ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ ಕೆಂಪುಹಾಸಿನಲ್ಲಿ ಎಪ್ಪತ್ತರ ಚಿತ್ರಚೈತ್ರ

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಫ್ರಾನ್ಸ್‌ನಲ್ಲಿ ನಡೆಯುವ ‘ಕಾನ್‌ ಚಿತ್ರೋತ್ಸವ’ ಎಂದಕೂಡಲೇ, ಕೆಂಪುಹಾಸಿನ ಹಿನ್ನೆಲೆಯಲ್ಲಿ ಚಿನ್ನದ ಬಣ್ಣದ ಬಟ್ಟೆ ತೊಟ್ಟು, ಗೌನ್‌ನ ನಿರಿಗೆಗಳನ್ನು ಚಿಮ್ಮುತ್ತಾ ನಡೆಯುವ ಐಶ್ವರ್ಯಾ ರೈ ರೀತಿಯ ಚೆಲುವೆಯರು ನೆನಪಾಗುತ್ತಾರೆ.

ವಿಶ್ವದ ವಿವಿಧ ಭಾಷೆಗಳ ಚಿತ್ರೋದ್ಯಮಗಳ ಚೆಲುವೆಯರು ಕಾನ್‌ನ ಆಕರ್ಷಣೆಗಳಲ್ಲೊಂದಾದರೂ, ಚಿತ್ರೋತ್ಸವದ ವಿಶೇಷ ಇರುವುದು ಅದರ ಗುಣಮಟ್ಟ ಹಾಗೂ ಆಶಯದಲ್ಲಿ. ಸತ್ಯಜಿತ್‌ ರೇ ಚಿತ್ರರಸಿಕರ ನಡುವೆ ಜನಪ್ರಿಯಗೊಂಡಿದ್ದು ‘ಕಾನ್‌’ ಮೂಲಕವೇ. ರೇ ಮಾತ್ರವೇನು, ಚಿತ್ರಜಗತ್ತಿನ ಅನೇಕ ಘಟಾನುಘಟಿ ನಿರ್ದೇಶಕರ ಪ್ರತಿಭೆ ಪುಟಕ್ಕಿಟ್ಟ ಚಿನ್ನದಂತೆ ಕಂಗೊಳಿಸಿರುವುದು ‘ಕಾನ್‌’ ಅಗ್ನಿಪರೀಕ್ಷೆಯ ಮೂಲಕವೇ. 
ಎರಡನೇ ವಿಶ್ವಯುದ್ಧ ಆಗಷ್ಟೇ ಮುಗಿದಿದ್ದ ಸಂದರ್ಭವದು. ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಸಂದರ್ಭದಲ್ಲಿ ಯುದ್ಧದ ಕಾವನ್ನು ತಿಳಿಗೊಳಿಸುವಂತೆ ‘ಕಾನ್ ಚಿತ್ರೋತ್ಸವ’ (1946) ಆರಂಭವಾಯಿತು.
 
ಇಟಲಿಯ ನವ–ವಾಸ್ತವವಾದಿಗಳು (ನಿಯೊ ರಿಯಲಿಸ್ಟ್ಸ್), ಫ್ರಾನ್ಸ್‌ನ ಹೊಸ ಸಂವೇದನೆಯ ಮಹತ್ವಾಕಾಂಕ್ಷಿಗಳು, ಹಾಲಿವುಡ್‌ನ  ಕ್ಲಾಸಿಕ್ ಕಡುಮೋಹಿಗಳು ಈ ಚಿತ್ರೋತ್ಸವದಲ್ಲಿ ಛಾಪುಮೂಡಿಸಿದ್ದಾರೆ. 1970ರ ದಶಕದಲ್ಲಂತೂ ಹಾಲಿವುಡ್ ಕ್ಲಾಸಿಕ್‌ಗಳದ್ದೇ ಕಾರುಬಾರು. ಮಲ್ಟಿಪ್ಲೆಕ್ಸ್‌ನ ಹಲವು ಪ್ರೇಕ್ಷಕರು ಹಾಗೂ ಸಿನಿಮಾ ವಿದ್ಯಾರ್ಥಿಗಳಿಗೆ ಇವೆಲ್ಲವೂ ಅಧ್ಯಯನದ ವಸ್ತುಗಳು. 
 
ಕಾನ್ ಚಿತ್ರೋತ್ಸವದ ಕೆಂಪುಹಾಸು ದೊಡ್ಡ ರೂಪಕ. ಅಲ್ಲಿ ಕನಸು ಕಂಗಳನ್ನು ಪಿಳಿಪಿಳಿಸಿದ ಸಹಸ್ರಾರು ಪ್ರತಿಭಾವಂತರು ತಮ್ಮ ವೃತ್ತಿಬದುಕಿನಲ್ಲಿ ಬೆಳ್ಳಿಬೆಳಕು ಕಂಡಿದ್ದಾರೆ. ಈ ಬಾರಿ ಚಿತ್ರೋತ್ಸವಕ್ಕೆ 70ನೇ ಹುಟ್ಟುಹಬ್ಬ. ಪ್ರತಿವರ್ಷ ಚಿತ್ರೋತ್ಸವಕ್ಕೆ ಕ್ಷಣಗಣನೆ ಶುರುವಾದೊಡನೆ ಮೆಡಿಟರೇನಿಯನ್‌ನ ‘ರೆಸಾರ್ಟ್ ನಗರಿ’ ದೊಡ್ಡ ನಿದ್ದೆ ಕೊಡವಿಕೊಂಡು ಏಳುತ್ತದೆ. ಅಲ್ಲಿಂದಾಚೆಗೆ ಸಿನಿಮಾ ಸುಗ್ಗಿ ಸಡಗರದ ಜೀವಸಂಚಾರ. 
 
‘ಫ್ರೆಂಚ್ ವೋಗ್’ ಪತ್ರಿಕೆಯ ಮಾಜಿ ಸಂಪಾದಕಿ ಜೋನ್ ಜೂಲಿಯೆಟ್ ಬಕ್ ‘ಕಾನ್ ಚಿತ್ರೋತ್ಸವ’ವನ್ನು ತಮ್ಮ ಕವಯಿತ್ರಿಯ ಆತ್ಮದಿಂದ ಕಂಡಿದ್ದರು. ‘ದಿ ಪ್ರೈಸ್ ಆಫ್ ಇಲ್ಯೂಷನ್’ ಎಂಬ ಸ್ಮರಣಾ ಬರಹದಲ್ಲಿ ಅವರು ಈ ನಗರಿಯನ್ನು ಬಣ್ಣಿಸಿರುವುದು ಹೀಗೆ: ‘‘ಲಂಡನ್್ನಿಂದ ಹೊರಟು ಮೇ ತಿಂಗಳ ಪ್ರಾರಂಭದಲ್ಲಿ ಕಾನ್ ತಲುಪಿದೆವೆಂದರೆ, ‘ಮುಟ್ಟಿದರೆ ಮುನಿ’ ಗಿಡದ ಮೇಲೆ ಹಾದುಬರುವ ಗಾಳಿ ತೀಡುವ ಗಂಧ ಒಂದು ಕಡೆ. ಜ್ಯೇಷ್ಠಮಧುವಿನ ಪರಿಮಳ ಇನ್ನೊಂದು ಕಡೆ. ಇಡೀ ವಾತಾವರಣವೇ ಒಂಥರಾ ಬೆಚ್ಚಬೆಚ್ಚಗೆ.’’ 2ನೇ ಪುಟ ನೋಡಿ...
 
ಬೆರಗಿನ ಕಥೆಗಳು
ಕಾನ್ ಚಿತ್ರೋತ್ಸವ ಇತಿಹಾಸದ ಪುಟಗಳನ್ನು ತಿರುವಿಹಾಕಿದಷ್ಟೂ ಬೆರಗಿನ ಚಿತ್ರ ಕಥಾನಕಗಳು ತೆರೆದುಕೊಳ್ಳುತ್ತವೆ. 1946 ಎಂದೊಡನೆ ಭಾರತೀಯರಿಗೆ ‘ನೀಚಾ ನಗರ್’ ನೆನಪಾದರೆ, ವಿಶ್ವದ ರಸಿಕರಿಗೆ ರಿಯಾ ಹೇವರ್ತ್ ನೆನಪಾಗುತ್ತಾರೆ.

‘ಗಿಲ್ಡಾ’ದಲ್ಲಿ ಚಾರ್ಲ್ಸ್ ವಿಡೊರ್‌ನ ಅಭಿನಯವನ್ನು ಮರೆಯದವರ ಸಂಖ್ಯೆ ದೊಡ್ಡದಿದೆ. ‘ಬ್ಯಾಂಡಿಟ್’ ಚಿತ್ರದ ಪಾತ್ರಧಾರಿ ಆನ್ನಾ ಮೆಗ್‌ನ್ಯಾನಿ ಕೂಡ ಅನೇಕರ ಸ್ಮೃತಿಪಟಲದಲ್ಲಿ ಉಳಿದುಬಿಟ್ಟಿದ್ದಾರೆ. ಜಾರ್ಜ್ ಕುಕೊರ್ ಸೃಜಿಸಿದ ‘ಗ್ಯಾಸ್್ಲೈಟ್’ ಸಿನಿಮಾದ ಇಂಗ್ರಿಡ್ ಬರ್ಗ್‌ಮನ್ ಫೋಟೊಗಳು ಅದೆಷ್ಟು ಮನೆಗಳ ಗೋಡೆಗಳನ್ನು ಅಲಂಕರಿಸಿವೆಯೋ?
 
ಬ್ರಿಗಿಟ್ ಬ್ಯಾರ್ಡಟ್, ಮೋನಿಕಾ ವಿಟಿ, ಸೋಫಿಯಾ ಲಾರೆನ್, ಗ್ರೇಸ್ ಕೆಲಿ, ಪಾಲ್ ನ್ಯೂಮನ್, ಜೋಆನ್ ವುಡ್ವರ್ಡ್ ಈ ಎಲ್ಲಾ ತಾರೆಯರಿಗೂ ಕಾನ್ ಕೆಂಪುಹಾಸು ತುಂಬಿಕೊಟ್ಟ ಆತ್ಮವಿಶ್ವಾಸ ಬಣ್ಣಿಸಲಸದಳ. ಆಲ್‌ಫ್ರೆಡ್ ಹಿಚ್‌ಕಾಕ್, ಪಿಯರ್ ಪಾಲೊ ಪ್ಯಾಸೊಲಿನಿ, ಕೊಯೆನ್ ಸಹೋದರರು, ಕ್ವೆಂಟಿನ್ ಟೊರ್‍್ಯಾಂಟಿನೊ ಅವರಂಥ ಘಟಾನುಘಟಿ ಚಿತ್ರ ತಯಾರಕರು ಉತ್ಸಾಹದ ಟಾನಿಕ್ ಕುಡಿದದ್ದು ಇಲ್ಲಿಯೇ. 
 
‘ಕಾನ್‌ ಉತ್ಸವ’ದಲ್ಲಿ ಶ್ರೇಷ್ಠಚಿತ್ರಕ್ಕೆ ‘ಪಾಮ್ ಡಿ’ಒರ್’ ಪ್ರಶಸ್ತಿ ನೀಡಲಾರಂಭಿಸಿದ್ದು 1955ರಲ್ಲಿ. ಡಲ್ಬರ್ಟ್ ಮ್ಯಾನ್ ನಿರ್ದೇಶನದ ‘ಮಾರ್ಟಿ’ ಮೊದಲ ಪ್ರಶಸ್ತಿಗೆ ಭಾಜನವಾದ ಸಿನಿಮಾ.
 
1958ರಲ್ಲಿ ಮಿಖೇಲ್ ಕಲಟೊಜೊವ್ ನಿರ್ದೇಶಿಸಿದ್ದ ‘ದಿ ಕ್ರೇನ್ಸ್ ಆರ್ ಫ್ಲೈಯಿಂಗ್’ ಚಿತ್ರಕ್ಕೆ ಪಾಮ್ ಡಿ’ಒರ್ ಪ್ರಶಸ್ತಿ ಸಂದಿತು. ಈ ಶ್ರೇಷ್ಠ ಪ್ರಶಸ್ತಿಯ ಗೌರವ ಪಡೆದ ಸೋವಿಯತ್‌ನ ಮೊದಲಿಗ ಎಂಬ ಹೆಗ್ಗಳಿಕೆ ಅವರದ್ದು. ಕ್ಯಾಥರಿನ್ ಡೆನ್ಯೂವ್ ಹಾಗೂ ನಿನೊ ಕ್ಯಾಸಲ್್ನುವೊ ಅಭಿನಯದ ‘ಅಂಬ್ರೆಲ್ಲಾಸ್ ಆಫ್ ಚೆರ್ಬೊರ್ಗ್’ ಸಂಗೀತ ಪ್ರಧಾನ ಚಿತ್ರ. ಅದಕ್ಕೆ ಪ್ರಶಸ್ತಿ ಸಂದದ್ದು 1964ರಲ್ಲಿ.
 
ಆ ಚಿತ್ರದ ನಾಯಕ–ನಾಯಕಿಯ ಮುಗ್ಧತೆ ಅದೆಷ್ಟೋ ಸಿನಿಮಾಗಳಿಗೆ ಸ್ಫೂರ್ತಿಯಾಯಿತು. 1967ರಲ್ಲಿ ಮೈಕೆಲೇಂಜೆಲೊ ಆಂಟೋನಿಯೋನಿಯ ‘ಬ್ಲೋ-ಅಪ್’ ಚಿತ್ರಕ್ಕೆ ಪ್ರಶಸ್ತಿ ಬಂದಿತು. ಸಮಸ್ಯೆಯೊಂದರ ಸಂಕೀರ್ಣತೆ ಕಟ್ಟಿಕೊಟ್ಟ ಚಿತ್ರ ಅದು. ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳೆಲ್ಲಾ ವಿಶ್ವಮಟ್ಟದ ಸ್ಥಿತ್ಯಂತರಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಕನ್ನಡಿ ಹಿಡಿದಿವೆ. 
 
1968ರಲ್ಲಿ ಒಂದೂ ಚಿತ್ರಕ್ಕೆ ಪ್ರಶಸ್ತಿ ನೀಡಲಿಲ್ಲ. ಮೈಕಲ್ ಹಜನವಿಷಿಯಸ್ ‘ರಿಡೌಡಬಲ್’ ಎಂಬ ರಾಜಕೀಯ ವಸ್ತುವಿನ ಸಿನಿಮಾ ನಿರ್ದೇಶಿಸಿದ್ದರು. ಆ ವರ್ಷ ಅದೂ ಸ್ಪರ್ಧೆಯಲ್ಲಿತ್ತು. ಗೊಡಾರ್ಡ್ ಪಾತ್ರದಲ್ಲಿ ಲೂಯಿ ಗ್ಯಾರೆಲ್, ಅವರ ಪತ್ನಿ ಆ್ಯನೆ ವಿಯಾಜೆಮ್‌ಸ್ಕಿಯಾಗಿ ಸ್ಟೇಸಿ ಮಾರ್ಟಿನ್ ನಟಿಸಿದ್ದರು.

ವಿಯಾಜೆಮ್‌ಸ್ಕಿ ಜ್ಞಾಪಕ ಚಿತ್ರಶಾಲೆಯನ್ನು ಆಧರಿಸಿದ ಆ ಚಿತ್ರ ಸಾಮಾಜಿಕ ವಿಮರ್ಶೆಗೂ ಸಾಕ್ಷಿಯಾಗಿತ್ತು. ಫ್ರಾನ್ಸ್ ಜನ ಸಾಮಾಜಿಕವಾಗಿ ದಂಗೆ ಏಳುತ್ತಿದ್ದು, ಅದು ದೇಶವನ್ನು ಗುಡಿಸಿಹಾಕುತ್ತಿದೆ ಎಂದು ವಾದಿಸಿ ಚಿತ್ರ ತಯಾರಕರಾದ ಫ್ರಾಂಕೋಯಿಸ್ ಟ್ರೂಫಾಲ್ಟ್, ಲೂಯಿ ಮ್ಯಾಲ್, ಜೀನ್–ಲ್ಯೂಕ್ ಗೊಡಾರ್ಡ್ ಚಿತ್ರೋತ್ಸವವನ್ನೇ ನಿಲ್ಲಿಸುವಂತೆ ಆಯೋಜಕರನ್ನು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ, ಮರುವರ್ಷದಿಂದ ‘ಡೈರೆಕ್ಟರ್ಸ್ ಫೋರ್ಟ್‌ನೈಟ್’ ಎಂಬ ವಿಶೇಷ ವಿಭಾಗದಲ್ಲಿ ಸಿನಿಮಾಗಳನ್ನು ತೋರಿಸಲು ‘ಕಾನ್ ಚಿತ್ರೋತ್ಸವ’ ಆಯೋಜಕ ಸಮಿತಿ ನಿರ್ಧರಿಸಿತು. 
 
ಯುದ್ಧ–ರಾಜಕಾರಣದ ಕಥನಗಳು
ಯುದ್ಧ ಹಾಗೂ ರಾಜಕೀಯ ವಸ್ತುವಿನ ಚಿತ್ರಗಳಿಗೆ ಪಾಮ್ ಡಿ’ಓರ್ ಪ್ರಶಸ್ತಿ ಲಭಿಸತೊಡಗಿತು. 1979ರಲ್ಲಿ ಭೂತಕಾಲ ಹಾಗೂ ವರ್ತಮಾನವನ್ನು ಬೆಸೆದ ಸಮಾಜೋ–ರಾಜಕೀಯ ಚಿತ್ರಗಳನ್ನು ಮೆಚ್ಚುವ ವಿಮರ್ಶಕರ ಸಂಖ್ಯೆ ಹೆಚ್ಚಾಯಿತು. ಆ ವರ್ಷ ‘ಅಪೊಕ್ಯಾಲಿಪ್ಸ್ ನೌ’ ಹಾಗೂ ಫೋರ್ಡ್ ಕೊಪೊಲ ನಿರ್ದೇಶಿಸಿದ್ದ ವಿಯೆಟ್ನಾಂ ಯುದ್ಧದ ವಸ್ತುವಿನ ‘ಟಿನ್ ಡ್ರಮ್’ ಪ್ರಶಸ್ತಿಯನ್ನು ಹಂಚಿಕೊಂಡವು. ಗುಂಟರ್ ಗ್ರಾಸ್ ಬರೆದ ಅದೇ ಹೆಸರಿನ ಕಾದಂಬರಿಯನ್ನು ‘ಟಿನ್ ಡ್ರಮ್’ ಆಧರಿಸಿತ್ತು. 
 
ಪೂರ್ವ ಯುರೋಪ್‌ನ ಹಲವು ಚಿತ್ರಗಳು 1970–80ರ ದಶಕಗಳಲ್ಲಿ ಪ್ರದರ್ಶನಗೊಂಡವು. ಕಮ್ಯುನಿಸ್ಟ್ ಸಿದ್ಧಾಂತದ ಅರಿವಿನಲ್ಲಿ ಬದುಕಿನ ಸತ್ಯಗಳನ್ನು ಕಾಣಿಸುವ ಚಿತ್ರಗಳನ್ನು ಪೋಲೆಂಡ್ ನಿರ್ದೇಶಕ ಆ್ಯಂಡ್ರೆಜ್ ವಾಜ್ಡಾ ನಿರ್ದೇಶಿಸಿದ್ದರು. ಅವುಗಳೂ ಚಿತ್ರೋತ್ಸವದಲ್ಲಿ ಸುದ್ದಿ ಮಾಡಿದವು. ಸಿನಿಮಾ ನಿರ್ಮಾಣ ತಂತ್ರಜ್ಞಾನದಲ್ಲಿ ಆಗುತ್ತಿದ್ದ ಬದಲಾವಣೆಗಳಿಂದಾಗಿ ವಿಶ್ವದ ದೊಡ್ಡ ಚಿತ್ರ ಮಾರುಕಟ್ಟೆಯಾಗಿಯೂ ಕಾನ್ ಚಿತ್ರೋತ್ಸವ ಬದಲಾಗತೊಡಗಿದ್ದೇ ಆಗ. 
 
1993ಲ್ಲಿ ‘ದಿ ಪಿಯಾನೊ’ ಚಿತ್ರಕ್ಕೆ ಪಾಮ್ ಡಿ’ಓರ್ ಪ್ರಶಸ್ತಿ ಬಂದಾಗ ಅದೆಷ್ಟೋ ಮಹಿಳೆಯರು ಸಿನಿಮಾ ತಯಾರಿಕೆಯತ್ತ ಒಲವು ಮೂಡಿಸಿಕೊಂಡರು. ಆ ಚಿತ್ರದ ನಿರ್ದೇಶಕಿ ಜೇನ್ ಕ್ಯಾಂಪಿಯನ್. ಕಾನ್‌ನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಮೊದಲ ನಿರ್ದೇಶಕಿ ಅವರೆನ್ನುವುದೇ ಅನೇಕರಿಗೆ ಸ್ಫೂರ್ತಿಯಾಯಿತು. 
 
ಉತ್ಸವಕ್ಕೆ ಅದ್ದೂರಿತನದ ಸ್ಪರ್ಶ
ಕಲಾತ್ಮಕ ಶೈಲಿಯಲ್ಲಿಯೇ ಕಾನ್ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನೆರವೇರುತ್ತಿತ್ತು. ಬಂದರಿನ ಬದಿಯಲ್ಲಿದ್ದ ಚಿತ್ರೋತ್ಸವ ನಡೆಯುತ್ತಿದ್ದ ಕಟ್ಟಡಕ್ಕೆ ‘ದಿ ಬಂಕರ್’ ಎಂಬ ಅಡ್ಡಹೆಸರಿಟ್ಟರು. 1983ರಲ್ಲಿ ಅದ್ದೂರಿಯಾಗಿ ಉದ್ಘಾಟಿಸುವ ಪರಿಪಾಠ ಪ್ರಾರಂಭವಾಯಿತು. ಈಗ ಕಾನ್ ಚಿತ್ರೋತ್ಸವದ ಕೆಂಪುಹಾಸಿನ ಮೇಲೆ ನಡೆಯುವ ಹೆಜ್ಜೆಗಳೆಲ್ಲ ಸುದ್ದಿಯಾಗುತ್ತವೆ. 
 
ಉತ್ಸವದ ಪ್ರತಿ ಸುದ್ದಿಗೂ ಅದರದ್ದೇ ಆದ ಮಹತ್ವವಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುವವರು ಅಳೆದೂ ತೂಗಿಯೇ ಮಾತನಾಡಬೇಕಾದ ಪರಿಸ್ಥಿತಿ ಇದೆ. ಹಾಲೆಂಡ್‌ನ ನಿರ್ದೇಶಕ ಲಾರ್ಸ್ ವೊನ್ 2011ರಲ್ಲಿ ತಮ್ಮ ‘ಮೆಲ್ಯಾಂಕಲಿಯಾ’ ಚಿತ್ರದ ಕುರಿತ ಸುದ್ದಿಗೋಷ್ಠಿಯಲ್ಲಿ ‘ತಾನು ನಾಜಿ’ ಎಂದು ಹೇಳಿಕೊಂಡರು. ಹಿಟ್ಲರ್‌ನ ಗುಣಗಾನ ಮಾಡಿದರು. ಇದನ್ನು ಓದಿದ ಆಯೋಜಕರು ಚಿತ್ರೋತ್ಸವದಿಂದ ಅವರನ್ನು ಬಹಿಷ್ಕರಿಸಿದರು. 
ಅಬ್ಡೆಲ್ಯಾಟಿಫ್ ಕೆಚಿಚ್ ನಿರ್ದೇಶಿಸಿದ್ದ ‘ಬ್ಲೂ ಈಸ್ ದಿ ವಾರ್ಮೆಸ್ಟ್ ಕಲರ್’ ಚಿತ್ರಕ್ಕೆ 2013ರಲ್ಲಿ ಪಾಮ್ ಡಿ’ಓರ್ ಪ್ರಶಸ್ತಿ ಘೋಷಿಸಿದ್ದು ಸ್ಟೀವನ್ ಸ್ಪಿಲ್್ಬರ್ಗ್.

‘ಲೀ ಸೆಡಾಕ್ಸ್ ಹಾಗೂ ಅಡೆಲ್ ಎಕ್ಸಾರ್ಕೊಪೊಲಸ್ ಇಬ್ಬರೂ ನಟಿಯರು ನಿರ್ದೇಶಕರ ಅತಿಭಾವುಕ ಧೋರಣೆಗೆ ರಾಜಿಯಾಗಿಯೇ ಸಲಿಂಗಿಗಳ ಪಾತ್ರವನ್ನು ನಿರ್ವಹಿಸಿರುವುದಕ್ಕೆ ಕೆಲವು ದೃಶ್ಯಗಳು ಪುಷ್ಟಿ ನೀಡುತ್ತವೆ’ ಎಂದು ಸ್ಪಿಲ್‌ಬರ್ಗ್ ತೀರ್ಪುಗಾರರ ಭಾಷಣದಲ್ಲಿ ಹೇಳಿದ್ದು ಚರ್ಚೆಗೆ ಕಾವು ಕೊಟ್ಟಿತ್ತು. 
 
2015ರಲ್ಲಿ ಫ್ರಾನ್ಸ್‌ನ ಮೇಲೆ ಭಯೋತ್ಪಾದಕರ ಸರಣಿ ದಾಳಿಗಳು ನಡೆದವು. ಇದರಿಂದಾಗಿ ಚಿತ್ರೋತ್ಸವದ ಭದ್ರತೆ ಹೆಚ್ಚಿಸಿದರು. ಆದರೂ ಚಿತ್ರರಸಿಕರು ತಾರೆಗಳನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಾರೆ. ಛಾಯಾಚಿತ್ರಗಾರರು ಒಳ್ಳೆಯ ಫೋಟೊ ಮೂಡುವ ಕ್ಷಣಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಾರೆ. 
 
ವಿಶ್ವಯುದ್ಧ ಮುಗಿದ ಸಂದರ್ಭದಲ್ಲಿ ಜನರ ನೆಮ್ಮದಿಯ ನಿಟ್ಟುಸಿರಿನ ನಡುವೆ ಚಿತ್ರೋತ್ಸವ ಶುರುವಾಗಿತ್ತು. 70ರ ಹರೆಯದಲ್ಲಿ ಅದರ ಪುಟಗಳನ್ನು ತಿರುವಿದಷ್ಟೂ ಬಗೆಬಗೆಯ ಸಂವೇದನೆಗಳು ಬಿಚ್ಚಿಕೊಳ್ಳುತ್ತವೆ. 
****
ಕಾನ್‌ನಲ್ಲಿ ಕನ್ನಡಿಗ ಜ್ಯೂರಿ!
ನಾನೀಗ ಕಾನ್‌ನಲ್ಲಿ ಇದ್ದೇನೆ. ಮೂರು ವರ್ಷಗಳ ಹಿಂದೆ ಇಲ್ಲಿಗೆ ಉತ್ಸಾಹಿಯಾಗಿ, ಸಿನಿಮಾ ಪ್ರೇಮಿಯಾಗಿ ಬಂದಿದ್ದೆ. ಈ ಬಾರಿ ‘ಡೈರೆಕ್ಟರ್ಸ್‌ ಫೋರ್ಟ್‌ನೈಟ್‌ ಸೆಕ್ಷನ್’ನ ಮೂವರು ತೀರ್ಪುಗಾರರಲ್ಲಿ ನಾನೂ ಒಬ್ಬ. ಇನ್ನೊಬ್ಬರು ಫ್ರಾನ್ಸ್‌ನವರು. ಮತ್ತೊಬ್ಬರು ದಕ್ಷಿಣ ಅಮೆರಿಕದವರು. ಈ ವಿಭಾಗದಲ್ಲಿ ಹೊಸ ನಿರ್ದೇಶಕರ ಮೊದಲ ಅಥವಾ ಎರಡನೇ ಚಿತ್ರವನ್ನು ನಾವು ನೋಡಬೇಕಿದೆ.
 


ಇಲ್ಲಿ ಮೂರು ವಿಭಾಗಗಳಲ್ಲಿ ಚಿತ್ರೋತ್ಸವದ ಸ್ಪರ್ಧೆಗಳು ನಡೆಯುತ್ತವೆ. ಒಂದು ನಾನು ತೀರ್ಪುಗಾರ ಆಗಿರುವ ಸ್ಪರ್ಧೆ. ಇನ್ನೊಂದು ಮುಖ್ಯ ಸ್ಪರ್ಧೆ. ಮೂರನೆಯದ್ದಕ್ಕೆ ‘ಅನ್‌ಸರ್ಟನ್ ರಿಗಾರ್ಡ್’ ಎನ್ನುತ್ತಾರೆ. ಭಾರತದ ಯಾವ ಚಿತ್ರವೂ ಈ ಸ್ಪರ್ಧೆಗಳಲ್ಲಿ ಇಲ್ಲ.

ನಮ್ಮ ದೇಶದ ನಟಿ ನಂದಿತಾ ದಾಸ್ ಕಣ್ಣಿಗೆ ಬಿದ್ದರು. ಬಹುಶಃ ತಮ್ಮ ಹೊಸ ಚಿತ್ರದ ಮಾರ್ಕೆಟಿಂಗ್‌ಗಾಗಿ ಅವರು ಇಲ್ಲಿಗೆ ಬಂದಿದ್ದಾರೆ. ಉದ್ಘಾಟನಾ ಕಾರ್ಯಕ್ರಮ 45 ನಿಮಿಷಗಳಲ್ಲಿ ಚುಟುಕಾಗಿ ನಡೆಯಿತು. ನನಗೆ ವಿಶೇಷ ಆತಿಥ್ಯವೇನೂ ಇಲ್ಲ. ಹಲವಾರು ಸಿನಿಮಾಗಳನ್ನು ನೋಡಬಹುದೆನ್ನುವುದೇ ಭಾಗ್ಯ.
–ವಿದ್ಯಾಶಂಕರ್ ಎನ್, ‘ಬೆಂಗಳೂರು ಸಿನಿಮೋತ್ಸವ’ದ ನಿರ್ದೇಶಕ
****
ಚಿತ್ರೋತ್ಸವದ ಹಿಂದಿನ ಚಿಂತನೆ
‘ಕಾನ್ ಚಿತ್ರೋತ್ಸವ’ ರೂಪುಗೊಳ್ಳುವ ಹಿನ್ನೆಲೆಯಲ್ಲಿ ಎಡಪಂಥೀಯ ವಿಚಾರವಾದವಿದೆ. ಕಮ್ಯುನಿಸ್ಟ್ ಆಶಯಗಳೂ ಇವೆ. 1980ರ ದಶಕದ ನಂತರ ಬೇರೆ ಬೇರೆ ಸಂವೇದನೆಯ ಚಿತ್ರಗಳಿಗೆ ಅಲ್ಲಿ ಅವಕಾಶ ಸಿಕ್ಕಿತು. ಈಗ ಆ ರೀತಿಯ ಸಿದ್ಧಾಂತವೇನೂ ಅಷ್ಟು ಮುಖ್ಯವೆನಿಸಿಲ್ಲ.

ಕಾನ್, ಬರ್ಲಿನ್, ವೆನಿಸ್ ಈ ಮೂರೂ ಚಿತ್ರೋತ್ಸವಗಳು ವಿಶ್ವಸಿನಿಮಾ ನಕ್ಷೆಯಲ್ಲಿ ಪ್ರಮುಖವಾದವು. ಸಮಕಾಲೀನ ಜಗತ್ತಿನ ಕುರಿತ ಸಂವಾದಕ್ಕೆ ಇವು ವೇದಿಕೆ ಎನ್ನಿಸಿಕೊಂಡಿವೆ. ಜನಪ್ರಿಯ ಚಿತ್ರಗಳಿಗೆ ಆಸ್ಕರ್ ಹೇಗೋ, ಪರ್ಯಾಯ ಹಾಗೂ ಕಲಾತ್ಮಕ ಚಿತ್ರಗಳಿಗೆ ಕಾನ್ ಹಾಗೆ. ‘ಗಾಂಧಿ’ ಚಿತ್ರಕ್ಕೆ ಆಸ್ಕರ್‌ ಗೌರವ ಸಂದಿತು. ಆದರೆ, ಕಾನ್‌ನಲ್ಲಿ ಅದಕ್ಕೆ ಒಂದೂ ಪ್ರಶಸ್ತಿ ಸಿಗಲಿಲ್ಲ. ಸಮಕಾಲೀನ ಸಮಸ್ಯೆಗಳಿಗೆ ಚಿತ್ರೋತ್ಸವ ನಿರಂತರವಾಗಿ ಕನ್ನಡಿ ಹಿಡಿಯುತ್ತಾ ಬಂದಿದೆ. ಈಗ ಲಿಂಗ ಸಮಾನತೆ, ಮೂಲ ನಿವಾಸ ತೊರೆಯಬೇಕಾದವರ ತಾಕಲಾಟಗಳು, ವರ್ಣಭೇದದ ಬದಲಾದ ಸಮಸ್ಯೆಗಳು ಎಷ್ಟೋ ಸಿನಿಮಾಗಳ ವಸ್ತುವಾಗುತ್ತಿವೆ.



‘ಕಾನ್ ಚಿತ್ರೋತ್ಸವ’ದಲ್ಲಿ ಸ್ಪರ್ಧೆಗೆ ಬರುವ ಚಿತ್ರಗಳನ್ನು ನಿರೂಪಣೆಯ ದೃಷ್ಟಿಯಲ್ಲಿ ನೋಡಬೇಕು. ಸಿನಿಮಾ ಕಟ್ಟುವಿಕೆಯಲ್ಲಿ ಮಾಡುವ ಪ್ರಯೋಗಗಳು ಆಗ ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ರೀತಿಯಲ್ಲಿ ಅದು ‘ಆರ್ಟ್ ಆಫ್ ಮೇಕಿಂಗ್’ನ ಪ್ರಾತ್ಯಕ್ಷಿಕೆ. ದೃಶ್ಯಭಾಷೆ ಅರಿಯುವ ಹಸಿವಿರುವವರಿಗೆ ಇದು ಸದವಕಾಶ. ಭಾರತದವರಿಗೂ ಇಂಥ ಚಿತ್ರೋತ್ಸವ ನೋಡುವ ಹಂಬಲವಿರುತ್ತದೆ.

‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಪ್ರತಿನಿಧಿಗಳು ಉತ್ಸವಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋಗಿ ಬಂದವರು ಇಲ್ಲಿನ ನಮ್ಮ ಚಿತ್ರೋತ್ಸವಗಳನ್ನು ಇನ್ನೂ ಉತ್ತಮಪಡಿಸುವ ಮಾದರಿ ಕ್ರಮಗಳನ್ನು ಅನುಸರಿಸಬೇಕು.

ಸೆಲೆಬ್ರಿಟಿಗಳು, ಪಾರ್ಟಿಗಳು, ಕಡಲತಟದ ವೈಭವೋಪೇತ ಕ್ಷಣಗಳನ್ನೇ ಅದ್ದೂರಿತನದ ಮಾದರಿ ಎಂದಷ್ಟೇ ಭಾವಿಸುವುದು ತರವಲ್ಲ. ಕಾನ್ ಚಿತ್ರೋತ್ಸವದ ಸಮಗ್ರ ತತ್ತ್ವವನ್ನು ಅರ್ಥಮಾಡಿಕೊಂಡಾಗಷ್ಟೇ ಅದನ್ನು ನೋಡಿಬರುವ ಭಾರತೀಯರು ಬದಲಾವಣೆ ಮಾಡಿಕೊಳ್ಳಬಹುದು. ಈಗಲೂ ನಾವು, ಸಿನಿಮಾ ಅಂದರೆ ಕಥೆ ಹೇಳಿಬಿಡಬೇಕು ಎಂಬ ಧೋರಣೆಯಲ್ಲೇ ಉಳಿದುಬಿಟ್ಟಿದ್ದೇವೆ.
ಗಿರೀಶ ಕಾಸರವಳ್ಳಿ, ಖ್ಯಾತ ಚಲನಚಿತ್ರ ನಿರ್ದೇಶಕ

****

ಬೆಳೆದ ಮಾರುಕಟ್ಟೆ

1972ರಲ್ಲಿ ಚಿತ್ರೋತ್ಸವದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಅದರ ಸಂಕೇತವಾಗಿ ಆಲ್್ಫ್ರೆಡ್ ಹಿಚ್‌ಕಾಕ್ ಬೈಕ್ ಸವಾರಿ ಮಾಡಿದರು. ಕಾನ್ ಚಿತ್ರೋತ್ಸವದಲ್ಲಿ ಸಿನಿಮಾ ಗಮನ ಸೆಳೆಯದೇ ಹೋದರೆ ಅದು ಸೋತಂತೆಯೇ ಎಂಬ ಅಭಿಪ್ರಾಯ ಆ ಕಾಲಘಟ್ಟದಲ್ಲಿ ಇತ್ತು. ‘ದಿ ಐಸ್ ಸ್ಟಾರ್ಮ್’ ಹಾಗೂ ‘ನರ್ಸ್ ಬೆಟ್ಟಿ’ ಚಿತ್ರಗಳನ್ನು ಅಮೆರಿಕ ಚಿತ್ರೋತ್ಸವಕ್ಕೆ ಕಳುಹಿಸಿಕೊಡಲೂ ಅದೇ ಕಾರಣ. ಆ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗಮನ ಸೆಳೆಯಲಿಲ್ಲ. ಹಾಗಾಗಿ ಹಾಲಿವುಡ್ ಸ್ಟುಡಿಯೋಸ್‌ಗೆ ಈ ಚಿತ್ರೋತ್ಸವ ಪ್ರತಿಷ್ಠೆಯ ಪ್ರಶ್ನೆಯಾಯಿತು. ‘ಸನ್್ಚೇಸರ್’, ‘ಮಿಷನ್ ಟು ಮಾರ್ಸ್’ ದೊಡ್ಡ ಬಜೆಟ್‌ನ ಚಿತ್ರಗಳನ್ನು ಕಳುಹಿಸಲಾರಂಭಿಸಿತು.

2001ರಲ್ಲಿ ಫಾಕ್ಸ್ ಸ್ಟುಡಿಯೋಸ್ ‘ಮೌಲಿನ್ ರೋಗ್’ ಚಿತ್ರವನ್ನು ಉದ್ಘಾಟನಾ ಸಿನಿಮಾ ಆಗಿ ಪ್ರದರ್ಶನಗೊಳ್ಳಲೆಂದು ಕಳುಹಿಸಿಕೊಟ್ಟಿತು. ಚಿತ್ರದ ಪಾರ್ಟಿಯ, ನೃತ್ಯಗಾರರ ದೃಶ್ಯಗಳನ್ನು ಉತ್ಸವದ ತಾಣದ ಕೆಂಪುಹಾಸಿನ ಮೇಲೆ ಮರುಸೃಷ್ಟಿಸಿದ್ದರು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಮೇಲೆ ಕಾನ್ ಚಿತ್ರೋತ್ಸವವನ್ನು ಅವಕಾಶದ ಕೊಂಡಿ ಎಂದು ಹಾಲಿವುಡ್ ಪರಿಗಣಿಸಿತು.

‘ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಷಿಪ್ ಆಫ್ ದಿ ರಿಂಗ್’ ಚಿತ್ರದ ತುಣುಕೊಂದನ್ನು ಪ್ರದರ್ಶಿಸಿದ ನಂತರ ಜಾಗತಿಕ ಮಟ್ಟದಲ್ಲಿ ವಿತರಕರು ಆ ಚಿತ್ರಕ್ಕೆ ಮಾರುಕಟ್ಟೆ ಕಲ್ಪಿಸಲು ಮುಂದಾದರು. ಜೆ.ಜೆ.ಆರ್. ಟೊಕೀನ್ ಬರೆದ ಶ್ರೇಷ್ಠ ಕೃತಿಗಳನ್ನು ಆಧರಿಸಿದ ಮೂರು ಸಿನಿಮಾಗಳಿಗೆ 20 ಕೋಟಿ ಡಾಲರ್ ಬಂಡವಾಳ ಹೂಡಲು ಆಸಕ್ತರು ಮುಂದೆ ಬರಲು ಆ ತುಣುಕಿನ ಪ್ರದರ್ಶನ ಕಾರಣವಾಯಿತೆನ್ನುವುದು ವಿಶೇಷ.

****
ನಾನು ಅದೃಷ್ಟವಂತ

ನನ್ನ ನಿರ್ದೇಶನದ ‘ಪಿರವಿ’ ಮಲಯಾಳಂ ಚಿತ್ರಕ್ಕೆ ಕಾನ್ ಚಿತ್ರೋತ್ಸವದಲ್ಲಿ ‘ಗೋಲ್ಡನ್ ಕ್ಯಾಮೆರಾ’ ಗೌರವ ಸಿಕ್ಕಿತಲ್ಲ, ಆಗ ಯುರೋಪ್‌ನ ಹಲವು ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆಯಾಯಿತು. ಅಲ್ಲಿ ನನ್ನ ಚಿತ್ರವನ್ನು ಮಾರ್ಕೆಟ್ ಮಾಡಿದವರಿಗೆ ಉತ್ತಮ ಹಣವೂ ಬಂದಿತು.

ಜಾಗತಿಕ ಮಟ್ಟದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ‘ಆಸ್ಕರ್‌’ಗಿಂತ ದೊಡ್ಡ ವೇದಿಕೆ ಕಾನ್ ಎಂದು ನನಗೆ ಅರಿವಾದದ್ದೇ ಆಗ. ನನ್ನ ಎರಡನೇ ಚಿತ್ರ ‘ಸ್ವಾಹಂ’ ಕೂಡ ಕಾನ್ ಚಿತ್ರೋತ್ಸವದ ಸ್ಪರ್ಧೆಯಲ್ಲಿತ್ತು. ‘ವಾನಪ್ರಸ್ಥಂ’ ಚಿತ್ರವನ್ನೂ ಅಲ್ಲಿಗೆ ತೆಗೆದುಕೊಂಡು ಹೋಗಿದ್ದೆ. ಈ ವಿಷಯದಲ್ಲಿ ನಾನು ಅದೃಷ್ಟವಂತ.
–ಶಾಜಿ ಎನ್. ಕರುಣ್

****
ಕಾನ್‌ನಲ್ಲಿ ಭಾರತದ ಸಾಧನೆ

ಚೇತನ್ ಆನಂದ್ ನಿರ್ದೇಶನದ ‘ನೀಚಾ ನಗರ್’ ಹಿಂದಿ ಚಿತ್ರವು ಕಾನ್ ಚೊಚ್ಚಲ ಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್ ಪ್ರಿ ಡ್ಯು ಫೆಸ್ಟಿವಲ್ ಇಂಟರ್‌ನ್ಯಾಷನಲ್ ಡ್ಯು ಫಿಲ್ಮ್’ ಪ್ರಶಸ್ತಿ ಗೆದ್ದುಕೊಂಡಿತು. 1955ರಲ್ಲಿ ಪ್ರಕಾಶ್ ಅರೊರಾ ನಿರ್ದೇಶನದ ‘ಬೂಟ್ ಪಾಲಿಷ್’ ಹಿಂದಿ ಚಿತ್ರದ ಅಭಿನಯಕ್ಕೆ ನಟಿ ನಾಜ್ ಅವರಿಗೆ ವಿಶೇಷ ಉಲ್ಲೇಖದ ಗೌರವ ಸಂದಿತು.

ಸತ್ಯಜಿತ್ ರೇ ನಿರ್ದೇಶನದ ಬಂಗಾಳಿ ಚಿತ್ರ ‘ಪಥೇರ್ ಪಾಂಚಾಲಿ’ 1956ರಲ್ಲಿ ‘ಶ್ರೇಷ್ಠ ಮಾನವೀಯ ಅಂಶಗಳ ದಾಖಲೆಗಳು ಇರುವ ಚಿತ್ರ’ ಎಂದು ಕಾನ್ ಚಿತ್ರೋತ್ಸವದ ಮನ್ನಣೆ ಪಡೆಯಿತು. ಅದೇ ವರ್ಷ ರಾಜ್‌ಬನ್ಸ್ ಖನ್ನಾ ನಿರ್ದೇಶನದ ‘ಗೊತೊಮ ದಿ ಬುದ್ಧ’ ಚಿತ್ರಕ್ಕೆ ವಿಶೇಷ ಉಲ್ಲೇಖದ ಮನ್ನಣೆ.

ಹೊಸ ಸಂವೇದನೆಯ ಚಿತ್ರಗಳಿಗೆ ಹೆಸರಾದವರು ಮೃಣಾಲ್ ಸೆನ್. ಅವರ ನಿರ್ದೇಶನದ ‘ಖಾರಿಜ್’ ಹಿಂದಿ ಚಿತ್ರಕ್ಕೆ 1983ರಲ್ಲಿ ತೀರ್ಪುಗಾರರ ಪ್ರಶಸ್ತಿ ಒಲಿದುಬಂತು. ಮೀರಾ ನಾಯರ್ ನಿರ್ದೇಶನದ ‘ಸಲಾಂ ಬಾಂಬೆ’ (ಹಿಂದಿ ಚಿತ್ರ, 1988) ಹಾಗೂ ಶಾಜಿ ಕರಣ್ ನಿರ್ದೇಶನದ ‘ಪಿರವಿ’ (ಮಲಯಾಳಂ, 1989) ‘ಗೋಲ್ಡನ್ ಕ್ಯಾಮೆರಾ’ ಪ್ರಶಸ್ತಿಗಳಿಗೆ ಪಕ್ಕಾದವು.

1999ರಲ್ಲಿ ಮುರಳಿ ನಾಯರ್ ನಿರ್ದೇಶನದ ‘ಮರಣ ಸಿಂಹಾಸನಂ’ ಮಲಯಾಳಂ ಸಿನಿಮಾಗೂ ಇದೇ ಪ್ರಶಸ್ತಿ ಸಂದಿತು. 2013ರಲ್ಲಿ ಭಾರತ ಚಲನಚಿತ್ರೋದ್ಯಮಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಕಾನ್ ಚಿತ್ರೋತ್ಸವಕ್ಕೆ ಅಧಿಕೃತ ಅತಿಥಿಯಾಗುವ ಗೌರವ ದೇಶಕ್ಕೆ ಸಿಕ್ಕಿದ್ದು ಇನ್ನೊಂದು ವಿಶೇಷ. ಆ ವರ್ಷ ನಟಿ ವಿದ್ಯಾ ಬಾಲನ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು.

ಸ್ಪರ್ಧೆಗೆ ದೇಶದ ಕೆಲವು ಚಿತ್ರಗಳು ಹೋಗಿದ್ದವರಾದರೂ ನೆನಪಿನಲ್ಲಿ ಉಳಿಯುವಂಥವು ಮೇಲೆ ಉಲ್ಲೇಖಿಸಿದ ಚಿತ್ರಗಳಷ್ಟೆ. ಮಾರ್ಕೆಟಿಂಗ್ ದೃಷ್ಟಿಯಿಂದ ಭಾರತೀಯ ಚಿತ್ರಗಳನ್ನು ಅಲ್ಲಿ ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸುವುದೂ ಉಂಟು.

****
ಈ ಸಲದ ಸ್ಪರ್ಧೆಯಲ್ಲಿ…
ನಿಕೋಲ್ ಕಿಡ್‌ಮನ್ ಈ ಬಾರಿ ಸುದ್ದಿಯಲ್ಲಿದ್ದಾರೆ. ಅವರ ನಾಲ್ಕು ಪ್ರಾಜೆಕ್ಟ್‌ಗಳು ಚಿತ್ರೋತ್ಸವದಲ್ಲಿವೆ. ಅವರ ‘ದಿ ಬೆಗ್ಯೂಲ್ಡ್’ ಚಿತ್ರದ ಬಗೆಗೆ ನಿರೀಕ್ಷೆಗಳಿವೆ. ಸೋಫಿಯಾ ಕೊಪೊಲಾ ನಿರ್ದೇಶನದ ಈ ಸಿನಿಮಾ ಪಾಮ್ ಡಿ’ಓರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದೆ. ನಾಗರಿಕ ಯುದ್ಧದ ಸಂದರ್ಭದಲ್ಲಿ ದಕ್ಷಿಣ ಅಮೆರಿಕದ ಬಾಲಕಿಯರ ವಸತಿಶಾಲೆಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ ‘ಡ್ರಾಮಾ’ ಚಿತ್ರವಿದು.

ಹತ್ತೊಂಬತ್ತು ಚಿತ್ರಗಳು ಸ್ಪರ್ಧೆಯಲ್ಲಿವೆ. ಟಾಡ್ ಹೇನ್ಸ್ ನಿರ್ದೇಶನದ ‘ವಂಡರ್‌ಸ್ಟ್ರಕ್ಸ್‌’ ಚಿತ್ರ ಕೂಡ ಅನೇಕರಿಗೆ ಚರ್ಚೆಯ ವಸ್ತುವಾಗಿದೆ. 50 ವರ್ಷ ದೂರವಾಗಿರುವ ನಾಯಕ, ನಾಯಕಿಯ ಬದುಕಿನ ಬಿಂದುಗಳು ಸಂಧಿಸುವ ಕಥನ ಈ ಚಿತ್ರದಲ್ಲಿದೆ. ಬ್ಯಾಂಕ್ ದರೋಡೆಯ ಹಿನ್ನೆಲೆಯಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಹೆಣೆದ ‘ಗುಡ್ ಟೈಮ್’ ಚಿತ್ರವೂ ಸ್ಪರ್ಧೆ ಒಡ್ಡಬಹುದೆಂಬ ನಿರೀಕ್ಷೆ ಇದೆ. ‘ದಿ ಬೆಗ್ಯೂಲ್ಡ್’ ಹಾಗೂ ‘ಒಕ್ಜಾ’ ಸ್ಪರ್ಧೆಯಲ್ಲಿರುವ ಇನ್ನೆರಡು ಸತ್ವಯುತ ಚಿತ್ರಗಳು.


ಈ ಬಾರಿ ಉತ್ಸವದ ಪೋಸ್ಟರ್ ಗಮನಿಸಿದರೆ ಅದರ ಜೊತೆಯೂ ಒಂದು ಕಥೆ ಇರುವುದು ಗೊತ್ತಾಗುತ್ತದೆ. ಕ್ಲಾಡಿಯಾ ಕಾರ್ಡಿನೇಲ್ ಗೊತ್ತಿರಬೇಕಲ್ಲ? 1963ರಲ್ಲಿ ‘ದಿ ಲಿಯೊಪಾರ್ಡ್’ ಚಿತ್ರಕ್ಕೆ ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ನಟಿ ಅವಳು.

ಸುರುಳಿ ಸುತ್ತಿಕೊಂಡ ಅವಳ ಸ್ಕರ್ಟ್, ಗಾಳಿ ಸೋಕಿ ಹಾರಿದ ತಲೆಗೂದಲು ಮನದಲ್ಲಿ ಜೀವಂತಿಕೆಯ ಪ್ರತಿಮೆ ಮೂಡಿಸುವಷ್ಟು ಶಕ್ತ. ಪೋಸ್ಟರ್‌ನಲ್ಲಿ ಕಾಣುವ ಕ್ಲಾಡಿಯಾಳ ಚಿತ್ರವನ್ನು ಫೋಟೊಶಾಪ್ ತಂತ್ರಜ್ಞಾನ ಬಳಸಿ ಮರುರೂಪಿಸಲಾಗಿದ್ದು, ಅವಳ ಆಗಿನ ದೇಹಾಕಾರವನ್ನು ಸಣ್ಣಗೆ ಮಾಡಿದ್ದಾರೆ ಎಂದು ಚಿತ್ರೋತ್ಸವದ ವಿಶ್ಲೇಷಕರು ದೊಡ್ಡ ಲೇಖನವನ್ನೇ ಬರೆದಿದ್ದರು.

****
ಅಂದಿನಿಂದ ಇಂದಿನವರೆಗೆ...

ಫ್ರಾನ್ಸ್‌ನ ರಾಷ್ಟ್ರೀಯ ಶಿಕ್ಷಣ ಸಚಿವರಾಗಿದ್ದ ಜೀನ್ ಝೇ 1932ರಲ್ಲಿ ‘ಅಂತರರಾಷ್ಟ್ರೀಯ ಸಿನಿಮಾಟೊಗ್ರಫಿಕ್ ಚಿತ್ರೋತ್ಸವ’ ಆಯೋಜಿಸಬೇಕೆಂಬ ಪ್ರಸ್ತಾವ ಮುಂದಿಟ್ಟರು. ಬ್ರಿಟಿಷ್ ಹಾಗೂ ಅಮೆರಿಕನ್ ಚಿತ್ರ ಆಯೋಜಕರು ಜಂಟಿಯಾಗಿ ಇದನ್ನು ಸಾಕಾರಗೊಳಿಸಬಹುದು ಎನ್ನುವುದು ಅವರ ಸಲಹೆಯಾಗಿತ್ತು. ಅದು ಕಾನ್ ಚಿತ್ರೋತ್ಸವದ ಬೀಜ. 1946ರಲ್ಲಿ ‘ಫೆಸ್ಟಿವಲ್ ಡ್ಯು ಫಿಲ್ಮ್ ಡಿ ಕಾನ್’ ಪ್ರಾರಂಭವಾಯಿತು.

16 ದೇಶಗಳ ಚಿತ್ರಗಳು ಪ್ರದರ್ಶಿತವಾದವು. ‘ಸಮಾನತೆ’ ಮೊದಲ ಚಿತ್ರೋತ್ಸವದ ಮಂತ್ರವಾಗಿತ್ತು. ತೀರ್ಪುಗಾರರ ಸಮಿತಿಯಲ್ಲಿ ಇದ್ದುದು ಒಂದು ದೇಶದ ಒಬ್ಬ ಪ್ರತಿನಿಧಿಗಷ್ಟೇ ಅವಕಾಶ. 2002ರಲ್ಲಿ ಚಿತ್ರೋತ್ಸವಕ್ಕೆ ‘ಫೆಸ್ಟಿವಲ್ ಡಿ ಕಾನ್’ ಎಂದು ಅಧಿಕೃತವಾಗಿ ಹೆಸರು ಬದಲಿಸಲಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT