ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವರ್‌ ಗ್ರಿಡ್: ಮರು ಸರ್ವೆಗೆ ಸೂಚನೆ

Last Updated 21 ಮೇ 2017, 16:22 IST
ಅಕ್ಷರ ಗಾತ್ರ

ರಾಮನಗರ: ಪವರ್‌ ಗ್ರಿಡ್‌ ಯೋಜನೆಗಾಗಿ ಜಿಲ್ಲೆಯಲ್ಲಿ ವಶಪಡಿಸಿ ಕೊಳ್ಳಲಾಗುತ್ತಿರುವ ಕೃಷಿ ಜಮೀನಿನ ಸರ್ವೇ ಕಾರ್ಯವನ್ನು ಮತ್ತೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸುವಂತೆ ಜಿಲ್ಲಾಧಿಕಾರಿ ಬಿ.ಆರ್‌. ಮಮತಾ ಪವರ್‌ ಗ್ರಿಡ್‌ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಹಾಗೂ ರೈತರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಂದ ವಶ ಪಡಿಸಿಕೊಳ್ಳಲಾಗುವ ಭೂಮಿಗೆ ಸೂಕ್ತ ಪರಿಹಾರ ನೀಡದೇ ವಂಚಿಸಲಾಗುತ್ತಿದೆ. ಭೂಸ್ವಾಧೀನದ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ರೈತರಿಂದ ದೂರುಗಳು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ, ವಶಪಡಿಸಿ ಕೊಳ್ಳುವ ಜಮೀನು ಹಾಗೂ ನೀಡ ಲಾಗುತ್ತಿರುವ ಪರಿಹಾರದ ಮೊತ್ತದ ಮಾಹಿತಿಯನ್ನು ಒಳಗೊಂಡ ನೋಟಿಸ್‌ ಅನ್ನು ಎಲ್ಲ ರೈತರಿಗೂ ಕನ್ನಡದಲ್ಲಿಯೇ ನೀಡುವಂತೆ ಅವರು ಸೂಚಿಸಿದರು.

ದರ ನಿಗದಿಗೆ ಸಭೆ: ಪರಿಹಾರದ ಮೊತ್ತ ನಿಗದಿ ಸಂಬಂಧ ಸಭೆಯಲ್ಲಿ ಹೆಚ್ಚು ಚರ್ಚೆ ನಡೆಯಿತು. ‘ಕೆಲವು ಭಾಗದಲ್ಲಿ ಎಕರೆ ಜಮೀನಿಗೆ ಕೋಟಿ ಲೆಕ್ಕದಲ್ಲಿ ಬೆಲೆ
ಇದೆ. ಆದರೆ, ಅಧಿಕಾರಿಗಳು ಲಕ್ಷದ ಲೆಕ್ಕದಲ್ಲಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ವಶಪಡಿಸಿಕೊಳ್ಳಲಾಗುವ ಭೂಮಿಗೆ ಶೇ 100 ಹಾಗೂ ಲೈನ್‌ ಹಾದುಹೋಗುವ ಸ್ಥಳಕ್ಕೆ ಶೇ55ರಷ್ಟು ಪರಿಹಾರ ನೀಡಬೇಕು ಎಂಬ  ಜಿಲ್ಲಾ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಲಾಗಿದೆ’ ಎಂದು ಅವರು ದೂರಿದರು. ಇದಕ್ಕೆ ಪವರ್‌ಗ್ರಿಡ್‌ ಕಾರ್ಪೋರೇಷನ್‌ನ ಹಿರಿಯ ಅಧಿಕಾರಿ ರವೀಂದ್ರನಾಥ್‌ ಪ್ರತಿಕ್ರಿಯಿಸಿ  ‘ಕೇಂದ್ರ ಸರ್ಕಾರ ಹೊರಡಿ ಸಿರುವ ಅಧಿಸೂಚನೆ ಅನ್ವಯ ರೈತರಿಗೆ ವಶಪಡಿಸಿಕೊಳ್ಳಲಾದ ಭೂಮಿಗೆ ಶೇ 85 ಹಾಗೂ ಲೇನ್ ಹಾದುಹೋಗುವ ಸ್ಥಳಕ್ಕೆ ಶೇ 15ರಷ್ಟು ಪರಿಹಾರ ನೀಡಲು ಮಾತ್ರ ಸಾಧ್ಯವಿದೆ. ನ್ಯಾಯಾಲಯದ ಆದೇಶಕ್ಕೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ’ ಎಂದು ಅವರು ವಾದಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ್ತೊಂದು ಸಭೆ ಕರೆದು ದರ ನಿಗದಿ ಸಂಬಂಧ ಚರ್ಚಿಸಲು ಸಭೆಯು ನಿರ್ಣಯಿಸಿತು.

‘ವಿದ್ಯುತ್‌ ತಂತಿಗಳು ಹಾದು ಹೋಗುವ ಸುತ್ತಲಿನ 64 ಮೀಟ ರ್ ಅಂತರದಲ್ಲಿ ಮರಗಳನ್ನು ಕಡಿಯ ಲಾಗು ತ್ತಿದೆ. ಆದರೆ ಸರ್ಕಾರವು ನಿಗದಿಪಡಿಸಿದ ದರದಲ್ಲಿ ಅವುಗಳಿಗೆ ಪರಿಹಾರವನ್ನು ವಿತರಿಸುತ್ತಿಲ್ಲ. ಅಂತಹ ಜಮೀನಿನಲ್ಲಿ ಮತ್ತೆ ವ್ಯವಸಾಯಕ್ಕೆ ಕಷ್ಟವಾದ್ದರಿಂದ ಇಡೀ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರ ಕೊಡಿ’ ಎಂದು ಕೆಲವರು ಈ ಸಂದರ್ಭದಲ್ಲಿ ಆಗ್ರಹಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌, ರೈತ ಸಂಘದ ರಾಜ್ಯ ಘಟಕದ ಮುಖಂಡ ಸತೀಶ್, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಸ್ವಾಮಿ, ಕಾರ್ಯದರ್ಶಿ ಬೈರೇ ಗೌಡ, ಎಂ.ಡಿ. ಶಿವಕುಮಾರ್. ಲೋಕೇಶ್‌ ಗೌಡ, ಪವರ್‌ ಗ್ರಿಡ್‌ ಕಾರ್ಪೋರೇಶನ್‌ನ ಅಧಿಕಾರಿ ಜೋಸೆಫ್‌ ಕುರಿಯನ್ ಮತ್ತಿತರರು  ಇದ್ದರು.

ಏನಿದು ಯೋಜನೆ?
ರಾಜ್ಯಗಳ ನಡುವೆ ವಿದ್ಯುತ್‌ ಹಂಚಿಕೆಯ ಸಲುವಾಗಿ ಕೇಂದ್ರ ಸರ್ಕಾರ ಸ್ವಾಮ್ಯದ ಪವರ್ ಗ್ರಿಡ್‌ ಕಾರ್ಪೊರೇಶನ್‌ ಈ ಹೈವೋಲ್ಟೇಜ್‌ ವಿದ್ಯುತ್‌ ಲೈನ್‌ ಎಳೆಯುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಒಟ್ಟು 290 ಕಿ.ಮೀ. ಉದ್ದದ ಮಾರ್ಗ ಇದಾಗಿದ್ದು, ತಮಿಳುನಾಡಿನ ಸೇಲಂನಿಂದ ಕರ್ನಾಟಕದ ಕನಕಪುರ, ರಾಮನಗರ, ಮಾಗಡಿ, ತುಮಕೂರಿನ ಮಧುಗಿರಿ ಮೂಲಕ ಆಂಧ್ರಪ್ರದೇಶವನ್ನು ತಲುಪಲಿದೆ. ರಾಜ್ಯದಲ್ಲಿ ಒಟ್ಟು 130 ಕಿ.ಮೀ. ಉದ್ದದ ಲೈನ್‌ ಎಳೆಯಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿಯೇ ಸುಮಾರು 85 ಕಿ.ಮೀ. ದೂರ ಈ ಬೃಹತ್‌ ಗಾತ್ರದ ವಿದ್ಯುತ್‌ ತಂತಿಗಳು ಹಾದುಹೋಗಲಿವೆ. ಒಟ್ಟು 346 ಕಂಬಗಳು ನಿರ್ಮಾಣವಾಗಲಿದ್ದು, ಸದ್ಯ ಇವುಗಳಿಗೆ ಅವಶ್ಯವಾದ ಬೇಸ್‌ಮೆಂಟ್ ನಿರ್ಮಾಣ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT