ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃಂದ, ನೇಮಕಾತಿ ಕಾಯ್ದೆ ಜಾರಿಯಾಗಲಿ’

Last Updated 20 ಮೇ 2017, 4:48 IST
ಅಕ್ಷರ ಗಾತ್ರ

ದಾವಣಗೆರೆ: ವೃಂದ ಮತ್ತು ನೇಮಕಾತಿ ನಿಯಮಗಳ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದ ಪಶು ಆಸ್ಪತ್ರೆ ಎದುರು ಕರ್ನಾಟಕ ಪಶು ವೈದ್ಯರ ಸಂಘದ ಅನಿರ್ದಿಷ್ಟಾವಧಿ ಪ್ರತಿಭಟನೆ ಶುಕ್ರವಾರವೂ ಮುಂದುವರಿಯಿತು.

ಪ್ರತಿಭಟನಾ ಸ್ಥಳಕ್ಕೆ ಹರಿಹರ ಶಾಸಕ ಎಚ್‌.ಎಸ್‌.ಶಿವಶಂಕರ್‌ ಭೇಟಿ ನೀಡಿ ಅಹವಾಲು ಆಲಿಸಿ ಮಾತನಾಡಿ, ‘ಪ್ರಾಣಿಗಳ ಸೇವೆ ಮಾಡುತ್ತಿರುವ ಪಶುವೈದ್ಯರ ಹಾಗೂ ಪರಿವೀಕ್ಷಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿರುವುದು ಖಂಡನೀಯ. ಆದರೂ, ಸದ್ಯ ಬರಗಾಲ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಜಾನುವಾರು ರೋಗಕ್ಕೆ ತುತ್ತಾದರೆ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ. ರೈತರ ಹಿತದೃಷ್ಟಿಯಿಂದ ಪ್ರತಿಭಟನೆ ಕೈಬಿಡುವುದು ಒಳಿತು’ ಎಂದು ಸಲಹೆ ನೀಡಿದರು.

ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಸಂಘದ ಮುಖಂಡರು, ‘ರಾಜ್ಯ ಸರ್ಕಾರ ಹಿಂದಿನಿಂದಲೂ ನಮ್ಮ ಬೇಡಿಕೆಗಳನ್ನು ತಿರಸ್ಕರಿಸುತ್ತ ಬಂದಿದೆ. ವೃಂದ ಮತ್ತು ನೇಮಕಾತಿ ನಿಯಮಗಳ ಕಾಯ್ದೆ ಜಾರಿಯಾಗಿ ಹಲವು ವರ್ಷಗಳು ಕಳೆದಿವೆ. ಕಡತಕ್ಕೆ ಸಚಿವರು ಸಹಿ ಕೂಡ ಹಾಕಿದ್ದಾರೆ. ಆದರೂ, ನೆಪವೊಡ್ಡಿ ಕಾಯ್ದೆ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿರುವುದು ಖಂಡನೀಯ’ ಎಂದರು.

ಬೆಂಗಳೂರಿನಲ್ಲಿ ಶನಿವಾರ ಸಂಘದ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಯಲಿದೆ. ಸರ್ಕಾರ ಬೇಡಿಕೆಗಳಿಗೆ ಒಪ್ಪದಿದ್ದರೆ ಪ್ರತಿಭಟನೆ ಮುಂದುವರಿ
ಯಲಿದೆ ಎಂದು ಸ್ಪಷ್ಟಪಡಿಸಿದರು.

ಇದೇವೇಳೆ ಜಗಳೂರು ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ಕೂಡ ಭೇಟಿ ನೀಡಿ ಅಹವಾಲು ಆಲಿಸಿದರು. ಸಂಘದ ಮುಖಂಡರಾದ ಡಾ.ಜಯಣ್ಣ, ಶಿವಪ್ರಸಾದ್, ಸಂತೋಷ್ ಕುಮಾರ್, ಡಾ.ಬಿ.ದೇವರಾಜ್‌ ಇದ್ದರು.

ನ್ಯಾಮತಿ
‘ನಮ್ಮ ಆಕಳಿಗೆ ಕೆಚ್ಚಲು ಜ್ವರ ಬಂದಿದೆ, ಎಮ್ಮೆ ಮೇವು ತಿನ್ನುತ್ತಿಲ್ಲ, ಆಕಳು ಕರುವಿಗೆ ಜಂತು ಆಗಿದೆ..’

–  ಇದು ಜಾನುವಾರು ಜತೆ ಇಲ್ಲಿನ ಪಶು ಆಸ್ಪತ್ರೆಗೆ ಬಂದಿದ್ದ ರೈತರು, ಶುಕ್ರವಾರವೂ ಬಾಗಿಲು ಮುಚ್ಚಿದ್ದನ್ನು ಕಂಡು ಅಳಲು ತೋಡಿಕೊಳ್ಳುತ್ತಿದ್ದ ಪರಿಯಾಗಿತ್ತು.

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಶು ವೈದ್ಯ ಸಹಾಯಕರ ಸಂಘ ಹಾಗೂ ಪಶು ವೈದ್ಯ ಪರಿವೀಕ್ಷಕರ ಸಂಘದ ನೇತೃತ್ವದಲ್ಲಿ ಮೇ 16ರಿಂದ ಪ್ರತಿಭಟನೆ ನಡೆಯುತ್ತಿದೆ. ನಾಲ್ಕು ದಿನಗಳಿಂದ ಇಲ್ಲಿನ ನೌಕರರು ಆಸ್ಪತ್ರೆಗೆ ಬೀಗ ಹಾಕಿ ದಾವಣಗೆರೆಯಲ್ಲಿ ನಡೆಯುತ್ತಿರುವ  ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದಾರೆ. ಇದರಿಂದಾಗಿ ಜಾನುವಾರಿಗೆ ಚಿಕಿತ್ಸೆಗೆ ಕರೆದುಕೊಂಡು ಬರುತ್ತಿರುವ ಪಶುಪಾಲಕರು ಅಸಹಾಯಕರಾಗಿದ್ದಾರೆ.

ನ್ಯಾಮತಿ ಪಶು ಆಸ್ಪತ್ರೆ, ಚಟ್ನಹಳ್ಳಿ, ಸವಳಂಗ, ಮಾದನಬಾವಿ, ಚಿನ್ನಿಕಟ್ಟೆ, ಕುಂಕುವ, ಒಡೆಯರಹತ್ತೂರು  ಪಶು ಚಿಕಿತ್ಸಾ ಕೇಂದ್ರಗಳ ಸುಮಾರು
65 ಸಿಬ್ಬಂದಿ   ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT