ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮೈದಾನಗಳು ಕುಡುಕರ ತಾಣ!

Last Updated 20 ಮೇ 2017, 5:55 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಸಾರ್ವಜನಿಕ ಸ್ಥಳಗಳು ಮತ್ತು ಶಾಲಾ-– ಕಾಲೇಜು ಮೈದಾನಗಳೀಗ ಕತ್ತಲಾಗುತ್ತಿದ್ದಂತೆ ಮದ್ಯಪ್ರಿಯರ ತಾಣಗಳಾಗಿ ಪರಿವರ್ತನೆಯಾಗಿವೆ. ಕುಷ್ಟಗಿ ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣವೂ ಮದ್ಯಪಾನದ ಜಾಗವಾಗಿದೆ.

ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವ ಮೆಟ್ಟಿಲುಗಳ ಮೇಲೆ ಕುಡಿದ ಮತ್ತಿನಲ್ಲಿ ಬಿಯರ್ ಬಾಟಲಿಗಳನ್ನು ಒಡೆದು ಬಿಸಾಡುತ್ತಾರೆ. ಕ್ರೀಡಾಂಗಣದ ನಿರ್ವಹಣೆಯಿಲ್ಲದೆ ಮೈದಾನದಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಇದು ಮದ್ಯಪ್ರಿಯರಿಗೆ ಪ್ರಶಸ್ತ ಜಾಗವಾಗಿದೆ. ಸಿಬ್ಬಂದಿಗೆ ನಿರ್ಮಿಸಿದ ಕೊಠಡಿಗಳ ಬಾಗಿಲು ಮತ್ತು ಕಿಟಕಿ ಒಡೆದು ಹೋಗಿವೆ. 

‘ಕ್ರೀಡಾಕೂಟದ ಸಂದರ್ಭ ಕ್ರೀಡಾಂಗಣ ಸ್ವಚ್ಛಗೊಳಿಸುವುದು ಬಿಟ್ಟರೆ, ಮತ್ತೆ ಸ್ವಚ್ಛತೆ ಮಾಡುವುದನ್ನು ನೋಡಿಲ್ಲ. ಅಲ್ಲದೆ ರಾತ್ರಿ ಹೊತ್ತು ಪುಂಡಪೋಕರಿಗಳು ಮೈದಾನಕ್ಕೆ ಬಂದು ಅನೈತಿಕ ಚಟುವಟಿಕೆ ನಡೆಸುತ್ತಾರೆ’ ಎನ್ನುತ್ತಾರೆ ಸಮೀಪದ ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳು.

ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಜೂನಿಯರ್ ಕಾಲೇಜು ಮೈದಾನ, ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗದ ಆಟದ ಮೈದಾನ, ಶಹರ ಪೊಲೀಸ್ ಠಾಣೆ ಹಿಂಭಾಗ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನ, ಇಂದಿರಾ ಪ್ರಿಯದರ್ಶಿನಿ ಶಾಲೆ ಮೈದಾನ, ಸತ್ಯಗಾರ್ಡನ್ ಪಕ್ಕದ ಜಮೀನು, ಕುಷ್ಟಗಿ ರಸ್ತೆಯ ಹೆಲಿಪ್ಯಾಡ್ ಆವರಣ ಕುಡುಕರ ಕಾಯಂ ಸ್ಥಳಗಳಾಗಿವೆ. ಕುಡಿದು ಮದ್ಯದ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ. 

‘ಕುಡಿದ ಅಮಲಿನಲ್ಲಿ ಚೀರಾಡಿ, ರಂಪಾಟ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ರಾತ್ರಿ ಊಟದ ನಂತರ ವಾಕಿಂಗ್‌ಗೆ ಮೈದಾನಗಳಿಗೆ ಹೋಗಲು ಜನರು ಭಯಪಡುತ್ತಿದ್ದಾರೆ. ಈ ಬಗ್ಗೆ ಯುವಕರಿಗೆ ತಿಳಿ ಹೇಳಿದರೆ  ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆಯಲು ಬರುತ್ತಾರೆ’ ಎಂದು ನಾಗರೀಕರಾದ ರಾಮಸ್ವಾಮಿ, ವೀರೇಶಪ್ಪ, ಶಿವಣ್ಣ ಹೇಳುತ್ತಾರೆ.

‘ಎರಡು ಪೊಲೀಸ್ ಠಾಣೆಗಳ ಹಿಂಭಾಗದಲ್ಲಿಯೇ ನಡೆಯುವ ಅನೈತಿಕ ಚಟುವಟಿಕೆ ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಈ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸ್ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ರಾತ್ರಿ ವೇಳೆ ಸಾರ್ವಜನಿಕ ಸ್ಥಳ ಮತ್ತು ಶಾಲಾ– ಕಾಲೇಜುಗಳ ಮೈದಾನಗಳಲ್ಲಿ ಮದ್ಯಪಾನ ಮಾಡುವವರ ಹಾವಳಿ ತಡೆಗೆ ಮುಂದಾಗಬೇಕು. ಗಸ್ತು ತಿರುಗಿ ಯಾವುದೇ ಅಕ್ರಮ ಚಟುವಟಿಕೆಗಳಾಗದಂತೆ ಸಾರ್ವಜನಿಕರ ಹಿತ ಕಾಯಬೇಕು’ ಎಂದು ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ, ಆರ್‌ವೈಎಫ್ಐ ಸಂಘಟನೆಯ ನಾಗರಾಜ ಪೂಜಾರ್ ಆಗ್ರಹಿಸಿದ್ದಾರೆ.

**

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಗಸ್ತು ಹಾಕಿ ಕುಡುಕರ ಹಾವಳಿ ನಿಯಂತ್ರಣ ಮಾಡಲಾಗುವುದು.
-ಜಗದೀಶ, ಸಬ್ಇನ್ಸ್‌ಪೆಕ್ಟರ್, 
ಶಹರ ಠಾಣೆ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT