ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪದ್ಯಗಳು

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಯಶೋದೆಯ ತಳಮಳ
 
ಎಲ್ಲಿ ಹೋದ ನಮ್ಮ ಕೃಷ್ಣ  l ಎಲ್ಲಿ ಅಡಗಿ ಕುಳಿತನು
ಎಲ್ಲಿ ಅವನ ವೇಣು ನಾದ l ಎಲ್ಲಿ ಕಳೆದು ಹೋದನು
 
ಅರರೆ! ಏನಿದೇನಿದೇನು! ಗೂನು ಬೆನ್ನ ಚಿಣ್ಣರು!
ಯಾವ ಹೊರೆಯ ಬೆನ್ನ ಮೇಲೆ l ಹೊತ್ತು ತಿರುಗುತಿರುವರು!
 
ಯಾರು ಬಿಗಿದರಯ್ಯೊ ಇವರ l ಕೊರಳಿಗೊಂದು ಉರುಳನು
ಪುಟ್ಟ ಪಾದ ಕಾಣದಂತೆ l ಚೀಲದೊಳಗೆ ಕಾಲನು!
 
ತನ್ನ ಗೆಳೆಯರನ್ನು ಅರಸಿ l ಅಲೆಯುತಿಹನೆ ಅಚ್ಯುತ
ಎಲ್ಲಿ ಕಾಣೆಯಾದರೆಂದು l ತೋರು ಬೆರಳ ಕಚ್ಚುತ!
 
ಕಂಸ ಹೋದನೆಂದುಕೊಂಡೆ l ಮತ್ತೆ ಯಾರು ಬಂದರೊ!
ಬಂದನೆ ಕಬಂಧ ಮರಳಿ l ಅವನ ತೋಳು ಚಾಚಿತೊ!
 
ಯಮುನೆ ಉಡುಗಿ ಹೋಗುತಿಹಳು l ಬಾರೊ ಮುದ್ದು ಮಾಧವ
ಕಾಡು–ಮೇಡು ಕಾಯುತಿಹವು l ಬೆಳೆಸು ಅತ್ತ ಪಾದವ!
 
ಇದಿರು ನೋಡುತಿಹವು ಬಿದಿರು l ನಾನು–ತಾನು ಎನ್ನುತ
ಕಾಮಧೇನು ಪುಣ್ಯಕೋಟಿ l ಕಂಬನಿಯನು ಸುರಿಸುತ!
****
ಯಾರಿಗಾಗಿ ಗಿಡಮರಗಳು...
ಯಾರಿಗಾಗಿ ಗಿಡಮರಗಳು ಹೂವು ನೀಡುತಿರುವುವು
ಯಾತಕಾಗಿ ಕೈಯ ಬೀಸಿ ಜನರ ಬಳಿಗೆ ಕರೆವವು ll

ಕಣ್ಣ ಮುಂದೆ ಓಡಿಯಾಡೋ ಬಾಲೆಯರನು ಕಂಡವೆ
ಬೋಳು ಮುಡಿಯ ನೋಡಿ ಅಯ್ಯೋ, ಪಾಪ! ಎಂದುಕೊಂಡವೆ?
ಹಾರಿ ಬರುವ ಚಿಟ್ಟೆ ಕಣ್ಣು ಸಣ್ಣ ಆಸೆ ತಿಳಿಯಿತೆ
ಎದೆಯ ಕಳಶದಿಂದ ಅಮೃತ ಬಿಂದು ಬಿಂದು ಒಸರಿತೆ? ll 1 ll

ಬೆನ್ನ ಮೇಲೆ ಹರಿವ ಇರುವೆ ಪುಟ್ಟ ಸಲಹೆ ಕೊಟ್ಟಿತೆ
ತೇಲಿ ಬಂದ ಹಕ್ಕಿ ಹಾಡು ಎದೆಯ ಕದವ ತಟ್ಟಿತೆ?
ಓಡಿ ಬಂದು ತುಂಡು ಮೋಡ ನಕ್ಕು ಕೊಡೆಯ ಬಿಡಿಸಿತೆ
ಕಲ್ಲು ಮುಳ್ಳು ಹಾದಿಯಲ್ಲಿ ಹೂವೂ ಇರಲಿ ಎಂದಿತೆ? ll 2 ll
ತುಂಟ ಗಾಳಿ ಸುಳಿದು ಸಂಜೆ ಉಲಿಯಿತೇನು ಕಿವಿಯಲಿ
ಏನು ಗುಟ್ಟು ಹೇಳಿ ಹೋದ ಚಂದ್ರ ಇರುಳ ಗಿಡದಲಿ?
ಏನ ಕಂಡು ಏನನುಂಡು ಹಿಗ್ಗು ತಡೆಯದಾಗಿದೆ
ಬಣ್ಣದೊಡನೆ ಆ ಸುಗಂಧ ಹೇಗೆ ಬೆರೆತುಕೊಂಡಿದೆ? ll 3 ll

ಯಾವ ಭಾವ ಒಳಗಿನಿಂದ ಒತ್ತಿ ಒತ್ತಿ ಬಂದಿತು
ತನ್ನ ಮಾತು ಹೇಳುವಂಥ ತುರ್ತು ಹೇಗೆ ಮೂಡಿತು?
ಯಾರಿಗಾಗಿ ನಸುಕಿನಲ್ಲಿ ನಾಚಿಕೊಂಡು ಕುಳಿತಿವೆ
ಯಾರ ವಾರೆ ನೋಟಕಾಗಿ ಅಡಗಿ ಇಣುಕಿ ಕಾದಿವೆ?

***

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT