೇನಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಅಥವಾ ಕ್ಷಮಾದಾನ ಅರ್ಜಿ ಸಲ್ಲಿಸಲು ಜಾಧವ್‌ಗೆ ಮುಕ್ತ ಅವಕಾಶವೇ ಸಿಕ್ಕಿಲ್ಲ. ಅಲ್ಲದೆ, ಪಾಕಿಸ್ತಾನದ ನಡೆ ಹೇಗಿರುತ್ತದೆ ಎಂಬುದನ್ನು ಊಹಿಸುವುದು ಕಷ್ಟ.

ಏಕೆಂದರೆ ಗೂಢಚರ್ಯೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಷಯಗಳು ಅಂತರರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅದು ವಿತಂಡ ವಾದ ಮಾಡುತ್ತಿದೆ. ಆದರೆ ಇದನ್ನು ನ್ಯಾಯಾಲಯ ತಿರಸ್ಕರಿಸಿರುವುದು ಒಳ್ಳೆಯ ಬೆಳವಣಿಗೆ. ಇಷ್ಟಕ್ಕೇ ಮೈಮರೆಯಬಾರದು.

ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಅದರ ಮೇಲೆ ಒತ್ತಡ ಮುಂದುವರಿಸಬೇಕು. ಈ ವಿಷಯದಲ್ಲಿ ಲಭ್ಯವಿರುವ ಎಲ್ಲ ವೇದಿಕೆಗಳನ್ನು ಬಳಸಿಕೊಳ್ಳಬೇಕು.

ವಿಯೆನ್ನಾ ಒಪ್ಪಂದಕ್ಕೆ 1977ರಲ್ಲಿ ಭಾರತ– ಪಾಕ್‌ಗಳೆರಡೂ ಸಹಿ ಮಾಡಿವೆ. ಆದ್ದರಿಂದ ಪಾಕಿಸ್ತಾನ ಏಕಪಕ್ಷೀಯ ನಿರ್ಧಾರಕ್ಕೆ ಬರುವುದಾಗಲೀ, ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು ತಿರಸ್ಕರಿಸುವುದಾಗಲೀ ಮಾಡುವಂತಿಲ್ಲ. ಈ ಹಿಂದೆ ಅನೇಕ ದೇಶಗಳು, ತೀರ್ಪು ತಮಗೆ ಪ್ರತಿಕೂಲವಾದರೂ ಪಾಲಿಸಿದ ಉದಾಹರಣೆಗಳಿವೆ. ಅವನ್ನೇ ಅಸ್ತ್ರವಾಗಿ ಬಳಸಿಕೊಳ್ಳಬೇಕು.

ಈಗ ಭಾರತ–ಪಾಕ್‌ ಬಾಂಧವ್ಯ ಬಹಳಷ್ಟು ಹಳಸಿದೆ. ಆದ್ದರಿಂದ ಅನೌಪಚಾರಿಕ ಮತ್ತು ಹಿಂಬಾಗಿಲ ಮಾತುಕತೆಗಳನ್ನು ಮುಂದುವರಿಸಬೇಕು. ವೈಯಕ್ತಿಕ ಮಟ್ಟದಲ್ಲಿನ ಸಂಬಂಧ, ಸಂಪರ್ಕಗಳನ್ನು ಬಳಸಿಕೊಳ್ಳಬೇಕು.

ಈಗಿನ ವಿಶ್ವದಲ್ಲಿ ಆರ್ಥಿಕ– ವಾಣಿಜ್ಯ ವಹಿವಾಟುಗಳು ದೇಶ ದೇಶಗಳ ನಡುವಿನ ಸಂಬಂಧದ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲವು. ಅದನ್ನೂ ಸಾಧನವಾಗಿ ಮಾಡಿಕೊಳ್ಳಬೇಕು. ಜಾಧವ್‌ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಯಾವ ಅವಕಾಶವನ್ನೂ ಬಿಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT