ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫುಲೆ’ ಎನ್ನುವ ಸುಂದರ ಸ್ವಪ್ನಗಳ ಅರಸುತ್ತ...

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಡಾ. ಎನ್. ಗಾಯತ್ರಿ
ಆಧುನಿಕ ಭಾರತದ ಸಾಮಾಜಿಕ ಚಳವಳಿಯ ಹರಿಕಾರರೆಂದೇ ಪ್ರಸಿದ್ಧರಾದ ಮಹಾರಾಷ್ಟ್ರದ ಜೋತಿಬಾಫುಲೆ ‘ಸತ್ಯಶೋಧಕ ಸಮಾಜ’ವನ್ನು ಕಟ್ಟಿ, ತಳಸಮುದಾಯದ ಏಳಿಗಾಗಿ ದುಡಿದು ‘ಮಹಾತ್ಮ’ ಎನ್ನಿಸಿಕೊಂಡವರು.

‘ಶಿಕ್ಷಣವೊಂದೇ ಸಮಾಜದ ಎಲ್ಲ ಕೆಡುಕುಗಳ ನಿವಾರಣೆಗೆ ಸಾಧನ’ ಎಂದು ನಂಬಿದ್ದ ಜೋತಿಬಾ – ಸಮಾಜದ ಅಕ್ಷರ ವಂಚಿತರಿಗೆ, ಶೂದ್ರಾದಿ ಹೆಣ್ಣುಮಕ್ಕಳಿಗೆ ಶಾಲೆಗಳನ್ನು ಸ್ಥಾಪಿಸಿ ಜ್ಞಾನದ ಹೆಬ್ಬಾಗಿಲನ್ನು ತೆರೆದವರು. ದೇಶದ ಮೊದಲ ಶಿಕ್ಷಕಿ ಎನಿಸಿಕೊಂಡ ಅವರ ಪತ್ನಿ ಸಾವಿತ್ರಿಬಾಯಿ ಫುಲೆಯವರ ಜೊತೆಗೂಡಿ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಟೊಂಕ ಕಟ್ಟಿ ನಿಂತವರು.

ಒಳ್ಳೆಯ ಶಿಕ್ಷಕ, ಸಮಾಜ ಸುಧಾರಕ, ಸ್ತ್ರೀಪರ ಸಂವೇದಿ, ಕೆಳಜಾತಿ ವರ್ಗಗಳ ಹಿತ ಚಿಂತಕ, ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಪತಿಯೂ ಆಗಿ ಸಮಾಜಕ್ಕೇ ಒಂದು ಅತ್ಯುತ್ತಮ ಮಾದರಿಯಾಗಿರುವ ಜೋತಿಬಾ ಸ್ಮರಣೆ ಸರ್ವ ಕಾಲಕ್ಕೂ ಅಗತ್ಯವಾದದ್ದು. ಪುಲೆ ಅವರು ವಾಸವಾಗಿದ್ದ ಮನೆ, ಈಗಲೂ ಹಲವು ನೆನಪುಗಳನ್ನು ಉಸುರುವಂತಿದೆ. 
 
ಮಹಾರಾಷ್ಟ್ರದ ಪುಣೆ, ಹಲವಾರು ಸಾಮಾಜಿಕ ಕ್ರಾಂತಿಕಾರಿಗಳು ಬಾಳಿ, ಬದುಕಿದ್ದ ತವರೂರು. ನಮ್ಮ ನೆಲದ ಒಳಿತಿಗಾಗಿ ದುಡಿದ ಪ್ರಾತಃಸ್ಮರಣೀಯರು ಬದುಕಿದ, ನಡೆದಾಡಿದ, ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದವರ ಕರ್ಮಭೂಮಿಯನ್ನು ನೋಡುವ ಮಹದಾಸೆಯಿಂದ ಇತ್ತೀಚೆಗೆ ಪುಣೆಗೆ ಭೇಟಿ ನೀಡಿದ್ದೆ. ಅದರಲ್ಲೂ ಭಾರತದ ಪ್ರತಿಯೊಬ್ಬ ಹೆಣ್ಣು ಮಗಳೂ ಸ್ಮರಿಸಿಕೊಳ್ಳಲೇಬೇಕಾದ ‘ಅಕ್ಷರದವ್ವ’ ಸಾವಿತ್ರಿಬಾಯಿ ಫುಲೆ ಬದುಕಿ–ಬಾಳಿದ ಪುಣ್ಯಭೂಮಿಯನ್ನು ನೋಡುವ ಹಿರಿದಾಸೆಯಿಂದ ಫುಲೆವಾಡಾದ ಜಾಡು ಹಿಡಿದು ಹೊರಟೆ.
 
ಫುಲೆ ದಂಪತಿಗೆ ಸಂಬಂಧಿಸಿದ ಚಿತ್ರಪಟಗಳು
 
ಹತ್ತೊಂಬತ್ತನೇ ಶತಮಾನದಲ್ಲೇ ಕೆಳಜಾತಿ ವರ್ಗಗಳಿಗೆ ಮತ್ತು ಹೆಣ್ಣುಮಕ್ಕಳಿಗೆ ಅಕ್ಷರಲೋಕದ ಹೆಬ್ಬಾಗಿಲು ತೆರೆದ ಫುಲೆ ದಂಪತಿಗಳು ವಾಸಿಸಿದ ಮನೆಯನ್ನು ನೋಡಲೆಂದು ಹೊರಟಿದ್ದು ಪುಣೆಯ ಬುಧವಾರಪೇಟೆಯ ಶೇಟ್ ಪೇಟೆಯಲ್ಲಿ. ಈ ಪ್ರದೇಶವನ್ನು ‘ಫುಲೆನಗರ’ ಎಂತಲೂ ಕರೆಯುತ್ತಾರೆ. ಸುತ್ತಮುತ್ತಲೂ ಚಿಕ್ಕ ಪುಟ್ಟ ಮನೆಗಳಿಂದ ಸುತ್ತುವರೆದ ‘ಫುಲೆವಾಡಾ’ದ ಮುಂದೆ ರಿಕ್ಷಾದಿಂದ ಕೆಳಗಿಳಿದಾಗ, ಕಂಡದ್ದು ಬೀಗ ಜಡಿದ ದೊಡ್ಡ ಗೇಟು. ಇದನ್ನು ನೋಡಿ ನಿರಾಶಳಾಗಿ ನಿಂತಿದ್ದಾಗ, ದಾರಿಹೋಕರೊಬ್ಬರು ಬಂದು ಹಿಂದುಗಡೆಯಿಂದ ಪ್ರವೇಶವಿರುವುದಾಗಿ ಮಾಹಿತಿ ಕೊಟ್ಟರು. 
 
1852ರಷ್ಟು ಹಳೆಯದಾದ ‘ಫುಲೆವಾಡಾ’ ಫುಲೆ ದಂಪತಿಗಳು ವಾಸಿಸುತ್ತಿದ್ದ ಮನೆ. ಇದು ಈಗ ಮ್ಯೂಸಿಯಂ ಆಗಿದೆ. ಇದಕ್ಕೆ ಪ್ರವೇಶ ಉಚಿತ. 
ಫುಲೆ ದಂಪತಿಗಳು ಅವರ ಸಾಮಾಜಿಕ ಜೀವನದ ಬಹುಪಾಲು ಚಟುವಟಿಕೆಗಳನ್ನು ಈ ಮನೆಯಲ್ಲಿದ್ದಾಗಲೇ ನಡೆಸಿದ್ದರು. ಜೋತಿಬಾ 1890ರಲ್ಲಿ ನಿಧನರಾದ ನಂತರ ಅವರ ಮಡದಿ ಸಾವಿತ್ರಿಬಾ ಅವರು 1897ರವರೆಗೆ – ತಮ್ಮ ಜೀವನದ ಕೊನೆಗಾಲದವರೆಗೆ – ಇದೇ ಮನೆಯಲ್ಲಿ ವಾಸವಾಗಿದ್ದರು.
 
1906ರಲ್ಲಿ ಫುಲೆಯವರ ಮಗ ಯಶವಂತ ಪ್ಲೇಗ್ ಕಾಯಿಲೆಯಾದವರ ಸೇವೆ ಮಾಡುತ್ತಲೇ ತೀರಿಕೊಂಡ ನಂತರ, ಈ ಮನೆಯಲ್ಲಿ ಯಶವಂತರ ಎರಡನೆಯ ಹೆಂಡತಿ ಚಂದ್ರಭಾಗಾ ಬಾಯಿ ಮತ್ತು ಮಗಳು ಸೋನಿ ಜೀವಿಸಿದ್ದರು. ಆದರೆ ಅವರಿಗಿದ್ದ ಕಿತ್ತು ತಿನ್ನುವ ಬಡತನದಿಂದ ಈ ಮನೆಯನ್ನು ಅವರು ಉಳಿಸಿಕೊಳ್ಳಲಾಗಲಿಲ್ಲ.

ಕೇವಲ 100 ರೂಪಾಯಿಗಳಿಗೆ ಈ ಮನೆಯನ್ನು ಅವರು ಮಾರಿಬಿಟ್ಟಿದ್ದರು. ಇಲ್ಲಿ ಇರುವ ಸೂಚನಾಪತ್ರದ ಪ್ರಕಾರ 1922ರಲ್ಲಿ ಬಾಳಾ ರಕುಮಾಜಿ ಗೋರೆಯೆನ್ನುವವರು ಅರ್ಜುನ ಪಾಟೀಲ್ ಬೋವಾ ಅವರಿಂದ 1500 ರೂಪಾಯಿಗಳನ್ನು ಕೊಟ್ಟು ಈ ಮನೆಯನ್ನು ಖರೀದಿಸಿದ್ದರೆಂಬುದಾಗಿ ಹೇಳಿದೆ. 
 
ಈ ಮನೆಯಲ್ಲಿ ‘ಶ್ರೀಸಾವಾತಾ ಮಾಳಿ’ ಎಂಬ ಒಂದು ಉಚಿತ ಬೋರ್ಡಿಂಗ್ ಶಾಲೆಯನ್ನು ನಡೆಸಲಾಗುತ್ತಿತ್ತು. 1969ರ ಮಧ್ಯದಲ್ಲಿ ಇದಕ್ಕೆ ‘ಮಹಾತ್ಮ ಫುಲೆ ವಸತಿಗೃಹ’ ಎಂದು ಹೆಸರಿಸಲಾಯಿತು. 1972ರಲ್ಲಿ ಮಹಾರಾಷ್ಟ್ರ ರಾಜ್ಯ ಪುರಾತತ್ವ ಶಾಸ್ತ್ರ ಇಲಾಖೆಯು ಈ ಜಾಗವನ್ನು ವಶಪಡಿಸಿಕೊಂಡು ‘ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಿ, ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. 
 
ರೈಲ್ವೇ ಬಂಡಿಯಂತೆ ಇರುವ ಎರಡು ಉದ್ದನೆಯ ಪಡಸಾಲೆಗಳು ಮತ್ತು ಎರಡು ಕೋಣೆಗಳು ಇರುವ ಈ ಮನೆ ಚಿಕ್ಕದಾಗಿದ್ದು ಸರಳವಾಗಿದೆ. ಮನೆಯ ಗೋಡೆಗಳನ್ನು ಸೆಗಣಿಯಿಂದ ಸಾರಿಸಲಾಗಿದೆ. ಫುಲೆ ದಂಪತಿಗಳ ಒಂದು ದೊಡ್ಡ ಫೋಟೋ ಎದುರಿಗೆ ಗೋಡೆಯನ್ನು ಅಲಂಕರಿಸಿದ್ದರೆ, ಪಡಸಾಲೆಯ ಇಕ್ಕೆಲಗಳಲ್ಲೂ ಹಲವಾರು ಪಟಗಳಿವೆ.
 
ಹೆಣ್ಣುಮಕ್ಕಳ ಶಾಲೆಯಲ್ಲಿ ಸಾವಿತ್ರಿಬಾಯಿ ಪಾಠ ಮಾಡುತ್ತಿರುವುದು, ಶಾಲೆಗೆಂದು ಹೊರಟ ಅವರಿಗೆ ಪುಂಡರು ಮೈಮೇಲೆ ಸೆಗಣಿ–ಕೆಸರು ಎರಚುವುದು, ಲಾಟೀನಿನ ಬೆಳಕಿನಲ್ಲಿ ಫುಲೆ ದಂಪತಿಗಳು ವಯಸ್ಕ ಹೆಣ್ಣುಮಕ್ಕಳಿಗೆ ಪಾಠ ಹೇಳುತ್ತಿರುವುದು, ನಾಲ್ಕು ಜೋಡಿ ವಧುವರರಿಗೆ ಒಟ್ಟಿಗೆ ಸರಳ ವಿವಾಹ ಮಾಡಿಸುತ್ತಿರುವುದು – ಇವೇ ಮುಂತಾದ ವಿಷಯವನ್ನುಳ್ಳ ಚಿತ್ರಪಟಗಳು ಒಂದು ಗೋಡೆಯನ್ನು ಅಲಂಕರಿಸಿವೆ.
 
 
ಮತ್ತೊಂದು ಗೋಡೆಯಲ್ಲಿ ಸಾಹು ಮಹಾರಾಜ್, ಮಹಾದೇವ ಗೋವಿಂದ ರಾನಡೆಯಂತಹ ಮಹಾಪುರುಷರ ಪಟಗಳಲ್ಲದೆ, ಜೋತಿಬಾ ರಚಿಸಿರುವ ‘ಗುಲಾಮಗಿರಿ’, ‘ಛತ್ರಪತಿ ಶಿವಾಜಿಯವರ ಜೀವನ ಚರಿತ್ರೆ’, ‘ಸಾರ್ವಜನಿಕ ಸತ್ಯ ಧರ್ಮ ಪುಸ್ತಕ’, ‘ರೈತನ ಚಾವಟಿ’ ಮುಂತಾದ ಪುಸ್ತಕಗಳ ರಕ್ಷಾಪುಟಗಳು ಮತ್ತು ಅವರ ಮರಾಠಿ ಮತ್ತು ಇಂಗ್ಲಿಷ್ ಕೈಬರಹಗಳು ಮತ್ತೊಂದು ಗೋಡೆಯನ್ನು ಅಲಂಕರಿಸಿವೆ. 
 
ಆ ಕಾಲದಲ್ಲಿ ಅಸ್ಪೃಶ್ಯರನ್ನು ಜ್ಞಾನವಂಚಿತರನ್ನಾಗಿ ಮಾಡುವುದಷ್ಟೇ ಅಲ್ಲ, ಬದುಕಿಗೆ ಅಗತ್ಯವಾದ ಮತ್ತು ಕುಡಿಯಲು ಬೇಕಾದ ನೀರನ್ನು ಅವರು ಸ್ವತಃ ತಾವೇ ತೆಗೆದು ಕುಡಿಯುವಂತಿರಲಿಲ್ಲ. ಇಂತಹ ಸಂಕಟಮಯ ಪರಿಸ್ಥಿತಿಯಲ್ಲಿ ಸಾರ್ವಜನಿಕವಾಗಿ ಎಲ್ಲರ ಬಳಕೆಗೂ ಮುಕ್ತವಾದ ಕುಡಿಯುವ ನೀರಿನ ತೊಟ್ಟಿಯನ್ನು ಫುಲೆಯವರು ಕಟ್ಟಿಸಿದ್ದರು.
 
ಕ್ಷಾಮಕಾಲದ ಸಂಕಟದಲ್ಲಿ ಜನ ನೀರಿಗಾಗಿ ತತ್ತರಿಸುತ್ತಿದ್ದಾಗ, ತಮ್ಮ ಮನೆಯ ಅಂಗಳದಲ್ಲಿದ್ದ ಬಾವಿಯಿಂದ ನೀರು ತೆಗೆದುಕೊಳ್ಳಲು ಅಸ್ಪೃಶ್ಯರಿಗೆ ಪ್ರವೇಶ ಕಲ್ಪಿಸಿದ್ದರು. ಫುಲೆ ದಂಪತಿಗಳ ಈ ಔದಾರ್ಯದ ಕ್ರಿಯೆಯನ್ನು ನೆನಪಿಸುವ ಸೇದುವ ನೀರಿನ ಬಾವಿಯೊಂದು ಮನೆಯ ಆವರಣದಲ್ಲಿ ಈಗಲೂ ಸಾಕ್ಷಿಯಾಗಿ ನಿಂತಿದೆ. 
 
ಮನೆ ಪುಟ್ಟದಾಗಿದ್ದರೂ ಹೊರಗೆ ಕಾಂಪೌಂಡಿನಲ್ಲಿ ವಿಶಾಲವಾದ ಜಾಗವಿದೆ. ಇಲ್ಲಿಯೇ ಫುಲೆಯವರು ‘ಸತ್ಯಶೋಧಕ ಸಮಾಜ’ದ ಸಭೆಗಳನ್ನು ನಡೆಸುತ್ತಿದ್ದರಂತೆ. ಮನೆಯ ಹಿಂದುಗಡೆ ಫುಲೆಯವರ ಸಮಾಧಿ ಇದೆ. ಮರಣಕಾಲದಲ್ಲಿ ಜೋತಿಬಾ ತಮ್ಮನ್ನು ಮನೆಯ ಹಿಂದೆ ಒಂದು ಗುಂಡಿಯಲ್ಲಿ ಉಪ್ಪಿನೊಡನೆ ಹೂಳಬೇಕೆಂದು ವಿನಂತಿಸಿಕೊಂಡಿದ್ದರು. ಇದಕ್ಕಾಗಿ ಅವರ ಮನೆಯ ಹಿಂದೆ ಒಂದು ಗುಂಡಿಯನ್ನೂ ತೋಡಿದ್ದರು.
 
ಆದರೆ ಪುರಸಭೆಯವರು ವಸತಿ ಪ್ರದೇಶದಲ್ಲಿ ಸಮಾಧಿ ಮಾಡಲು ಅನುಮತಿ ನಿರಾಕರಿಸಿದ್ದರು. ಆಗ ವಿಧಿಯಿಲ್ಲದೆ, ಹೊರಗೆ ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರಿಯೆ ನಡೆಸಿದ ನಂತರ, ಅಸ್ಥಿಗಳನ್ನು ಸಂಗ್ರಹಿಸಿ ಅದನ್ನೊಂದು ಕರಡಿಗೆಯಲ್ಲಿಟ್ಟು – ಜೋತಿಬಾ ತೋಡಿಸಿದ್ದ ಗುಳಿಯಲ್ಲೇ ಹೂಳಲಾಗಿದೆ.
 
ಸಾವಿತ್ರಿಬಾಯಿ ಉಪಯೋಗಿಸುತ್ತಿದ್ದ ಬೃಂದಾವನ ಮತ್ತು ಅವರೇ ತಯಾರಿಸಿದ ಪಾದುಕೆಗಳು ಇಲ್ಲಿವೆ. 
ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿಯೇ ಸ್ತ್ರೀಯರ ಮತ್ತು ದಲಿತರ ಕಲಿಕೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ ಫುಲೆ ದಂಪತಿಗಳ ವ್ಯಕ್ತಿತ್ವ ಬಹುಮುಖವಾದದ್ದು ಮತ್ತು ದೀರ್ಘಕಾಲದ ಪರಿಣಾಮವನ್ನು ಹೊಂದಿರುವಂತಹುದು.
 
ಅವರ ಬದುಕು ಮತ್ತು ಸಾಧನೆ ಬರೀ ಮಹಾರಾಷ್ಟ್ರಕ್ಕಲ್ಲ, ಇಡೀ ದೇಶಕ್ಕೆ ಮಾದರಿಯಾದುದು. ಇಂತಹ ಮಹಾತ್ಮರ ಸ್ಮರಣೆಯನ್ನು ಅರಸಿ ಇಲ್ಲಿ ಬರುವವರಿಗೆ ಕೊಂಚ ನಿರಾಶೆಯಾಗುತ್ತದೆ. ಅವರ ಜೀವನದ ಅಗಾಧತೆಯನ್ನು ಮತ್ತು ಬಹುಮುಖತೆಯನ್ನು ಸಂಪೂರ್ಣವಾಗಿ ಹಿಡಿದಿಡಲು ಈ ಸ್ಮಾರಕಕ್ಕೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಇಲ್ಲಿರುವ ಎಲ್ಲ ಮಾಹಿತಿಯು ಮರಾಠಿ ಭಾಷೆಯಲ್ಲಿದೆ.

ಫುಲೆಯವರ ಅನುರೂಪದ ದಾಂಪತ್ಯ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗದೆ ಲೋಕಕಲ್ಯಾಣಕ್ಕೆ ವಿಸ್ತರಿಸಿಕೊಂಡಿತ್ತು. ಫುಲೆಯವರು ನಡೆಸಿದ ಪ್ರತಿಯೊಂದು ಕೈಂಕರ್ಯದಲ್ಲೂ ಸಾವಿತ್ರಿಯವರ ಪಾತ್ರವಿತ್ತು. ಸಾವಿತ್ರಿ ಬಾಯಿಯವರೂ ಈ ಮನೆಯಲ್ಲಿ ವಾಸಿಸಿದ್ದರು – ಎಂಬ ಭಾವ ಬರುವಂತಹ ಇನ್ನು ಹೆಚ್ಚಿನ ಮಾಹಿತಿಯ ಸಂಗ್ರಹ ಮತ್ತು ಪ್ರದರ್ಶನದ ಅಗತ್ಯವಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT