ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಡಿ ರುಚಿಯ ಮೋಡಿ ನೋಡಿ

Last Updated 20 ಮೇ 2017, 10:01 IST
ಅಕ್ಷರ ಗಾತ್ರ

ಮಸಾಲೆಯಲ್ಲಿ ಹದವಾಗಿ ಬೆರೆತ ಮೀನು, ಬಾಯಿಗಿಡುತ್ತಿದ್ದಂತೆ ವಾವ್‌ ಎನ್ನುವಂತಹ ಸ್ವಾದ ಮೂಗಿಗೆ ಬಡಿಯುವ ಕೊಬ್ಬರಿ ಎಣ್ಣೆ ಘಮ. ಕರಾವಳಿ ಮೀನಿನ ಊಟದ ಸ್ವಾದವನ್ನು ನೆನಪಿಸಲು ಇನ್ನೇನು ಬೇಕು.

ಈ ಕರಾವಳಿ ಸೊಗಡಿನ ಖಾದ್ಯ ತಿನ್ನುವ ಇಚ್ಛೆಯಿದ್ದರೆ ಮಲ್ಲೇಶ್ವರದ ನ್ಯೂ ಫಿಶ್‌ ಲ್ಯಾಂಡ್‌ಗೆ ಭೇಟಿ ನೀಡಲೇಬೇಕು.

ಕುಂದಾಪುರ ಮೂಲದ ಶಂಕರ್‌ ಪೂಜಾರಿ ಮತ್ತು ಸಂತೋಷ್‌ ಪೂಜಾರಿ ಈ ಹೋಟೆಲ್‌ ಮಾಲೀಕರು.  ಇವರು, ಮನೆಯಲ್ಲಿ ಅಡುಗೆ ಮಾಡುವುದನ್ನೇ ನೋಡಿ ಪಾಕಶಾಸ್ತ್ರದಲ್ಲಿ ಪರಿಣತಿ ಪಡೆದವರು. ಪ್ರಯೋಗಕ್ಕೆಂದು ಮಾಡಿದ ತಿನಿಸಿಗೆ ಮನೆಯವರಿಂದ ಮೆಚ್ಚುಗೆ ವ್ಯಕ್ತವಾಗಿದ್ದೇ ಇವರು ಈ ಉದ್ಯಮಕ್ಕೆ ಬರಲು ಕಾರಣವಾಯಿತು.

ಹೋಟೆಲ್‌ ಆರಂಭಿಸಿದ ಹೊಸತರಲ್ಲಿ  ಅಡುಗೆ ಮಾಡಲು ಬಾಣಸಿಗರನ್ನು  ನೇಮಿಸಿದ್ದರು. ಆದರೆ ಅವರು ಬಿಟ್ಟು ಹೋದಾಗ ಶಂಕರ್‌ ಪೂಜಾರಿ ಸೌಟು ಹಿಡಿದರು.
ಹೀಗೆ ತಮ್ಮ ಕಥೆ ಹೇಳುತ್ತಲೇ ಬಂಗುಡೆ ಮಸಾಲೆ ಜೊತೆಗೆ ನೀರು ದೋಸೆಯನ್ನು ರುಚಿ ನೋಡುವಂತೆ ತಂದಿಟ್ಟರು. ಎಣ್ಣೆಯಲ್ಲಿ ಕರಿದ ಈರುಳ್ಳಿಗೆ ಮಸಾಲೆ ಹಾಕಿ ಕುದಿಸಿ, ಮೀನು ಹಾಕಿ ಬೇಯಿಸುತ್ತೇವೆ ಎಂದು ಅದರ ವಿವರಣೆ ನೀಡಿದರು. ಬಾಯಿಗೆ ಇಡುತ್ತಿದ್ದಂತೆ ರುಚಿ ಅದ್ಭುತವಾಗಿದೆ ಎನಿಸಿತು. ಮೀನು ತಾಜಾ ಆಗಿದ್ದುದು ಇದಕ್ಕೆ ಕಾರಣ.

ಮೀನಿನ ಬಗ್ಗೆ ಕೇಳಿದಾಗ ‘ಇದನ್ನು ಯಶವಂತಪುರದಿಂದ ತರುತ್ತೇವೆ. ಅಲ್ಲಿ ಫ್ರೆಶ್‌ ಆಗಿರುವ ಮೀನು ಸಿಗುತ್ತದೆ. ಮೀನಿನ ಕಣ್ಣು ನೋಡಿಯೇ ಅದರ ತಾಜಾತನವನ್ನು ಗುರುತಿಸಿ ನಾವು ಕೊಂಡುಕೊಳ್ಳುತ್ತೇವೆ ಎಂಬ ಉತ್ತರ ಅವರಿಂದ ಬಂತು.

ಹೀಗೆ ಮಾತನಾಡುತ್ತಲೇ ಪಾಂಫ್ರೆಟ್‌ ತವಾ ಫ್ರೈ ತಂದು ಮುಂದಿಟ್ಟರು. ಮೊದಲೇ ಮೀನಿನ ರಾಜ. ಇನ್ನು ರುಚಿಯ ಬಗ್ಗೆ ಹೇಳಬೇಕೇ. ಖಾಲಿಯಾಗಿದ್ದೇ ತಿಳಿಯಲಿಲ್ಲ. ಮತ್ತೊಂದು ತಿನ್ನಬೇಕು ಎನಿಸುವಂತಿತ್ತು ಅದರ ರುಚಿ.

ಅಷ್ಟರಲ್ಲಿಯೇ ಸಿಗಡಿಯ ಗೀರೋಸ್ಟ್‌ ತಂದು ಕೊಟ್ಟರು. ಈರುಳ್ಳಿ, ಕರಿಬೇವಿನ ಜೊತೆಗೆ ತುಪ್ಪದಲ್ಲಿ ಕರಿದ ಸಿಗಡಿ ರುಚಿ ಮೊಗ್ಗುಗಳನ್ನು ಬಡಿದೆಬ್ಬಿಸಿತು. ಸಿಗಡಿ  ಕಡಿಮೆ ಇದ್ದರೂ, ಅದರ ಜೊತೆಗಿದ್ದ ಈರುಳ್ಳಿ ಕರಿಬೇವು ಹೊಸ ರುಚಿಯನ್ನು ನೀಡುತ್ತಿತ್ತು.  ಸಿಗಡಿಯಲ್ಲಿ ಇಲ್ಲಿ ವಿವಿಧ ಆಯ್ಕೆಗಳಿವೆ. ಪೆಪ್ಪರ್‌ ಫ್ರೈ, ಮಸಾಲ, ತವಾ ಫ್ರೈ ಪುನಃ ಬಂದು ತಿನ್ನಬೇಕು ಎನಿಸದೇ ಇರಲಾರದು.

ಅಂಜಲ್‌, ಕಾಣೆ, ಬತ್ತಿ, ಸಿಲ್ವರ್‌ ಮೀನಿನ ಮಸಾಲೆಯ ಜೊತೆಗೆ ರವಾ ಫ್ರೈಗಳು ಇಲ್ಲಿ ದೊರಕುತ್ತದೆ.  ಹೆಚ್ಚು ಖಾರವೂ ಇರದ ಉಪ್ಪು, ಹುಳಿ ಖಡಕ್ಕಾಗಿರುವ ಮೀನಿನ ಸಾರು ಹಸಿವನ್ನು ಹೆಚ್ಚಿಸುತ್ತದೆ. ಚಿಕ್ಕನ್‌ ಸುಕ್ಕ ಥೇಟ್‌ ಕುಂದಾಪುರದ ಶೈಲಿಯಲ್ಲಿಯೇ ಇದೆ. ನೀರು ದೋಸೆ ಅದಕ್ಕೆ ಒಳ್ಳೆಯ ಜೋಡಿಯಾಗುತ್ತದೆ.

100 ರೂಪಾಯಿಗೆ ಬಂಗುಡೆ ಕರಿ ಮೀಲ್ಸ್‌ ದೊರೆಯುತ್ತದೆ. ಇದರಲ್ಲಿ ಬಂಗುಡೆ ಮೀನಿನ ಸಾರು, ನೀರು ದೋಸೆ, ರಸಂ, ಒಣ ಸಿಗಡಿ ಚಟ್ನಿ ಇರುತ್ತದೆ. ಇಷ್ಟರಲ್ಲಿ ಧಾರಾಳವಾಗಿ ಹೊಟ್ಟೆ ತುಂಬುತ್ತದೆ.

ಕೋಳಿ ಸಾರಿನ ಜೊತೆಗೆ ನೀಡುವ ಕರಾವಳಿಯ ಜನಪ್ರಿಯ ರೊಟ್ಟಿಗೆ ಇಲ್ಲಿ ಬೇಡಿಕೆ ಹೆಚ್ಚು. ಇದರ ಜೊತೆಗೆ ಮಟನ್‌ ಮತ್ತು ಮೊಟ್ಟೆಯಲ್ಲಿಯೂ ವಿವಿಧ ಆಯ್ಕೆಗಳಿವೆ. ಚೈನೀಸ್‌ ಐಟಂ ಜೊತೆಗೆ ಸಸ್ಯಾಹಾರಿಗಳಿಗಾಗಿ ಪನ್ನೀರ್‌ ಚಿಲ್ಲಿ, ಗೋಬಿ ಮಂಚೂರಿ, ಪನೀರ್‌ ಮಂಚೂರಿ, ಮಶ್ರೂಮ್‌ ಖಾದ್ಯಗಳ ವೈವಿಧ್ಯ ಇದೆ.

‘ಕುಂದಾಪುರದ ಸುಕ್ಕ ತುಂಬಾ ಜನಪ್ರಿಯ. ಅದೇ ಶೈಲಿಯಲ್ಲಿ ನಾವು ಮಾಡುತ್ತೇವೆ. ಒಮ್ಮೆ ಇಲ್ಲಿಯ ರುಚಿ ಕಂಡವರು ಮತ್ತೆ ಇಲ್ಲಿಗೆ ಬಾರದೆ ಇರಲಾರರು. ಪ್ರಾನ್ಸ್‌ ರುಚಿಗೆ ಮರುಳಾಗುವವರೇ ಹೆಚ್ಚು’ ಎನ್ನುತ್ತಾರೆ ಸಂತೋಷ್‌.

‘ಇಲ್ಲಿ ಪ್ರಾನ್ಸ್‌ ಪೆಪ್ಪರ್‌ ಫ್ರೈ ತುಂಬಾ ರುಚಿಯಾಗಿರುತ್ತದೆ. ಮಲ್ಲೇಶ್ವರಕ್ಕೆ ಬಂದಾಗಲೆಲ್ಲ ಇಲ್ಲಿ ಬಾರದೇ ಇರುವುದಿಲ್ಲ. ಕೋಳಿ ಸುಕ್ಕ ಕೂಡ ಚೆನ್ನಾಗಿರುತ್ತದೆ ಎನ್ನುತ್ತಾರೆ ಕೆ.ಆರ್‌.ಪುರಂ ನಿವಾಸಿ ದಿವ್ಯಾ.

ಫುಡ್‌ ಫಂಡಾದಲ್ಲಿಯೂ ಆರ್ಡರ್‌ ಮಾಡಬಹುದು. 4 ಕಿ.ಮೀ ಒಳಗೆ  400 ರೂಪಾಯಿಗೂ ಹೆಚ್ಚು ಆರ್ಡರ್‌ ಮಾಡಿದರೆ ಹೋಟೆಲ್‌ನವರೇ ಮನೆಗೆ ತಂದು ಕೊಡುತ್ತಾರೆ.

**

(ಸಂತೋಷ್‌ ಪೂಜಾರಿ, ಶಂಕರ್ ಪೂಜಾರಿ)

**

ರೆಸ್ಟೊರೆಂಟ್‌: ನ್ಯೂ ಫಿಶ್‌ ಲ್ಯಾಂಡ್‌

ವಿಶೇಷ: ಸಿಗಡಿ, ಮಾಂಜಿ, ಕೋಳಿ ಸುಕ್ಕ

ಸಮಯ: ಬೆಳಿಗ್ಗೆ 12ರಿಂದ 4, ಸಂಜೆ 7 ರಿಂದ 11.

ಸ್ಥಳ: ಮಲ್ಲೇಶ್ವರ, ಸಂಪಿಗೆ ರಸ್ತೆ, 6ನೇ ಅಡ್ಡರಸ್ತೆ

ಮಾಹಿತಿಗೆ:  99166 44968

ಒಬ್ಬರಿಗೆ: ₹100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT