ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಾರ ವ್ಯಕ್ತಿತ್ವದ ದೇಶಪ್ರೇಮಿ ವಕೀಲ

Last Updated 20 ಮೇ 2017, 20:39 IST
ಅಕ್ಷರ ಗಾತ್ರ

ಪಾಕಿಸ್ತಾನ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನಾಗರಿಕ ಕುಲಭೂಷಣ್ ಜಾಧವ್ ಅವರಿಗೆ ಅಂತರರಾಷ್ಟ್ರೀಯ ನ್ಯಾಯಾಲಯದಿಂದ ತಾತ್ಕಾಲಿಕ ಜೀವದಾನ ದೊರೆತಿದೆ.

ನ್ಯಾಯಾಲಯದ ಮುಂದೆ ಭಾರತದ ಪರವಾಗಿ ವಾದ ಮಂಡಿಸಿ ಜಾಧವ್ ಅವರನ್ನು ಬೀಸು ಬಡಿಗೆಯಿಂದ ಪಾರು ಮಾಡಿದವರು ಪ್ರತಿಭಾವಂತ ವಕೀಲ ಹರೀಶ್ ಸಾಳ್ವೆ. ಈ ಕೀರ್ತಿ ಭಾರತ ಸರ್ಕಾರಕ್ಕೆ ಸಲ್ಲಬೇಕು ಎಂಬ ವಿನಮ್ರತೆ ತೋರುವ ಸಾಳ್ವೆಯವರು ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದೇಶದ ಮೊದಲ ಸಾಲಿನ ವಕೀಲರಾಗಿದ್ದರೂ ಕೇವಲ ಒಂದು ರೂಪಾಯಿ ನಾಮಮಾತ್ರ ಶುಲ್ಕ ಪಡೆದು ಈ ಕೇಸನ್ನು ವಾದಿಸಿದ್ದಾರೆ ಎಂಬ ಕಾರಣಕ್ಕೆ ಅವರ ಜನಪ್ರಿಯತೆ ಇನ್ನಷ್ಟು ಹೊಳಪು ಗಳಿಸಿದೆ. ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯದ ಮುಂದೆ ಹಾಜರಾಗಲು ಪಾಕಿಸ್ತಾನಿ ವಕೀಲ ಖುರೇಷಿ ಮತ್ತು ಅವರ ತಂಡ ಪಡೆದ ಮೊತ್ತ ಐದು ಕೋಟಿ ರೂಪಾಯಿಗಳು.

ಈ ಅಂಶವನ್ನು ಪಾಕಿಸ್ತಾನಿ ಟಿ.ವಿ. ವಾಹಿನಿಗಳು ಹೊರಹಾಕಿವೆ. ಅವೇ ವಾಹಿನಿಗಳು ಸಾಳ್ವೆಯವರು ಒಂದೇ ರೂಪಾಯಿ ಶುಲ್ಕ ಪಡೆದದ್ದನ್ನು ಅಪ್ರತಿಮ ದೇಶಪ್ರೇಮ ಎಂದು ಬಣ್ಣಿಸಿವೆ. ಶುಲ್ಕ ಪಡೆಯದೆ ವಾದ ಮಂಡಿಸಿರುವ
(ಪ್ರೋ ಬೋನೋ) ಸಾಳ್ವೆ ನಡೆ ಇದೇ ಮೊದಲೇನೂ ಅಲ್ಲ.

ತಮ್ಮ ಕಕ್ಷಿದಾರರಿಂದ ದುಬಾರಿ ಶುಲ್ಕ ಪಡೆಯುವ ದೇಶದ ಬೆರಳೆಣಿಕೆಯ ವಕೀಲರ ಪೈಕಿ ಸಾಳ್ವೆಯೂ ಒಬ್ಬರು. ಅವರು ವಿಧಿಸುವ ಶುಲ್ಕ ದಿನವೊಂದಕ್ಕೆ ₹25 ಲಕ್ಷದಿಂದ  ₹ 30 ಲಕ್ಷ ಎನ್ನಲಾಗಿದೆ. ಕೈ ಹಿಡಿದ ಕೇಸುಗಳನ್ನು ತಪ್ಪದೆ ಗೆದ್ದುಕೊಡುವ ಈ ವಕೀಲರಿಗೆ ದೇಶದ ಕಾರ್ಪೊರೇಟ್ ವಲಯದಿಂದ ಎಲ್ಲಿಲ್ಲದ ಬೇಡಿಕೆ. ಟಾಟಾ, ಅಂಬಾನಿ, ವೋಡಫೋನ್, ಮಿತ್ತಲ್, ಮಹೀಂದ್ರ, ಮುಂತಾದ ದಿಗ್ಗಜ ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಸಾಳ್ವೆಯವರಿಗೆ ಒಪ್ಪಿಸಿದರೆ ನಿಶ್ಚಿಂತರು. ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಲಲಿತ್ ಮೋದಿ ಮುಂತಾದವರೂ ಇವರ ಸೇವೆ ಪಡೆದಿರುವುದುಂಟು.

ಸಾಳ್ವೆಯವರದು ವಕೀಲರ ಮನೆತನ. ಮುತ್ತಾತ ಮುನ್ಸೀಫ್, ತಾತ ಪಿ.ಕೆ. ಸಾಳ್ವೆ ಯಶಸ್ವೀ ಕ್ರಿಮಿನಲ್ ಲಾಯರ್ ಆಗಿದ್ದವರು. ತಂದೆ ನರೇಂದ್ರ ಸಾಳ್ವೆ ಈ ಪರಂಪರೆ ಮುರಿದು ಚಾರ್ಟರ್ಡ್ ಅಕೌಂಟೆಂಟ್ ಕಸುಬು ಹಿಡಿದರು. ತಂದೆಯ ದಾರಿಯಲ್ಲಿ ಹೆಜ್ಜೆಯಿಟ್ಟ ಹರೀಶ್ ಕಾಮರ್ಸ್ ಮತ್ತು ಸಿ.ಎ. ಓದಿದರೂ, ಕಡೆಗೆ ನೆಲೆ ನಿಂತದ್ದು ವಕೀಲಿ ವೃತ್ತಿಯಲ್ಲಿ.

ತೆರಿಗೆ ವ್ಯಾಜ್ಯಗಳು ಅಚ್ಚುಮೆಚ್ಚಾದರೂ, ಕ್ರಿಕೆಟ್, ಕ್ರಿಮಿನಲ್, ರಾಜಕಾರಣ, ಕೋಮುದಂಗೆ ಎಲ್ಲ ಬಗೆಯ ವ್ಯಾಜ್ಯಗಳ ನಿರ್ವಹಣೆಯೂ ಕರತಲಾಮಲಕ. ಗೋಧ್ರೋತ್ತರ ಗುಜರಾತ್ ಕೋಮು ದಂಗೆಗಳಲ್ಲಿ ಬಿಲ್ಕಿಸ್ ಬಾನು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಅವರು ಮಂಡಿಸಿದ ವಾದ ಹುಸಿ ಹೋಗಲಿಲ್ಲ.

ಹೆಸರಾಂತ ವಕೀಲರಾದ ನಾನಿ ಪಾಲ್ಖೀವಾಲ, ಸೋಲಿ ಸೊರಾಬ್ಜಿ ಅವರ ಗರಡಿಯಲ್ಲಿ ಪಳಗಿದವರು. 1992ರಲ್ಲಿ ಹಿರಿಯ ವಕೀಲರ ಸ್ಥಾನಮಾನ ಗಳಿಸಿದಾಗ ಅವರ ವಯಸ್ಸು ಕೇವಲ 37 ವರ್ಷ. 1999ರಲ್ಲಿ ಎನ್.ಡಿ.ಎ. ಆಡಳಿತಾವಧಿಯಲ್ಲಿ ದೇಶದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. ಇದೀಗ ಅವರಿಗೆ 61ರ ಪ್ರಾಯ.

ಜಾಧವ್ ಪ್ರಕರಣದಲ್ಲಿ ಒಂದು ರೂಪಾಯಿ ಶುಲ್ಕ ಪಡೆದು ಕೇಸು ಗೆದ್ದು, ಭಾರೀ ಜನಮೆಚ್ಚುಗೆಗೆ ಪಾತ್ರರಾಗಿರುವ ಸಾಳ್ವೆ ಅವರು ಅಲ್ಪಸಂಖ್ಯಾತ ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂಬ ಸಂಗತಿ ಬಹು ಮಂದಿಗೆ ಗೊತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದ ದೇಶಭಕ್ತಿ ಅಗ್ನಿಪರೀಕ್ಷೆಗೆ ಗುರಿಯಾಗುತ್ತಿರುವ ದಿನಗಳಲ್ಲಿ ಸಾಳ್ವೆ ಸಾಧನೆ ಸಾಧಾರಣವಲ್ಲ.

ಮರಾಠಿ ಕ್ರೈಸ್ತ ಕುಟುಂಬಕ್ಕೆ ಸೇರಿದ ಹರೀಶ್ ಸಾಳ್ವೆ ಅತ್ಯಂತ ಉದಾರ ಜಾತ್ಯತೀತವಾದಿ ವಾತಾವರಣದಲ್ಲಿ ಬೆಳೆದು ಬಂದವರು. ಸಾಳ್ವೆಗಳು ಮಧ್ಯಪ್ರದೇಶದ ಛಿಂದ್ವಾಡದವರು. ನೆಲೆ ನಿಂತದ್ದು ಮಹಾರಾಷ್ಟ್ರ ನಾಗಪುರದಲ್ಲಿ. ತಂದೆ ಎನ್.ಕೆ.ಪಿ. ಸಾಳ್ವೆ ಕೇಂದ್ರ ಮಂತ್ರಿಯಾಗಿದ್ದ ಕಾಂಗ್ರೆಸ್ ತಲೆಯಾಳು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದವರು.

ಎನ್.ಕೆ.ಪಿ. ಸಾಳ್ವೆಯವರ ತಂದೆ ಹಿಂದುವಾದರೆ ತಾಯಿ ಕಾರ್ನೇಲಿಯಾಬಾಯಿ ಕ್ರೈಸ್ತರಾಗಿದ್ದರು. ಹರೀಶ್ ಅವರ ತಾಯಿ ಹಿಂದೂ,  ಪತ್ನಿ ಮೀನಾಕ್ಷಿ ಹಿಂದೂ ಧರ್ಮೀಯರು. ಮಗಳು ಸಾನಿಯಾ ಸಾಳ್ವೆ ಮುಸ್ಲಿಂ ಧರ್ಮೀಯ ಅರ್ಮಾನ್ ಸಿದ್ದಿಕಿ ಅವರನ್ನು ಮದುವೆಯಾಗಿದ್ದಾರೆ.

ಮತ್ತೊಬ್ಬ ಮಗಳು ಸಾಕ್ಷಿ ಲೇಖಕಿ. ಹರೀಶ್ ಚರ್ಚ್‌ಗೆ ಹೋಗುತ್ತಾರೆ. ಕ್ರೈಸ್ತ ರೀತಿ ರಿವಾಜುಗಳನ್ನು ಪಾಲಿಸುವಂತೆ ಪತ್ನಿ ಮತ್ತು ಮಕ್ಕಳನ್ನು ಒತ್ತಾಯಿಸುವುದಿಲ್ಲ. ಅವರ ಅತ್ತೆ (ತಂದೆಯ ಸೋದರಿ) ಮಾತಾ ನಿರ್ಮಲಾ ಸಹಜಯೋಗದಲ್ಲಿ ಸಾಧನೆ ಮಾಡಿದ್ದ ಪ್ರಸಿದ್ಧ ಆಧ್ಯಾತ್ಮಿಕ ವ್ಯಕ್ತಿ.

‘ಚರ್ಚ್‌ಗಳ ಮೇಲಿನ ದಾಳಿಗಳು ಕೆಲವೇ ಗಲಭೆಕೋರರ ಕೃತ್ಯ. ಇದರಲ್ಲಿ ಸರ್ಕಾರದ ಪಾತ್ರವಿದೆ ಎಂದು ಆಪಾದಿಸುವುದು ದುರದೃಷ್ಟಕರ. ನನ್ನ ಮಟ್ಟಿಗೆ ಹೇಳುವುದಾದರೆ ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ಯಾವ ಭಯದ ಮನಸ್ಥಿತಿಯೂ ಕಾಡಿಲ್ಲ’ ಎಂಬುದು ಸಾಳ್ವೆ ಅವರ ಖಚಿತ ನಿಲುವು.
ಜಾಝ್ ಸಂಗೀತವೆಂದರೆ ಅವರಿಗೆ ಪ್ರಾಣ. ಪಿಯಾನೋ ವಾದನದಲ್ಲೂ ಪ್ರವೀಣ. ಸವಾರಿಗೆ ದುಬಾರಿ ಬೆಂಟ್ಲೇ ಕಾರೇ ಆಗಬೇಕು.

ತಮ್ಮ ವಾದ ಮಂಡನೆಯ ತಯಾರಿಯನ್ನು ಕಾಗದದ ತುಣಕನ್ನೂ ಬಳಸದೆ ಗ್ಯಾಜೆಟ್ ಗಳಲ್ಲೇ ಮುಗಿಸುವಷ್ಟು ಕಂಪ್ಯೂಟರ್, ಲ್ಯಾಪ್ಟಾಪ್, ಸೆಲ್ ಫೋನ್ ಮುಂತಾದ ಗ್ಯಾಜೆಟ್ ಮೋಹಿ. ಭಯಂಕರವಾಗಿ ಕಾಣುವ ರಾಟ್ ವೀಲರ್ ಶ್ವಾನಗಳ ಜೋಡಿ ಇವರ ಮುದ್ದಿನ ಸಾಕು ಪ್ರಾಣಿಗಳು.

ವರ್ಷದಲ್ಲಿ ಕನಿಷ್ಠ ಎರಡು ತಿಂಗಳ ಕಾಲ ಲಂಡನ್ನಿನ ನಿವಾಸಿ. ಹದಿನಾರಾಣೆ ಕುಟುಂಬ ಜೀವಿ ಎಂದು ತಮ್ಮನ್ನು ತಾವೇ ಬಣ್ಣಿಸಿಕೊಂಡಿದ್ದಾರೆ. ರಾಜಕಾರಣವನ್ನು ಬಲು ಹತ್ತಿರದಿಂದ ನೋಡಿರುವ ನನಗೆ ಅದರ ಬಗೆಗೆ ಹೇವರಿಕೆಯಿದೆ ಎನ್ನುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯ ಟೀಕೆ ಟಿಪ್ಪಣಿ ಹಾಕುವುದು ಜೈಲು ಶಿಕ್ಷೆಗೆ ಅರ್ಹವಾದ ಅಪರಾಧ ಎಂದು ಪರಿಗಣಿಸುವ ‘ಕರಾಳ ಕಾನೂನು’ ಮಾಹಿತಿ ತಂತ್ರಜ್ಞಾನ ಕಾಯಿದೆಯ 66ಎ ಸೆಕ್ಷನ್ ರದ್ದಾಗಲು ಅವರು ಮಂಡಿಸಿದ ಸಮರ್ಥ ವಾದವೇ ಕಾರಣ.

ಕಾರ್ಪೊರೇಟ್‌ ವಲಯದ ಅಚ್ಚುಮೆಚ್ಚಿನ ವಕೀಲ ಎನಿಸಿದ್ದರೂ ಪರಿಸರ ಕಾಳಜಿಯಲ್ಲಿ ರಾಜೀ ಮಾಡಿಕೊಳ್ಳದವರು. ಹಲವು ಪರಿಸರ ಸಂಬಂಧೀ ವ್ಯಾಜ್ಯಗಳಲ್ಲಿ ‘ನ್ಯಾಯಾಲಯದ ಮಿತ್ರ’ನ ಹೊಣೆ ನಿರ್ವಹಿಸಿದವರು. ದಿಲ್ಲಿಯ ವಾಯುಮಾಲಿನ್ಯ ತಗ್ಗಿಸಲು ನಗರ ಸಾರಿಗೆ ಬಸ್ಸುಗಳಿಗೆ ಅನಿಲ ಇಂಧನ ಬಳಕೆಯನ್ನು ಕಡ್ಡಾಯಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಹಿಂದೆ ಕೆಲಸ ಮಾಡಿದ್ದು ಇವರದೇ ಸಲಹೆ.

ಒಬ್ಬ ವ್ಯಕ್ತಿ ಸತ್ತು ನಾಲ್ವರು ಗಾಯಗೊಂಡ ‘ಹಿಟ್ ಅಂಡ್ ರನ್’ ಪ್ರಕರಣದಆರೋಪಿ ಚಿತ್ರನಟ ಸಲ್ಮಾನ್ ಖಾನ್ ಒಂದು ದಿನವೂ ಜೈಲಿಗೆ ಹೋಗದಂತೆ ಕಾಪಾಡಿ ಕಡೆಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಿಸಿದ ‘ಯಶಸ್ಸು’ ಕೂಡ ಇವರ ಸಾಧನೆಗಳ ಪಟ್ಟಿಗೆ ಸೇರುತ್ತದೆ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ನ್ಯಾಯಾಲಯದ ಮಿತ್ರನಾಗಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕೆಲವು ಕಾರ್ಪೊರೇಟ್ ಕಂಪೆನಿಗಳು ಗುಜರಾತಿನಲ್ಲಿ ‘ನೆಲೆ’ಯಾಗಲು ಅಂದಿನ ನರೇಂದ್ರ ಮೋದಿ ಸರ್ಕಾರದೊಂದಿಗೆ ‘ಲಾಬಿ’ ಮಾಡಿದರೆಂಬ ಆಪಾದನೆ ಸಾಳ್ವೆ ಮೇಲಿತ್ತು.

ಹೀಗೆ ಲಾಬಿ ಮಾಡುವವರು ಗುಜರಾತ್ ಕೋಮು ದಂಗೆಗಳಲ್ಲಿ ನೊಂದವರಿಗೆ ಹೇಗೆ ನ್ಯಾಯ ಒದಗಿಸಿಯಾರು ಎಂಬ ಆರೋಪಕ್ಕೆ ಅವರ ಉತ್ತರ ಹೀಗಿತ್ತು, ‘ನಾನು ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ದುರಾಚಾರಗಳ ವಿರುದ್ಧ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದೇನೆ. ಗುಜರಾತಿನ ವಿರುದ್ಧ ಅಲ್ಲ. ಯೋಜನೆಯೊಂದು ಗುಜರಾತಿಗೆ ಒಳಿತು ಮಾಡುತ್ತದೆ ಎಂದಾದರೆ ಗುಜರಾತ್ ಸರ್ಕಾರಕ್ಕೆ ಶಿಫಾರಸು ಮಾಡುವುದರಲ್ಲಿ ತಪ್ಪೇನೂ ಇಲ್ಲ. ಹೀಗೆ ಮಾಡಿ ಒಂದೇ ಒಂದು ರೂಪಾಯಿಯ ಪ್ರತಿಫಲ ಪಡೆದಿದ್ದೇನೆಂದು ಸಾಬೀತು ಮಾಡಿದರೆ ನನ್ನ ವಕೀಲಿ ವೃತ್ತಿ ಬಿಟ್ಟು ಬಿಡಲು ಸಿದ್ಧನಿದ್ದೇನೆ’.

ನ್ಯಾಯಾಧೀಶರ ಮನೋಗತದ ಎಳೆ ಹಿಡಿದು ವಾದ ಮಂಡನೆ ಮತ್ತು ತಾವು ಹೇಳುವುದೇ ಸರಿಯೆಂದು ಹಠ ಹಿಡಿಯದೆ ಇರುವುದು ಹಾಗೂ ಅತ್ಯುತ್ತಮ ಪೂರ್ವಸಿದ್ಧತೆ ನಡೆಸಿ ನ್ಯಾಯಾಲಯದಲ್ಲಿ ಸಮಯಸ್ಫೂರ್ತಿಯಿಂದ ವಾದಿಸುವುದು ತಮ್ಮ ಯಶಸ್ಸಿನ ರಹಸ್ಯ ಎಂದು ಸಾಳ್ವೆ ಭಾವಿಸಿದ್ದಾರೆ.

ವಾದ ಮಂಡನೆಯ ಪ್ರಕ್ರಿಯೆಯಲ್ಲಿ ಯಾವಾಗ, ಎಷ್ಟು ಹೇಳಬೇಕು, ಯಾವ ಹಂತದಲ್ಲಿ ನಿಲ್ಲಿಸಿ ಹಿಂದೆ ಸರಿಯಬೇಕು ಎಂಬ ಸೂಕ್ಷ್ಮವನ್ನು ಸಾಳ್ವೆಯವರಂತೆ ಅರಿತ ವಕೀಲರು ವಿರಳ ಎನ್ನುತ್ತಾರೆ ಅವರ ವಿಮರ್ಶಕರು. ಕುಲಭೂಷಣ್ ಪ್ರಕರಣ ಇನ್ನೂ ಮುಗಿದಿಲ್ಲ. ಈಗ ದೊರೆತಿರುವ ಯಶಸ್ಸನ್ನು ಸಾಳ್ವೆಯವರು ಮರಳಿ ಮರಳಿ ಗಳಿಸುವುದು ಅತ್ಯಗತ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT