ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿಕಾದೇವಿ ನನಗೊಂದು ಹೆಮ್ಮೆ...

Last Updated 20 ಮೇ 2017, 20:40 IST
ಅಕ್ಷರ ಗಾತ್ರ

ಪ್ರಾಥಮಿಕ ಪಠ್ಯಕ್ರಮದಲ್ಲಿ ಓದುವ ಸಂವಿಧಾನದತ್ತವಾದ ಹಕ್ಕುಗಳೊಂದಿಗೆ ‘ನಾಗರಿಕರ ಕರ್ತವ್ಯಗಳು’ ಎನ್ನುವ ಭಾಗ ಭಾರತದ ಸಂವಿಧಾನದಲ್ಲಿ ಸೇರ್ಪಡೆಯಾದದ್ದು 1976ರ ನಂತರವೇ ಎಂದರೆ ನಿಮಗೆ ಆಶ್ಚರ್ಯವಾಗಬಹುದು. 1976ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಘೋಷಿಸಿದ್ದ ಕಾಲದಲ್ಲಿ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ನಾಗರಿಕರ ಕರ್ತವ್ಯಗಳನ್ನು ಕುರಿತ ಒಂದು ಹೊಸ ಅಧ್ಯಾಯವನ್ನೇ ಸೇರಿಸಲಾಯಿತು. ವಿಪರ್ಯಾಸವೆಂದರೆ ನಾಗರಿಕ ಹಕ್ಕುಗಳ ಪ್ರತಿಪಾದನೆಗೆ ಸಂಬಂಧಿಸಿದಂತೆ ನಾವು ಸಂವಿಧಾನವನ್ನು ಆಶ್ರಯಿಸುವ ಮಟ್ಟಿಗೆ ನಾಗರಿಕ ಕರ್ತವ್ಯಗಳನ್ನು ಕುರಿತು ಯೋಚಿಸುವುದಿಲ್ಲ. ನಾಗರಿಕ ಹಕ್ಕುಗಳ ಜೊತೆಜೊತೆಗೆ ನಾಗರಿಕ ಕರ್ತವ್ಯಗಳ ಬಗ್ಗೆಯೂ ಸಮಾನವಾಗಿ ಗಮನಿಸಿಕೊಳ್ಳುವವರು ಸ್ವಸ್ಥ ಸಮಾಜದ ಮೊದಲ ಅಗತ್ಯವಾಗುತ್ತಾರೆ. ಇವನ್ನೆಲ್ಲ ಯೋಚಿಸುವಾಗ ನನ್ನ ನೆನಪಿನಾಳದಲ್ಲಿ ಬಹುದಿನಗಳಿಂದ ಕನಲುತ್ತಿರುವ ದೇವಿಕಾದೇವಿಯ ಪ್ರಕರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನಿಸುತ್ತಿದೆ.

ಅವತ್ತಿಗೆ ದೇವಿಕಾದೇವಿಯನ್ನು ನೋಡಿ ಮೂರ್ನಾಲ್ಕು ವರ್ಷಗಳಾಗಿದ್ದವು. ವರದಕ್ಷಿಣೆ ವಿರೋಧಿ ಆಂದೋಲನದ ಭಾಗವಾಗಿ ಕೆಲಸ ಮಾಡುತ್ತಿದ್ದ ಡೋನಾ ಫರ್ನಾಂಡಿಸ್‌ ಅವರು ‘ವಿಮೋಚನಾ’ ಸಂಘಟನೆಯಲ್ಲಿ ಕ್ರಿಯಾಶೀಲ ಸದಸ್ಯೆಯಾಗಿದ್ದಾಗ. ಆ ಸಂಘಟನೆಯ ಚಳವಳಿಗಳಲ್ಲಿ ಬಹು ತೀವ್ರವಾಗಿ ತೊಡಗಿಸಿಕೊಂಡಿದ್ದ ಹೋರಾಟಗಾರ್ತಿ ಅವರು. ನಾಲ್ಕಾರು ಬಾರಿ ಡೋನಾ ಅವರ ಜೊತೆ ನನ್ನ ಕಚೇರಿಗೆ ಬಂದಿದ್ದು ದೇವಿಕಾ ಸ್ತ್ರೀ ವಿಮೋಚನೆಯ ಬಗ್ಗೆ ಚರ್ಚೆಗಳಲ್ಲಿ ಅಮೂಲ್ಯವಾದ ಹೊಳಹುಗಳನ್ನು ನೀಡುತ್ತಿದ್ದರು.  ಅವರು ಸಿದ್ಧಿಸಿಕೊಂಡಿದ್ದ ಒಳನೋಟಗಳು ನನ್ನನ್ನು ವಿಸ್ಮಯಗೊಳಿಸುತ್ತಿದ್ದವು.

ಎಷ್ಟೋ ವರ್ಷಗಳ ನಂತರ ಅವರು, ಕೆಲವು ಕಾರ್ಯಕರ್ತೆಯರು ಮತ್ತು ವಕೀಲ ಗೋಪಿರಾಮ್‌ ಅವರ ಜೊತೆ ನನ್ನ ಕಚೇರಿಗೆ ಬಂದರು. ಮದ್ಯ ಮಾರಾಟ ಮಳಿಗೆಯೊಂದರಿಂದ ಅವರು ವಾಸವಿದ್ದ ಪ್ರದೇಶದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಉಪದ್ರವಗಳ ಕುರಿತು ಮಾತಾಡಲು ಪ್ರಾರಂಭಿಸಿದರು ದೇವಿಕಾ. ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ ಮುಂತಾದ ಮಹಿಳಾ ಸಂಬಂಧಿ ಸಮಸ್ಯೆಗಳನ್ನು ಹೇಳುತ್ತಿದ್ದ ಈಕೆ, ಈಗ ನೇರವಾಗಿ ಸ್ತ್ರೀವಾದಿಯಲ್ಲದ ಸಮಸ್ಯೆಯೊಂದರ ಬಗ್ಗೆ ಮಾತಾಡುತ್ತಿದ್ದುದು ಕುತೂಹಲ ಹುಟ್ಟಿಸಿತು. ಕುತೂಹಲದಿಂದಲೇ ‘ಏನಿದು ದೇವಿಕಾ? ಮಹಿಳಾ ಸಮಸ್ಯೆಗಳನ್ನು ಬಿಟ್ಟು ಮದ್ಯಪಾನದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವುದು ಯಾವಾಗ ಶುರುವಾಯಿತು?’ ಎಂದೆ. ಅವರ ಮಾತು ಮತ್ತು ವಿವರಣೆಯಲ್ಲಿ ಪ್ರಾಮಾಣಿಕ ಕಳಕಳಿಯನ್ನೂ, ತೀವ್ರ ನೋವನ್ನು ನಾನು ಗುರುತಿಸಿದೆ.

ದೇವಿಕಾ ಮನೆಯ ಹಿಂಭಾಗಕ್ಕೆ ಅಂಟಿಕೊಂಡಂತಿದ್ದ ಮನೆಯಲ್ಲಿ ಧೂಮಯ್ಯ, ಮಾಯಕ್ಕ ದಂಪತಿ ವಾಸವಾಗಿದ್ದರು. ಧೂಮಯ್ಯ ಮಹಾ ಕುಡುಕ. ಅವನು ದುಡಿಯುತ್ತಿದ್ದ ಬಹುಪಾಲು ಹಣವನ್ನು ಕುಡಿತಕ್ಕೆ ಸುರಿಯುತ್ತಿದ್ದ. ಹೆಂಡತಿ ದುಡಿದು ತಂದ ಹಣಕ್ಕೂ ಕೈಹಾಕುತ್ತಿದ್ದ. ಅವರ ಮಗುವಿಗೆ ನಾಲ್ಕು ತಿಂಗಳು ತುಂಬಿರಲಿಲ್ಲ. ಹಸಿ ಬಾಣಂತಿ ಮಾಯಕ್ಕ ಹೊರಗೆ ದುಡಿಯಲು ಹೋಗುವಂತಿರಲಿಲ್ಲ.

ಒಂದು ರಾತ್ರಿ ಒಂಬತ್ತೂವರೆ ಗಂಟೆ ಸುಮಾರಿಗೆ ಮಾಯಕ್ಕ ಚೀರಾಡುವುದು ಕೇಳಿಸಿತು. ದೇವಿಕಾ ಅವರ ಮನೆ ಬಾಗಿಲು ಮುಟ್ಟುವ ವೇಳೆಗೆ ನಾಲ್ಕಾರು ಜನ ಆಗಾಗಲೇ ಅಲ್ಲಿ ನೆರೆದಿದ್ದರು. ಮಾಯಕ್ಕನ ಮಗುವಿನ ಹೊಟ್ಟೆಯನ್ನು ನಾಯಿಯೊಂದು ಹರಿದಿತ್ತು.  ಏನಾಯಿತು ಎಂದು ವಿಚಾರಿಸಿದಾಗ ಅಡುಗೆ ಮನೆ ಮತ್ತು ಬೀದಿಗೆ ಮಧ್ಯೆ ಇದ್ದ ನಡುಮನೆಯಲ್ಲಿ ಗಂಡ ಧೂಮಯ್ಯ ಕುಳಿತು ಕುಡಿಯುತ್ತಿದ್ದ. ಮಾಯಕ್ಕ ಅಡುಗೆ ಮಾಡಲು ಹೋಗುವಾಗ ಚಾಪೆ ಹಾಸಿ ಮಗುವನ್ನು ಗಂಡನ ಮುಂದೆ ಮಲಗಿಸಿ ಹೋಗಿದ್ದಳು. ಮದ್ಯದ ಅಮಲಿನಲ್ಲಿದ್ದ ಗಂಡ ಟೀವಿಯ ಸೌಂಡ್ ಏರಿಸಿ ಅದರ ಗುಂಗಿನಲ್ಲಿದ್ದ. ನಾಯಿಯೊಂದು ಮನೆಯೊಳಗೆ ಪ್ರವೇಶಿಸಿ ಮಗುವನ್ನು ಕಚ್ಚಿಕೊಂಡು ಹೊರಗೆ ಹೋದದ್ದನ್ನು ಧೂಮಯ್ಯ ನೋಡಲೇ ಇಲ್ಲ. ಟಿ.ವಿ ಶಬ್ದದಿಂದ ಮಗುವಿನ ಚೀರಾಟ ಅಡುಗೆ ಮನೆಯಲ್ಲಿದ್ದ ಮಾಯಕ್ಕನ ಕಿವಿಗೂ ತಲುಪಲಿಲ್ಲ. ಅವರ ಮನೆಯಿಂದ ಸುಮಾರು 50 ಅಡಿ ದೂರದಲ್ಲಿ ನಾಯಿಯೊಂದು ಮಗುವಿನ ಹೊಟ್ಟೆಯನ್ನು ಬಗೆದು ತಿನ್ನುತ್ತಿದ್ದಾಗ ದಾರಿಹೋಕರು ಗಮನಿಸಿ ನಾಯಿಯನ್ನು ಓಡಿಸಿದ್ದರು.

ಮಾಯಕ್ಕ ಮಗುವಿನ ಮೇಲೆ ಬಿದ್ದು ರೋದಿಸುತ್ತಿದ್ದುದನ್ನು ಕಂಡು ದೇವಿಕಾ ದಂಗಾದಳು. ವಿಷಯ ತಿಳಿದ ಸುತ್ತಮುತ್ತಲಿನವರು ಮನೆಯ ಮುಂದೆ ಜಮಾಯಿಸುತ್ತಿದ್ದುದನ್ನು ಕಂಡ ಧೂಮಯ್ಯ ತನಗೆ ಧರ್ಮದೇಟು ತಪ್ಪಿದ್ದಲ್ಲ ಎಂದು ಹೆದರಿ ಅಲ್ಲಿಂದ ನಾಪತ್ತೆಯಾದ. ಹಾಗೆ ನಾಪತ್ತೆಯಾದವನು ಮರಳಿ ಬರಲೇ ಇಲ್ಲ. ಮಾಯಕ್ಕ, ದೇವಿಕಾ ಜೊತೆಗೂಡಿ ಮದ್ಯಪಾನ ವಿರೋಧಿ ಸಂಘಟನೆಯ ಸಕ್ರಿಯ ಕಾರ್ಯಕರ್ತಳಾದಳು.

‘ಈ ಘಟನೆಯ ದಿನವೇ ನನಗೆ ಜ್ಞಾನೋದಯವಾಗಿರಬೇಕು. ನಾನು ಸಮಾನ ಮನಸ್ಕರನ್ನು ಕಟ್ಟಿಕೊಂಡು ಮದ್ಯ ಸೇವನೆ ವಿರುದ್ಧ ಹೋರಾಡಬೇಕೆಂದು ತೀರ್ಮಾನಿಸಿದೆ’ ಎನ್ನುತ್ತಾ ತನ್ನ ಬದುಕಿಗೇ ಒಂದು ಮಹತ್ತರ ತಿರುವು ಮತ್ತು ಉದ್ದೇಶ ಮೂಡಿಸಿದ ಘಟನೆ ಅದು ಎಂದು ನಿಡುಸುಯ್ದರು ದೇವಿಕಾ.

ಘಟನೆಯ ನೋವಿನಿಂದ ಸಾವರಿಸಿಕೊಂಡ ದೇವಿಕಾ, ವಿಷಯಕ್ಕೆ ಬಂದರು. ಆಕೆಯ ಮನೆಯ ಎದುರಲ್ಲೇ ಆರು ತಿಂಗಳ ಹಿಂದೆ ‘ದೇವರದೇವಾ ಮದ್ಯ ಮಾರಾಟ ಮಳಿಗೆ’ ಪ್ರಾರಂಭವಾಗಿತ್ತು. ಅದರ ಮಾಲೀಕ ಯಾಲಕ್ಕಿ ಗೌಡ. ಯಾರನ್ನಾದರೂ ಪ್ರಭಾವಿಸಬಲ್ಲ ಹಣವಂತ. ಆ ಅಂಗಡಿ ಇವತ್ತಿನ ಎಂಆರ್‌ಪಿ ಔಟ್‍ಲೆಟ್‌ಗಳ ಹಾಗೆ. ಅಲ್ಲಿ ಮದ್ಯವನ್ನು ಜನ ಕೊಂಡು ಹೋಗಬೇಕಿತ್ತೇ ವಿನಾ ಅಲ್ಲೇ ನಿಂತು ಸೇವಿಸಲು ಅವಕಾಶವಿರಲಿಲ್ಲ. ಮೊದಮೊದಲು ಮದ್ಯ ಮಾರಾಟದ ಮಳಿಗೆಯಿಂದ ಗ್ರಾಹಕರು ಮದ್ಯವನ್ನು ಕೊಂಡು ಹೋಗಿಬಿಡುತ್ತಿದ್ದರು.

ಈ ಕಣ್ಣೊರೆಸುವ ಆಟ ನಡೆದಿದ್ದು ಕೆಲವು ವಾರಗಳು ಮಾತ್ರ. ರಾತ್ರೋ ರಾತ್ರಿ ಆ ಮದ್ಯದಂಗಡಿ ಬಾರ್ ಆಗಿ ಪರಿವರ್ತಿತವಾಯಿತು. ಒಂದು ಬದಿ ಕುಡುಕರು ನೆಂಜಿಕೊಳ್ಳಲು ಬೇಕಾದ ಸ್ನ್ಯಾಕ್ಸ್ ಅಂಗಡಿ ಇನ್ನೊಂದು ಪಕ್ಕದಲ್ಲಿ ಬೀಡಾ, ಸಿಗರೆಟ್ ಮಾರುವ ಅಂಗಡಿಗಳು ಓಡಾಡುವ ರಸ್ತೆಗೆ ಅಂಟಿಕೊಂಡೇ ಪ್ರಾರಂಭವಾದವು. ಲಿಕ್ಕರ್ ಲಾಬಿ ತುಂಬಾ ಪ್ರಬಲವಾಗಿದ್ದರಿಂದ ಮದ್ಯ ಮಾರಾಟದ ಯಾವ ಕಾನೂನು ಕಟ್ಟಳೆಗಳ ಬಗ್ಗೆ ಇವರಿಗೆ ಮುಲಾಜಿರಲಿಲ್ಲ. ಪ್ರತಿದಿನ  ಮಧ್ಯರಾತ್ರಿ ಮೀರಿದರೂ ಅಲ್ಲಿ ಪುಂಡಪೋಕರಿಗಳು, ಪಾತಕಿಗಳು, ಜೂಜುಕೋರರು, ವ್ಯಸನಿಗಳು, ಗೂಂಡಾಗಳು, ದಗಲಬಾಜಿಗಳು ಜಮಾಯಿಸುವ ಅಡ್ಡೆಯಾಗಿಬಿಟ್ಟಿತು. ಅಲ್ಲೇ ನಿಂತು ಕುಡಿದು ದಾಂಧಲೆ ಎಬ್ಬಿಸುವವರ ಸಂಖ್ಯೆ ಜಾಸ್ತಿಯಾಯಿತು. ಅವರ ವಾಹನಗಳು ಸಾರ್ವಜನಿಕ ರಸ್ತೆಯ ಮೇಲೆ ಅಡ್ಡಾದಿಡ್ಡಿ ಹರಡಿಕೊಳ್ಳತೊಡಗಿದವು. ಹರೆಯದ ಹುಡುಗಿಯರು ನಿರ್ಭೀತಿಯಿಂದ ಓಡಾಡುವುದು ಅಸಾಧ್ಯವಾಯಿತು. ಜನ ಆ ಬೀದಿಯನ್ನೇ ತಪ್ಪಿಸಿಕೊಂಡು ಓಡಾಡುವಷ್ಟರ ಮಟ್ಟಿಗೆ ಸ್ಥಳೀಯ ಜನರ ನೆಮ್ಮದಿ ಹಾಳಾಯಿತು.

ದೇವಿಕಾ ಅವರು ಈ ಸಂಬಂಧ  ಗೋಪಿರಾಮ್ ಎಂಬ ವಕೀಲರ ನೆರವಿನೊಂದಿಗೆ ದೂರೊಂದನ್ನು ತಯಾರು ಮಾಡಿ ನೂರು ಜನ ಸ್ಥಳೀಯರ ಸಹಿ ಸಂಗ್ರಹಿಸಿ ಪೋಲಿಸ್‌ ಠಾಣೆಗೆ ಕೊಟ್ಟರು. ದೂರು ಸ್ವೀಕರಿಸಿದ ಠಾಣಾಧಿಕಾರಿಗಳು, ಯಾಲಕ್ಕಿಗೌಡನನ್ನು ಕರೆಸಿ ಆತನ ಹೇಳಿಕೆ ಪಡೆದು ಕ್ರಮ ಜರುಗಿಸುವುದಾಗಿ ಹೇಳಿ ಅವರನ್ನು ಕಳುಹಿಸಿಕೊಟ್ಟಿದ್ದರು. ಆದರೆ ಪೊಲೀಸರು ಯಾವ ಕ್ರಮವನ್ನೂ ಜರುಗಿಸಲಿಲ್ಲ. ಯಾಲಕ್ಕಿಗೌಡರಿಂದ ಸಾಕಷ್ಟು ಹಣ ಪಡೆದಿದ್ದರಿಂದ ಪೊಲೀಸರು ಕ್ರಮ ಜರುಗಿಸುವುದಿಲ್ಲ ಎಂದು ದೇವಿಕಾ ಅವರಿಗೆ ಗೊತ್ತಾದಾಗ ಗೋಪಿರಾಮ್‌ ಜೊತೆ ಚರ್ಚಿಸಿ ಯಾಲಕ್ಕಿಗೌಡರಿಗೆ ಕೊಟ್ಟಿರುವ ಪರವಾನಗಿ ರದ್ದುಗೊಳಿಸುವಂತೆ ಕೋರಿ ಅಬಕಾರಿ ಇಲಾಖೆಗೆ ಅರ್ಜಿ ಹಾಕಿದರು.

ಅಲ್ಲಿಯೂ ಯಾಲಕ್ಕಿಗೌಡರ ಹಣದ ಪ್ರಭಾವ ಮುಂದುವರೆಯಿತು. ದೇವಿಕಾ ತಾನು ಹಿಡಿದ ಕೆಲಸವನ್ನು ಸುಲಭದಲ್ಲಿ ಕೈಬಿಡುವ ಜಾಯಮಾನದವರಲ್ಲ. ಕಡೆಯ ಪ್ರಯತ್ನವೋ ಎಂಬಂತೆ ನನ್ನಲ್ಲಿಗೆ ಬಂದರು.

ಈ ವಿಚಾರದಲ್ಲಿ ನಾನು ಪ್ರವೇಶಿಸಿ ಪೊಲೀಸ್‌ ಠಾಣೆಯಲ್ಲಿ ಇನ್ನೂ ಉಸಿರಾಡುತ್ತಿದ್ದ ಅವರ ದೂರಿಗೆ ಚಾಲನೆಕೊಡಬೇಕೆಂದು ಕೇಳಿಕೊಂಡರು. ನಾನು ಯಾಲಕ್ಕಿಗೌಡನ ಕುರಿತು ವಿಚಾರಿಸಿದೆ. ಕೊಲೆ ಮೊಕದ್ದಮೆಯೊಂದರಲ್ಲಿ ನಾನು ವಕಾಲತ್ತು ವಹಿಸಿದ್ದ ಆರೋಪಿಯ ಅಣ್ಣನೇ ಯಾಲಕ್ಕಿಗೌಡ. ವಸ್ತುಸ್ಥಿತಿ ಹೀಗಿರುವಾಗ ನನಗೆ ಎದುರಾಗುವ ಮುಜುಗರವನ್ನು, ನ್ಯಾಯಾಲಯದಲ್ಲಿ ದೇವಿಕಾ ಅವರ ಪರ ವಕಾಲತ್ತು ವಹಿಸಿದರೆ ನಿರ್ವಹಿಸಬೇಕಾದ ಸೂಕ್ಷ್ಮತೆಗಳನ್ನು ವಿವರಿಸಿದೆ.

ಬಂದಿದ್ದವರೆಲ್ಲಾ, ‘ನಿಮ್ಮಂಥವರೇ ಹೀಗೆಂದರೆ ನಮ್ಮಂಥವರ ಗತಿಯೇನು?’ ಎಂದು ಪ್ರಶ್ನಿಸತೊಡಗಿದರು. ಕ್ಷಣಕಾಲ ನಾನು ನಿರುತ್ತರನಾದೆ. ಅವರ ಕಳಕಳಿಯ ಒತ್ತಾಯ ಒಂದು ಕಡೆ, ಏನಾದರೂ ಮಾಡಬೇಕು ಎನ್ನುವ ನನ್ನ ಮನಃಸಾಕ್ಷಿಯ ತಿವಿತ ಇನ್ನೊಂದು ಕಡೆ. ಇವೆರಡರ ನಡುವೆ ನನಗಿದ್ದ ತಾಂತ್ರಿಕ ಇಕ್ಕಟ್ಟು. ಕೊನೆಗೆ ‘ದಾಖಲೆಗಳಲ್ಲಿ ಗೋಪಿರಾಮ್ ಅವರೇ ವಕೀಲರು ಎಂದು ಇರಲಿ, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಸಹಾಯವನ್ನು ನಾನು ಮಾಡಿಕೊಡುವೆ’ ಎಂದೆ.

ನಾನು ಯೋಚಿಸಿದೆ, ಪೊಲೀಸ್ ಠಾಣೆಯಲ್ಲಾಗಲಿ, ಅಬಕಾರಿ ಇಲಾಖೆಯಲ್ಲಾಗಲಿ ದೇವಿಕಾ ಅವರಿಗೆ ಪರಿಹಾರ ಸಿಗುವ ಸಾಧ್ಯತೆಗಳೇ ಇರಲಿಲ್ಲ. ಈ ದಿಕ್ಕಿನಲ್ಲಿ ಕಾರ್ಯಾಂಗ ದಂಡಾಧಿಕಾರಿ (ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್) ಅವರ ಮುಂದೆ ಭಾರತೀಯ ದಂಡ ಸಂಹಿತೆಯ 133ನೇ ಕಲಮಿನ ಅಡಿಯಲ್ಲಿ ಸಾರ್ವಜನಿಕ ಉಪದ್ರವಗಳನ್ನು ಹತ್ತಿಕ್ಕುವ ಸಂಬಂಧದ ಪ್ರಕ್ರಿಯೆ ಏರ್ಪಡಿಸಲು ಅರ್ಜಿಯೊಂದನ್ನು ಸಿದ್ಧಪಡಿಸಿದೆ. ದೇವಿಕಾದೇವಿ ಮತ್ತು ಗೋಪಿರಾಮ್‌ ಅವರನ್ನು ಬರಮಾಡಿಕೊಂಡು ಅವರು ಪೊಲೀಸ್‌ ಠಾಣೆಗೆ ದೂರು ಕೊಡುವಾಗ ಸಹಿ ಮಾಡಿದ್ದ ನೂರು ಜನರ ಸಹಿಗಳನ್ನು ಸಾಕ್ಷಿದಾರರನ್ನಾಗಿ ಇದಕ್ಕೆ ಸಹಿ ಮಾಡಿಸಿಕೊಂಡು ಬರಲು ತಿಳಿಸಿದೆ.

ಅವರು ಆ ಅರ್ಜಿಯೊಂದಿಗೆ ವಾಪಸಾದಾಗ ಆಘಾತಗೊಳ್ಳುವ ಸರದಿ ನನ್ನದಾಗಿತ್ತು. ಕಾರಣ, ಸಹಿ ಮಾಡಿದ್ದವರು ಮೂರು ಜನ ಮಾತ್ರ! ಸತ್ತ ಮಗುವಿನ ತಾಯಿ ಮಾಯಕ್ಕ ಆ ಮೂವರಲ್ಲಿ ಒಬ್ಬಳು. ಇದೆಂಥಾ ನಾಗರಿಕರ ಹೊಣೆಗೇಡಿತನ? ಸಾರ್ವಜನಿಕ ಹಿತಾಸಕ್ತಿ ಎನ್ನುವುದು ಎಲ್ಲೋ ಕೆಲವರು ಗುತ್ತಿಗೆ ತೆಗೆದುಕೊಂಡು ಮಾಡುತ್ತಿರುವ ಕೆಲಸ ಎಂದು ಜನರು ಭಾವಿಸಿರುವುದು ಇವತ್ತಿನ ಅನೇಕ ದುರಂತಗಳಿಗೆ ಕಾರಣವಾಗಿದೆ.

ಸ್ವಾತಂತ್ರ್ಯದ ನಂತರ ಜನಪ್ರಿಯವಾಗಿದ್ದ ಅದೆಷ್ಟೋ ಸಂಘಟಿತ ಚಳವಳಿಗಳು ನೆಲಕಚ್ಚಲು ಇಂಥ ಹೊಣೆಗೇಡಿತನ ಕಾರಣವಾಗಿದೆ. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ನಾಗರಿಕರ ಪಾಲ್ಗೊಳ್ಳುವಿಕೆ ಅಗತ್ಯವಾದ ಕ್ಷಣದಲ್ಲಿ ಹಿಂದೇಟು ಹಾಕುತ್ತಾರೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.

ಯಾಲಕ್ಕಿಗೌಡನ ಹಣ ಪೊಲೀಸರನ್ನು, ಅಬಕಾರಿ ಅಧಿಕಾರಿಗಳನ್ನು ಮಾತ್ರವಲ್ಲ, ನಾಗರಿಕರ ಹೊಣೆಗಾರಿಕೆಯನ್ನೂ ಖರೀದಿಸಿತ್ತೇ?ಸಂವಿಧಾನದ 510ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾದ 11 ಮೂಲಭೂತ ಕರ್ತವ್ಯಗಳಲ್ಲಿ 5ನೆಯದ್ದು ‘ಸ್ತ್ರೀಯರ ಗೌರವಕ್ಕೆ ಕುಂದು ಉಂಟುಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು’ ಎಂದು ನಾನು ಸಿದ್ಧಪಡಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದೆ. 

ಐಪಿಸಿಯ 133ನೇ ಕಲಮಿನಲ್ಲಿ ‘ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ   ಕಾನೂನು ಬಾಹಿರ ಅಡಚಣೆ ಅಥವಾ ಉಪದ್ರವವನ್ನು ನಿವಾರಿಸತಕ್ಕದ್ದು’ ಎಂದು ತಿಳಿಸಿರುವ ಬಗ್ಗೆಯೂ ಉಲ್ಲೇಖಿಸಿದೆ. ಇದನ್ನೇ ಕಾರ್ಯಾಂಗ ದಂಡಾಧಿಕಾರಿ ಚೆನ್ನಿ ಥಾಮಸ್ ಅವರ ಮುಂದೆ ಮಂಡಿಸಿದೆ. ‘ಈ ಸಂವಿಧಾನದ ಷರತ್ತುಗಳನ್ನು ಈ ಪ್ರಕರಣದಲ್ಲಿ ಮೀರಲಾಗಿದೆ’  ಎಂದೆ.

ನನ್ನ ವಾದ ಆಲಿಸಿದ ದಂಡಾಧಿಕಾರಿ  ಅವರು ಈ ಬಗ್ಗೆ 15 ದಿನಗಳ ಒಳಗಾಗಿ  ಯಾಲಕ್ಕಿಗೌಡರು ವಿವರಣೆ ನೀಡಬೇಕು ಎಂದು ಆದೇಶಿಸಿದರು. ಆದೇಶ ತಲುಪಿದ ಒಂದು ವಾರದ ಒಳಗೆ ‘ದೇವರದೇವ ಮದ್ಯ ಮಾರಾಟ ಮಳಿಗೆ’ಯ ಎರಡೂ ಬದಿಗಿದ್ದ ತಿಂಡಿತೀರ್ಥದ ಮಳಿಗೆ, ಬೀಡಾ-ಸಿಗರೇಟ್ ಅಂಗಡಿ ಮುಂತಾದವು ನಾಪತ್ತೆಯಾದವು. ಪೊಲೀಸರಿಗೆ, ಅಬಕಾರಿ ಅಧಿಕಾರಿಗಳಿಗೆ ದುಡ್ಡು ತಿನ್ನಿಸಿ ಈಗಾಗಲೇ ಸುಸ್ತು ಹೊಡೆದಿದ್ದ ಧನಿಕ ಕಪಟಿ ಯಾಲಕ್ಕಿಗೌಡನ ಅನ್ಯಾಯದ ವ್ಯಾಪಾರ ಬಿದ್ದುಹೋಗಿ ದೇವರದೇವನಿಗೆ ನಮಸ್ಕಾರ ಹೊಡೆದು ಮಳಿಗೆಯನ್ನು ಮುಚ್ಚಬೇಕಾಯಿತು.

ಒಂದು ಸಾರ್ವಜನಿಕ ಕಾರಣಕ್ಕಾಗಿ ಪಟ್ಟುಬಿಡದೆ ಗೆಲ್ಲುವ ತನಕ ಹೋರಾಟವನ್ನೇ ಧರ್ಮವೆಂದು ನಂಬಿದ ದೇವಿಕಾ ಅವರ ಸ್ಫೂರ್ತಿ ನನ್ನನ್ನು ಅಚ್ಚರಿಗೊಳಿಸಿತಲ್ಲದೆ ಅಂದಿನಿಂದ ಅವರು ನನಗೊಂದು ಹೆಮ್ಮೆ. ಹಾಗೆ ಆಕೆಯೊಂದಿಗೆ ಸಹಕರಿಸದೇ ಹೋದ ನಾಗರಿಕ ಹೊಣೆಗೇಡಿತನದ ಬಗ್ಗೆ ಜುಗುಪ್ಸೆ ಅನಿಸಿತು.

(ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT