ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಮಧ್ಯದಲ್ಲೂ ಬಹಿರ್ದೆಸೆ ಬವಣೆ

Last Updated 20 ಮೇ 2017, 6:08 IST
ಅಕ್ಷರ ಗಾತ್ರ

ರಾಯಚೂರು: ನಗರದ ವಾರ್ಡ್‌ ಸಂಖ್ಯೆ 9ರ ವ್ಯಾಪ್ತಿಯ ಗಂಗಾನಿವಾಸ ಸುತ್ತಲಿನ ಬಹಳ ಜನರು ದಿನಾಲೂ ಬೆಳಿಗ್ಗೆ ಕೈಯಲ್ಲಿ ನೀರಿನ ಡಬ್ಬಿ ಹಿಡಿದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಸಮೀಪದ ಗಡ್ಡದಲ್ಲಿ ಬಹಿರ್ದೆಸೆ ಮುಗಿಸುವ ಧಾವಂತದಲ್ಲಿ ಜನರಿರುತ್ತಾರೆ.

ಬಂಡೆಗಳ ಗುಡ್ಡ ಏರಿಕೊಂಡು ಹೋಗುವುದಕ್ಕೆ ಸಾಧ್ಯವಾಗದವರು ಮಾರ್ಕೆಟ್‌ ರಸ್ತೆಯ ಅಂಚಿನಲ್ಲೆ ಬಹಿರ್ದೆಸೆ ಕುಳಿತುಕೊಳ್ಳುತ್ತಾರೆ. ಕೆಲ ಮಕ್ಕಳು ಮನೆಯ ಬಾಗಿಲುಗಳ ಎದುರೆ ಬಹಿರ್ದೆಸೆ ಮಾಡುತ್ತವೆ. ಇಂಥ ಪರಿಸ್ಥಿತಿಯಲ್ಲಿ ಮಹಿಳೆಯರು ಶೌಚ ಮಾಡುವುದಕ್ಕೆ ಪರದಾಡುತ್ತಾರೆ. ವಾರ್ಡ್‌ನಲ್ಲಿ ಮಹಿಳಾ ಸಾಮೂಹಿಕ ಶೌಚಾಲಯಗಳ ಬಾಗಿಲುಗಳು ಮುರಿದು ಬಿದ್ದಿವೆ. ಇಂಥ ಇಕ್ಕಿಟ್ಟಿನಲ್ಲೆ ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಮಹಿಳೆಯರದ್ದು. ಈ ಶೌಚಾಲಯಗಳಿಗೆ ಆವರಣ ಗೋಡೆ ಕೂಡಾ ನಿರ್ಮಿಸಿಲ್ಲ.

ವೀರಭದ್ರೇಶ್ವರ ದೇವಸ್ಥಾನ ಮತ್ತು ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ಕೊಳಚೆ ಪ್ರದೇಶದಲ್ಲಿ ನಾಗರಿಕ ಅನುಕೂಲಗಳು ತುಂಬಾ ಕಡಿಮೆ ಇವೆ. ಚರಂಡಿಗಳು ಹರಿಯುವುದಿಲ್ಲ. ಹೀಗಾಗಿ ಅದರಲ್ಲಿ ಬೀಳುವ ಘನತ್ಯಾಜ್ಯ ಮತ್ತು ಮಕ್ಕಳ ಮಲಮೂತ್ರ ವಾತಾವರಣವನ್ನು ಕಲುಷಿತಗೊಳಿಸಿದೆ. ಮನೆಗಳು ತುಂಬಾ ಇಕ್ಕಟ್ಟಿನ ಜಾಗದಲ್ಲಿ ಇರುವುದರಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವುದು ಅಸಾಧ್ಯ.

ಆಂಜನೇಯ ದೇವಸ್ಥಾನ ಮುಖ್ಯರಸ್ತೆಯ ಪಕ್ಕದಲ್ಲಿ ಕುಡಿಯುವ ನೀರು ಸಂಗ್ರಹಿಸುವ ಟ್ಯಾಂಕ್‌ ಇದೆ. ತುಂಬಾ ಹಳೇ ಟ್ಯಾಂಕ್‌ ಆಗಿರುವುದರಿಂದ ಮೇಲ್ನೊಟಕ್ಕೇ ಕೊಳಕು ದರ್ಶನವಾಗುತ್ತದೆ. ಟ್ಯಾಂಕ್‌ ಮೇಲೆ ಕಿಂಡಿಗಳು ತೆರೆದುಕೊಂಡಿವೆ. ಚಿಕ್ಕಗಾತ್ರದ ಪ್ರಾಣಿ, ಪಕ್ಷಿ ಸಲೀಸಾಗಿ ಒಳಗೆ ಬೀಳಬಹುದಾಗಿದೆ. ಟ್ಯಾಂಕ್‌ ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. ಹೀಗಾಗಿ ಜನರು ಅಲ್ಲಿಯೂ ಬಹಿರ್ದೆಸೆಗೆ ಬರುತ್ತಾರೆ. ಕುಡಿಯುವ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಲು ಯಾವುದೇ ಮುತೂವರ್ಜಿಯನ್ನು ವಹಿಸಿಲ್ಲ. ಕಸಕಡ್ಡಿ ನೇರವಾಗಿ ನೀರಿಗೆ ಬೀಳುತ್ತಿದೆ.

ನೀರಿನ ಟ್ಯಾಂಕ್‌ ಸುತ್ತಮುತ್ತ ಬಹಿರ್ದೆಸೆಗೆ ಕುಳಿತುಕೊಳ್ಳುವುದರಿಂದ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಕಬ್ಬಿಣದ ಪೈಪ್‌ಗಳಿಗೆ ತುಕ್ಕು ಹಿಡಿದಿವೆ. ನೀರಿನ ಟ್ಯಾಂಕ್‌ಗೂ ಸೂಕ್ತ ಆವರಣ ಗೋಡೆಯಿಲ್ಲ.

ಕಿಡಿಗೇಡಿಗಳ ಕೃತ್ಯ: ಕೆಲವು ಅಭಿವೃದ್ಧಿ ಕೆಲಸಗಳನ್ನು ಕಿಡಿಗೇಡಿಗಳು ಹಾಳು ಮಾಡಿರುವುದು ಕೂಡಾ ಕಾಣುತ್ತದೆ. ಮದ್ಯಪಾನ ಸೇವಿಸಿ ಬಾಟಲಿಗಳನ್ನು ನೀರಿನ ಟ್ಯಾಂಕ್‌ನೊಳಗೆ ಮತ್ತು ಸುತ್ತಲೂ ಬಿಸಾಕಿದ್ದಾರೆ. ನೀರಿನ ಟ್ಯಾಂಕ್‌ ಆವರಣಕ್ಕೆ ನಿರ್ಮಿಸಿದ್ದ ಗೇಟ್‌ಗಳನ್ನು ಮುರಿದು ಹಾಕಿದ್ದಾರೆ.

ವಾರ್ಡ್‌ ಸಂಖ್ಯೆ 9ರ ನಗರಸಭೆ ಸದಸ್ಯ ನರಸಪ್ಪ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ ‘ಜನರು ಸ್ಪಂದಿಸಿದರೆ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಾಮೂಹಿಕ ಶೌಚಾಲಯ ಬಾಗಿಲು ಮುರಿದಿರುವ ಬಗ್ಗೆ ಮನವಿ ಸಲ್ಲಿಸಿದ ಮರುದಿನವೇ ಕೆಲಸ ಆರಂಭಿಸಿದ್ದೇವೆ. ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸ್ಪಂದಿಸಬೇಕು. ರಾತ್ರೋರಾತ್ರಿ ಶಾಲಾ ಆವರಣದಲ್ಲಿ ಬಹಿರ್ದೇಸೆ ಕುಳಿತುಕೊಳ್ಳುವ ಮನಸ್ಥಿತಿ ಇರುವ ಕೆಲವು ಜನರೂ ವಾರ್ಡ್‌ನಲ್ಲಿದ್ದಾರೆ. ಮಾಡಿದ ಕೆಲಸ ಉಳಿಸಿಕೊಳ್ಳುವ ಮನೋಭಾವ ತೋರಿಸಿದರೆ ಇನ್ನೂ ಹೆಚ್ಚು ಕೆಲಸ ಮಾಡಬಹುದು’ ಎಂದರು.

‘ಜನರಿಗಾಗಿ ಸರ್ಕಾರವು ರೂಪಿಸಿದ ಪ್ರತಿಯೊಂದು ಯೋಜನೆಗಳನ್ನು ತಲುಪಿಸಲು  ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕೆಲವರು ಅದಕ್ಕೆ ಸ್ಪಂದಿಸುತ್ತಿಲ್ಲ. ಕೊಳಚೆ ಪ್ರದೇಶದ ಜನರಿಗೆ ಸರ್ಕಾರಿ ನಿವೇಶನ ಮತ್ತು ಮನೆಗಳನ್ನು ಒದಗಿಸುವುದಕ್ಕೆ ಹೆಸರುಗಳನ್ನು ಪಟ್ಟಿ ಮಾಡಿ ಕೊಟ್ಟಿದ್ದೇವೆ. ಕಾನೂನುಬಾಹಿರ ಜಾಗದಲ್ಲಿರುವ ಇಕ್ಕಟ್ಟಿನ ಮನೆಗಳನ್ನು ಬಿಟ್ಟು ಹೊರಬರುವುದಕ್ಕೆ ಕೆಲವರು ಒಪ್ಪುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ವಾರ್ಡ್‌ನಲ್ಲಿ ಸಮರ್ಪಕವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿಲ್ಲ. ಹೀಗಾಗಿ ಜನರು ಬಹಿರ್ದೆಸೆಗೆ ಹೋಗುತ್ತಾರೆ. ಸಾಮೂಹಿಕ ಶೌಚಾಲಯಗಳಿಗೆ ನೀರು ಒದಗಿಸಿಲ್ಲ. ಕೆಲವರು ಮದ್ಯದ ಬಾಟಲಿಗಳನ್ನು ಬಿಸಾಕುತ್ತಿದ್ದಾರೆ. ಇದನ್ನು ತಡೆಗಟ್ಟಲು ನಗರಸಭೆಯಿಂದ ಕ್ರಮಕೈಗೊಳ್ಳಬೇಕು’ ಎಂದು ವಾರ್ಡ್‌ ಯುವಕರು ಹೇಳಿದರು.

**

ವಾರ್ಡ್‌ 9 ರಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ.  ಕೋಟೆಯ ಪಕ್ಕದಲ್ಲಿ ಹಾಳಾದ ಶೌಚಾಲಯ ದುರಸ್ತಿ ಈಗಾಗಲೇ ಆರಂಭಿಸಲಾಗಿದೆ
-ನರಸಪ್ಪ, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT