ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್ ಪ್ರಕರಣದಲ್ಲಿ ಭಾರತ ಗೆದ್ದಿಲ್ಲ, ಐಸಿಜೆ ತೀರ್ಪಿನ ಬಗ್ಗೆ ಈಗಲೇ ಸಂಭ್ರಮಾಚರಣೆ ಬೇಡ

Last Updated 20 ಮೇ 2017, 14:45 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಇನ್ನೂ ಗೆದ್ದಿಲ್ಲ. ಐಸಿಜೆ ತೀರ್ಪಿನ ಬಗ್ಗೆ ಈಗಲೇ ಸಂಭ್ರಮಾಚರಣೆ ಬೇಡ ಎಂದು ಪಾಕಿಸ್ತಾನ ಜೈಲಿನಲ್ಲೇ ಮೃತಪಟ್ಟ ಭಾರತದ ಸರಬ್ಜಿತ್‌ ಸಿಂಗ್‌ ಅವರ ವಕೀಲ ಅವೈಸ್ ಶೇಖ್ ಅಭಿಪ್ರಾಯ ಪಟ್ಟಿದ್ದಾರೆ.

ಸರಬ್ಜಿತ್‌ ಪರ ವಾದಿಸಿದ್ದಕ್ಕಾಗಿ, ಭಾರಿ ಹಿಂಸೆ ಅನುಭವಿಸಿ ಇದೀಗ ಸ್ವೀಡನ್‌ನಲ್ಲಿರುವ ಅವರು ಮಾಧ್ಯಮಗಳ ಜತೆಗೆ ಮಾತನಾಡಿದ್ದು, ಭಾರತ ಐಸಿಜೆಗೆ ಹೋಗಿದ್ದು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಳ್ಳೆಯ ಸಮಯದಲ್ಲಿ ಭಾರತ ಐಸಿಜೆಗೆ ಹೋಗಿದೆ. ಆದರೆ ಪಾಕಿಸ್ತಾನ  ಜಾಧವ್‌ರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂಬ ವಿಷಯದಲ್ಲಿ ಅನುಮಾನವಿದೆ. ಸರಬ್ಜಿತ್‌ ಸಿಂಗ್‌ ಅವರನ್ನೂ ಪಾಕ್  ಹಿಂಸಿಸಿ ಕೊಂದಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶೇಖ್ ಅವರು ನ್ಯೂಸ್ 18 ಮಾಧ್ಯಮಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಕುಲಭೂಷಣ್ ಜಾಧವ್ ಪ್ರಕರಣಕ್ಕೂ ಸರಬ್ಜಿತ್ ಸಿಂಗ್ ಪ್ರಕರಣಕ್ಕೂ ಸಾಮ್ಯತೆ ಏನು?

ಬೇಹುಗಾರಿಕೆ ನಡೆಸಿದ ಆಪಾದನೆ ಮೇಲೆ ಇವರಿಬ್ಬರಿಗೂ ಮರಣದಂಡನೆ ವಿಧಿಸಲಾಗಿತ್ತು. ಆದರೆ ಸರಬ್ಜಿತ್  ಪ್ರಕರಣವೇ ಬೇರೆ. 1990 ರಲ್ಲಿ ಪಾಕಿಸ್ತಾನದ ಲಾಹೋರ್ ಮತ್ತು ಫಾಸಿಲಾಬಾದ್‌ನಲ್ಲಿ ನಡೆದ ಬಾಂಬ್‌ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿತ್ತು. ಬೇಹುಗಾರಿಕೆ ನಡೆಸಿದ ಆಪಾದನೆ ಹಾಗೂ ಬಾಂಬ್‌ಸ್ಫೋಟ ಘಟನೆಗೆ ಸಂಬಂಧಪಟ್ಟಂತೆ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಸರಬ್ಜಿತ್ ಅವರಿಗೆ ಸಿವಿಲ್ ಕೋರ್ಟ್ ಶಿಕ್ಷೆ ವಿಧಿಸಿದರೆ, ಕುಲಭೂಷಣ್ ಅವರಿಗೆ ಶಿಕ್ಷೆ ವಿಧಿಸಿದ್ದು ಸೇನಾ ನ್ಯಾಯಾಲಯ. ಸರಬ್ಜಿತ್ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು. ನನ್ನ ಪುಸ್ತಕ 'ಸರಬ್ಜಿತ್ ಸಿಂಗ್: ಎ ಕೇಸ್ ಆಫ್ ಮಿಸ್ಟೇಕನ್ ಐಡೆಂಟಿಟಿ'ಯಲ್ಲಿ ಆತನ ಬಗ್ಗೆ ಬರೆದಿದ್ದೇನೆ. ಕುಲಭೂಷಣ್ ಜಾಧವ್ ಅವರಿಗೆ ಅಲ್ಲಿ ಚಿತ್ರಹಿಂಸೆ ನೀಡಲಾಗಿದೆಯೇ ಎಂಬುದರ ಬಗ್ಗೆ ಇಲ್ಲಿಯವರೆಗೆ ಏನೂ ಗೊತ್ತಿಲ್ಲ.

ಈಗಾಗಲೇ ಹದಗೆಟ್ಟಿರುವ ಭಾರತ-ಪಾಕ್ ಸಂಬಂಧದ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು?
ಜಾಧವ್ ಅವರ ಪ್ರಕರಣ ಭಾರತ- ಪಾಕ್ ಸಂಬಂಧದ ಮೇಲೆ ನೇರ ಪರಿಣಾಮ ಬೀರಲಿದೆ. ಸರಿಯಾದ ಸಮಯದಲ್ಲೇ ಐಸಿಜೆಯನ್ನು ಭಾರತ ಸಮೀಪಿಸಿರುವುದರರಿಂದ ಈ ಪ್ರಕರಣದತ್ತ ಜಗತ್ತಿನ ಗಮನ ಹರಿದಿದೆ. ಈ ಪ್ರಕರಣದ ಸೂಕ್ಷ್ಮತೆ ಮತ್ತು ಪ್ರಾಮುಖ್ಯತೆ ಜಗತ್ತಿಗೆ ತಿಳಿದಿದೆ. ಭಾರತದ ವಾದವನ್ನು ಅಂತರ ರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಎತ್ತಿ ಹಿಡಿದು ಪಾಕಿಸ್ತಾನದ ಸೇನಾ ನ್ಯಾಯಾಲಯ ಜಾಧವ್ ಅವರಿಗೆ ನೀಡಿದ್ದ ಮರಣ ದಂಡನೆಗೆ ತಡೆ ನೀಡಿದೆ. ಈ ಪ್ರಕರಣದ ಅಂತಿಮ ತೀರ್ಪು ಆಗಸ್ಟ್​ನಲ್ಲಿ ಪ್ರಕಟವಾಗಲಿದ್ದು, ಜಾಧವ್ ಪ್ರಕರಣ ಭಾರತ-ಪಾಕ್ ಸಂಬಂಧದ ಮೇಲೆ ಪರಿಣಾಮ ಬೀರಲಿದೆ.

ಜಾಧವ್ ಮರಣದಂಡನೆಗೆ ಐಸಿಜೆ ತಡೆ ನೀಡಿದೆ. ಸರಬ್ಜಿತ್ ಅವರ ಪ್ರಕರಣದಿಂದ ಭಾರತ ಕಲಿಯಬೇಕಾದುದು ಏನು? ಮುಂದೇನು ಮಾಡಬೇಕು?
ನನ್ನ ಅಭಿಪ್ರಾಯ ಪ್ರಕಾರ ಭಾರತ ಅರ್ಧ ಯುದ್ಧ ಗೆದ್ದಿದೆ. ಇದೊಂದು ನ್ಯಾಯಯುತ, ನೈತಿಕ, ಮಾನಸಿಕ ಮತ್ತು ರಾಜತಾಂತ್ರಿಕ ಗೆಲುವು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈ ಹಂತದಲ್ಲಿ ಐಸಿಜೆ ತೀರ್ಪಿನ ಬಗ್ಗೆ ಸಂಭ್ರಮಾಚರಣೆ ಮಾಡುವುದು ಅಪಕ್ವತೆಯನ್ನು ತೋರಿಸಿದಂತಾಗುತ್ತದೆ. ಜಾಧವ್ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ವರೆಗೆ ಭಾರತ ತುಂಬಾ ಜಾಗರೂಕತೆಯಿಂದ ಮುಂದಿನ ಹೆಜ್ಜೆಗಳನ್ನಿಡಬೇಕಾಗಿದೆ.

ಜಾಧವ್ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಭಾರತ ಯಾವ ರೀತಿಯಲ್ಲಿ ಕಾನೂನು ಮತ್ತು ರಾಜಕೀಯ ಕಾರ್ಯ ತಂತ್ರಗಳನ್ನು ರೂಪಿಸಬೇಕು? ನಿಮ್ಮ ಸಲಹೆ?
ಜಾಧವ್ ಅವರಿಗೆ ನ್ಯಾಯ ಒದಗಿಸಲು ಸಾಗಬೇಕಾದ ದಾರಿ ದೂರವಿದೆ. ರಾಜತಾಂತ್ರಿಕ ಮತ್ತು ಇನ್ನುಳಿದ ರೀತಿಯಲ್ಲಿಯೂ ಪಾಕಿಸ್ತಾನದ ಮೇಲೆ ಜಗತ್ತೇ ನೈತಿಕ ಒತ್ತಡವನ್ನು ಹೇರುವಂತೆ ಭಾರತ ಮಾಡಬೇಕಿದೆ. ಕುಲಭೂಷಣ್ ಅವರನ್ನು ಬಂಧಮುಕ್ತಗೊಳಿಸಿದರೆ ಮಾತ್ರ ಪಾಕ್ ನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂಬುದನ್ನು ಪಾಕ್‍ಗೆ ಮನವರಿಕೆ ಮಾಡಿಕೊಡಬೇಕು. ಮಿಲಿಟರಿ ಅಧೀನದಲ್ಲಿರುವ ಪಾಕಿಸ್ತಾನ ಸರ್ಕಾರಕ್ಕೆ ಜಾಧವ್ ಅವರನ್ನು ಮುಕ್ತಗೊಳಿಸುವುದು ಸುಲಭದ ಕೆಲಸ ಆಗಿರಲ್ಲ. ಆದರೆ ಪಾಕಿಸ್ತಾನಕ್ಕೆ ಹೊರಗಿನಿಂದ ಒತ್ತಡ ಹೇರಿದರೆ ಈ ಕೆಲಸ ಸಾಧ್ಯವಾಗಬಹುದು.

ಮರಣದಂಡನೆಗೆ ತಡೆ ನೀಡಿದ್ದು ಪಾಕಿಸ್ತಾನದ ರಾಜಕೀಯದ ಮೇಲೆ ಯಾವ ಬದಲಾವಣೆ ತಂದಿದೆ?
ಪಾಕಿಸ್ತಾನ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಷಯದ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಚರ್ಚೆಯನ್ನು ನೋಡಿದ್ದೆ. ನನಗೆ ಅಚ್ಚರಿ ಆಗಿದ್ದು ಏನೆಂದರೆ ಹಿರಿಯ ಪತ್ರಕರ್ತ ರೌಫ್ ಕ್ಲಾಸ್ರಾ ಅವರು ಈ ವಿಚಾರಣೆ ಮತ್ತು ಮರಣದಂಡನೆ ವಿರುದ್ಧ ಮಾತನಾಡಿದ್ದರು. ಸೇನಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಅವರು ವಿಮರ್ಶಾತ್ಮಕ ದೃಷ್ಟಿಯಲ್ಲಿ ನೋಡಿದ್ದಾರೆ. ಕುಲಭೂಷಣ್ ಅವರಿಗೆ ದೂತವಾಸ ಕಚೇರಿಯ ಸಂಪರ್ಕ ಕಲ್ಪಿಸದಂತೆ ಮಾಡಿದ್ದನ್ನು ರೌಫ್ ಪ್ರಶ್ನಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಪತ್ರಕರ್ತರ, ಸಾಮಾನ್ಯ ಜನರ ಹೃದಯ ಗೆಲ್ಲುವ ಪ್ರಯತ್ನವನ್ನು ಭಾರತ ಮಾಡಬೇಕು. ಎರಡೂ ದೇಶಗಳ ನಡುವೆ  ಹಲವು ಕಾಲಗಳಿಂದಿರುವ ತಿಕ್ಕಾಟದಿಂದ ಇದು ಅಷ್ಟು ಸುಲಭ ಅಲ್ಲ. ಆದರೆ ಭಾರತದ ಜೈಲಿನಲ್ಲಿರುವ ಪಾಕಿಸ್ತಾನಿ ಕೈದಿಗಳನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಭಾರತ ಒಂದು ಹೆಜ್ಜೆ ಮುಂದಿಡಬಹುದು.

ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಪರಿಣಾಮ ಬೀರಲಿದೆಯೇ?
ಖಂಡಿತವಾಗಿಯೂ  ಹೌದು, ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಅನುಸರಿಸದಿರುವ ಕಾರಣ ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್​ ಗಲ್ಲುಶಿಕ್ಷೆಯನ್ನು ತಡೆ ಹಿಡಿದಿದೆ. ಈ ಮೂಲಕ ಜಾಧವ್ ಅವರನ್ನು ಬಂಧಮುಕ್ತರಾಗಿಸಲು ಪಾಕ್ ಮೇಲೆ ಒತ್ತಡ ಹೇರಿದಂತಾಗುತ್ತದೆ. ಐಸಿಜೆ ತೀರ್ಪಿನ ವಿರುದ್ಧ ಪಾಕ್ ಹೋಗುವಂತಿಲ್ಲ. ಇಲ್ಲದಿದ್ದರೆ, ಪಾಕಿಸ್ತಾನವನ್ನು ಸಂಪೂರ್ಣವಾಗಿ ದೂರವಿಡಲಾಗುವುದು. ಹೀಗಾದರೆ ಪಾಕಿಸ್ತಾನದ ಗೌರವಕ್ಕೆ ಚ್ಯುತಿ ಉಂಟಾಗುವುದು ಮಾತ್ರವಲ್ಲದೆ ಅದು ಅಂತರರಾಷ್ಟ್ರೀಯ ಸಂಬಂಧವನ್ನೂ ಕಳೆದುಕೊಳ್ಳುತ್ತದೆ.

ಮೊದಲು ಸರಬ್ಜಿತ್, ಈಗ ಕುಲಭೂಷಣ್  ಜಾಧವ್. ಪಾಕಿಸ್ತಾನ ಯಾಕೆ ಹೀಗೆ?
ಎರಡೂ ರಾಷ್ಟ್ರಗಳ ನಡುವಿನ ತಿಕ್ಕಾಟವೇ ಇದಕ್ಕೆ ಕಾರಣ. ಎರಡೂ ರಾಷ್ಟ್ರಗಳ ಜೈಲಿನಲ್ಲಿ ಕೈದಿಗಳಿದ್ದಾರೆ. ದುರದೃಷ್ಟವಶಾತ್, ದೈನಂದಿನ ವ್ಯವಹಾರದಂತೆ ಈ ಪ್ರಕರಣಗಳು ನಡೆಯುತ್ತವೇ ಇರುತ್ತವೆ. ಎರಡೂ ರಾಷ್ಟ್ರಗಳು ಪರಸ್ಪರ ಸಮಾಲೋಚನೆ ಮಾಡುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ.

ಸರಬ್ಜಿತ್ ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಯಿತು, ಜಾಧವ್ ಸುರಕ್ಷಿತರಾಗಿದ್ದಾರೆ ಎಂದು ಭಾರತ ಖಚಿತ ಪಡಿಸುವುದಾದರೂ ಹೇಗೆ?
ಕುಲಭೂಷಣ್ ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡುವಂತಾಗಬಾರದು. ಸರಬ್ಜಿತ್ ಪ್ರಕರಣದಲ್ಲಾದರೆ, ನನಗೆ ಆತನನ್ನು ಜೈಲಿನಲ್ಲಿ ಸಂಪರ್ಕಿಸುವ ಅವಕಾಶ  ಸಿಕ್ಕಿತ್ತು. ಆತನಿಗೆ ಅಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ನಾನು ಆತನನ್ನು ಮೊದಲ ಬಾರಿ ಭೇಟಿ ಆದಾಗ ಆತನ ಎಡಗಾಲಿಗೆ ಸೋಂಕು ತಗಲಿತ್ತು. ಆತನ ಆರೋಗ್ಯ ಹದಗೆಟ್ಟಿತ್ತು. ನಾನು ಆತನಿಗೆ ಔಷಧಿ, ಆಹಾರ, ಹಣ್ಣು ಹಂಪಲು ನೀಡಿ ಸಹಾಯ ಮಾಡಿದೆ. ಆತ ಗುಣಮುಖನಾದ. ನ್ಯಾಯಾಲಯದ ಅನುಮತಿ ಪಡೆದು ನಾನು ಆತನನ್ನು 25 ಬಾರಿ ಭೇಟಿಯಾಗಿದ್ದೆ. ಜಾಧವ್ ಅವರ ಪ್ರಕರಣದಲ್ಲಿ ಆತನಿಗೆ ದೂತವಾಸದ ಸಂಪರ್ಕ ಕಲ್ಪಿಸಲು ಭಾರತ ರಾಜತಾಂತ್ರಿಕ ರೀತಿಯಲ್ಲಿ ಪ್ರಯತ್ನಿಸಬೇಕು. ಜಾಧವ್ ಅವರ ಕುಟುಂಬದವರು ಆತನನ್ನು ಭೇಟಿ ಮಾಡುವಂತೆ ಮಾಡಬೇಕು.

ಪಾಕಿಸ್ತಾನಿ ಕೈದಿಗಳೊಂದಿಗೆ ಭಾರತ ಆ ರೀತಿ ವರ್ತಿಸಿದರೆ?
ದುರದೃಷ್ಟವಶಾತ್, ಎರಡೂ ರಾಷ್ಟ್ರಗಳು ತಮ್ಮ ಕೈದಿಗಳನ್ನು ಶತ್ರುಗಳಂತೆಯೇ ಕಾಣುತ್ತವೆ. ಅವರನ್ನು ಮನುಷ್ಯರೆಂದು ಪರಿಗಣಿಸುವುದೇ ಇಲ್ಲ, ಪಾಕಿಸ್ತಾನಿ ಕೈದಿಗಳೊಂದಿಗೆ ಭಾರತ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತದೆ ಎಂದು ನಾನು ಹೇಳಲಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT