ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನ ಪೂರೈಸಿದ ಅನಿರ್ದಿಷ್ಟಾವಧಿ ಮುಷ್ಕರ

Last Updated 20 ಮೇ 2017, 5:14 IST
ಅಕ್ಷರ ಗಾತ್ರ

ಹಾವೇರಿ: ಪಶು ವೈದ್ಯಕೀಯ ಇಲಾಖೆಯ ‘ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ’ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ಪಶುವೈದ್ಯಕೀಯ ಸಂಘ, ಕರ್ನಾಟಕ ಪಶುವೈದ್ಯಕೀಯ ಪರೀಕ್ಷಕರ ಸಂಘ ಮತ್ತು ಕರ್ನಾಟಕ ಪಶುವೈದ್ಯಕೀಯ ಸಹಾಯಕರ ಸಂಘಗಳ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 4ನೇ ದಿನ ಶುಕ್ರವಾರವೂ ಮುಂದುವರಿದಿತ್ತು.

ಸಹಾಯಕ ನಿರ್ದೇಶಕ ಡಾ.ಗೋಪಿನಾಥ ಮಾತನಾಡಿ, ‘ಇಲಾಖಾ ಸಚಿವರು ಕೊಟ್ಟ ಮಾತಿನಂತೆ ಅಂತಿಮ ಅಧಿಸೂಚನೆ ಜಾರಿ ಮಾಡಿಲ್ಲ. ಆದ್ದರಿಂದ  ಪ್ರತಿಭಟನೆ ಆರಂಭಿಸಿದ್ದೇವೆ. ಅಂತಿಮ ಅಧಿಸೂಚನೆ ಹೊರಡಿಸುವ ತನಕ ಮುಷ್ಕರ ಮುಂದುವರೆಯಲಿದೆ’ ಎಂದರು.

‘ಇಲಾಖಾ ಪುನರ್‌ ರಚನೆಯಲ್ಲಿ ರದ್ದಾದ ಹುದ್ದೆಗಳ ಸಿಬ್ಬಂದಿಯ ನಿಯೋಜನೆ, ಹೊಸ ಹುದ್ದೆಗಳ ಭರ್ತಿ ಮತ್ತು ಪದೋನ್ನತಿಯು ಅಂತಿಮ ಅಧಿಸೂಚನೆಯಿಂದ ಸಾಧ್ಯ’ ಎಂದರು.ಜಿಲ್ಲೆಯ ಎಲ್ಲ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಬಂದ್ ಮಾಡಿದ ಅಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶಾಸಕರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಬಸವರಾಜ ಬೊಮ್ಮಾಯಿ, ‘ನಿಮ್ಮ ಬೇಡಿಕೆ ಸರಿಯಾಗಿದೆ. ಅಂತಿಮ ಅಧಿಸೂಚನೆ ಹೊರಡಿಸಿದರೆ ನೌಕರರು ಕರ್ತವ್ಯ ನಿರ್ವಹಿಸಲು ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ. ಈ ಬಗ್ಗೆ ಪಶುಸಂಗೋಪನಾ ಸಚಿವ ಎ.ಮಂಜು ಅವರ ಜೊತೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ, ‘ನೌಕರರ ಪ್ರತಿಭಟನೆ ನ್ಯಾಯಯುತವಾಗಿದೆ. ಆದರೆ, ರೈತರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕಿತ್ತು. ಆದರೆ, 4 ದಿನ ಕಳೆದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ನೋವಿನ ಸಂಗತಿ.

ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದು ಭರವಸೆ ನೀಡಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಹಾಲಪ್ಪನವರಮಠ, ಕುರಿಗಾರರ ಸಂಘ ಅಧ್ಯಕ್ಷ ನೀಲಪ್ಪ ದೇವರಗುಡ್ಡ, ರೈತ ಸಂಘಗಳ ರವೀಂದ್ರಗೌಡ ಪಾಟೀಲ, ಮಹೇಶ ಕೊಟ್ಟೂರ ಮತ್ತಿತರರು ಬೆಂಬಲ ನೀಡಿದರು.

ಪಶುವೈದ್ಯಕೀಯ ಸಂಘಟನೆಗಳ ಡಾ.ರಾಜೀವ ಕೂಲೇರ, ಡಾ.ಪಿ.ಎನ್.ಹುಬ್ಬಳ್ಳಿ, ಡಾ.ಕಿರಣ ಎಲ್., ಡಾ.ಅಮಿತ್ ಪುಟಾಣಿಕರ, ಡಾ.ಕೆ.ಆರ್.ಹೊಸಮನಿ, ಡಾ.ಬಸಪ್ಪ ಜಲ್ಲೇರ, ಡಾ.ಯುವರಾಜ ಚೌಹಾಣ್, ಡಾ.ಸುಮಂತ್ ಬಿ.ಕೆ, ಎಸ್.ಎಫ್.ಕರಿಯಪ್ಪನವರ, ಸಿ.ಡಿ.ಯತ್ನಳ್ಳಿ, ಎಂ.ಎಚ್.ಬಣಕಾರ, ಬಿ.ಐ.ಆಡೂರ, ಜಿ.ಎಸ್.ಅಗಸರ, ಡಿ.ಬಿ.ವಳಗೇರಿ, ಎಸ್.ಎಸ್.ಗವಿಯಪ್ಪನವರ, ಜೆ.ಡಿ.ಕಟಗಿ, ಎಚ್.ಆರ್.ನಾಯಕ, ಮೆಹಬೂಬ್ ಪಾಷಾ, ಎಸ್.ಜಿ.ಜಡಿಮಠ, ಎಂ.ಎಸ್.ಬುಳಾಬುಳ್ಳಿ, ಡಿ.ಬಿ.ದೊಡ್ಡಮನಿ ಇದ್ದರು.

ಪಶು  ಆಸ್ಪತ್ರೆಗಳಿಗೆ   ಬೀಗ...

ಹಿರೇಕೆರೂರ: ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಪಶುಪಾಲನಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 4ನೇ ದಿನ ಪೂರೈಸಿದೆ.

ತಾಲ್ಲೂಕಿನ 30 ಪಶುವೈದ್ಯಕೀಯ ಸಂಸ್ಥೆಗಳ ಸಹಾ ಯಕ ನಿರ್ದೇಶಕರು, ಪಶುವೈದ್ಯರು, ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು ಹಾಗೂ ‘ಡಿ’ ದರ್ಜೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಇದರಿಂದ ಎಲ್ಲ ಸಂಸ್ಥೆಗಳಿಗೆ ಬೀಗ ಹಾಕಲಾಗಿದೆ.‘ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ನೌಕರರೊಬ್ಬರು ತಿಳಿಸಿದರು.

* *

ಸರ್ಕಾರವು ‘ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ’ ಹೊರಡಿಸಿದರೆ ಪಶು ವೈದ್ಯಕೀಯ ಇಲಾಖೆ ನೌಕರರಿಗೆ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ
ಬಸವರಾಜ ಬೊಮ್ಮಾಯಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT