ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಬರೆಸಿದ ಬೀಗ ರಿಪೇರಿಯವ!

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಇತ್ತೀಚೆಗೆ ತರಬೇತಿಗೆಂದು ತುಮಕೂರಿಗೆ ಹೋಗಿದ್ದೆ. ಸಿದ್ದಗಂಗಾ ಮಠದ ವಸತಿ ಗೃಹಗಳಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ ತರಬೇತಿಗೆಂದು ಹೊರಟು ಬಂದಾಗ, ಅಲ್ಲಿನ ಮರದ ಕೆಳಗೆ ಕುಳಿತಿದ್ದ ಟ್ರಂಕ್ ರಿಪೇರಿ ಮಾಡುವವ ಕಣ್ಣಿಗೆ ಬಿದ್ದ. ಒಂದಿಬ್ಬರು ವಿದ್ಯಾರ್ಥಿಗಳು ತಮ್ಮ ಟ್ರಂಕ್ ರಿಪೇರಿಗೆಂದು ತಂದಿದ್ದರು. ಅದನ್ನು ನೋಡಿದ ಕೂಡಲೇ ನನ್ನ ದ್ವಿತೀಯ ಪಿ.ಯು.ಸಿ ಪರೀಕ್ಷಾ ದಿನಗಳು ನೆನಪಾದವು. 
 
ಪಿ.ಯು.ಸಿ ಓದುವಾಗ ನಾಲ್ಕು ಜನ ಗೆಳೆಯರು ಸೇರಿ ಹೂವಿನ ಹಡಗಲಿಯ ಗವಿಸಿದ್ದೇಶ್ವರ ಮಠದಲ್ಲಿ ತಿಂಗಳಿಗೆ 50 ರೂಪಾಯಿಯಂತೆ ಒಂದು ಕೋಣೆಯನ್ನು ಬಾಡಿಗೆಗೆ ಪಡೆದಿದ್ದೆವು. ಎಲ್ಲರೂ ಒಂದೊಂದು ಟ್ರಂಕ್‌ಗಳನ್ನು ತಂದಿದ್ದೆವು. ಅದಕ್ಕೆ ಬೀಗಹಾಕಿ ಬೀಗುತ್ತಿದ್ದೆವು. ಪರೀಕ್ಷೆಗೂ ಒಂದು ವಾರ ಮುಂಚೆಯೇ ಹಾಲ್ ಟಿಕೇಟ್ ನೀಡಿದ್ದರು. ಅದನ್ನು ಟ್ರಂಕ್‌ನಲ್ಲಿಟ್ಟು ಬೀಗ ಹಾಕಿ ಭದ್ರಪಡಿಸಿದ್ದೆ. 
 
ಪರೀಕ್ಷಾ ದಿನ ಬೆಳಿಗ್ಗೆ ಟ್ರಂಕ್‌ನ ಬೀಗ ತೆಗೆಯಲು ಹೊರಟೆ. ಬೀಗ ನಾಪತ್ತೆಯಾಗಿತ್ತು. ಪ್ಯಾಂಟು, ಅಂಗಿ ಜೇಬುಗಳನ್ನು ತಡಕಾಡಿದೆ. ಬೀಗ ಸಿಗಲಿಲ್ಲ. ಗೆಳೆಯರೂ ಹುಡುಕಾಡಿದರು. ಪರೀಕ್ಷೆಗೆ ಇನ್ನೊಂದು ಗಂಟೆ ಮಾತ್ರ ಬಾಕಿ ಇತ್ತು. ಕಣ್ಣೀರು ಕಪಾಳಕ್ಕೆ ಬಂದಿತ್ತು. ಏನು ಮಾಡುವುದು ಎಂಬುದೇ ತೋಚದಾಗಿತ್ತು. ಆಗ ನನ್ನ ಆಪ್ತಮಿತ್ರ ಇಸ್ರಾರ್ ಅಹ್ಮದ್ ನೀಡಿದ ಸಲಹೆ ಆಪ್ತವೆನಿಸಿತು. 
 
ಪ್ಯಾಂಟು ಅಂಗಿ ಹಾಕಿಕೊಂಡವರೇ ಟ್ರಂಕನ್ನು ಹೊತ್ತುಕೊಂಡು ಬಜಾರಕ್ಕೆ ಬಂದೆವು. ಅಲ್ಲಿದ್ದ ಬೀಗ ರಿಪೇರಿಯವನ ಬಳಿ ಇರುವ ವಿಷಯ ಹೇಳಿದೆವು. ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಆತ ಕೂಡಲೇ ಕಾರ್ಯಮಗ್ನನಾದ. ತನ್ನ ಬಳಿ ಇರುವ ಬೀಗಗಳನ್ನೆಲ್ಲಾ ಹಾಕಿ ಬೀಗ ತೆರೆಯಲು ಶ್ರಮಿಸಿದ. ಹತ್ತು ನಿಮಿಷಗಳ ನಂತರ ಯಶಸ್ವಿಯಾಗಿ ಬೀಗ ತೆಗೆದ. ಆಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. 
 
ಟ್ರಂಕ್‌ನಲ್ಲಿದ್ದ ಹಾಲ್ ಟಿಕೇಟ್ ತೆಗೆದುಕೊಂಡು, ಟ್ರಂಕ್ ಅವನ ಬಳಿಯೇ ಬಿಟ್ಟು ಪರೀಕ್ಷೆಗೆ ಹೋದೆವು. ಪರೀಕ್ಷೆ ಮುಗಿಸಿ ಹಿಂದಿರುಗಿ ಬಂದು ಹಣ ನೀಡಲು ಹೋದರೆ, ಬೀಗ ರಿಪೇರಿಯವ ಹಣ ಪಡೆಯಲು ನಿರಾಕರಿಸಿದ. 
 
‘ನನಗೂ ಮಕ್ಕಳಿದ್ದಾರೆ. ನನ್ನ ಮಕ್ಕಳಿಗೆ ಹೀಗಾಗಿದ್ದರೆ ನಾನು ದುಡ್ಡು ಪಡೆಯುತ್ತಿದ್ದೆನೇ? ನೀವು ನನ್ನ ಮಕ್ಕಳ ಹಾಗೆ. ನನಗೆ ದುಡ್ಡು ಬೇಡ’ ಎಂದ. ಅಂದು ನನ್ನ ಪಾಲಿಗೆ ಅವನೇ ನಿಜವಾದ ಹೀರೋ!
–ಆರ್.ಬಿ. ಗುರುಬಸವರಾಜ, ಹೊಳಗುಂದಿ, ಹೂವಿನಹಡಗಲಿ ತಾಲ್ಲೂಕು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT