ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು, ಅಡಿಕೆಗೆ ಪರಿಹಾರ ನೀಡದ ಸರ್ಕಾರ

Last Updated 20 ಮೇ 2017, 5:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ತೆಂಗು, 10 ಸಾವಿರ ಹೆಕ್ಟೇರ್ ಅಡಿಕೆ ಒಣಗಿದೆ. ರೈತರು ಕಂಗಾಲಾಗಿ ಹೋಗಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರಿಗೆ ನಯಾ ಪೈಸೆ ಪರಿಹಾರ ನೀಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಒಂದು ಬಾರಿ ತೆಂಗು, ಅಡಿಕೆ ತೋಟದ ಬೆಳೆಗಳು ಒಣಗಿದರೆ ಸುಮಾರು 25 ವರ್ಷ ಕಾಲ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಮುಂದಾ ಗುತ್ತಿದ್ದಾರೆ. ಆದ್ದರಿಂದ ತುರ್ತಾಗಿ ಬೆಳೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ ಒಟ್ಟಾರೆ ಯೋಜನೆ ವೆಚ್ಚ ₹ 12 ಸಾವಿರ ಕೋಟಿ. ಅಂದಿನ ಬಿಜೆಪಿ ಸರ್ಕಾರ ₹ 500 ಕೋಟಿ ಬಿಡುಗಡೆ ಮಾಡಿದ್ದು ಸೇರಿ ಈಗಿನ ರಾಜ್ಯ ಸರ್ಕಾರ ₹ 1 ಸಾವಿರ ಕೋಟಿ ವೆಚ್ಚ ಮಾಡಿದೆ. 4 ವರ್ಷದ ಆಡಳಿತದ ಅವಧಿಯಲ್ಲಿ ಬಿಡುಗಡೆ ಮಾಡಿರುವುದು ಕೇವಲ ₹ 500 ಕೋಟಿ. ಹೀಗೆ ಆದರೆ, ಯೋಜನೆ ಮುಗಿಯುವುದು ಯಾವಾಗ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ ಎಂದರು.

ತುಮಕೂರು - ಚಿತ್ರದುರ್ಗ - ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ವರ್ಷಾಂತ್ಯದಲ್ಲಿ ಭದ್ರಾ ನೀರು ತರುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಯೋಜನೆ ಮಂದಗತಿಯಲ್ಲಿ ಸಾಗಿದೆ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಸುವಿಗೆ ಎಂಟು ಕೆ.ಜಿ. ಮೇವು ನೀಡುವುದಾಗಿ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಿದರೂ ಸಮರ್ಪಕವಾಗಿ ವಿತರಿಸುತ್ತಿಲ್ಲ. ಗೋಶಾಲೆಗಳಿಗೆ ಬರುವ ರೈತರಿಗೆ ಒಂದು ಹೊತ್ತಿನ ಊಟ ನೀಡುವ ಯೋಗ್ಯತೆಯೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ದೂರಿದರು.

ರಾಜ್ಯದೆಲ್ಲೆಡೆ ಭೀಕರ ಬರಗಾಲ ಇರುವುದರಿಂದ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರಿಗೆ ಸರ್ಕಾರ ಬಿಲ್ ಪಾವತಿಸಿಲ್ಲ. ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನೇ ಸರಿಯಾಗಿ ಬಳಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲದಕ್ಕೂ ಪ್ರಧಾನಿ ಮೋದಿ ಕಡೆ ಬೆರಳು ತೋರಿಸುವ ಕೆಟ್ಟ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಂಸದರಾದ ಬಿ.ಶ್ರೀರಾಮುಲು, ಶೋಭಾ ಕರಂದ್ಲಾಜೆ, ಮುಖಂಡ ಗೋವಿಂದ ಕಾರಜೋಳ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ವಿಭಾಗೀಯ ಸಹಪ್ರಭಾರಿ ಜಿ.ಎಂ. ಸುರೇಶ್  ಅವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT