ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ

Last Updated 19 ಮೇ 2017, 20:30 IST
ಅಕ್ಷರ ಗಾತ್ರ

ಹೀಗಿದ್ದೂ  ನೈಸರ್ಗಿಕವಾಗಿ ಬೀಳಬಹುದಾದ ಮಳೆಯನ್ನು ನೆಚ್ಚಿಕೊಳ್ಳದೆ ಕೃತಕವಾಗಿ ಮಳೆ ಬರಿಸಲು ಮೋಡಬಿತ್ತನೆ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ಎಷ್ಟು ಫಲಕಾರಿ? ಸುಸ್ಥಿರ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಪೂರಕ? ಅಥವಾ ಪರಿಸರಕ್ಕೆ ಹಾನಿಕಾರಕವಾದ ಕ್ರಮವಾಗುತ್ತದೆಯೆ? ಎಲ್ಲಾ ಮಗ್ಗುಲುಗಳಿಂದ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ.

‘ಹುಯ್ಯೋ ಹುಯ್ಯೋ ಮಳೆರಾಯ, ಬಾರೋ ಬಾರೋ ಮಳೆರಾಯ’ ಎಂದು ಹಾಡಿ ಬೇಡುವುದು, ಮಳೆಗಾಗಿ ಗಂಡು–ಹೆಣ್ಣು, ಕಪ್ಪೆ, ಕತ್ತೆಗಳಿಗೆ ಹಾಗೂ ಅರಳಿ–ಬೇವಿನ ಮರಗಳಿಗೆ ಮದುವೆ ಮಾಡುವ ಪದ್ಧತಿಯೂ ಚಾಲ್ತಿಯಲ್ಲಿದೆ. ಮಳೆ ದೇವರು ಎಂದು ಜನ ನಂಬಿರುವ ಶೃಂಗೇರಿ ಸಮೀಪದ ಕಿಗ್ಗ ಋಷ್ಯ ಶೃಂಗೇಶ್ವರ ದೇವಸ್ಥಾನಕ್ಕೆ ಮೂರು ವರ್ಷಗಳಿಂದ ತಪ್ಪದೆ ಹೋಗುತ್ತಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮಳೆಗಾಗಿ ಪ್ರಾರ್ಥಿಸುತ್ತಲೇ ಇದ್ದಾರೆ.

ಇಂತಹ ಮೌಢ್ಯಗಳಿಗೆ ಜನ, ಸಚಿವರು ಬೆನ್ನು ಬಿದ್ದಿರುವ ಹೊತ್ತಿನಲ್ಲಿಯೇ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರು, ಈ ಮೌಢ್ಯಗಳನ್ನೆಲ್ಲಾ  ಹಿಮ್ಮೆಟ್ಟಿಸುವಂತೆ ಪಾತಾಳದಿಂದ ಗಂಗೆಯನ್ನು ಮೇಲೆತ್ತಲು, ಆಗಸದಿಂದ ಗಂಗೆಯನ್ನು ಧರೆಗಿಳಿಸಲು ‘ಭಗೀರಥ’ ಪ್ರಯತ್ನ ಆರಂಭಿಸಿದ್ದಾರೆ.

ಮುಗಿಲಿನಲ್ಲಿ ಕತ್ತಲು ಕವಿಸಿ, ಕೋಲ್ಮಿಂಚು ಸಿಡಿಸಿ ಇನ್ನೇನು ದಪದಪನೆ ಮಳೆ ಹನಿ ಸುರಿಸುತ್ತದೆ ಎಂಬ ಹೊತ್ತಿನಲ್ಲಿ ‘ಮಾಯಾಜಿಂಕೆ’ಯಂತೆ ಕಣ್ಮರೆಯಾಗುವ  ಕರಿಮೋಡಗಳ ಹಿಡಿದು, ಎಲ್ಲಿ ಹೋಗುವಿರಿ. . .‘ನಿಲ್ಲಿ’ ನಾಲ್ಕು ಹನಿ ಸುರಿಸಿ ಹೋಗಿ ಎಂದು ಜುಲುಮೆಯಿಂದ ಮಳೆ ತರಿಸುವ ‘ಸಾಹಸ’ಕ್ಕೆ ಪಾಟೀಲರು ಕೈ ಹಾಕಿದ್ದಾರೆ.

ಯಶಸ್ಸು ಹಾಗೂ ವೈಫಲ್ಯದ ತಂತ್ರಜ್ಞಾನ ಎಂಬ ಎರಡೂ ವಿಧದ ವಿಮರ್ಶೆ, ವಿಶ್ಲೇಷಣೆಗೆ ಸಿಲುಕಿರುವ ‘ಮೋಡ ಬಿತ್ತನೆ’ಯನ್ನು ಮತ್ತೊಮ್ಮೆ ಬಳಸಿ, ರಾಜ್ಯದ ಜನರಿಗೆ ಮುಂಗಾರು–ಹಿಂಗಾರಿನ ಸಿಹಿ ಸಿಂಚನ ಮಾಡುವ ತಯಾರಿ ನಡೆಸಿದ್ದಾರೆ.

‘ಇದರಿಂದ ಖಂಡಿತಾ ಮಳೆ ಬರಲಿದೆ, ಬರಗಾಲ ಪರಿಹಾರಕ್ಕೆ ನಾಲ್ಕೈದು ಸಾವಿರ ಕೋಟಿ ಖರ್ಚು ಮಾಡುವ ಬದಲು ಕೇವಲ ₹30 ಕೋಟಿ ಖರ್ಚು ಮಾಡಿ ಮಳೆ ತರಿಸಿದರೆ ತಪ್ಪೇನು? 66 ರಾಷ್ಟ್ರಗಳಲ್ಲಿ ಮೋಡಬಿತ್ತನೆಯಿಂದ ಮಳೆ ಸುರಿಸಿದ ಸಾಕ್ಷ್ಯವಿದೆ. ಚೀನಾ, ಇಸ್ರೇಲ್‌ನಲ್ಲಿ ಇದು ಅತ್ಯಂತ ಯಶಸ್ವೀ ಪ್ರಯೋಗ ಎನಿಸಿದ್ದು, ಪ್ರತಿವರ್ಷ ಮೋಡ ಬಿತ್ತನೆ ಮಾಡಲಾಗುತ್ತಿದೆ’ ಎಂದು ಬಿತ್ತನೆ ಪರ ಇರುವವರು ತಮ್ಮದೇ ರೀತಿಯಲ್ಲಿ ವಾದ ಮಂಡಿಸುತ್ತಾರೆ.

‘ಯಾವ ದೇಶದಲ್ಲೂ ಯಶಸ್ವಿಯಾಗದ ಯೋಜನೆ ಇದಾಗಿದ್ದು, ಮಳೆ ಸುರಿಸಿದ ನಿದರ್ಶನವೇ ಇಲ್ಲ. ಇದೊಂದು ದುಡ್ಡು ಹೊಡೆಯುವ ಯೋಜನೆ ಅಷ್ಟೆ. ಮಳೆಯೇ ಬೀಳದೆ ಸುಗ್ಗಿ ಮಾಡೋಕೆ ಹೊರಟಂಗಿದೆ’ ಎಂದು ಮೋಡಬಿತ್ತನೆಯ ವಿರೋಧಿಗಳು ವ್ಯಂಗ್ಯವಾಡುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮೋಡಬಿತ್ತನೆಗಾಗಿ ₹30 ಕೋಟಿ ಮೀಸಲಿಟ್ಟಿದ್ದಾರೆ. ಆದರೆ, ಅವರ ಸಂಪುಟದ ಸಚಿವರು, ಶಾಸಕರೇ ಇದೊಂದು ವ್ಯರ್ಥವಾದ ಯೋಜನೆ ಎಂದು ಅಪಹಾಸ್ಯ ಮಾಡುವುದೂ ಉಂಟು. ಸಾಮಾನ್ಯವಾಗಿ ಇಂತಹ ಯೋಜನೆ ಅನುಷ್ಠಾನದ ಹೊಣೆ ಜಲಸಂಪನ್ಮೂಲ ಇಲಾಖೆಯ ಮೇಲಿರುತ್ತದೆ. 

‘ಇದೊಂದು ನಿಷ್ಫಲ ಯೋಜನೆ. ಅದು ಗೊತ್ತಿದ್ದೂ ಅನುಷ್ಠಾನಕ್ಕೆ  ಮುಂದಾದರೆ ಸಾರ್ವಜನಿಕ ವಲಯದಲ್ಲಿ ಅನಗತ್ಯ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಈ ಯೋಜನೆಯ ಉಸಾಬರಿಯೇ ಬೇಡ ಎಂದು ಕೈತೊಳೆದುಕೊಂಡರು. ಹೀಗಾಗಿ ಇದು ಪಂಚಾಯತ್‌ರಾಜ್‌ ಇಲಾಖೆಯ ಹೆಗಲೇರಿತು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೋಡಬಿತ್ತನೆಗೆ ಟೆಂಡರ್‌ ಕರೆಯುವ ಪ್ರಕ್ರಿಯೆಗೆ ಈಗಷ್ಟೇ ಚಾಲನೆ ಕೊಡಲಾಗಿದೆ. ನಾಗರಿಕ ಯಾನ ಮಹಾನಿರ್ದೇಶಕರು ಹಾಗೂ ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವುದು ಟೆಂಡರ್‌ನಲ್ಲಿ ಅರ್ಹತೆ ಪಡೆಯುವ ಸಂಸ್ಥೆಯ ಹೊಣೆ. ಅದಕ್ಕೆ ಬೇಕಾದ ಎಲ್ಲ ರೀತಿಯ ತಾಂತ್ರಿಕ ಸಿದ್ಧತೆ ಮಾಡಿಕೊಳ್ಳುವುದೂ ಕಂಪೆನಿಯ ಜವಾಬ್ದಾರಿ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಮೋಡ ಬಿತ್ತನೆ ಮಾಡುವ ಮುನ್ನ ಕಾರ್ಯಸಾಧ್ಯತಾ (ಫೀಸಿಬಿಲಿಟಿ) ವರದಿಯನ್ನು ರಾಜ್ಯ ಸರ್ಕಾರ ಪಡೆದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ‘ಕೃತಕವಾಗಿ ಮಳೆ ಸುರಿಸಿರುವ ಮೋಡಬಿತ್ತನೆ ಅತ್ಯಂತ ಯಶಸ್ವಿ ತಂತ್ರಜ್ಞಾನ ಎಂಬುದು ಸಾಬೀತಾಗಿದೆ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಮುನ್ನ ಕಾರ್ಯಸಾಧ್ಯತಾ ವರದಿ ಅವಶ್ಯ ಇದೆ ಎಂದು ಅನಿಸುತ್ತಿಲ್ಲ’ ಎಂದು ಹೇಳಿದರು.

ಎಚ್‌.ಕೆ. ಪಾಟೀಲರ ಸಮರ್ಥನೆ: ‘ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. ಬುಧವಾರವಷ್ಟೇ ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಜುಲೈ ತಿಂಗಳಿನಲ್ಲಿ  ಮೋಡ ಬಿತ್ತನೆ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಸದ್ಯವೇ ಈ ಕುರಿತು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಎಚ್.ಕೆ. ಪಾಟೀಲರು ತಿಳಿಸಿದರು.

‘2003ರಲ್ಲಿ ನಾನೇ  ಜಲಸಂಪನ್ಮೂಲ ಸಚಿವನಾಗಿದ್ದ ಅವಧಿಯಲ್ಲಿ  ರಾಜ್ಯದಲ್ಲಿ  ಮೋಡಬಿತ್ತನೆಗಾಗಿ ಕೈಗೆತ್ತಿಕೊಂಡಿದ್ದ ‘ಪ್ರಾಜೆಕ್ಟ್‌ ವರುಣ’ ಅತ್ಯಂತ ಯಶಸ್ವಿಯಾಗಿತ್ತು. 83 ದಿನಗಳ ಕಾಲ ಎರಡು ವಿಮಾನ ಹಾಗೂ ಎರಡು ರೇಡಾರ್‌ ಮಾತ್ರ ಬಳಕೆ ಮಾಡಲಾಗಿತ್ತು. ಬೆಂಗಳೂರಿನ ಜಕ್ಕೂರು ಹಾಗೂ ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೇಡಾರ್‌ ಪ್ರತಿಷ್ಠಾಪಿಸಿ ಮೋಡಗಳ ಸಾಂದ್ರತೆ, ಮೋಡಗಳು ಎಲ್ಲಿ ದಟ್ಟವಾಗಿವೆ ಎಂಬುದನ್ನು ಪತ್ತೆ ಹಚ್ಚಿ ಸರಿಯಾಗಿ ಬಿತ್ತನೆ ಮಾಡಲಾಗಿತ್ತು. ಎಲ್ಲ ಕಡೆಗಳಲ್ಲಿಯೂ ಮಳೆ ಬಂದಿತ್ತು. ಇದು ವಿಫಲ ಯೋಜನೆ ಎಂಬುದು ಸರಿಯಲ್ಲ’ ಎಂದು ಸಮರ್ಥಿಸಿಕೊಂಡರು.

‘ನಲವತ್ತು ವರ್ಷಗಳಲ್ಲಿ ಕಂಡರಿಯದ ಬರಗಾಲಕ್ಕೆ ರಾಜ್ಯ ತುತ್ತಾಗಿದೆ. ಈ ವರ್ಷವೂ ಮಳೆ ಬರದೇ ಇದ್ದರೆ ಕಷ್ಟವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಮೋಡಬಿತ್ತನೆಗಾಗಿ ₹30 ಕೋಟಿ ಅನುದಾನ ನೀಡಿದ್ದಾರೆ. ಟೆಂಡರ್‌ ಕರೆದಾಗ, ಇಷ್ಟು ಸಾಕಾಗಲಿದೆಯೇ ಅಥವಾ ಹೆಚ್ಚಿನ ಮೊತ್ತ ಬೇಕಾಗುತ್ತದೆಯೇ ಎಂಬುದು ಗೊತ್ತಾಗಲಿದೆ’ ಎಂದರು.

‘2003ರಲ್ಲಿ  ಮೋಡಬಿತ್ತನೆಗೆ  ಬಳಸಲಾಗಿದ್ದ ರೇಡಾರ್‌ಗಳು 150 ಕಿ.ಮೀ ನಿಂದ–200 ಕಿ.ಮೀ ದೂರದವರೆಗಿನ ಮೋಡಗಳನ್ನು ಮಾತ್ರ ನಿಖರವಾಗಿ ಗುರುತಿಸುತ್ತಿದ್ದವು. ಹೀಗಾಗಿ ಕಲಬುರ್ಗಿ, ಬೀದರ್‌ ಜಿಲ್ಲೆಗಳ ಮೇಲ್ಮೈನಲ್ಲಿದ್ದ  ಮೋಡ ದಟ್ಟಣೆಯನ್ನು ರೇಡಾರ್‌ ಗುರುತಿಸಿರಲಿಲ್ಲ. ಹೀಗಾಗಿ, ಈ ವರ್ಷ 3 ರೇಡಾರ್‌ ಹಾಗೂ 2 ವಿಮಾನ ಬಳಸಿ ಮೋಡ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’. 

ತೇವಾಂಶ ತುಂಬಿಕೊಂಡ ದಟ್ಟೈಸಿದ ಮೋಡಗಳು ಆಗಸದಲ್ಲಿದ್ದಾಗ ಮಾತ್ರ ಮೋಡ ಬಿತ್ತನೆ ಮಾಡಲು ಸಾಧ್ಯ. ಸಾಮಾನ್ಯವಾಗಿ ಮುಂಗಾರು, ಆನಂತರದ ಅವಧಿಯಲ್ಲಿ ಮೋಡಬಿತ್ತನೆ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ. ಬಹುಮುಖ್ಯವಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿ–ಧಾರವಾಡ, ಹಾವೇರಿ, ಗದಗ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಮುಗಿಲಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ.

ದಟ್ಟೈಸಿದ ಮೋಡಗಳು ಮಳೆ ಸುರಿಸದೇ ವೇಗವಾಗಿ ಸಾಗಿ ಹೋಗುತ್ತವೆ. ಇದರಿಂದ ಮಳೆ ಸುರಿಯದೇ ಜನರು ನಿರಾಶರಾಗುತ್ತಾರೆ. ಅದನ್ನು ತಪ್ಪಿಸಲು  ಅಂತಹ ಮೋಡಗಳ ಮೇಲೆ ವಿಮಾನದ ಮೂಲಕ ಸಿಲ್ವರ್‌ ಅಯೋಡೈಡ್‌ ಸಿಂಪಡಿಸಿ ಮಳೆ ಸುರಿಸುವಂತೆ ಮಾಡಲಾಗುವುದು. ಇದರಿಂದಾಗಿ ಅಂದಾಜಿಗಿಂತ ಶೇ 10ರಿಂದ ಶೇ 15ರಷ್ಟು ಹೆಚ್ಚಿನ ಮಳೆ ಸುರಿದಿರುವುದಕ್ಕೆ ಸಾಕಷ್ಟು ಪ್ರಯೋಗಗಳು ಸಾಕ್ಷಿಯಾಗಿವೆ’ ಎಂದು ವಿವರಿಸಿದರು.

‘ಆಗಿನ ಕಾಲದ ತಂತ್ರಜ್ಞಾನಕ್ಕೆ ಹೋಲಿಸಿದರೆ ಈಗ ಸುಧಾರಿತ ತಂತ್ರಜ್ಞಾನ, ಸಾಫ್ಟ್‌ವೇರ್‌ಗಳು ಬಂದಿವೆ. ಇದನ್ನು ಜನರ ಹಿತಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ’ ಎಂದು ಅವರು ಹೇಳಿದರು.

‘ಪ್ರಾಜೆಕ್ಟ್‌ ವರುಣ ನಿರುಪಯುಕ್ತವಾಯಿತು ಎಂದು ಭಾರತೀಯ ಮಹಾಲೇಖಪಾಲರ ವರದಿ ಹೇಳಿರಲಿಲ್ಲ. ಮೊದಲು 100 ಗಂಟೆಗೆ ನಿಗದಿ ಮಾಡಿ, ಬಳಿಕ 120ಕ್ಕೆ ಹೆಚ್ಚಿಸಲಾಯಿತು ಎಂಬಂತಹ ಕೆಲವು ತಾಂತ್ರಿಕ ವಿಷಯಗಳ ಕುರಿತು ವರದಿ ತಕರಾರು ಎತ್ತಿತ್ತು’ ಎಂದು ಸ್ಪಷ್ಟ ಪಡಿಸಿದರು.

2003ರಿಂದ ಮೋಡ ಬಿತ್ತನೆ
ಆಂಧ್ರಪ್ರದೇಶದಲ್ಲಿ 2003ರಿಂದ ನಿರಂತರವಾಗಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಕೆಲವೊಮ್ಮೆ ವಿಫಲವಾದರೂ ಅನೇಕ ಕಡೆ ಮಳೆ ಸುರಿದಿದೆ ಎಂಬ ಮಾಹಿತಿಯನ್ನು ತೆಲುಗು ಮೂಲದ ದೈನಿಕಗಳ ವರದಿ ವಿವರಿಸುತ್ತದೆ. ಆರಂಭದಲ್ಲಿ ₹2.67 ಕೋಟಿ ನೀಡಿದ್ದರೆ, ಅಲ್ಲಿಂದ ಈಚೆಗೆ ಪ್ರತಿವರ್ಷ ₹22 ಕೋಟಿಯಿಂದ ₹25 ಕೋಟಿವರೆಗೆ ವಿಶೇಷ ಅನುದಾನ ನೀಡಲಾಗುತ್ತಿದೆ.

ಮಳೆಯೇ ಸುರಿದಿರಲಿಲ್ಲ
ತಮಿಳುನಾಡಿನಲ್ಲಿ ಈ ಯೋಜನೆ ಅಷ್ಟು ಜನಪ್ರಿಯವಾಗಿಲ್ಲ. 1985ರಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಆದರೆ ಅದರಿಂದಲೇ ಮಳೆ ಸುರಿದಿತ್ತೇ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆದಿರಲಿಲ್ಲ. ಅದಕ್ಕೆ ಪುರಾವೆಯೂ ಇಲ್ಲ. 2003ರಲ್ಲಿ ಮೋಡಬಿತ್ತನೆ ಮಾಡಿದಾಗ, ಮಳೆಯೇ ಸುರಿದಿರಲಿಲ್ಲ.

ಯೋಜನೆ ಪರಿಶೀಲನೆಯಲ್ಲಿದೆ
ಕೇರಳದಲ್ಲಿ ಸತತ ಮೂರು ವರ್ಷ ಬರಗಾಲ ಇದ್ದು, ಈ ವರ್ಷ ಕೇರಳ ರಾಜ್ಯ ಇಂಧನ ನಿಗಮ ಮೋಡಬಿತ್ತನೆ ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ‘ಕರ್ನಾಟಕ, ತಮಿಳುನಾಡಿನಲ್ಲಿ ಮೋಡಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಅದು ಪರಿಣಾಮಕಾರಿ ತಂತ್ರಜ್ಞಾನ ಎಂದು ದೃಢಪಟ್ಟಿಲ್ಲ. ಹೀಗಾಗಿ ಪ್ರಯೋಜನಕಾರಿ ತಂತ್ರಜ್ಞಾನವಲ್ಲ’ ಎಂದು ಕೇಂದ್ರದ ಭೂ ವಿಜ್ಞಾನ ಸಚಿವಾಲಯ ಕೇರಳ ಸರ್ಕಾರಕ್ಕೆ ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ. ಇದನ್ನು ಉಲ್ಲೇಖಿಸಿರುವ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಯೋಜನೆ ಪರಿಶೀಲನೆಯಲ್ಲಿದೆ ಎಂದಷ್ಟೇ ಹೇಳಿದ್ದಾರೆ.

ಮೋಡ ಬಿತ್ತನೆಗೆ ₹ 250 ಕೋಟಿ
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, 2017ರಲ್ಲಿ ಮೋಡ ಬಿತ್ತನೆಗಾಗಿ ₹ 250 ಕೋಟಿ ತೆಗೆದಿರಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಮೋಡಬಿತ್ತನೆಗೆ ಚೀನಾ ಮೂಲದ ಕಂಪೆನಿ ಜತೆ ಅಲ್ಲಿನ ಸರ್ಕಾರ ಮಾತುಕತೆ ನಡೆಸಿದೆ.

ನಿರುಪಯುಕ್ತ ಯೋಜನೆ
‘ಭಾರತದ ಹವಾಮಾನ ಪರಿಸ್ಥಿತಿಯಲ್ಲಿ ಮೋಡ ಬಿತ್ತನೆ ತಂತ್ರಜ್ಞಾನ ಉಪಯುಕ್ತವಲ್ಲ, ಮಳೆ ಸುರಿಸುವುದಿಲ್ಲ ಎಂಬುದು ಅನೇಕ ಬಾರಿ, ವಿವಿಧ ರಾಜ್ಯಗಳಲ್ಲಿ ಸಾಬೀತಾಗಿದೆ’ ಎಂದು ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

2003ರಲ್ಲಿ ನಡೆಸಿದ್ದ ಮೋಡಬಿತ್ತನೆ ಕುರಿತು ಮಹಾಲೇಖಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪೂರ್ವ ಸಿದ್ಧತೆಗಳಿಲ್ಲದೆ ಕೈಗೊಂಡ ಯೋಜನೆಯಿಂದಾಗಿ ಮಾಡಿದ ವೆಚ್ಚ ನಿರುಪಯುಕ್ತವಾಗಿ ಪರಿಣಮಿಸಿತು.

ಮೋಡ ಬಿತ್ತನೆಯಿಂದ ಯಾವ ಪ್ರದೇಶದಲ್ಲಿ ಮಳೆ ಸುರಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತೋ ಈ ಭಾಗದಲ್ಲಿ  ಸುರಿದ ಮಳೆ ಮಾಪನ ಮಾಡುವ ವ್ಯವಸ್ಥೆಯೇ ಇರಲಿಲ್ಲ. ಎಲ್ಲಿಯೋ ಮಳೆ ಸುರಿದಿದ್ದನ್ನೇ ಮೋಡಬಿತ್ತನೆಯಿಂದ ಮಳೆ ಸುರಿಯಿತು ಎಂದು ಬಿಂಬಿಸಲಾಯಿತು’ ಎಂದು ದೂರಿದರು.

‘ನಾನು ಸಚಿವನಾಗಿದ್ದಲೂ ಅನೇಕ ಸಂಸ್ಥೆಗಳಿಂದ ಒತ್ತಡ ಬಂದಿತ್ತು. ₹22 ಕೋಟಿ, ₹25 ಕೋಟಿ ಮೊತ್ತದ ಯೋಜನೆಗಳನ್ನು ಕೆಲವರು ತಂದಿದ್ದರು. ಕಾವೇರಿ ನೀರಿಗಾಗಿ ತಮಿಳುನಾಡು ಪಟ್ಟು ಹಿಡಿದಿತ್ತು. ಸುಪ್ರೀಂ ಕೋರ್ಟ್‌ ಕೂಡ ನೀರು ಬಿಡಬೇಕು ಎಂದು ಆದೇಶಿಸಿತ್ತು. ಈ ಕಾರಣದಿಂದ ಅನಿವಾರ್ಯವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಾತ್ರ ₹4 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಿದ್ದೆವು. ಆದರೆ ಅದರಿಂದ ಮಳೆ ಸುರಿಯಲಿಲ್ಲ’ ಎಂದೂ ಬೊಮ್ಮಾಯಿ ಹೇಳಿದರು.

* ವಿಶ್ವ ಹವಾಮಾನ ಸಂಸ್ಥೆಯ ಪ್ರಕಾರ 52 ದೇಶಗಳು  ಹವಾಮಾನ ಬದಲಾವಣೆ ಅಥವಾ ಕೃತಕ ಮಳೆ ತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
* ಚೀನಾ ಕೃತಕ ಮಳೆ ತರಿಸುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ಅಧಿಕ ಹಣವನ್ನು ಖರ್ಚು ಮಾಡುತ್ತಿದೆ. 2020ರ ವೇಳೆಗೆ ಹೆಚ್ಚುವರಿಯಾಗಿ 6,000 ಕೋಟಿ ಕ್ಯೂಬಿಕ್‌ ಮೀಟರ್‌ ಮಳೆ ತರಿಸುವ ಯೋಜನೆ ರೂಪಿಸಿದೆ.

****
ಅವೈಜ್ಞಾನಿಕ ಹಾಗೂ ಎಲ್ಲಿಯೂ ಯಶಸ್ವಿಯಾಗದ ತಂತ್ರಜ್ಞಾನ ಇದು. ಇಂತಹ ಯೋಜನೆ ಅಗತ್ಯವೇ ಇಲ್ಲ. ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಇಂತಹ ಕ್ರಮಗಳಿಂದಾಗಿ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಇದೊಂದು ಹುಚ್ಚುತನದ ಯೋಜನೆ.

ಎಚ್‌.ಕೆ. ಪಾಟೀಲರು ಪ್ರಚಾರಕ್ಕೆ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಗಾಳಿಯಲ್ಲಿರುವ ತೇವಾಂಶವನ್ನು ಬಳಸಿ, ನೀರು ಪೂರೈಸುವ ಯೋಜನೆ ಅನುಷ್ಠಾನ ಮಾಡುವುದಾಗಿ ಪಾಟೀಲರು ವಿಧಾನಸಭೆಯಲ್ಲಿ ತಿಳಿಸಿದ್ದರು. ಇದೂ ಅಂತಹದೇ ಯೋಜನೆ ಇರಬೇಕು.


-ಬಿ.ಆರ್‌. ಪಾಟೀಲ, ಕೆಜೆಪಿ ಶಾಸಕ

*
ಕರ್ನಾಟಕದಲ್ಲಿ ನಡೆದ ಪ್ರಯೋಗ ಮಾತ್ರವಲ್ಲ. ನೆರೆ ಹೊರೆಯ ರಾಜ್ಯಗಳಲ್ಲಿ ಕೂಡ ಇದು ಯಶಸ್ಸು ಕಂಡಿಲ್ಲ. ಹಾಗಂತ ₹30 ಕೋಟಿ ಖರ್ಚು ಮಾಡಿ ಪ್ರಯೋಗ ಮಾಡುವುದು ದೊಡ್ಡ ಪ್ರಮಾದವಲ್ಲ. ಮಳೆ ಇಲ್ಲದೆ ಕೆರೆ, ಅಣೆಕಟ್ಟುಗಳು ಬತ್ತಿ ಹೋಗಿವೆ. ಅಲ್ಲಿನ ಹೂಳನ್ನು ತೆಗೆಯಲು ಸರ್ಕಾರ ಯೋಜನೆ ರೂಪಿಸಿದ್ದರೆ ಹೆಚ್ಚು ಜನೋಪಯೋಗಿ ಯೋಜನೆಯಾಗುತ್ತಿತ್ತು.

ಇತ್ತೀಚೆಗೆ ನಿಧನರಾದ ಐಎಎಸ್‌ ಅಧಿಕಾರಿ ಅನುರಾಗ್ ತಿವಾರಿ, ಬೀದರ್‌ ಜಿಲ್ಲಾಧಿಕಾರಿಯಾಗಿದ್ದಾಗ  ಎಲ್ಲ ಕೆರೆಗಳ ಹೂಳೆತ್ತಿಸಿದ್ದರು. ಹೀಗಾಗಿ ವರ್ಷ ಕಳೆದರೂ ಬೀದರ್‌ನ ಅನೇಕ ಕಡೆ ನೀರಿಗೆ ತೊಂದರೆಯಾಗಿಲ್ಲ. ಮೋಡಬಿತ್ತನೆಗಿಂತ ಇಂತಹ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಲಿ.


-ಬಂಡೆಪ್ಪ ಕಾಶೆಂಪುರ, ಮಾಜಿ ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT