ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಿತ್ರ ತೀರ್ಥ ಮತ್ತು ‘ಮೇಲುಕಾಟ್’

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಇಂಡೋನೇಷ್ಯಾದಲ್ಲಿ ‘ದೇವರ ದ್ವೀಪ’ ಎಂದು ಹೆಸರಾದದ್ದು ಬಾಲಿ. ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವ ಬಾಲಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! 
 
‘ಇಲ್ಲಿ ಮನೆಗಳೇ ಇಲ್ಲವೇನೋ?’ ಎಂದುಕೊಳ್ಳುತ್ತಾ ಸಂಚಾರ ಆರಂಭಿಸಿದಾಗ ಬೆಳಿಗ್ಗೆ ಏಳು ಗಂಟೆ. ಆಗಲೇ ಬಾಲಿಯ ಬಿಸಿಲಿಗೆ, ಒಣ ಹವೆಗೆ ಮೈ ಬೆವರುತ್ತಿತ್ತು. ನಮ್ಮ ಮಾರ್ಗದರ್ಶಿ ವಯಾನ್‌ಗೆ ‘ಬಾಲಿಯಲ್ಲಿ ಸ್ನಾನ ಮಾಡಿದಷ್ಟೂ ಸಾಲದು’ ಎಂದೆ ತಮಾಷೆಗೆ.

ಕೂಡಲೇ ಆತ ‘‘ಬಾಲಿಯಲ್ಲಿ ಆಚರಿಸುವ ಹಿಂದೂಧರ್ಮಕ್ಕೆ ಆಗಮ ತೀರ್ಥ (ಪವಿತ್ರ ನೀರಿನ ಧರ್ಮ) ಎಂದೇ ಕರೆಯುತ್ತೇವೆ. ನೀರಿಲ್ಲದೇ ನಾವಿಲ್ಲ. ತಾಯಿಯ ಗರ್ಭದಲ್ಲಿನ ನೀರಿನ ಚೀಲದಲ್ಲಿಯೇ ನಮ್ಮ ವಾಸ. ಮಳೆ–ಬೆಳೆ  ಎಲ್ಲದಕ್ಕೂ ನೀರು ಬೇಕು. ನೀರಿಗೆ ಬೆಳೆಸುವ, ಪೋಷಿಸುವ, ಸ್ವಚ್ಛಮಾಡುವ ಅಪೂರ್ವಶಕ್ತಿಯಿದೆ. ದಿನಕ್ಕೆ ಎರಡು ಬಾರಿ ಸ್ನಾನವಂತೂ ಸರಿ. ಅದರೊಂದಿಗೆ ನಾವು ಪ್ರತೀ ಆರು ತಿಂಗಳಿಗೊಮ್ಮೆ ದೇಹ ,ಮನಸ್ಸು, ಆತ್ಮ ಮೂರನ್ನೂ ಸ್ವಚ್ಛಗೊಳಿಸುವ ‘ಮೇಲುಕಾಟ್’ ಮಾಡುತ್ತೇವೆ’’ ಎಂದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಕುತೂಹಲ ಕೆರಳಿ ವಿಚಾರಿಸಿದಾಗ ಮಾಹಿತಿ ಸಿಕ್ಕಿತು.
 
‘ತ್ರಿಹಿತಕರಣ’ ಬಾಲಿಯ ಹಿಂದೂಗಳ ಜೀವನ ಮಂತ್ರ. ಸಮಾಜದ ಜನರು, ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಹಿತ ಅಡಗಿದೆ ಎಂಬುದು ಇದರ ಅರ್ಥ. ಹಾಗಾಗಿಯೇ ಮನೆಗಳು ಬೇರೆ ಇದ್ದರೂ ಹಬ್ಬ ಸಮಾರಂಭಗಳಲ್ಲಿ ಊರಿಗೆ ಊರೇ ಭಾಗಿಯಾಗುತ್ತದೆ. ಇಡೀ ಹಳ್ಳಿಯೇ ದೊಡ್ಡ ಅವಿಭಕ್ತ ಕುಟುಂಬದಂತೆ! ದೇವರನ್ನು ಕುರಿತು ಭಕ್ತಿಯಿದೆ, ಪ್ರತೀ ಮನೆಯಲ್ಲೂ  ದೇಗುಲವಿರುತ್ತದೆ. ಆದರೆ ಒಳಗೆ ಯಾವುದೇ ಮೂರ್ತಿಯಿಲ್ಲ: ದೇವರು, ಹಿರಿಯರು ಶಕ್ತಿ ಸ್ವರೂಪಿಗಳು.

ನಮ್ಮ ಪೂಜೆಗೆ ಒಲಿದು ಆಗಮಿಸಿ, ಕುಳಿತು, ಹರಸುತ್ತಾರೆ ಎಂಬ ನಂಬಿಕೆಯಿಂದ ಅವರಿಗಾಗಿಯೇ ಪುಟ್ಟ ಜಾಗವನ್ನು ಖಾಲಿ ಇಡಲಾಗುತ್ತದೆ! ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಜನರಿಗೆ ಶಕ್ತಿ ಸಂಕೇತಗಳು. ಹಿರಿಯರು ಮತ್ತು ದೇವರು ಕೂಡಾ ನಿಸರ್ಗದಲ್ಲಿ ಲೀನವಾಗಿದ್ದಾರೆ. ಹಾಗಾಗಿ ಅವುಗಳ ಮೂಲಕ ಎಲ್ಲೆಲ್ಲೂ ಇದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದಲೇ ಇಲ್ಲಿ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರ.  
‘ಮೇಲುಕಾಟ್’ಗಾಗಿ ಬಾಲಿಯ ಜನರು ಸಾವಿರಾರು ವರ್ಷಗಳಿಂದ ಸಂದರ್ಶಿಸುತ್ತಿರುವ ಮುಖ್ಯ ಸ್ಥಳ ‘ತೀರ್ಥ ಎಂಪುಲ್’! ಉಬುಡ್ ಗ್ರಾಮದಿಂದ ಅರ್ಧ ತಾಸಿನ ಹಾದಿಯಲ್ಲಿ ಮನುಕಯಾ ಎಂಬ ಪ್ರಾಂತ್ಯದಲ್ಲಿ ‘ತಂಪಕ್ ಸಿರಿಂಗ್’ ಎಂಬ ಪುಟ್ಟ ಪಟ್ಟಣ. ಇಲ್ಲಿದೆ ಪರಮಪವಿತ್ರ ದೇವಾಲಯ, ತೀರ್ಥ ಎಂಪುಲ್ (ಪವಿತ್ರ ಚಿಲುಮೆ).
 
ಪವಿತ್ರ ಚಿಲುಮೆಯಲ್ಲಿ ಜನರ ಸ್ನಾನ
 
ಇಲ್ಲಿನ  ಕೊಳದ ಚಿಲುಮೆಯಿಂದ ಸತತವಾಗಿ ಸಿಹಿನೀರು ಚಿಮ್ಮುತ್ತಿದ್ದು ಅದು ಅಮೃತಕ್ಕೆ ಸಮಾನ–ಪವಿತ್ರ ಎಂದು ಬಾಲಿಯ ಜನ ಪರಿಗಣಿಸುತ್ತಾರೆ. ಈ ನೀರಿನ ವಿಧಿವತ್ತಾದ ಸ್ನಾನ, ಪ್ರೋಕ್ಷಣೆ ಮತ್ತು ಸೇವನೆ ಶುದ್ಧೀಕರಣದ ಪ್ರಮುಖ ಘಟ್ಟ. ಈ ದೇವಾಲಯ ಸಂಕೀರ್ಣವನ್ನು ಕ್ರಿ.ಶ 960ರಲ್ಲಿ ವರ್ಮದೇವ ರಾಜವಂಶದ ಆಡಳಿತ ಅವಧಿಯಲ್ಲಿ ಕಟ್ಟಲಾಯಿತು. ಇಲ್ಲಿರುವ ಪವಿತ್ರ ಚಿಲುಮೆಯ ಕುರಿತು ಉಸಾನಾ ಬಾಲಿ ಹಸ್ತಪ್ರತಿಯಲ್ಲಿ ಉಲ್ಲೇಖವಿದೆ. 
 
ಪವಿತ್ರ ಚಿಲುಮೆಯ ಬಗ್ಗೆ ಸ್ಥಳೀಯರು ಹೇಳುವ ಕಥೆ ಹೀಗಿದೆ: ಬಾಲಿಯ ರಾಜ ಮಾಯಾದೆನಾವ ಕ್ರೂರಿಯಾಗಿದ್ದು, ಪ್ರಜೆಗಳಿಗೆ ತೊಂದರೆ ನೀಡುತಿದ್ದ. ಅವರ ನಂಬಿಕೆ–ಶ್ರದ್ಧೆಗಳನ್ನು ಗೌರವಿಸದ ದುರಹಂಕಾರಿಯಾಗಿದ್ದ. ಜೊತೆಗೆ ತನಗೆ ಬರುತ್ತಿದ್ದ ಮಾಯಾಮಂತ್ರಗಳ ದುರುಪಯೋಗ ಮಾಡುತ್ತಿದ್ದ. ಬಾಲಿಯ ಜನ ಆರಾಧಿಸುವ ಇಂದ್ರದೇವ ಇದರಿಂದ ಕುಪಿತನಾದ. ರಾಜನನ್ನು ಸೋಲಿಸಲು ತನ್ನ ಪಡೆಯನ್ನು ಕಳುಹಿಸಿದ.

ಆಕ್ರಮಣ ತಪ್ಪಿಸಿಕೊಳ್ಳಲು ಮಾಯಾರೂಪ ತಳೆಯುವ ಶಕ್ತಿ ಹೊಂದಿದ್ದ ದೊರೆ – ನದಿಮಾರ್ಗ, ಬೆಟ್ಟ ಗುಡ್ಡ, ಬಯಲು–ಮೈದಾನಗಳಲ್ಲಿ ಅಡ್ಡಾದಿಡ್ಡಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಹಾಗಾಗಿಯೇ ಈ ದೇವಾಲಯ ಇರುವ ಸ್ಥಳಕ್ಕೆ ತಂಪಕ್ ಸಿರಿಂಗ್ ಎಂಬ ಹೆಸರು. (ಪಾದ ಮತ್ತು ಅಡ್ಡಡ್ಡಲಾಗಿ). ಇಂದ್ರ ಪಡೆಯ ಸೈನಿಕರು ಈ ಓಡಾಟದಿಂದ ಸುಸ್ತಾಗಿ ಬಾಯಾರಿದರು.

ಆಗ ಮಾಯಾಶಕ್ತಿಯ ಕುತಂತ್ರಿ ರಾಜ, ವಿಷದಿಂದ ಕೂಡಿದ  ನೀರಿನ ಚಿಲುಮೆಯನ್ನು ಸೃಷ್ಟಿಸಿದ. ಬಾಯಾರಿಕೆ ನೀಗಿಸಿಕೊಳ್ಳಲು ಈ ನೀರನ್ನು ಕುಡಿದು ಸೈನಿಕರು ರಾತ್ರಿ ವಿಶ್ರಾಂತಿಗಾಗಿ ಮಲಗಿದರು. ಬೆಳಿಗ್ಗೆ ಇಂದ್ರದೇವ ನೋಡಿದರೆ ಆತನ ಪಡೆಯಲ್ಲಿ ನೂರಾರು ಜನ ಮಡಿದಿದ್ದರು. ಉಳಿದವರು ನೋವಿನಿಂದ ಒದ್ದಾಡತೊಡಗಿದ್ದರು.

ಇದನ್ನು ಕಂಡ ಇಂದ್ರದೇವ ಕೂಡಲೇ ತನ್ನ ವಜ್ರಾಯುಧದಿಂದ ನೆಲವನ್ನು ಬಗೆದು, ಈ ಪವಿತ್ರ ಚಿಲುಮೆಯನ್ನು ಭೂಮಿಗೆ ತಂದ. ರೋಗ ಪರಿಹಾರಕ, ಅಮೃತಕ್ಕೆ ಸಮಾನವಾದ ಈ ನೀರಿನಿಂದ ಸೈನಿಕರು ಜೀವದಾನ ಪಡೆದರು. ಹೋರಾಟ ಮುಂದುವರಿದು ಇಂದ್ರದೇವ ವಿಜಯಿಯಾದ. ಈ ನಂಬಿಕೆಗೆ ಅನುಗುಣವಾಗಿ ದೇವಾಲಯದ ದ್ವಾರದ ಸಮೀಪ ಕೈಯಲ್ಲಿ ಪವಿತ್ರ ಜಲದ ಕರಂಡಕ ಹೊತ್ತ ಅತ್ಯಂತ ಸುಂದರ, ಬೃಹತ್ ಇಂದ್ರನ ಶಿಲಾಮೂರ್ತಿಯನ್ನು ಸ್ಥಾಪಿಸಲಾಗಿದೆ. ವೈಜ್ಞಾನಿಕವಾಗಿ, ಭೂಗರ್ಭದ ಆಳದಿಂದ ಹೊರಚಿಮ್ಮುವ ಪಾಕೆರಿಸಾನ್ ನದಿಯ ಚಿಲುಮೆ ಇದು ಎಂದು ವಿವರಿಸಲಾಗಿದೆ.
 
ಬಾಲಿಯ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಲಾದ ಈ ದೇಗುಲದಲ್ಲಿ ಶಿವ, ವಿಷ್ಣು, ಬ್ರಹ್ಮ, ಇಂದ್ರ ಮತ್ತು ಬಟುರ್ ಪರ್ವತಕ್ಕೆ ಸಂಬಂಧಿಸಿದ ಗೋಪುರಗಳಿವೆ. ದೇವಾಲಯವನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ಹೊರಗಿನ ಜಬ ಪುರ, ಮಧ್ಯದ ಜಬ ತೆಂಗಾಹ್ ಮತ್ತು ಒಳಗಿನ ಜೆರೋಆನ್. ಮಧ್ಯದ ಭಾಗದಲ್ಲಿ ಎರಡು ಕೊಳಗಳಿದ್ದು ಮೂರು ದೊಡ್ಡ ಚಿಲುಮೆಗಳಿಂದ ತೀರ್ಥ ಸೂರ್ಯ (ಸೂರ್ಯನ ಚಿಲುಮೆ), ತೀರ್ಥ ಬುಲಾನ್ (ಚಂದ್ರನ ಚಿಲುಮೆ) ಮತ್ತು ತೀರ್ಥ ಬಿಂಟಾಂಗ್ (ನಕ್ಷತ್ರಗಳ ಚಿಲುಮೆ)  ಚಿಮ್ಮುವ ನೀರನ್ನು ಮೂವತ್ತು ಕೊಳವೆಗಳ ಮೂಲಕ ಹೊರಬರುವಂತೆ ವ್ಯವಸ್ಥೆ ಮಾಡಲಾಗಿದೆ. 
 
ಇಲ್ಲಿನ ನೀರಿಗೆ ಮೂರು ವಿಶೇಷ ಶಕ್ತಿಗಳಿವೆ ಎಂಬ ನಂಬಿಕೆ ಜನರದ್ದು. ತೀರ್ಥ ಗೆರಿಂಗ್: ಕೆಟ್ಟ ಶಕ್ತಿಗಳನ್ನು ದೂರವಿಡಲು, ತೀರ್ಥ ಮೆರ್ಟಾ: ಸಂಪತ್ತು–ಸಮೃದ್ಧಿಗಾಗಿ ಮತ್ತು ತೀರ್ಥ ಸುಧಾಮಾಲಾ: ದೇಹ–ಆತ್ಮವನ್ನು ಶುದ್ಧಿಗೊಳಿಸಲು.

ಈ ರೀತಿ ಶುದ್ಧೀಕರಣ ಕ್ರಿಯೆಗೆ ‘ಮೆಲುಕಾಟ್’ ಎನ್ನಲಾಗುತ್ತದೆ. ವಿಶೇಷ ದಿನವಾದ ಹುಣ್ಣಿಮೆಯಂದು ಶುದ್ಧಿ ಕಾರ್ಯಕ್ಕೆ ಜನರು ಕಿಕ್ಕಿರಿದು ಸೇರುತ್ತಾರೆ. ದೇವಾಲಯದ ಅರ್ಚಕರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತದೆ. ವರ್ಷಕ್ಕೊಮ್ಮೆಯಾದರೂ ಬಾಲಿಯ ಜನರು ಇಲ್ಲಿಗೆ ಬಂದು ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿ, ಸ್ನಾನ ಮಾಡಿ, ಪವಿತ್ರ ಜಲವನ್ನು ಬಾಟಲಿಗಳಲ್ಲಿ ತುಂಬಿ ಮನೆಗೆ ಒಯ್ದು ಸಂರಕ್ಷಿಸಿ ಇಡುತ್ತಾರೆ.
 
ಮಗುವಿನ ಜನನದಿಂದ ಹಿಡಿದು ಎಲ್ಲಾ ಶುಭ ಕಾರ್ಯ ಮತ್ತು ಮರಣದ ಸಂಸ್ಕಾರ ನಡೆಯುವಾಗಲೂ ಇಲ್ಲಿಯ ನೀರು ಬಳಕೆಯಾಗುತ್ತದೆ. ದೇವಾಲಯದಿಂದ ನಿರ್ಗಮಿಸುವಾಗ ಕಾಣುವ ದೊಡ್ಡ ಕೊಳದಲ್ಲಿ ಕಾಣುವ ನೂರಾರು ದೊಡ್ಡ ಕ್ವಾಯ್ ಮೀನುಗಳು ಇಲ್ಲಿನ ಪ್ರಮುಖ ಆಕರ್ಷಣೆ. 
ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಶಿವನ ವಾಹನವಾದ ನಂದಿ ಮತ್ತು ಸಿಂಹನಂದಿನಿಯ ವಿಗ್ರಹಗಳನ್ನು ನೋಡಬಹುದು.

ದೇವಾಲಯಕ್ಕೆ ತಾಗಿರುವ ಗುಡ್ಡದಲ್ಲಿ ಸರ್ಕಾರ 1954ರಲ್ಲಿ ಅರಮನೆಯೊಂದನ್ನು ನಿರ್ಮಿಸಿತ್ತು. ಡಚ್ಚರ ಕಚೇರಿಯಾಗಿದ್ದ ಇದು ನಂತರ ಮಾಜಿ ರಾಷ್ಟ್ರಪತಿ ಸುಕರ್ನೋ ಅವರ ಬಾಲಿಯ ನಿವಾಸವಾಗಿತ್ತು. ಈಗ ಅರಮನೆಯನ್ನು ಗಣ್ಯ–ವಿಶೇಷ ಅತಿಥಿಗಳ ವಾಸ್ತವ್ಯಕ್ಕೆ ಬಳಸಲಾಗುತ್ತದೆ.
ಬೆಳಿಗ್ಗೆ ಏಳರಿಂದ ಸಂಜೆ ಐದರವರೆಗೆ ತೆರೆದಿರುವ ಈ ದೇವಾಲಯ ಪ್ರವೇಶಿಸುವಾಗ ಕಾಲು ಮುಚ್ಚುವ ಸರೊಂಗ್ ಧರಿಸುವುದು ಕಡ್ಡಾಯ. ಅದನ್ನು ಉಚಿತವಾಗಿ ಪ್ರವಾಸಿಗರಿಗೆ ನೀಡಲಾಗುತ್ತದೆ.

ಪ್ರಶಾಂತ ಪರಿಸರದ, ಭವ್ಯ ದೇವಾಲಯದಲ್ಲಿ ಶಿಸ್ತಿನಿಂದ ನೂರಾರು ಜನರು ಪವಿತ್ರ ತೀರ್ಥದಿಂದ ಶುದ್ಧಿಗಾಗಿ ಬರುವುದನ್ನು ಕಂಡಾಗ ಅವರ ನಂಬಿಕೆ ಅದೆಷ್ಟು ಬಲವಾದದ್ದು ಎನಿಸಿತು. ಅದರೊಂದಿಗೇ ನೀರಿನ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಅಗ್ರ ಸ್ಥಾನ ನೀಡಿರುವುದನ್ನು ಕಂಡಾಗ ಹೆಮ್ಮೆಯೂ ಆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT