ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಾಮಿಯಲ್ಲಿ ಸಿಲುಕಿದವರ ರಕ್ಷಣೆ!

Last Updated 20 ಮೇ 2017, 6:06 IST
ಅಕ್ಷರ ಗಾತ್ರ

ಕಾರವಾರ: ಪಶ್ಚಿಮ ಕರಾವಳಿ ತೀರಪ್ರದೇಶದಲ್ಲಿ ಶುಕ್ರವಾರ ಸುನಾಮಿ ಉಂಟಾಗಿತ್ತು. ನೀರಿನಲ್ಲಿ ಸಿಲುಕಿದವರ ಜೀವರಕ್ಷಣೆಯ ಕಾರ್ಯವನ್ನು ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಯು ಜಂಟಿಯಾಗಿ ನಿರ್ವಹಿಸಿದವು!.

ಆದರೆ ಇದು ನಿಜವಾದ ಸುನಾಮಿಯಲ್ಲ. ಪ್ರಧಾನಮಂತ್ರಿ ಮಂತ್ರಾಲಯದ ಮಾರ್ಗದರ್ಶನದಲ್ಲಿ 2014 ರಿಂದ ಸುನಾಮಿ ಕುರಿತು ಮುಂಜಾಗ್ರತಾ ಕ್ರಮ ವಹಿಸಲು ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಮೂರು ದಿನಗಳ ಈ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದು, ಶನಿವಾರ ಮುಕ್ತಾಯಗೊಳ್ಳಲಿದೆ.

ಇಲ್ಲಿನ ಸೀಬರ್ಡ್‌ ನೌಕಾನೆಲೆ ಹಾಗೂ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಭಾರತೀಯ ನೌಕಾ ಸೇನೆ, ಭೂ ಸೇನೆ, ವಾಯು ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಕೋಸ್ಟ್‌ಗಾರ್ಡ್‌, ಕರಾವಳಿ ಕಾವಲು ಪಡೆ ಪೊಲೀಸರು, ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸೇರಿದಂತೆ ಹಲವು ಸಂಸ್ಥೆಗಳ 1,500ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.

ಜೀವರಕ್ಷಣೆಗೆ ಹೆಲಿಕಾಪ್ಟರ್‌ ಬಳಕೆ:
ಸೀಬರ್ಡ್‌ ನೌಕಾನೆಲೆಯ ವ್ಯಾಪ್ತಿಯ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 19 ಜನರ ಜೀವವನ್ನು ಭಾರತೀಯ ವಾಯು ಸೇನಾದ ಡೋನಿಯರ್‌ ಏರ್‌ಕ್ರಾಫ್ಟ್‌ ಮೂಲಕ ರಕ್ಷಿಸಲಾಯಿತು. ನಂತರ ‘ಜೆಮಿನಿ’ ರ್‍್ಯಾಫ್ಟ್‌ ಮೂಲಕ 20 ಜನರ ಜೀವರಕ್ಷಣೆಯೊಂದಿಗೆ ಸುನಾಮಿ ಆರ್ಭಟಕ್ಕೆ ಸಿಲುಕಿ ಸಾವಿಗೀಡಾದವರ ಮೃತದೇಹಗಳನ್ನು ತೀರಕ್ಕೆ ತಂದು ನೌಕಾದಳದ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.

ಭಾರತೀಯ ವಾಯುಸೇನಾದ ‘ಚೇತನ್‌’ ಹೆಲಿಕಾಪ್ಟರ್‌ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲಕ್ಕೆ ಎತ್ತಲಾಯಿತು. ಐ.ಎನ್.ಎಸ್ ತಿಲಾನ್‌ಚಾಂಗ್‌ ನೌಕೆಯು 60 ಕಿ.ಮೀ. ವೇಗದಲ್ಲಿ (ಪ್ರತಿ ಗಂಟೆಗೆ) ಚಲಿಸಿ ಸಂಕಷ್ಟಕ್ಕೊಳಕ್ಕಾದ ಸಂತ್ರಸ್ತರನ್ನು ರಕ್ಷಿಸಿತು.

ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್‌ ಆಫೀಸರ್‌ ರಿಯರ್‌ ಅಡ್ಮಿರಲ್‌ ಕೆ.ಜೆ.ಕುಮಾರ್‌, ಶ್ರೀಲಂಕಾದ ಸೇನಾ ಪ್ರತಿನಿಧಿ ಕ್ಯಾಪ್ಟನ್‌ ಪ್ರಸನ್ನ, ವಿಯೆಟ್ನಾಂನ ಕ್ಯಾಪ್ಟನ್‌ ಜೊಜೊಲಾ, ಬಾಂಗ್ಲಾದೇಶದ ಕ್ಯಾಪ್ಟನ್‌ ಬಾರಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕಾಂಡಿಯಾ ಕಾರ್ಯಾಚರಣೆ ವೀಕ್ಷಿಸಿದರು.

ಕರಾವಳಿ ಕಾರುಣ್ಯ..
ಕಾರವಾರದಲ್ಲಿ ಆಯೋಜಿಸಿದ್ದ ಈ ಸುನಾಮಿ ಕಾರ್ಯಾಚರಣೆಗೆ ‘ಕರಾವಳಿ ಕಾರುಣ್ಯ’ ಎಂದು ಹೆಸರಿಡಲಾಗಿದೆ. ಈ ಕಾರ್ಯಾಚರಣೆಯನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದ್ದು, ಕರಾವಳಿ ಪ್ರದೇಶವನ್ನು ಸುನಾಮಿ ಅಪ್ಪಳಿಸುವುದಕ್ಕೂ ಮುನ್ನ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಕರಾವಳಿ ತೀರ ಸುನಾಮಿಯಿಂದ ನಾಶಗೊಂಡ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ವಿವಿಧ ಶಿಬಿರಗಳು
ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ತುರ್ತು ಚಿಕಿತ್ಸಾ ಘಟಕ, ಸಂಚಾರಿ ಪ್ರಯೋಗಾಲಯ ಮಹಿಳಾ ಸಂತ್ರಸ್ತರ ವಾರ್ಡ್‌, ಪುರುಷ ಸಂತ್ರಸ್ತರ ವಾರ್ಡ್‌, ಪಡಿತರ       ದಾಸ್ತಾನು ಕೇಂದ್ರಗಳು ತಲೆಎತ್ತಿದ್ದವು. ಎನ್‌ಸಿಸಿ ಶಿಬಿರಾರ್ಥಿಗಳು ಸಂತ್ರಸ್ತರಿಗೆ ವೈದ್ಯರಿಂದ ತುರ್ತು ಚಿಕಿತ್ಸೆ ಕೊಡಿಸುವ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.

ರಕ್ಷಣೆಗೆ ಸದಾ ಸಿದ್ಧ: ಗಿರೀಶ್‌ ಲೂಥ್ರಾ
‘ಮಾನ್ಸೂನ್ ಆಗಮನಕ್ಕೂ ಮುನ್ನ ಸುನಾಮಿಯ ರಕ್ಷಣಾ ಕಾರ್ಯಾಚರಣೆಯ ಕುರಿತು ಸಿದ್ಧತೆ ನಡೆಸಲಾಗುತ್ತದೆ. ಅಲ್ಲದೇ ಸುನಾಮಿಯ ತೀವ್ರತೆ, ಅದರ ಹಾನಿ, ಸಂತ್ರಸ್ತ ಪ್ರದೇಶಗಳ ಮಾಹಿತಿ ಪಡೆದು ರಕ್ಷಣಾ ಕಾರ್ಯಕ್ಕೆ ಮುಂದಾಗುತ್ತೇವೆ.

ಅಣಕು ಕಾರ್ಯಾಚರಣೆಯ ಮೂಲಕ ಜನಜಾಗೃತಿ ಮೂಡಿಸುವುದರಿಂದ ಸೇನೆಗೂ ಸಹ ಹೆಚ್ಚಿನ ಪ್ರಯೋಜನ ತಂದುಕೊಟ್ಟಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ನಡುವೆ ಹೊಂದಾಣಿಕೆ ಹೊಂದಲು ಇದು ಸಹಕಾರಿಯಾಗಿದೆ’ ಎಂದು ಪಶ್ಚಿಮ ವಲಯದ ನೌಕಾ ಮುಖ್ಯಸ್ಥ ಗಿರೀಶ್ ಲೂಥ್ರಾ ಹೇಳಿದರು.

* *

ಕರಾವಳಿ ಭಾಗದಲ್ಲಿ ಉಂಟಾಗಬಹುದಾದ ಸುನಾಮಿಯಂಥ ತುರ್ತು ಪರಿಸ್ಥಿತಿ ಎದುರಿಸಲು ಹಾಗೂ ಸಾರ್ವಜನಿಕರ ರಕ್ಷಣೆಗೆ ಸೇನೆ ಸದಾ ಸಿದ್ಧವಿದೆ
ಗಿರೀಶ್ ಲೂಥ್ರಾ
ಪಶ್ಚಿಮ ವಲಯದ ನೌಕಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT