ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಪನ್‌ ವ್ಯವಸ್ಥೆ ಬದಲು ಹೊಸ ವ್ಯವಸ್ಥೆ ಜಾರಿ

Last Updated 20 ಮೇ 2017, 5:40 IST
ಅಕ್ಷರ ಗಾತ್ರ

ಕುಷ್ಟಗಿ: ಕೂಪನ್‌ ಪಡೆದು ನಂತರ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರು ಆಹಾರ ವಸ್ತುಗಳನ್ನು ಪಡೆಯುವ ಬದಲು ನ್ಯಾಯಬೆಲೆ ಅಂಗಡಿಗಳಲ್ಲಿಯೇ ನೇರವಾಗಿ ಬಯೊ ಮೆಟ್ರಿಕ್‌ (ಜೀವಮಾಪಕ) ನೀಡಿ ಆಹಾರ ವಸ್ತುಗಳನ್ನು ಪಡೆಯುವ ಹೊಸ ವ್ಯವಸ್ಥೆ ಜಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.

ಈ ನೂತನ ವ್ಯವಸ್ಥೆಗೆ ಬೇಕಾದ ಕಂಪ್ಯೂಟರ್‌, ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌ ಇವುಗಳಲ್ಲಿ ಒಂದನ್ನು ಹೊಂದಿ ಇಂಟರ್‌ನೆಟ್‌ ಸಂಪರ್ಕ ಪಡೆದು ಮೇ ತಿಂಗಳಿನಿಂದಲೇ ಪಡಿತರದಾರರಿಗೆ ಬಯೋಮೆಟ್ರಿಕ್‌ ಪಡೆದು ಆಹಾರ ವಸ್ತುಗಳನ್ನು ವಿತರಿಸಬೇಕು.

ಈ ವ್ಯವಸ್ಥೆ ಹೊಂದದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್‌ ಎಂ.ಗಂಗಪ್ಪ ತಿಳಿಸಿದ್ದಾರೆ.

ಬದಲಾವಣೆ ಏಕೆ: ಪಡಿತರ ವಸ್ತುಗಳ ದುರ್ಬಳಕೆ ತಡೆಯುವುದು ಮತ್ತು ಪಡಿತರದಾರರ ಸಮಯ ಉಳಿತಾಯ ಮಾಡಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗು ತ್ತಿದ್ದು ಇದಕ್ಕಾಗಿ ತಾಲ್ಲೂಕಿನಲ್ಲಿ 25 ಅಂಗಡಿಗಳನ್ನು ಗುರುತಿಸಲಾಗಿದೆ. ಅಲ್ಲದೆ, ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳು ಸೇವಾ ಸಿಂಧು ಕೇಂದ್ರಗಳಾಗಲಿವೆ .

ಪಟ್ಟಣದ 8 ಹಾಗೂ ತಾವರಗೇರಾದ 3 ಸೇರಿದಂತೆ ನಿಡಶೇಸಿ, ಮೆಣೇಧಾಳ, ಹಿರೇಮನ್ನಾಪೂರ, ಗುಮಗೇರಾ, ಕಾಟಾಪೂರ, ಯರೇಗೋನಾಳ, ಹುಚನೂರು, ಯರಗೇರಾ, ನಿಲೋಗಲ್, ಮಾದಾಪೂರ, ಹನುಮಸಾಗರ, ಕಳಮಳ್ಳಿ, ಕಂದಕೂರು, ಬಂಡರಗಲ್ ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಸಿಂಧು ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.

ಈ ಹಿಂದೆ ಆಹಾರ ಇಲಾಖೆ ಗುರುತಿಸಿರುವ(ಫ್ರಾಂಚೈಸ್ಸಿ) ಕಂಪ್ಯೂಟರ್‌ ಕೇಂದ್ರಗಳ ಆನ್‌ಲೈನ್‌ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್‌ ನೀಡಿ ಪಡಿತರದಾರರು ಸರದಿಯಲ್ಲಿ ನಿಂತು ಕೂಪನ್‌ಗಳನ್ನು ಪಡೆದು ನಂತರ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವಸ್ತುಗಳನ್ನು ಪಡೆಯಬೇಕಿತ್ತು. ಆದರೆ ಈ ತಿಂಗಳಿನಿಂದ ಫ್ರಾಂಚೈಸ್ಸಿಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಲಾಗಿದ್ದು ಪಡಿತರದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್‌ ನೀಡಿ ಪಡಿತರ ವಸ್ತುಗಳನ್ನು ಪಡೆಯಬಹುದಾಗಿದೆ ಎಂದು ಆಹಾರ ಇಲಾಖೆ ಶಿರಸ್ತೆದಾರ ರಾಜು ಫಿರಂಗಿ ತಿಳಿಸಿದರು.

ಪ್ರತ್ಯೇಕ ಹೊರೆ: ಹೊಸ ವ್ಯವಸ್ಥೆಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಇಲಾಖೆ ಕಲ್ಪಿಸಬೇಕಿತ್ತು. ಆದರೆ, ಅಂಥ ಯಾವುದೇ ಅನುಕೂಲ ಇಲ್ಲ ಇದರಿಂದ ₹ 40–50 ಸಾವಿರ ಹಣದ ಹೆಚ್ಚಿನ ಹೊರೆ ಬೀಳುತ್ತದೆ. ಮತ್ತು ಸರಿಯಾದ ತಾಂತ್ರಿಕ ಮಾಹಿತಿಯೂ ಇಲ್ಲ ಕನಿಷ್ಠ ಒಂದು ತಿಂಗಳಾದರೂ ಕಾಲಾವಕಾಶ ನೀಡಬೇಕಿತ್ತು  ಎಂದು ಹೆಸರು ಪ್ರಕಟಿಸಲು ಇಚ್ಛಿಸದ ನ್ಯಾಯಬೆಲೆ ಅಂಗಡಿಗಳ ಕೆಲ ಮಾಲೀಕರು ಅತೃಪ್ತಿ ಹೊರಹಾಕಿದರು.

**

ಅಂಗಡಿ ಮಾಲೀಕರು ಮೂಲಸೌಲಭ್ಯ, ಅಗತ್ಯ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬಯೊಮೆಟ್ರಿಕ್‌ ಪಡೆದು ಆಹಾರವಸ್ತುಗಳನ್ನು ವಿತರಿಸುವುದು ಕಡ್ಡಾಯ
-ಗೀತಾ, ಉಪನಿರ್ದೇಶಕಿ ಆಹಾರ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT