ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಚಂದ್ರಣ್ಣ ಚೆಣ್ಣಿ ಸ್ಮರಣೋತ್ಸವ ಇಂದು

Last Updated 20 ಮೇ 2017, 6:05 IST
ಅಕ್ಷರ ಗಾತ್ರ

ಮಹಾಲಿಂಗಪುರ: ವಾರದ ಸಂತೆ ಮಾಡುವ ಕಾಯಕದಲ್ಲಿ ನಿರತರಾಗಿ ಶರಣ ಜೀವನ ಸಾಗಿಸಿದ ಶರಣ ಬಾಲಚಂದ್ರಣ್ಣ ಚೆಣ್ಣಿ ಅವರ ಏಳನೇ ಸ್ಮರಣೆ ಮೇ 19ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆಯ ಲಿದೆ. ಲಿಂ.ಶರಣ ಬಾಲಚಂದ್ರಣ್ಣ ಚೆಣ್ಣಿ ಪ್ರತಿಷ್ಠಾನ ಈ ಸ್ಮರಣೋತ್ಸವವನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಶರಣೋತ್ಸವವಾಗಿ ಆಚರಿಸುತ್ತಿದೆ.

ಕಾಯಕ, ದಾಸೋಹ, ದಯೆ ಹಾಗೂ ಜಾತ್ಯತೀತ ಮನೋಭಾವ ಹೊಂದಿದ್ದ ಬಾಲಚಂದ್ರಣ್ಣ ಚೆಣ್ಣಿ ಸಮಾಜಕ್ಕೆ ಶರಣ ತತ್ವಗಳನ್ನು  ಸಾರಿದ್ದರು. ಕೇವಲ ಸಿದ್ಧಾಂತಗಳನ್ನು ಹೇಳದೇ ಅವುಗಳ ಪರಿಪಾಲಕರಾಗಿ ಆದರ್ಶ ಮೆರೆದಿದ್ದರು. ತಮಗಿರುವ ಬಡತನ ಯಾರೊಂದಿಗೂ ಹಂಚಿಕೊಳ್ಳದೇ ನಿತ್ಯ ನಿರಂತರ ವಚನ ದಾಸೋಹಕ್ಕೆ ಅವರು ತಮ್ಮನ್ನೇ ಅರ್ಪಿಸಿಕೊಂಡಿದ್ದರು.

ಭಗವಂತನು ನೀಡಿದ ಕಾಯ ಪ್ರಸಾದವನ್ನು ಕೆಡಿಸಲಾಗದು ಎಂಬ ವಚನದ ಸಂದೇಶವನ್ನು ತಲೆಯಲ್ಲಿ ಬೇರೂರಿಸಿಕೊಂಡಿದ್ದ ಚೆಣ್ಣಿಯವರು ಹಿರಿಯ ವೈದ್ಯ ವಿಜ್ಞಾನಿ ಡಾ.ಸ.ಜ. ನಾಗಲೋಟಿಮಠ ಅವರೊಂದಿಗೆ ಅನೇಕ ದಿನಗಳವರೆಗೆ ಚರ್ಚಿಸಿ ‘ವೈದ್ಯಕೀಯ ದೇಹದಾನ’ ಎಂಬ ಹೊಸ ಪರಿಕಲ್ಪನೆ ಹುಟ್ಟು ಹಾಕಿ ಬಾಗಲ ಕೋಟೆಯ ಕುಮಾರೇಶ್ವರ ವೈದ್ಯಕೀಯ ಕಾಲೇಜಿಗೆ ತಮ್ಮ ದೇಹವನ್ನು ದಾನಮಾಡಿ ಆದರ್ಶ ಮೆರೆದರು. ಅವರಿಂದ ಪ್ರೇರಣೆ ಪಡೆದ ನೂರಾರು ಜನರು ಇಂದು ಈ ಪ್ರದೇಶದಲ್ಲಿ ದೇಹದಾನದ ವಾಗ್ದಾನ ಮಾಡಿದ್ದಾರೆ.

ಕೂಡಲ ಸಂಗಮದ ಮಾತೆ ಮಹಾ ದೇವಿ ಅವರ ಮಹಾಮನೆಯಲ್ಲಿ ಕೆಲ ಕಾಲ ಕರಣಿಕರಾಗಿ ಕಾರ್ಯ ನಿರ್ವಹಿಸಿದ್ದ ಬಾಲಚಂದ್ರಣ್ಣ ತುಂಬ ನೇರ ಹಾಗೂ ನಿಷ್ಠುರಿ, ಅವರ ಈ ವ್ಯಕ್ತಿತ್ವ ಅವರನ್ನು ಬಹುಕಾಲ ಅಲ್ಲಿರಲು ಬಿಡಲಿಲ್ಲ, ಅಲ್ಲಿಂದ ಸ್ವಕ್ಷೇತ್ರಕ್ಕೆ ಬಂದು ಶರಣರ ವಚನ ಸಾಹಿತ್ಯ ಹಾಗೂ ಬದುಕಿಗೆ ಬೇಕಾಗಿರುವ ವಚನಗಳ ಸಂದೇಶಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಾ ತಮ್ಮ ಕಾಯಕ ನಿಭಾಯಿಸಿದರು.

ಅಂದು ಅವರೊಂದಿಗೆ ಕೈಜೋಡಿಸಿದ್ದ ಅವರ ಆಪ್ತರಾಗಿದ್ದ ಅಣ್ಣಾಜಿ ಫಡತಾರೆ, ಬಿ.ಎಚ್. ಮಾರದ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಗೋಲೇಶ ಅಮ್ಮಣಗಿ, ಡಾ.ಬಿ.ಡಿ. ಸೋರಗಾವಿ, ಡಾ.ಪಿ.ಆರ್. ಅವರಾದಿ ಹಾಗೂ ಇತರರು ಸೇರಿಕೊಂಡು ಅವರ ಪುಣ್ಯ ಸ್ಮರಣೆಯನ್ನು ಶರಣೋತ್ಸವವಾಗಿ ಪ್ರತಿ ವರ್ಷವೂ ಆಚರಿಸಿ ನಿಜವಾದ ಕಾಯಕ ಯೋಗಿಗೆ ‘ಕಾಯಕಯೋಗಿ’ ಪ್ರಶಸ್ತಿ ಯನ್ನು ನೀಡುವ ಸಂಪ್ರದಾಯ ಬೆಳೆಸಿ ಕೊಂಡಿದ್ದಾರೆ.

ಮುಧೋಳದ ಹೆಸರಾಂತ ಶಸ್ತ್ರ ಚಿಕಿತ್ಸಕ, ಸಾಹಿತಿ ಡಾ.ಶಿವಾನಂದ ಕುಬಸದ ಅವರಿಗೆ ಈ ಬಾರಿಯ ಪ್ರಶಸ್ತಿ ನೀಡಲಾಗುತ್ತಿದೆ. ಹಳೆ ಹುಬ್ಬಳ್ಳಿಯ ವೀರ ಭಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಖಜ್ಜಿಡೋಣಿಯ ಶಂಕರಾಚಾರ್ಯ ಅವಧೂತ ಮಠದ ಕೃಷ್ಣಾನಂದ ಶ್ರೀಗಳು ಅಧ್ಯಕ್ಷತೆ ವಹಿಸುವರು.

ವಚನ ಸಾಹಿತ್ಯ ಸಮ್ಮೇಳನ ಜುಲೈ 10ರಿಂದ
ಬಾಗಲಕೋಟೆ: ವಚನ ಸಾಹಿತ್ಯ ಪರಿಷತ್‌ನ ರಾಜ್ಯ ಮಟ್ಟದ ಸಮ್ಮೇಳನವನ್ನು ಜುಲೈ 10 ಹಾಗೂ 11ರಂದು ಇಳಕಲ್ ಪಟ್ಟಣದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ.ತ್ಯಾಗರಾಜ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಳಕಲ್‌ ಚಿತ್ತರಗಿ ಸಂಸ್ಥಾನಮಠದ ಡಾ.ಮಹಾಂತ ಸ್ವಾಮೀಜಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪಾಲ್ಗೊಳ್ಳಲಿದ್ದಾರೆ ಎಂದರು.

ಶರಣರ ತತ್ವ ಕೇವಲ ಒಂದು ಜಾತಿಗೆ ಸೀಮಿತವಲ್ಲ ಎಂಬ ಸಂದೇಶದೊಂದಿಗೆ ವಚನಗಳ ಆಶಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಚರ್ಚೆಗೆ ಸಮ್ಮೇಳನ ವೇದಿಕೆಯಾಗಲಿದೆ. ವಚನ ಸಾಹಿತ್ಯ ಪರಿಷತ್ ಕಳೆದ ನಾಲ್ಕು ವರ್ಷಗಳಿಂದ ಜಾತ್ಯಾತೀತ ತತ್ವದಡಿ ಬಸವಾದಿ ಶಿವಶರಣರ ಚಿಂತನೆಗಳನ್ನು ಹರಡುವ ಕಾರ್ಯ ಕೈಗೊಂಡಿದೆ ಎಂದು ಹೇಳಿದರು.

ಕಾಯಕಯೋಗಿ ಪ್ರಶಸ್ತಿ:  ವಚನ ಸಾಹಿತ್ಯ ಪರಿಷತ್‌ನಿಂದ ಪ್ರತಿ ವರ್ಷ ನೀಡುವ ಕಾಯಕಯೋಗಿ ಪ್ರಶಸ್ತಿಗೆ ಈ ಬಾರಿ ಜಿಲ್ಲೆಯ ವಚನ ಕಾರ ಇಬ್ರಾಹಿಂ ಸುತಾರ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಈ ಹಿಂದೆ ಹೊಸ ದುರ್ಗದ ಶಾಂತವೀರ ಶ್ರೀಗಳು, ಸಂಗಮೇಶ ಸವದತ್ತಿಮಠ ಹಾಗೂ ನಟಿ ಲೀಲಾವತಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ ಹಾಗೂ ಎಸ್.ಬಿ. ಕರಬಾಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT