ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯದ ಮಾತು ತಂದ ಯಡವಟ್ಟು

Last Updated 20 ಮೇ 2017, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜಕಾರಣಿಗಳು ‘ಸೌಜನ್ಯದ ಮಾತು’ಗಳನ್ನು ಆಡುವ ಭರದಲ್ಲಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಆಮೇಲೆ ತಾವು ಹಾಗೆ ಹೇಳಿಯೇ ಇಲ್ಲ. ತಪ್ಪಾಗಿ ವರದಿಯಾಗಿದೆ ಎಂದು ಮರುದಿನ ಪತ್ರಿಕಾ ಕಚೇರಿಗೆ ಬರುತ್ತಾರೆ.

ಈಚೆಗೆ ಕಲಬುರ್ಗಿ ತಾಲ್ಲೂಕು ಸೊಂತ ಗ್ರಾಮದಲ್ಲಿ ಅಂಬೇಡ್ಕರ್‌ ಮೂರ್ತಿ ಅನಾವರಣ ಕಾರ್ಯಕ್ರಮವಿತ್ತು. ಅದರಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ರೇವುನಾಯಕ ಬೆಳಮಗಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಇದೇ ಮಾಜಿ ‘ಪೈಲ್ವಾನ್‌’ ಬೆಳಮಗಿ ಅಖಾಡಕ್ಕೆ ಇಳಿದು ಚೆನ್ನಾಗಿಯೇ ಸೆಣಸಿದ್ದರು. ಅಲ್ಲದೇ ಈ ಗ್ರಾಮವು ಕಲಬುರ್ಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಬೆಳಮಗಿ ಇದೇ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಮತ್ತೊಮ್ಮೆ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.

ಬೆಳಮಗಿ ಅವರು ಸಭೆಯಲ್ಲಿ ಮಾತನಾಡುವಾಗ ‘ಖರ್ಗೆ ಕರ್ನಾಟಕದ ಹೆಮ್ಮೆಯ ಪುತ್ರ. ಇವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಮನಸ್ಸಿರಲಿಲ್ಲ. ಪಕ್ಷದ ಒತ್ತಾಯದಿಂದ ಕಣಕ್ಕಿಳಿದೆ’ ಎಂದುಬಿಟ್ಟರು. ಸೇರಿದ್ದ ಜನರು ಚಪ್ಪಾಳೆ ತಟ್ಟಿದರು. ಖರ್ಗೆ ಮತ್ತು ಬೆಳಮಗಿ ಇಬ್ಬರ ಮುಖದಲ್ಲೂ ಮಂದಹಾಸವಿತ್ತು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಮಗಿ ಅವರಿಗೆ ಚಳ್ಳೆಹಣ್ಣು ತಿನ್ನಿಸಿ, ತಾವೇ ಟಿಕೆಟ್‌ ಪಡೆಯಬೇಕು ಎನ್ನುವ ಆಸೆ ಹೊಂದಿರುವವರು ‘ತಮಗೆ ಇದಕ್ಕಿಂತ ದೊಡ್ಡ ದಾಖಲೆ ಬೇಕಿಲ್ಲ’ ಎನ್ನುವಂತೆ ಪತ್ರಿಕೆಯ ವರದಿಯನ್ನು ರಾಜ್ಯ ನಾಯಕರಿಗೆ ಕಳುಹಿಸಿಕೊಟ್ಟರು. ವಿಷಯ ಗಂಭೀರವಾಗಿರುವುದನ್ನು ಅರಿತ ಬೆಳಮಗಿ ಆಗಬಹುದಾದ ‘ಭಾರೀ ಅನಾಹುತ’ವನ್ನು ತಪ್ಪಿಸಲು ‘ಸ್ಪಷ್ಟನೆ’ ಮೊರೆ ಹೋದರು.

ಸ್ವಪಕ್ಷೀಯ ವಿರೋಧಿಗಳು ಮಾತ್ರ ‘ಅವರ ಮಾತು ಪಕ್ಷ ವಿರೋಧಿಯಾಗಿದೆ. ಇದೆಲ್ಲ ಖರ್ಗೆ ಮತ್ತು ಬೆಳಮಗಿ ಅವರ ಹೊಂದಾಣಿಕೆ ರಾಜಕೀಯದಾಟ. ನಮ್ಮ ಬಳಿ ಅವರು ಆಡಿರುವ ಮಾತುಗಳ ವಿಡಿಯೊ ಇದೆ’ ಎಂದು ಹುರುಪಿನಿಂದ ಓಡಾಡಿದರು. ಆದರೆ, ಅವರಿಗೆ ವಿಡಿಯೊ ಸಿಗಲೇ ಇಲ್ಲ. ಬೆಳಮಗಿ ಏನೂ ನಡೆದೇ ಇಲ್ಲ ಎನ್ನುವಂತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಾಷಣ ಮಾಡುತ್ತಲೇ ಇದ್ದಾರೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT