ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯ

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಬಸವರಾಜು ಕುಕ್ಕರಹಳ್ಳಿ
ನಾನು, ಊರು ತೊರೆದು ಬಹಳ ವರ್ಷಗಳೇ ಆಗೋಗಿದ್ದವು. ಅತ್ತ ತಿರುಗಿಯೂ ನೋಡುತ್ತಿರಲಿಲ್ಲ. ಆದರೆ, ಅವತ್ತು ಸಾವು; ಹೋಗಲೇಬೇಕಿತ್ತು, ಹೋಗಿದ್ದೆ.
 
ಹೋದರೇನು? ನಾನೂ ಹಳಮರೆಸೋಗಿದ್ದೆ. ಊರೂ ಪೂರ್ತಾ ಗಿಲಾವಾಗೋಗಿ ಗುರುತೇ ಸಿಗದಂತಾಗಿತ್ತು. ಗಲ್ಲಿಗಳಿದ್ದ ಊರು, ತರಿ ತರಿ ಗೋಡೆಗಳ ಸೂರು, ತರಿಯಲ್ಲಿ ತುರಿಕೆ ಕೆರೆದುಕೊಳ್ಳುತ್ತಿದ್ದ ಆಡು, ದನ, ಕುರಿಗಳು ಯಾವೂ ಕಾಣುತ್ತಿರಲಿಲ್ಲ. ತೊಪ್ಪೆ ನೆಲಗಳು, ಅವುಗಳ ಮೇಲೆ ಓಡಾಡುತ್ತಿದ್ದ ಕೋಳಿಗಳೂ ಇರಲಿಲ್ಲ.

ಕೊಟ್ಟಿಗೆಯಲ್ಲಿ ಟಿ.ವಿ.ಗಳು, ತೊಟ್ಟಿಯಲ್ಲಿ ಮೊಬೈಲ್‌ಗಳಾಡುತ್ತಿದ್ದವು. ಎತ್ತಿನಗಾಡಿಯ ಜಾಗದಲ್ಲಿ ಸ್ಕೂಟರ್‌ಗಳು ನಿಂತಿದ್ದವು. ಧಾನ್ಯ ತುಂಬುತ್ತಿದ್ದ ಗುಳಿಗಳು ಸಂಪ್‌ಗಳಾಗಿದ್ದವು. ಬೇಲಿ ವಬ್ಬೆಗಳ ಜಾಗದಲ್ಲಿ ಕಂಪೌಂಡ್‌ಗಳೆದ್ದು, ಗರಡಿ ಬರಡಾಗಿ, ಕಟ್ಟೆ ಕ್ರಿಕೆಟ್ ಪಿಚ್ಚಾಗಿತ್ತು. ಊರು ಇಷ್ಟೆಲ್ಲಾ ಬದಲಾವಣೆಗಳನ್ನು ಕಂಡಿದ್ದರೂ, ಊರಿನಲ್ಲಿದ್ದ ಸಂಪ್ರದಾಯ, ಆಚಾರ, ವಿಚಾರ, ನಂಬಿಕೆಗಳಿಗೆ ಕೊಂಚವೂ ಊನವಾಗಿರಲಿಲ್ಲ.
 
ಆದರೆ, ಅವುಗಳು ಸರಕುಗಳಂತೆ ಮಾರಾಟವಾಗುತ್ತಿರುವುದನ್ನು ಕಂಡು ಹಿರೀಕರು ಘಾಸಿಗೊಂಡಿದ್ದರು. ಮುನಿಯ ತಿರುಗಿಬಿದ್ದಿದ್ದ. 
ಆಗಲೆ ಸಾವಿಗೆ ಬಂದಿದ್ದ ಜನ ಊರಿನ ರಸ್ತೆ, ಮೋರಿ, ಸೇತುವೆ, ಜಗುಲಿಗಳ ಮೇಲೆಲ್ಲಾ ಹಂಡೋಗಿದ್ದರು. ಎಲ್ಲೂ ಕೂರಲು ಜಾಗವಿರಲಿಲ್ಲ. ಆದರೆ ಮುನಿಯನ ಮೊಗಡೊಂದು ಮಾತ್ರ ಖಾಲಿ ಬಿದ್ದಿತ್ತು.

ನಾನು ಕೂರಲು ಅಲ್ಲಿಗೆ ಹೋದೆ. ಹೋಗುತ್ತಿದ್ದಂತೆ! ಇಲ್ಲಿಗೆ ಯಾಕಾದರೂ ಬಂದೆನೋ? ಎನಿಸಿಬಿಟ್ಟಿತು. ಅಲ್ಲಿ ಮುನಿಯ ಜ್ಞಾನ ತಪ್ಪಿ ಬಿದ್ದಿದ್ದ. ಅವನ ತಲದೇಸು ಅವನ ಹೆಂಡತಿ ಗೋಳಾಡುತ್ತಾ ಕುಳಿತಿದ್ದಳು. ನನ್ನನ್ನು ಕಾಣುತ್ತಲೆ ಜೋರೇ ಮಾಡಿದಳು. ‘ಊರಲ್ಲಿ ಸಾವಾದಾಗಲೆಲ್ಲಾ ಇವನು ಇಂಗೆ. ಆರ್ಮನಿ ತಿದಿ ಒತ್ತದಂಗೆ ಒತ್ತದಂಗೆ ರಾಂಗೆ ಆಗೋಯ್ತನೆ. ಮೈಮೇಲಿನ ಲಿಗವೇ ಇಲ್ಲದಂಗೆ ಕುಣಿತನೆ, ಎಲ್ಲರನ್ನೂ ಬಯ್ತನೆ, ಮಕ್ಕಳ ಕೈಲಿ ಹೊಡಿಸ್ಕಂಡು ಸಾಯ್ತನೆ. ಇವರ ಮಧ್ಯದಲ್ಲಿ ನಾನು ಏನು ಮಾಡ್ಕಂಡು ಸಾಯಲಪ್ಪ?’ ಎಂದಳು. ಹಿಂದು ಮುಂದು ಗೊತ್ತಿರದ ನನಗೆ ಏನು ಹೇಳಬೇಕೆಂದು ತಿಳಿಯದೆ, ಮೇಲೆ ಕೆಳಗೆ ನೋಡಾಡುತ್ತಿದ್ದಾಗ, ಅಲ್ಲೆ ಇದ್ದ ಸಿದ್ದಮಾವ ಗುರುತಿಡಿದು ಕರೆದ. ನಾನೂ, ಅವನ ಗುರುತಿಡಿದು ಹತ್ತಿರಕ್ಕೆ ಹೋದೆ.
 
ಅವನು ನನ್ನನ್ನು ಕಂಡವನೆ ಸಂಭ್ರಮಿಸುತ್ತಾ, ಮುಟ್ಟಿ, ತಟ್ಟಿ ‘ಚನ್ನಾಗಿದ್ದೀಯ?’ ಎಂದು ಮೈಸವರಿ, ‘ಏನೊ’ ಎಂದು   ಸುಮ್ಮನಾಗೋದ. ನಾನು ‘ಏನೊ’ ಎನ್ನುವ ಅವನ ನಿಟ್ಟುಸಿರಿನ ಒಗಟ  ಬಿಡಿಸಲಾಗದೆ, ‘ನೀ ಚನ್ನಾಗಿದ್ದೀಯ?’ ಎಂದೆ ಅಷ್ಟೆ. ಅಷ್ಟಕ್ಕೆ ಸಿದ್ದಮಾವ ‘ಏನು ಚಂದವೊ ಏನೊ? ನೀನೇನೊ ಕಣ್ಣಿಗೆ ಮರೆಯಾಗಿದ್ದೀಯ. ನಾವು ಇಲ್ಲೆ ಇದ್ದು ಇವೆಲ್ಲಾನು ಕಣ್ಣಿಂದ ನೋಡಬೇಕಲ್ಲಪ್ಪ’ ಎಂದು ಕಣ್ತುಂಬಿಕೊಂಡು, ಜ್ಞಾನ ತಪ್ಪಿ ಬಿದ್ದಿದ್ದ ಮುನಿಯನ ವಿಷಯ ತೆಗೆದ. ‘ಇವತ್ತು ಇಂಥ ಬಡವರು, ಬಗ್ಗರು, ದಿಕ್ಕಿಲ್ಲದವರು, ಗರೀಬರು ಯಾರೂ ಊರಿಗೂ ಬೇಕಾಗಿಲ್ಲ.

ಊರಿನ ನ್ಯಾಯಸ್ಥಾನಕ್ಕೂ ಬೇಕಾಗಿಲ್ಲ. ಈಗಂತೂ ನ್ಯಾಯಸ್ಥಾನ ಒಬ್ಬರಿಗೊಂತರ ನ್ಯಾಯ ಕೊಡ್ತಾದೆ. ಅಲ್ಲಿ ದೊಡ್ಡವರು, ಚಿಕ್ಕವರು ಎಲ್ಲಾ ಕೂತು ನ್ಯಾಯ ಮಾಡ್ತರೆ; ಮಾಡಲಿ. ಆದರೆ ಅವರು ಎಲ್ಲಾದಕ್ಕೂ ಕೈ ಬಾಯಿನೆ ನೋಡ್ತರೆ. ಕೊಟ್ಟವರ ಕಡೆಗೆ ಹೊಂಟೊಯ್ತಾವರಲ್ಲ, ಇಲ್ದವರು ಏನು ಮಾಡಬೇಕು? ಹಿಂದೆಲ್ಲಾ ಇಂಗೆ ಇತ್ತಾ? ಇದು ಸರೀನಾ?’ ಎಂದು ನನ್ನನ್ನೇ ದೃಷ್ಟಿಸುತ್ತಾ, ಮಾತು ನಿಲ್ಲಿಸಿಬಿಟ್ಟ.

ನನಗೆ ಏನು ಹೇಳಬೇಕೆಂದು ತಿಳಿಯದೆ ಅಳುವಾಡುತ್ತಿದ್ದಾಗ, ಸಿದ್ದಮಾವನೆ, ‘‘ನಿಮ್ಮ ಕನಿಕರ ಇವತ್ತಿನವರಿಗೆ ಇಲ್ಲ ಕಣಯ್ಯ. ಅವತ್ತು ನೀವೂ ಇಂಗೆ ಆಗೋಗಿದ್ರೆ ಆಸ್ಪತ್ರೆಯಿಂದ ಚಾಮನ ಹೆಣ ಊರಿಗೆ ಬತ್ತಿತ್ತ? ಇಲ್ಲೆ ಹೋಗ ಬರಸೂಲಾಗಿದ್ದ ಅವನ್ನ ದೊಡ್ಡಾಸ್ಪತ್ರೆಗೆ ಹೋಗನ್ಗಂಟ ಸತ್ತೊಯ್ತನೆ ಅಂತ ನಮ್ಮಗಳ ಜಮೀನಿನಲ್ಲೆ ಎದ್ದಿದ್ದ ಪ್ರೈವೇಟ್ ಆಸ್ಪತ್ರೆಗೆ ಸೇರಸ್ದ್ರಿ. ಅವರು ಅವನ್ನ ಕೂಡ್ಕಂಡದ್ದೆ ಆಯ್ತು, ಮೂರ್ಜಿನ ಆದರೂ ಏನ್ನೂ ಹೇಳ್ನಿಲ್ಲ. ಆಗ, ನೀವೆಲ್ಲಾ ‘ಯಾಕೆ? ಏನು? ಎತ್ತ?’ ಅಂತ ಕೊಸ್ಚೆನ್ ಮಾಡಿದ ಮೇಲೆ ತಾನೆ ಅವರು ‘ಹಣ ಕಟ್ಬುಟ್ಟು ಹೆಣ ತಕಂಡೋಗಿ’ ಅಂದದ್ದು. ಅದಕೆ ನೀವೂ ಒಪ್ಪನಿಲ್ಲ. ಅವರೂ ಬಗ್ಗನಿಲ್ಲ.

ಆಗ ಊರೆ ಏನ್ಮಾಡ್ತು? ಒಮ್ಮೈಯಾಗಿ ನಿಂತು, ಆಸ್ಪತ್ರೆಗೇ ಪೂಜೆ ಸಾಮಾನು ತರ್ಸಿ, ಅಲ್ಲೆ ಹೆಣಗೆ ಪೂಜೆ ಮಾಡ್ಸಿ, ಕಡ್ಡಿ, ಕರ್ಪೂರ ಅಸ್ಸಿ, ‘ಸ್ವಾಮಿ, ನಮಗೆ ಹೆಣ ಬ್ಯಾಡಿ ನೀವೇ ಇಟ್ಕಳಿ’ ಅಂತ ಹೊರಟ ಮೇಲಲ್ವಯ್ಯ ಅವರೇ ಓಡಿ ಬಂದು – ‘ಅಷ್ಟೊ ಇಷ್ಟೊ ಕೊಟ್ಬುಟ್ಟು ತಕಂಡೋಗಿ ಅಂದದ್ದು?’ ಆಮೇಲೆ ಹೆಣ ತಂದು ಆ ಗಂಡ ಸತ್ತ ಹೆಂಗಸಿನ ಕೈಲಿ ಬಿಡಗಾಸನೂ ಆಕಸ್ದೆ, ಊರೆ ನಿಂತು ಒಪ್ಪ ಮಾಡ್ತು. ಯಾಕೇಳು?  
 
ಆಗ ಊರು ಅಂಗಿತ್ತು. ನಮಗೆ ಬಡತನವೆ ಸಿರಿತನವಾಗಿತ್ತು. ಎಲ್ಲ ಕೆಲಸಗಳೂ ಊರೊಟ್ಟಿನವೆ ಆಗಿದ್ದೊ. ಎಲ್ಲರೂ ಎಲ್ಲರ ಕಷ್ಟ ಸುಖಕ್ಕೂ ಭಾಗಿಯಾಗ್ತಿದ್ರು. ಮದುವೆ, ಮುಂಜಿ, ಹಬ್ಬ, ಹರಿದಿನಗಳೆಲ್ಲಾ ಒಟ್ಟಾಗೆ ನಡಿತಿದ್ದೊ. ಸಾವಾದರಂತೂ, ಎಲ್ಲರ ಮನೆ ಚಿಲಕಗಳೂ ಪಟಪಟನೆ ಕಳಚ್ಕಂಡು, ಮನೆಗೊಂದಾಳು ನಿಂತು, ಗುಂಡಿ ತೋಡಿ, ಕುರ್ಜು ಕಟ್ಟಿ, ಶವಸಂಸ್ಕಾರ ಮಾಡಿ  ಮುಗಿಸೋವರೆಗೂ ಯಾರೂ ಕಾಲೆದ್ದು ಕಡಿತಿರ್ನಿಲ್ಲ. ಊರೆ, ತಲೆ ತಲೆಮಾರುಗಳು ಉರುಳಿದರೂ, ಒಂದೆ ತಲೆಮಾರೇನೊ? ಆನ್ನುವಂತೆ, ಎಲ್ಲಾ ಅಂಗಾಂಗಳೊಡಗೂಡಿದ ಒಂದೇ ದೇಹದಂತಿದ್ದು ‘ನಾವಾದರೆ ನಮಗೂ’ ಎನ್ನುವ ತತ್ವ ಹಿಡಿದು ನಡಿತಿತ್ತು. 
 
ಅದಕ್ಕೆ, ಇಲ್ಲಿ ಮುನಿಯನಂತವನೂ ಒಕ್ಕಲಾಗಿದ್ದ. ಅವನಿಗೂ ಒಂದು ಸೂರಿತ್ತು. ಅವನೂ, ‘ನಾವಾದರೆ ನಮಗೂ’ ಎನ್ನುವ ತತ್ವ ಹಿಡಿದು, ಊರು ಆಕಿದ ಗೆರೆ ದಾಟದೆ ನಡಿತಿದ್ದ. ಊರಲ್ಲಿ ಯಾರದೇ ‘ಕೂಗು’ ಕೇಳಿದರೂ ಸಾಕು, ‘ಅದು ನನಗೇ’ ಅಂತ ಊರಿಗೆ ಮೊದಲಾಗೋಗಿ ಅಲ್ಲಿರ್ತಿದ್ದ. ಕೂಲಿ ಬಿಟ್ಟು ನಿಲ್ತಿದ್ದ. ತನಗಾಗದಾಗ ಬದಲಿಗೆ ಮಕ್ಕಳನ್ನಾದರೂ ಕಳಿಸ್ತಿದ್ದ. ಅಂತವನ ಮನೇಲಿ ಸಾವಾದಾಗ, ಯಾರೂ ಬರ್ನಿಲ್ಲ ಕಣಯ್ಯ’’ ಎಂದು ಒತ್ತರಿಸಿ ಬಂದ ದುಃಖ ತಡೆಯಲಾಗದೆ, ಕ್ಷಣ ಮಾತು ನಿಲ್ಲಿಸಿ, ಮತ್ತೆ ಕಣ್ಣೀರಾಕುತ್ತಲೆ – ‘‘ಅವನಪ್ಪ ಸತ್ತು ಮನೇಲಿ ಗೋಳ್‌ಗರೆದರೂ, ಯಾರ ಮನೆ ಚಿಲಕಗಳೂ ಕಳಚ್ಕಳ್ಲಿಲ್ಲ.
 
ಯಾರೂ ಬಂದು ‘ನಾವಿದ್ದೀವಿ’ ಅನ್ನಲಿಲ್ಲ. ಅವರಪ್ಪ ಎಂತವನು ಅಂದರೆ, ಕಷ್ಟ ಅಂದರೆ ಇವ್ನಿಗಿಂತಲೂ ಒಂದು ಕೈ ಮುಂದೇನೆ. ಅವನು ಅದೆಷ್ಟು ಕಾಡೆಣಗಳ್ನ ಕಾದು ಊರೆಣಗಳ್ನ ಸುಟ್ಟಿದ್ದನೊ? ನಾವೆಲ್ಲಾ ನೀರಿಗೆ ಬಿದ್ದೆವು, ನೇಣಿಗೇರಿದವು, ನಿಗುರಿಕೊಂಡವ್ಕೆಲ್ಲಾ ಹೆದರಿದರೆ, ಅವುನೆ ಮುಂದು ನಿಂತು ದಪನ್ ಮಾಡ್ತಿದ್ದ. ಅಂತವನು ಸತ್ತಾಗ ಯಾರೂ ಬರ್ನಿಲ್ಲ. ಪಾಪ ಮುನಿಯ ನಾನು ಎಲ್ರಿಗೂ ಮಾಡ್ದೆ, ನನಗೆ ಯಾರೂ ಇಲ್ವಲ್ಲ? ಧರ್ಮ, ಕರ್ಮ, ನೀತಿ, ನಿಯತ್ತುಗಳೆಲ್ಲಾ ಎಲ್ಲಿಗೋದೊ? ಎಂದು ಹೆಣ ಇಟ್ಕಂಡು ಪೇಚಾಡಿ, ಪರದಾಡಿದರೂ, ಯಾರೂ ಬರ್ನಿಲ್ಲ.  
 
ಆದರೂ, ಅವನು ಬುಡ್ದೆ ಎಲ್ಲರ ಮನೆ ಬಾಗಿಲಿಗೂ ಹೋದ. ಎಲ್ಲರ ಕದಗಳನ್ನೂ ಬಡ್ದ. ‘ಅಣ್ಣಾ’ ಎಂದ. ‘ಅಪ್ಪಾ’ ಎಂದ. ಯಾರೂ ಉಸುರು ಬುಡ್ನಿಲ್ಲ. ತಬಲದವನ ಮನೆಗೋದ. ಅವನು ತಬಲ ಬಿಗಿಸಿಲ್ಲ ಎಂದ. ಆರ್ಮೊನಿಯವನ ಕರೆದ. ಅವನು ಆರ್ಮೊನಿ ಸರಿ ಇಲ್ಲ ಎಂದ. ಹಾಡುವವರ ಕೂಗಿದ. ಉಸಾರಿಲ್ಲ ಎಂದರು. ಕೆಲವರು ಇದ್ದೂ ಇಲ್ಲ ಅನಸ್ಕಂಡರು.
 
ಕಾಡಿ, ಬೇಡಿದ ಮೇಲೆ ತೆಳ್ಳತೆಳ್ಳಗೆ ಬಂದ್ರು. ಕೈ ಕಾಲಿಡಿದಾಗ ಆರ್ಮೊನಿ, ತಬಲ ತಂದ್ರು. ಆದರೆ ಹಾಡುವವರೇ ಬರಲಿಲ್ಲ. ಇದ್ದವರೇ ಎಲ್ಲವನ್ನು ಹಸಿಬಿಸಿಯಾಗಿ ಮುಗಿಸಿ, ಹೆಣ ಹೊರಲೂ ನಿಲ್ಲದೆ ಹೊರಟೇಹೋದರು. ಮುನಿಯ ನೆಂಟರಿಷ್ಟರನ್ನೆ ಕಟ್ಕೊಂಡು ಕಾರ್ಯ ಮುಗಿಸಿ, ಯಾರ ಮೇಲೂ ಹಗೆ ಸಾಧಿಸದೆ ಸವುರಿಸ್ಕೊಂಡು ಸುಮ್ಮನಿದ್ದ. ಇವನ ಅವ್ವ ಸತ್ತಾಗಲೂ ಇದೆ ಆಗೋದಾಗ ನಿಚಾಯಿಸ್ಕಬುಟ್ಟ. ಅವತ್ತು ಅವರವ್ವನ ಹೆಣ   ಸಾಗಿಸೋದೇ ಇವನಿಗೆ ದುಸ್ತರವಾಗೋಯ್ತು. ಹೆಗಲು ಕೊಡವ್ರೆ ಇಲ್ಲದೆ ಹೆಣ ಮಖಾಡೆಯಾಗುವುದರಲ್ಲಿತ್ತು. ಆಗ್ಲೀಗ ಮುನಿಯ ಊರಿಗೇ ವೈರಿಯಾಗೋದ. ತಗ್ಗಿ ಬಗ್ಗಿ ನಡಿತಿದ್ದವನು ಮಸಿಯಕ್ಕೆ ಶುರುಮಾಡ್ದ. ಈಗಂತೂ, ಊರಲ್ಲಿ ಸಾವಾಗಂಗಿಲ್ಲ, ಭಜನೆ ಸದ್ದು ಕೇಳ್ತಿದ್ದಂಗೆ ರೊಚ್ಚಿಗೆದ್ದು ಬೀದಿಗೆ ಬಂದುಬುಡ್ತನೆ. ಇವತ್ತೂ, ಅದೆ ಆದದ್ದು. 
 
ಸಾವಿನ ಮನೆಯವರು ಹಣವಂತರು. ಮಬ್ಬಿಗೇ ಕುಡ್ತ ತರಿಸಿಟ್ಕಂಡಿದ್ರು. ವಾಸನೆ ಹಿಡಿದು ಜನಜನವೇ ಕಣ್ಣುಜ್ಜಿಕೊಂಡು ಅಲ್ಲಿಗೆ ಹೋಯ್ತಿತ್ತು. ಹುಡುಗರ ಸಟ್ಟು ಆಗಲೆ ಅಲ್ಲಿತ್ತು. ಇದನ್ನ ಅವನ ಕೈಲಿ ಸಹಿಸ್ಕಳಕ್ಕಾಗಲಿಲ್ಲ. ಅವರೆಲ್ಲಾ ಮರಿಗಳಂತೆ ಕುಡಿದು, ಕುಡಿದು, ಹುರುಪಿನಿಂದ ಹೊರಕ್ಕೆ ಬರೋದನ್ನ ಕಂಡು ತಡ್ಕಳಕ್ಕಾಗ್ನಿಲ್ಲ. ಹಳೆದೆಲ್ಲಾ ನೆನಪಾಗಿ, ಕಿಚ್ಚು ಹೆಚ್ಚಾಗಿ ಬೀದಿಗೆ ಬಂದ್ಬುಟ್ಟ. ನಡು ರಸ್ತೆಲೆ ನಿಂತು, ಎಲ್ಲರನ್ನು ಹೀನಾಮಾನ ಬಯ್ಯಕ್ಕೆ ಶುರುಮಾಡ್ದ. ಆದರೂ, ಒಬ್ಬರೂ ಮಾತಿಗೆ ಬರಲಿಲ್ಲ. ಯಾರೂ, ಕ್ಯಾರೆ ಅನ್ನಲಿಲ್ಲ.
 
ಬದಲಿಗೆ ಕುಡ್ದಿದ್ದವರೆಲ್ಲಾ ಸೇರ್ಕಂಡು, ಅಮಲಿನಲ್ಲಿ ಅವನನ್ನ ಕಿಚಾಯಿಸಕ್ಕೆ ಶುರುಮಾಡಿದರು. ‘ಅವನ್ದೇನು? ಅವನಿಗೆ ಎಂಥ ನ್ಯಾಯ ಬೇಕಂತೆ? ಇವತ್ತು ಯಾರು ನ್ಯಾಯವಾಗವರೆ? ನಾಯಕರುಗಳೆ ನಿಂತತಾವೆ ನಿಲ್ತಿಲ್ಲ! ಇನ್ನು ನಮ್ದು, ನಿಮ್ದೇನು? ನಡೀರಯ್ಯ’ ಅಂದರು. ಕೆಲವರು ‘ನೋಡಿ ನಮಗೆ ಅವನಪ್ಪ ಹಾಕಿದ ಆಲದ ಮರವೂ ಬೇಡ, ಅವರವ್ವ ನೆಟ್ಟ ವಂಗೆ ಗಿಡವೂ ಬೇಡ’ ಎಂದು ಅವನನ್ನು ಉರುಬಿಯೇಬಿಟ್ರು.     
 
ಇವರೆಲ್ಲಾ ಇವನನ್ನು ಇಂಗೆ ಕೇವಲವಾಗಿ ಕಾಣುತ್ತಿದ್ದದ್ದು, ಮುನಿಯನಿಗೆ ಬಲವಾದ ನೋವನ್ನೇ ಕೊಟ್ಬುಡ್ತು. ಈ ಅವಮಾನ ಕ್ರಮೇಣ ರೋಸವಾಗಿ ಅವನನ್ನ ಅವನಾಗಿರಲು ಬಿಡಲೇ ಇಲ್ಲ. ಕಡೆ ಕಡೆಗೆ ಊರೇ ಒಂದಾದರೆ, ಇವನೇ ಒಂದಾಗಿ ಹುಚ್ಚೆದ್ದು ನಿಂತುಬಿಟ್ಟ. ನಮ್ಮಂತ ವಯಸ್ಸಾದವರು ಅವನನ್ನು ನೋಡಿ ಅಯ್ಯೊ ಅನ್ನುವುದಬಿಟ್ಟರೆ ನಮ್ಮ ಕೈಲೂ ಏನೂ ಆಗ್ತಿಲ್ಲ.

ಇನ್ನೂ ಆ ಗಿರಿಯನ್ನ ಹೇಳು. ಅವನೇ ಯಜಮಾನನಾಗಿದ್ರೆ ಇವನಿಗೆ ಈ ಸ್ಥಿತಿ ಬರ್ತಿರ್ನಿಲ್ಲ. ಅವನದು ಎಲ್ಲರಿಗೂ ಒಂದೆ ನ್ಯಾಯ. ನನ್ನ ಬೆಣಚುಕಲ್ಲಿನಂತ ದೇಹ ಇರುವವರೆಗೂ ಅದೇ ನ್ಯಾಯ ಮಾಡ್ತಿನಿ ಅಂತಿದ್ದ. ನಾವೂ, ನಂಬಿ ನೆಮ್ಮದಿಯಾಗಿದ್ದೊ. ಪಾಪ ಈಗ ಅವನಿಗೆ ಸಕ್ಕರೆ ಕಾಯಿಲೆ. ಅದು ಬಡವರ ಕಾಯಿಲೆಯಲ್ಲ ಅಂತಿದ್ದ ಅವನಿಗೇ ಅದು ತಗುಳಿ, ಕಂಗೆಟ್ಟೋಗವನೆ. ಅನ್ನ ಆಹಾರಾದಿಗಳಿಡಿಯದೆ ಸೊರಗಿ ಮೂಲೆ ಹಿಡುದ್ಬುಟ್ಟವನೆ.     
 
ಆದರೂ, ಮುನಿಯ ಬುಡದೆ ಅಲ್ಲಿಗೂ ಹೋದ. ತನಗಾಗಿದ್ದ ನೋವ್ನೆಲ್ಲಾ ಅವನ ಮುಂದೆ ಚಲ್ಲಿ, ಕಣ್ಣೀರಾಕಂಡು, ‘ಎದ್ದು ಅಲ್ನೋಡೋಗು ಮಾವ. ಎಲ್ಲಾ ಕೈ ಬಾಯಿ ಸನ್ನೆಲೆ ನಡಿತಾವೆ. ಎಲ್ಲರಿಗೂ ಟೀ, ಬೀಡಿ, ಬೆಂಕಿಪಟ್ಟಣ, ಕುಡಿಯವರಿಗೆ ಕುಡ್ತ, ತಿನ್ನಕ್ಕೆ ಪಲಾವ್ನೇ ತರಿಸಿ ಕೊಡ್ತಾವರೆ. ಇರವರು ಇಂಗೆ ಅರುಗೊಲ್ಸ್‌ಬುಟ್ರೆ, ಇಲ್ದವರು ಏನು ಮಾಡಬೇಕು? ಇವತ್ತು ಊರಲ್ಲಿ ಸಾವು ಹಬ್ಬವಾಗೋಗದೆ. ನಾವು ಸತ್ತವರ ಮನೇಲಿ ನೀರನೂ ಕೇಳದೆ ಕಾರ್ಯ ಮಾಡ್ತಿದ್ದೊ. ಆದರೆ ಇವತ್ತು ಗುಂಡಿ, ಬಿದುರು, ಭಜನೆ ಎಲ್ಲದಕ್ಕೂ ಕಾಸ್ನೆ ಮುಡಿಸಬೇಕಲ್ಲ! ನನ್ನಂತವನು ಏನು ಮಾಡಬೇಕು? ಧರ್ಮ,ಕರ್ಮ ಎಲ್ಲಿಗೋದೊ?’ ಅಂತ ಕೇಳ್ದ.   
 
ಆಗ ಗಿರಿಯ ಧರ್ಮವನ್ನೆ ಹಿಡ್ದು, ‘ಆಗ ಊರು ಸೌದೆ ಕಟ್ನಂಗಿತ್ತು. ಧರ್ಮ, ಕರ್ಮ ಏರು ಪೇರು ಆಗ್ದಂಗೆ ಎಲ್ಲಾ ನಡಿತಿತ್ತು. ಒಂದೇ ಪಕ್ಷವಾಗಿತ್ತು; ಯಾವ ಸೋಂಕಿಗೂ ತಡಂಗಾಗಿತ್ತು. ಆಗ ಓದಿದವರೆ ಅಲ್ವ ‘ಊರಿಗೆ ಹೊಸ ಗಾಳಿ ಬೀಸ್ಲಿ ಬುಡಿ’ ಅಂದವರು. ನಾವೆಲ್ಲ ಸುಮ್ನಾಯ್ತಿದ್ದಂಗೆ, ಯಾರ್ಯಾರೊ! ವರಸೆಯೇ ಇಲ್ಲದವರೆಲ್ಲಾ ಊರಿಗೆ ನುಗ್ಬುಟ್ರು. ಬಂದವರು ಎಲ್ಲರ ಬಾಯಿಗೂ ಬೆಲ್ಲ ಹಾಕಿ, ಊರ ಅರಳಿ ಮರದಮೇಲೆ ಒಂದೇ ಆಡ್ತಿದ್ದ ಸಿದ್ದಪ್ಪಾಜಿ ಧಾಳದ ಪಕ್ಕಕ್ಕೆ ಅವುರ ಬಾವುಟ ತಂದು ನೆಟ್ಬುಟ್ರು. ಅವತ್ತೆ ಧರ್ಮ ಕರ್ಮವೆಲ್ಲಾ ಸತ್ತೋದೊ’ ಅಂದ. 
 
ಮುನಿಯ ‘ಅಂಗಂದರೆ ಎಂಗೆ ಮಾವ? ಈಗ ಊರ್ನ ಕಣ್ಣಿಂದ ನೋಡಕ್ಕಾಗಲ್ಲ. ಕಣ್ಣೆದುರಿಗೇ ಕಂಡವರ ಕೋಳಿಗಳನ್ನ ಗಂಟಾಗೋಸವಾಗಿ ಹಿಡ್ದು ತಿಂದ್ರೂ, ಯಾರೂ ಕೇಳ್ತಿಲ್ಲ. ಹಬ್ಬ, ಹರಿದಿನಗಳು ಕುಡುಕರ ಪಾಲಾಗವೆ. ಎಲ್ಲದ್ಕೂ ದುಡ್ಡು ತೆರಬೇಕಾಗದೆ. ಇವರನ್ನ ಹದ ಮಾಡಬೇಕಾಗಿರೊ ಮುಖಂಡರೂ ಸುಮ್ನವರಲ್ಲ!’
 
‘ಯಾರಿಂದಲೂ ಏನೂ ಮಾಡಕ್ಕಾಗಲ್ಲ. ಹಾಲು ಹಾಲಿನಂಗಿದ್ರೆ ಏನಾದರೂ ಮಾಡಬಹುದು. ಅದಕೆ ಎಂತದೇ ಉರಿ ಕೊಡು ಒಡಿಯಲ್ಲ. ಉಕ್ಕು ಬತ್ತದೆ ಇಳಿಸ್ಕಬಹುದು. ಆದರೆ ಹಾಲೇ ಕೆಟ್ಟೋಗದಲ್ಲ? ಉರಿ ಕೊಡ್ತಿದ್ದಂಗೆ ಒಡ್ದೆ ಹೋಯ್ತದೆ. ಹೇಳಿ, ಕೇಳಿ ಇದು ಕೊಡು ತಕೊ ಕಾಲ! ಎಲ್ಲರೂ ತೆರಲೇಬೇಕು’ ಎಂದು ಅಳುವಾಡುತ್ತಲೆ, ಅರವಳಿಕೆ ಮದ್ದು ತೆಗೆದುಕೊಂಡವನಂತೆ ಅವನೂ ಕೈ ಚಲ್ಲಿ ಸುಮ್ಮನಾಗೋದ. 
 
ಇದ್ದೊಂದು ಭರವಸೆಯೂ ಇಲ್ಲವಾದಾಗ, ಇನ್ನು ಮುನಿಯನಿಗಿಲ್ಲೇನು ಕೆಲಸ. ಅಲ್ಲಿ ನಿಲ್ಲದೆ ಕೈ ಹೊಸೆಯುತ್ತಾ ಹೊರಕ್ಕೆ ಬಂದುಬಿಟ್ಟ. ನಿಂತು, ಮತ್ತೆ ತನ್ನನ್ನು ಹಿಂಡುತ್ತಿದ್ದ ಸಾವಿನ ಮನೆ ಕಡೆ ನೋಡಿದ. ಅಲ್ಲಿ ಜನ ಗಿಜುಗುಡುತ್ತಲೇ ಇದ್ದರು. ಎಲ್ಲಾ ಕುಡಿದು ವಾಲಾಡುತ್ತಿದ್ದರು. ಅಲ್ಲಿ ಮರಿನಿಂಗನೂ ಇರುವುದನ್ನು ಕಂಡು ದಂಗಾಗೋದ. ಅವನು ನಮ್ಮ ಮರಿನಿಂಗನೆ!? ಎಂದು ಮತ್ತೊಮ್ಮೆ ನೋಡಿದ. ಹೌದು ಅವನು ಮರಿನಿಂಗನೆ! ಮುನಿಯ ಇನ್ನೇನು ಅವನ ಮೇಲೂ ಸಿಟ್ಟಿಗೇಳಬೇಕು; ಅಷ್ಟರಲ್ಲಿ ಮರಿನಿಂಗನೆ ಕುಡಿದಿದ್ದ ಪುಂಡನೊಬ್ಬನ ಮೇಲೆ ಜಗಳಕ್ಕೆ ಬಿದ್ದದ್ದನ್ನು ಕಂಡ.

ಮರಿನಿಂಗ ರಾಂಗಾಗಿ, ‘ಹೇ ನನ್ನೇನ್ಕಂಡಿದ್ದೀಯ? ನಾನು ಗಿರಿಯಣ್ಣನ ಶಿಷ್ಯ. ನಾನು ನನ್ನುದ್ದ ಹೆಂಡ ಕುಡ್ದು ಹೆಂಡದಲ್ಲೆ ತಿಕ ತೊಳ್ದಿರವನು. ಯಾರತ್ರನೂ ಕೈಯೊಡ್ಡಿಲ್ಲ. ನಾ ಕುಡ್ದಿರದ ನಿ ಮೂಸಿ ನೋಡಿದಯೊ ಇಲ್ವೊ? ನನ್ನ ಲಂಗೋಟಿಗೆ ಸಮವಿಲ್ಲದ ನೀನೂ, ನನ್ನ ಕುಡಿಯಕ್ಕೆ ಕರಿಯಂಗಾಗೋದೆ! ನೋಡು ಎಂಗಾಗೋಯ್ತು ನಮ್ಮೂರು?’ ಎಂದು ಗರಂ ಆದುದನ್ನು ನೋಡಿ, ಉತ್ತೇಜಿತನಾದ ಇವನು, ಇಲ್ಲಿಂದಲೇ ‘ಹೇ’ ಎಂದು ಕೂಗಾಕಿದ. ಹಾರುತ್ತಾ, ಚೀರುತ್ತಾ ಮತ್ತೆ ಬೀದಿಯಲ್ಲಿ ನಿಂತು ಬೈಯ್ಗುಳ ಶುರುಮಾಡಿದ. ಹೊತ್ತು ನೆತ್ತಿಗೇರಿದರೂ ಬಯ್ಯುತ್ತಲೇ ಇದ್ದ. ಹಾದಿರಂಪ, ಬೀದಿ ರಂಪ ಮಾಡುತ್ತಲೇ ಇದ್ದ.

ಒಂಟಿಯಾಗಿ ಬೀದಿಯಲ್ಲಿ ನಿಂತು ಸಂಕಟಪಡುತ್ತಿರುವ ಗಂಡನನ್ನು ನೋಡಲಾಗದೆ ಅವನ ಹೆಂಡತಿಯೇ ಬಂದಳು. ‘ಸುಮ್ಮನೆ ಯಾಕೆ ದಣಿವು, ಬಾ’ ಎಂದು ಕೈ ಹಿಡಿದಳು. ಬರದಿದ್ದ ಅವನನ್ನು ‘ಸುಮ್ಮನೆ ವಡಿಸ್ಕಂಡು ಸಾಯ್ಬೇಡ ಬಾ’ ಎಂದು ಎಳೆದುಕೊಂಡೋದಳು. ಅಷ್ಟು ದೂರ ಹೋದವನು ಅವಳಿಂದ ಬಿಡಿಸಿಕೊಂಡು ಮತ್ತೆ ಬಂದುಬಿಟ್ಟ. ಕರೆದೋದರೂ, ತಿರುಗಿ, ತಿರುಗಿ ಬರುತ್ತಲೇ ಇದ್ದ.        
 
ಇದನ್ನು ನೋಡಿ ನೋಡಿ ಸಾಕಾಗಿ ಅವನ ಮಕ್ಕಳೇ ಬಂದರು. ಇವನು ಅವರ ವಿರುದ್ಧವೇ ತಿರುಗಿ ಬಿದ್ದ. ‘ನನ್ನನ್ಯಾಕೆ ಕರೀತೀರಿ ಅಲ್ಲಿಗೋಗ್ರೊ. ನಮ್ತಾತ ಅಜ್ಜಿ ಸತ್ತಾಗ ನೀವೆಲ್ಲಾ ಇಂಗೆ ಸೇರಿ ಯಾಕೆ ವಪ್ಪ ಮಾಡ್ನಿಲ್ಲ? ಅಂತ ಕೇಳ್ರೊ. ನಾನು ಊರಿಗೆ ಒಕ್ಕಲಲ್ವ? ವರಿವಟ್ಟ ಕೊಡ್ತಿರ್ನಿಲ್ವ? ಎಲ್ಲರ ಹೆಣಾನು ಕಾದ ನಮ್ಮಪ್ಪನ ಹೆಣಾನೆ ಕಾಡೆಣ ಮಾಡ್ಬುಟ್ರು. ಎಲ್ಲಾ ಸೇರಿ ಅವನಿಗೆ ಕುರ್ಜು ಕಟ್ಟಿ ಪೂಜೆ ಪುನಸ್ಕಾರ ಮಾಡ್ದೆ, ಅವನ್ನ ಬಿಕಾರಿ ಮಾಡ್ಬುಟ್ರು. ಇದು ಸರೀನಾ? ಸರಿನೇನ್ರೊ’ ಎಂದು ಕಣ್ಣೀರಿಟ್ಟ. 
 
ಆಗ ಮಕ್ಕಳೇ ಸಮಾಧಾನ ಮಾಡಿಕೊಂಡು, ಅವನನ್ನೂ ಸಮಾಧಾನ ಮಾಡಿ ಕರ್ಕಂಡೋದ್ರು. ಮುನಿಯ ಕ್ಷಣ ಸುಮ್ಮನಿದ್ದವನು, ಜನರ ಓಡಾಟ, ಗಲಗು ಗದ್ದಲ ಹೆಚ್ಚಾದಂತೆ ಮತ್ತೆ ನಿಗುರಿಕೊಂಡು ಎದ್ದುಬಿಟ್ಟ. ತಡೆದ ಮಕ್ಕಳಿಗೆ ‘ನೋಡ್ರೊ, ನೋಡ್ರೊ ನೀವೆ ನೋಡ್ರೊ, ನಮ್ಮ ಸಾವು ಸಂಕಟಕ್ಕೆ ಬರದಿದ್ದವರೆಲ್ಲಾ ಇವತ್ತು ಎಂಗೆ ಕರಿದಿದ್ರೂ ಹೊಯ್ತಾವರೆ! ಇದಕೆ ನನಗೆ ಹೊಟ್ಟೆ ಉರಿಯಲ್ವೇನ್ರೊ?’ ಎಂದ.   
ಆಗ ಸಿಟ್ಟಿಗೆದ್ದ ಮಕ್ಕಳು ‘ಸುಮ್ಮು ಸುಮ್ಮನೆ ಕರದ್ರೆ ಬತ್ತರಾ? ಅವರಂಗೆ ನೀನೂ ದುಡ್ಡು ಕರ್ಚ್‌ ಮಾಡು ಬತ್ತರೆ’ ಅಂದರು.  
ಮುನಿಯ ಸೆಟೆದವನೆ ‘ಥೂ ಶಂಡ ನನ್ನ ಮಕ್ಕಳೆ’ ಎಂದು ಉಗಿದ.
ಅಂಗಾದರೆ ಊರಲ್ಲಿ
ಮನೆಗೊಂದಾಳು 
ತಲಾಗೊಂದು  ಮಾತು 
ಕೊಟ್ಟು ಈಸ್ಕೊಳೊ ಬುದ್ಧಿ ಇತ್ತಲ್ಲ 
ಅದು ಬ್ಯಾಡ್ವ?  
ಸಾಟಿಗೆ ಸಾಟಿ ಆಗ
ಊರನ್ನೆ ಎಂಗಿಟ್ಟಿತ್ತು? 
ಈಗ ಅದೆಲ್ಲಿಗೋಯಿತು? 
ಇವತ್ತು ಯಾವುದಕ್ಕೂ, 
ಕೈ ಬಾಯಿ ನೋಡೊ ಇಲ್ಲಿ 
ಮುಯ್ಯಿಗೆ ಮುಯ್ಯಿ ಇತ್ತಲ್ಲ ಅದೆಲ್ಲಿ?
ಹೆಣಿಗೂ ದುಡ್ಡು ಮುಡ್ಸೊ ಊರಲ್ಲಿ 
ನನ್ನಂತ ಬಡವ ಬದುಕಂಗಿಲ್ವ?  
ಬದುಕಂಗಿಲ್ವೇನ್ರೊ ಎಂದು ಕೂಗಾಡಿದ.

ಆದರೂ, ಮಕ್ಕಳು ತಾಳ್ಮೆಯಿಂದಲೆ ‘ಆ ಕಾಲವೆಲ್ಲಾ ಆಗೋಯಿತು. ಈಗ ಏನಿದ್ರೂ ದುಡ್ಡು; ದುಡ್ಡಿರವರಿಗೆ ಜನ. ಅವರು ಜನಾನು ಕಟ್ತರೆ ಊರ್ನೂ ಆಳ್ತರೆ. ನಿನ್ನದೇನು ಬೇಯಲ್ಲ’ ಎಂದರು. ಮಕ್ಕಳ ಈ ನಿಕೃಷ್ಟ ಮಾತಿಗೆ ಮುನಿಯ ಸಿಟ್ಟಿಗೆದ್ದು ಮತ್ತೆ ಹೊರಟುಬಿಟ್ಟ. ಇವನ ಜೊತೆ ಆಡಿ ಆಡಿ ಹೈರಾಣಾಗೋಗಿದ್ದ ಮಕ್ಕಳು ‘ಇವನ್ನನ್ನ ಇಂಗೆ ಬುಟ್ರೆ ಊರಲ್ಲಿ ನಮ್ಮ ಮಾನ ಉಳಿಯಲ್ಲ, ನಾವು ತಲೆ ಎತ್ಗ ತಿರುಗಕ್ಕಾಗಲ್ಲ’ ಎಂದು ಅವನನ್ನು ಅನಾಮತ್ತಾಗಿ ಎತ್ತಿಕೊಂಡು ಬಂದು ಮನೇಲಿ ಕೆಡ್ಗಿ, ತಡೆಯಲು ಬಂದ ತಾಯಿಯನ್ನೂ ತಳ್ಳಿ, ಮುನಿಯ ಜ್ಞಾನ ತಪ್ಪುವಂತೆ ಹೊಡೆದು, ಬಡಿದು, ಅವನು ಮೇಲೇಳದಂತೆ ಉಳ್ಳಾಕ್ಬುಟ್ರು’’ ಎಂದು ಸಿದ್ದಮಾವ ಮುನಿಯನ ಬಗ್ಗೆ ಮರುಗುತ್ತಾ, ಕಣ್ಣಲ್ಲಿ ಎದ್ದ ನೀರನ್ನು ತೊಡೆದುಕೊಂಡ. ನಾನೂ, ಬೇಜಾರುಮಾಡಿಕೊಂಡು ‘ಎಂಗಿದ್ದ ಊರು! ಎಂಗಾಗೋಯ್ತಲ್ಲ!?’ ಎಂದು ಮರುಗುತ್ತಲೇ, ಅವತ್ತು ಸಾವು ಮುಗಿಸಿಕೊಂಡು ಬಂದುಬಿಟ್ಟೆ.
 
ಮತ್ತೆ ತಿಥಿಗೆ ಹೋದಾಗ! ಊರಿನ ಕತೆಯೇ ಬೇರೆಯಾಗೋಗಿತ್ತು. ಅದ್ಯಾವ ಯಾಸವೊ, ವಿಪರ್ಯಾಸವೊ, ಊರಿಗೆ ಒದಗಿ ಬಂದು, ಅವತ್ತೂ ಊರಲ್ಲಿ ಒಂದು ಸಾವಾಗೋಗಿತ್ತು. ಎಲ್ಲರೂ ಅಲ್ಲಿಗೆ ಹೊರಟೋಗಿದ್ದರು. ಸಿದ್ದಮಾವ ಕುಳಿತಲ್ಲೆ ಕುಳಿತು ಶಾಂತಚಿತ್ತನಾಗಿ, ‘ಕಾಯಿ ದೋರಾಗಿದ್ದಾಗಲೆ ಇಳುಕಿ ಹಣ್ಣು ಮಾಡಬೇಕಿತ್ತು. ತೊಟ್ಟು ಕಳಚಿ ಬೀಳುವವರೆಗೂ ಬಿಡಬಾರದಿತ್ತು. ಈಗ, ಕೊಟ್ಟರಷ್ಟೆ ಅಲ್ಲ ಫಲ! ಬಿಟ್ಟು ಹೋಗುವುದೇ ಫಲಾ ಫಲ’ ಎಂದು ಏನೇನೊ ಬನಿಯಾಗಿ ಮಾತನಾಡುತ್ತಿದ್ದ. ಜ್ಞಾನತಪ್ಪಿ ಬಿದ್ದಿದ್ದ ಮುನಿಯ ಎದ್ದು ಕುಳಿತಿದ್ದ. ಏನೂ ಮಾತನಾಡದೆ ಮೌನವಾಗಿದ್ದ.      
 
ಆ ಸಾವು ಊರಿನದ್ದಲ್ಲ; ಹೊರಗಿನದ್ದು. ಸತ್ತಿದ್ದವರು ಎಲ್ಲಿಂದಲೋ ಬಂದು ಊರ ಹೊರಗೆ ಮನೆ ಮಾಡಿಕೊಂಡಿದ್ದರು. ಅವರ ಶವವನ್ನು ನೋಡಲು ನಾನೂ ಅಲ್ಲಿಗೆ ಹೋದೆ. ಅಲ್ಲಿ ಶವದ ಕಾಲನ್ನು ಮುರಿಯದೆ, ಹಣೆಗೆ ಭಸ್ಮಧರಿಸದೆ, ಹೂವಿಡದೆ, ತಲದೇಸು ದೀಪವನ್ನೂ ಹಚ್ಚದೆ ಹಾಗೇ ಇಟ್ಟಿರುವುದನ್ನು ಕಂಡು ಊರಿನವರೆಲ್ಲಾ ತಬ್ಬಿಬ್ಬಾಗಿದ್ದರು. ‘ಯಾಕೆ? ಮನೆಯವರಿಲ್ಲವಾ? ಅಥವ ಅವರಿಗೆ ಇವೆಲ್ಲಾ ತಿಳಿದಿಲ್ಲವಾ?’ ಎಂದು ಸುತ್ತಾ ಕಣ್ಣಾಡಿಸುತ್ತಿದ್ದರು. ಆಗ ಅವರಿಗೆ ಮನೆಯಲ್ಲಿ ದೀಪ, ಬತ್ತಿ ಎರಡೂ ಇರುವುದು  ಗೋಚರವಾಗಿ ‘ಮತ್ಯಾಕೆ ಹೆಣಕ್ಕೆ ಈ ದುರ್ದೆಸೆ?’ ಎಂದು ಇವರೇ ದೀಪ ಹಚ್ಚಲು ಮುಂದಾದರು. 
 
ಆಗ, ಮನೆಯವರೆ ಬಂದು ತಡೆದು, ‘ಅದು ಅವರದೆ ತೀರ್ಮಾನ. ನನ್ನ ಶವಕ್ಕೆ ಯಾವ ಸಂಸ್ಕಾರವನ್ನು ಮಾಡದೆ, ಸುಡದೆ, ಹೂಳದೆ, ಆಸ್ಪತ್ರೆಗೆ ಕೊಟ್ಟುಬಿಡಿ ಎಂದು ಬರೆದಿಟ್ಟಿದ್ದಾರೆ’ ಎಂದರು. ಈ ಮಾತನ್ನು ಕೇಳಿ ಜನ ‘ಹಾಂ’ ಎಂದು ಗಾಬರಿಬಿದ್ದರು. ಅವರ ಸಂಬಂಧಿಕರೂ ಬಂದು ಇದನ್ನೆ ಒಪ್ಪಿ, ‘ಹಾಗಿದ್ದ ಮೇಲೆ ಯಾರೇನೂ ಮಾಡುವಂತಿಲ್ಲ. ಅದು ಅವರ ಹಕ್ಕು. ಮೊದಲೇ ಅವರು ವೈಜ್ಞಾನಿಕ ಮನೋಭಾವದವರು, ವಿಚಾರವಂತರು, ದೇವರನ್ನು ನಂಬದವರು. ಇಂತವರು ತಮ್ಮ ನಿರ್ಧಾರವನ್ನು ಹೀಗೆ ಬರೆದಿಡುವುದೆ ಒಳಿತು.
 
ಇಲ್ಲದಿದ್ದರೆ ನಾವು ನಮ್ಮ ಆಚಾರ ವಿಚಾರಗಳನ್ನೆಲ್ಲಾ ಅವರ ಮೇಲೆ ಹೇರಿ, ಗೋವಿಂದಾ ಗೋವಿಂದಾ ಎಂದುಬಿಡುತ್ತಿದ್ದೆವು. ಅದನ್ನು ತಿಳಿದೆ ಅವರು ‘ವೈಕುಂಠ ಬಲು ದೂರ’ ಎಂದು ನಂಬಿರುವ ನಮಗೆ ಮಾರ್ಗ ತೋರಿಸಿದ್ದಾರೆ. ಆದ್ದರಿಂದ ನಾವು ಯಾವ ಸಂಸ್ಕಾರವನ್ನೂ ಮಾಡದೆ, ಅವರು ಬಯಸಿದಂತೆ ಅವರ ದೇಹವನ್ನು ಆಸ್ಪತ್ರೆಗ ಕೊಟ್ಟುಬಿಡುವುದೇ ಸರಿ’ ಎಂದರು. ಆಗಲಂತೂ, ಜನರು ದಿಗಿಲಾಗಿ, ಜಂಘಾಬಲವೇ ಉಡುಗೋಗಿ, ಗರಬಡಿದವರಂತೆ ನಿಂತುಬಿಟ್ಟರು.  
 
ಈ ಸುದ್ದಿ, ಇಲ್ಲಿಂದ ಕಾಳ್ಗಿಚ್ಚಿನಂತೆ ಎದ್ದು, ಬಸ್ಸುಗಳೇ ಇಲ್ಲದ ದಡಗಾಡಿಗೂ ಹೋಗಿ, ಕಾಲು ದಾರಿಯ ಕಣಿವೆಗಳಲ್ಲು ಸಾಗಿ, ಸುಂಯ್ ಎಂದು ಸೂಸುವ ಗಾಳಿ, ಬಿಸಿಲ ತಾಪವೆ ನೆರಳೊಳಗೂಡಿ, ಎತ್ತೆತ್ತಲೋ ಹೊತ್ತೋಗಿ, ನರಮಾನವರಲ್ಲಿ ನಡುಕವೆದ್ದು, ದೇವಮಾನವರಲ್ಲಿ ದಿಗಿಲುಟ್ಟಿಸಿತು.  
ಸಂಪ್ರದಾಯಸ್ಥರು, ‘ಇದು ಉದ್ಧಟತನವೆಂದು, ಮನುಷ್ಯ ಆಸೆ, ಕ್ಲೇಷ, ದ್ವೇಷಗಳನ್ನು ಬಿಟ್ಟು ಬದುಕಬೇಕು. ಈ ದೇಹ ಅವನದಲ್ಲ. ಎಷ್ಟೊ ಜನ್ಮಗಳನ್ನೆತ್ತಿ, 84 ಲಕ್ಷ ಜೀವರಾಶಿಗಳನ್ನು ದಾಟಿ ಬಂದಿರುವಂತದ್ದು. ತನ್ನದಲ್ಲದ ಶರೀರಕ್ಕೆ ಇಂಥ ಅತಿರೇಕದ ನಿಲುವು ಪ್ರಕಟಿಸುವುದು ಯಾರಿಗೂ ತರವಲ್ಲ. ಇಂಥ ನಿಲುವುಗಳನ್ನು ಯಾವ ಧರ್ಮವೂ ಒಪ್ಪುವುದಿಲ್ಲ, ಯಾವ ಧರ್ಮವೂ ಪುರಸ್ಕರಿಸುವುದಿಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕು’ ಎಂದು ಸಿಟ್ಟಿಗೆದ್ದರು.    
 
ಮಡಿವಂತರಂತೂ, ‘ಶವಕ್ಕೆ  ಮಡಿ, ಮೈಲಿಗೆ, ಅನ್ನ, ಆಹಾರಾದಿಗಳ ತರ್ಪಣವಿಲ್ಲದೆ, ಹೀಗೆ ವರ್ಜಿಸುತ್ತಾ ಹೋದರೆ? ಇಹ–ಪರಗಳ ಪಾಡೇನು? ಧರ್ಮ, ಕರ್ಮ, ಆಚಾರ, ವಿಚಾರಗಳ ಕತೆಯೇನು? ಶವವನ್ನು ಹೂಳದೆ, ಸುಡದೆ, ಹಾಗೇ ಬಿಟ್ಟರೆ? ಸತ್ತವರೆಲ್ಲಾ ಸದ್ಗತಿ ಕಾಣದೆ ಧರೆಯ ಮೇಲೇ ಉಳಿದರೆ? ಧರೆಯ ಪಾಡೇನು? ಸ್ವರ್ಗ, ನರಕಗಳೇಕಿರಬೇಕು? ಮನುಷ್ಯನಾಗಿ ಜೀವವೆತ್ತಿ ಬಂದು, ಇದ್ದು, ಬದುಕಿ, ಬಾಳಿ ಹೋದ ಸಾರ್ಥಕತೆಗೆ, ಭೂಮಿಯ ಮೇಲೆ ಅವನಿಗೆ ಈ ಅಂತ್ಯ ಸರಿಯಾದ ಕ್ರಮವಲ್ಲ ಎಂದು ಕಂಗೆಟ್ಟು ‘ಅಂಥಹ ಜ್ಞಾನಕ್ಕೆ ಧಿಕ್ಕಾರ’ ಎಂದು ಮೊರೆಯುತ್ತಿದ್ದರು.
 
ಆದರೂ, ಶವ ಆಸ್ಪತ್ರೆಗೆ ಹೊರಟೇಬಿಟ್ಟದ್ದನ್ನು ಕಂಡು, ಜನರು ಭಯಭೀತರಾಗಿ, ಅಲ್ಲಿ ನಿಲ್ಲದೆ ಹೊರಟುಬಿಟ್ಟರು. ಹೆಂಗಸರಂತೂ ಬಾಯಿ ಬಿಡಲೇ ಹೆದರುತ್ತಿದ್ದರು. ತುಟಿಕ್ ಪಿಟಿಕ್ ಎನ್ನದೆ ನಡೆಯುತ್ತಿದ್ದರು. ನಡುವೆ ಗಾಳಿ ನುಸುಳಲೂ ಬಿಡದೆ, ಒಬ್ಬರ ಹೆಜ್ಜೆ ಒಬ್ಬರು ಮೆಟ್ಟುತ್ತಿದ್ದರು. ಸೆರಗಿಗೆ ಸೆರಗು ಸೋಕಿದರೂ ಬೆಚ್ಚುತ್ತಿದ್ದರು. ಸರ್ ಎಂದರೂ ಸರಿ ಸರಿದು ಗುಂಪಾಗುತ್ತಿದ್ದರು. ಆದರೆ, ಇವರ ಮೌನಕ್ಕೆ ಸಡ್ಡೊಡೆದು ಹೊರಕ್ಕೆ ಜಿಗಿಯಲು, ಇವರೊಳಗಿನ ಸೊಲ್ಲು, ದುಗುಡ, ಆತಂಕ, ನ್ಯಾಯಗಳು ಇವರ ನಾಲಿಗೆ ತುದಿಯಲ್ಲಿಯೇ ಹವಣಿಸುತ್ತಾ ಕಾದು ಕುಳಿತಿದ್ದವು. 
 
ಕಡೆಗೂ, ಜಿಗಿದೇಬಿಟ್ಟ ಸೊಲ್ಲು,‘ಆ ಹೆಣ ಇಲ್ಲೆ ಭೂಮಿಮೇಲೇ ಇದ್ರೆ ಏನೂ ಆಗಲ್ವ?’ ಎಂದು ಪಿಸುಗುಟ್ಟಿಯೇಬಿಟ್ಟಿತು.
ಹಿಂದೆಯೇ ಇಣುಕಿದ ದುಗುಡ, ‘ಬುಟ್ಟದಾ? ಅನ್ನ, ನೀರಿಡದಿದ್ದರೆ, ಭಿಕ್ಷುಕನಾಗಿಯಾದರೂ ಮನೆಮುಂದೆ ಬಂದು ನಿಲ್ಲುತ್ತೆ?’   
ಆಗ ಆತಂಕವೆದ್ದು, ‘ಸತ್ತಿರೋರೆ ನಮಗೇನೂ ಬೇಡ ಎಂದಿರೋದ್ರಿಂದ ಸುಮ್ನೆ ನಿಮಗ್ಯಾಕೆ ಆತಂಕ, ನಡೀರಿ’ ಎಂದಿತು.
ಇದನ್ನು ಒಪ್ಪದ ನ್ಯಾಯ ‘ಸತ್ತವರು ಏನಾದರೂ ಅನ್ಕಂಡು ಸತ್ತಿರಲಿ. ಬದುಕಿರುವವರ ಏಳ್ಗೆಗಾಗಿ, ಅವರು ನಮಗೆ ಮಾಡಿರೋ ಉಪಕಾರಕ್ಕಾಗಿ ನಾವು ಅವರಿಗೆ ಅನ್ನ ನೀರು ಆಕಲೇಬೇಕು. ಅವರಿಗೆ ಸದ್ಗತಿ ಕಾಣಿಸಲೇಬೇಕು’ ಎಂದಿತು.    
 
ಆಗ ಗಂಡಸರೂ, ‘ಹೌದೌದು ಇದನ್ನು ನಾವು ಮಾಡಿಯೇ ತಿರಬೇಕು. ಇಲ್ಲದಿದ್ದರೆ ನಮ್ಮ ಬದುಕಿಗೇನರ್ಥ? ನಮ್ಮ ಗುಡಿ, ಗುಂಡಾರಗಳೆಲ್ಲಾ ಯಾಕಿರಬೇಕು? ಕೋಳಿಪಿಳ್ಳೆ, ಬಿದಿರು, ಬೊಂಬು, ಮಡಿಕೆ, ಕುಡಿಕೆ, ಹೂ, ಹೊಂಬಾಳೆ ಮುಡಿಯದೆ ಯಾಕಿರಬೇಕು? ಗಂಗೆ ಇಡದೆ, ಎಲೆ ಹಾಸದೆ, ಕಡ್ಡಿ ಕರ್ಪೂರ, ಸಾಂಬ್ರಾಣಿ ಬೆಳಗದೆ, ಹತಾರಗಳು ಹಾಗೇ ಮಲಗಿಬಿಟ್ಟರೆ, ಬಂದವರೆಲ್ಲಾ ಇಲ್ಲೇ ಉಳಿದರೆ, ಧರೆಯ ಗತಿಯೇನು? ಗುಡ್ಡಯ್ಯ ಜೋಗಯ್ಯ ಪುರೋಹಿತರ ಸ್ವರವೇಕೆ? ಗಂಟೆ, ಜಾಗಟೆಯ ಸದ್ದೇಕೆ? ಭಜನೆ, ಕೊಂಬು, ಕಹಳೆಯ ವಾದ್ಯವೇಕೆ? ಇದು ಮನುಷ್ಯ ಮಾತ್ರದವರು ನಡೆಯದ ನಡೆ. ನಾಯಿನರಿಗೂ ಒದಗದ ಸ್ಥಿತಿ. ಅದರಲ್ಲು ಕುಯ್ದು, ಕೊರೆದು, ಬಿಡಿಸಿ ಇಲ್ಲೆ!? ಧರೆಯಮೇಲೆ ಇಟ್ಟುಕೊಳ್ಳುವುದೆಂದರೇನಪ್ಪ? ಇದೆಂಥಾ ತೀರ್ಮಾನ? ಇದನ್ನು ಒಪ್ಪುವಂಥಾ ಜನರೆಂತವರು?’ ಎಂದು ಅಸಹನೆಗೊಂಡು ಊರ ನುಗ್ಗುತ್ತಿದ್ದರು.  
 
ಆಗ ಇವರ ಹಿಂದೆಯೇ ನಗೆಯೊಂದು, ನಗೆ ನಗೆಯಾಡುತ್ತಾ ತೇಲಿ, ತೇಲಿ ಬಂದು,‘ಇದೇ ಇದೇ... ಅಭಿವ್ಯಕ್ತಿ ಎಂದರೆ ಇದೇ! ಸತ್ಯಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವುದೆ ಅಭಿವ್ಯಕ್ತಿ’ ಎನ್ನುತ್ತಾ ಅಡ್ಡಲಾಯಿತು.       
ಜನ ಹೆಣವೇ ಎದ್ದು ಮೇಲ್ಬಂದಂತೆ ಹೆದರಿ, ಯಾರು? ಯಾರೆಂದು ನೋಡಿದರು.  
ಅವನು! ‘ಊರಿಗೆ ಹೊಸಗಾಳಿ ಬೀಸ್ಲಿ ಬುಡಿ’ ಎಂದಾಗ ತೂರಿಕೊಂಡು ಬಂದಿದ್ದ ಬೋರಾಗಿಯಾಗಿದ್ದ.     
ಜನ ‘ಇವನೊಬ್ಬ ಬಾಕಿ ಇದ್ದ’ ಎಂದು ಮೂಗು ಮುರಿದಾಗ, 
ಸಂತುಷ್ಟನಾಗಿದ್ದ ಅವನು ಹಸನ್ಮುಖನಾಗಿ, ‘ಇದು ಪರಿವರ್ತನೆಯ ಕಾಲ. ಮನುಷ್ಯ ಹೀಗೆ, ಬ್ರಹ್ಮಾಂಡ ಇಷ್ಟೆ, ಎಂದರೆ ಯಾರು ಕೇಳುತ್ತಾರೆ?’ ಎಂದ.
ಜನ ಸಿಡುಕಾಡುತ್ತಲೆ ‘ನೀವು ಯಾರೂ ಕೇಳದಿದ್ದರೆ ದೇವರವ್ನೆ ಕೇಳ್ತನೆ ಹೋಗ್ರಿ’ ಎಂದರು.   
 
‘ದೇವರೂ ಮಾನವನ ಸೃಷ್ಟಿಯೆ! ಅದಕ್ಕೆ ಅವನಲ್ಲೂ ತಾರತಮ್ಯವಿದೆ. ಅಸ್ಪೃಶ್ಯತೆಯನ್ನು ಆಚರಿಸುವ ದುಷ್ಟರು ತಮ್ಮ ವಿಕಾರಗಳನ್ನೆಲ್ಲ ಅವನ ಮೇಲಾಕಿ ಅವನಿಂದಲೂ ಈ ಕೆಲಸ ಮಾಡಿಸುತ್ತಿದ್ದಾರೆ. ಆದ್ದರಿಂದಲೇ ದೇವಸ್ಥಾನಗಳಿಗೆ ಕೆಲವರಿಗೆ ಪ್ರವೇಶ, ಕೆಲವರಿಗಿಲ್ಲ. ಇವನ್ನೆಲ್ಲ ಧಿಕ್ಕರಿಸಿಯೆ, ಇವತ್ತು ಸತ್ತ ಆ ಜ್ಞಾನಿಗಳು ನನ್ನ ಶವಕ್ಕೆ ಯಾವ ಸಂಸ್ಕಾರವನ್ನು ಮಾಡದೆ, ಹೂಳದೆ, ಸುಡದೆ ಆಸ್ಪತ್ರೆಗೆ ಕೊಟ್ಟುಬಿಡಿ, ಎಂದು ಬರೆದಿಟ್ಟು ಹೋಗಿದ್ದಾರೆ’ ಎಂದ. 
 
ಮತ್ತೆ ಇವನ ಬಾಯಿಂದಲೂ ಅದೇ ಮಾತು ಕೇಳಿದಾಗ, ಜನ ಸಿಡಿಮಿಡಿಗೊಂಡು ‘ಹೋಗ್ರಿರೀ ಎಲ್ಲಾ ನಿಮ್ಮಂತೆಯೇ ಕಲಿತರೆ! ಊರುಕೇರಿ ಏನೂ ಉಳಿಯಲ್ಲ. ಜಗತ್ತಲ್ಲಿ ಅಲ್ಲೋಲ ಕಲ್ಲೋಲವೆ?’ ಎಂದು ಅವನಿಗೆ ಸುತ್ತುಕೊಂಡು ತಗರಾಲಿಗಿಳಿದರು. ಆಗ, ಮುನಿಯ ಎದ್ದು ಧುತ್ತನೆ ಪ್ರತ್ಯಕ್ಷನಾಗಿ, ದಿಢೀರನೆ ನುಗ್ಗಿ ಬಂದು, ‘ನನ್ನದೂ ಅದೇ ತೀರ್ಮಾನ’ ಎಂದು ಕೂಗಾಕಿದ.  ಜನ ಬೆಚ್ಚಿದರು.
 
ಸೆಟೆದೆದ್ದಿದ್ದ ಮುನಿಯ ‘ನನ್ನ ಹೆಣಕ್ಕೂ ಯಾವ ಕಾರ್ಯವೂ ಬೇಡ. ಶಾಸ್ತ್ರ ಸೂಸ್ತ್ರವೂ ಬೇಡ. ನನ್ನ ತಾಯಿ ಗೋಮಾತೆ; ಸತ್ತರೂ, ಮಣ್ಣಾಗದೆ ಅನ್ನವಾದವಳು. ಇದೇ ಇವತ್ತು ನನ್ನಂತ ಗರೀಬ ಹಿಡಿಯಬೇಕಾಗಿರುವ ದಾರಿ ಎಂದ.
 
ಜನರು ತಮ್ಮೊಳಗೇ ಹುಟ್ಟಿಕೊಂಡ ಈ ನಡೆಯಬಾರದ ನಡೆಯನ್ನು ಕಂಡು ಕಕ್ಕಾವಿಕ್ಕಿಯಾಗೋದರು. ಗಾಬರಿಬಿದ್ದರು, ದಿಗ್ಬ್ರಾಂತರಾದರು. ಸಿಟ್ಟಿಗೇಳಲಾಗದೆ ನಿಶಕ್ತರಾದರು. ಮುಖ ಮುಖ ನೋಡಾಡುತ್ತಾ, ದೇವರ ನೆನೆಯುತ್ತಿರುವಾಗಲೇ,‘ಸತ್ತರೆ ನನ್ನ ಜನ ಅವರೆ’ ಎಂದು ನಿಶ್ಚಿಂತೆಯಿಂದ ಇದ್ದ ಅಬ್ಬೆಪಾರಿ ಅಜ್ಜಿಯೂ ಬಂದು ಮುನಿಯನ ಪಕ್ಕಕ್ಕೆ ನಿಂತಳು. ‘ಯಜಮಾನ ಅವನೆ ಯಳದಾಕ್ತನೆ’ ಎಂದು ಊರಲ್ಲಿ ನಿಸೂರಾಗಿ ಬದುಕುತ್ತಿದ್ದ ಒಂಟಿ ಹೆಂಗಸೂ ಬಂತು. ಭಿಕ್ಷುಕನೂ ಬಂದ. ಮುನಿಯ ಎಲ್ಲರೊಡಗೂಡಿ ನಿಂತು ‘ಮನುಷ್ಯ ರೋಸಿದರದೇ ಅಂತ್ಯ’ ಎಂದ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT