ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಸಿಕ್ಕ ‘ಎಸ್ಕೇಪ್’ ಶಂಕರ್

ಶಾಪಿಂಗ್ ಮಾಡುವಾಗಲೇ ಪೊಲೀಸರ ಬಲೆಗೆ
Last Updated 20 ಮೇ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಆರೋಗ್ಯ ತಪಾಸಣೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕೈದಿ ಶಂಕರ್ ಅಲಿಯಾಸ್ ‘ಎಸ್ಕೇಪ್’, ಮೈಸೂರು ರಸ್ತೆಯ ಗೋಪಾಲನ್ ಮಾಲ್‌ನಲ್ಲಿ ಗುರುವಾರ ಶಾಪಿಂಗ್ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಿವಿಲ್ ಎಂಜಿನಿಯರ್ ಆಗಿದ್ದ ಶಂಕರ್ (41), ವೃತ್ತಿ ವೈಷಮ್ಯದ ಕಾರಣಕ್ಕೆ ಸಹಚರರ ಜತೆ ಸೇರಿ 2011ರಲ್ಲಿ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿದ್ದ. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯ ಅದೇ ವರ್ಷ ಜೀವಾವಧಿ ಶಿಕ್ಷೆ ವಿಧಿಸಿತ್ತು.

2013ರ ಆಗಸ್ಟ್‌ನಲ್ಲಿ ಶಂಕರ್ ಸೇರಿದಂತೆ ಎಂಟು ಕೈದಿಗಳನ್ನು ಆರೋಗ್ಯ ತಪಾಸಣೆಗಾಗಿ ಸಿಎಆರ್ ಪೊಲೀಸ್ ಭದ್ರತೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ಮುಗಿದ ಬಳಿಕ ಶೌಚಾಲಯಕ್ಕೆ ತೆರಳಿದ್ದ ಆತ, ಅಲ್ಲಿಂದಲೇ ಪರಾರಿಯಾಗಿದ್ದ.

15 ನಿಮಿಷ ಕಾದರೂ ಶಂಕರ್ ಹೊರ ಬಾರದಿದ್ದಾಗ ಪೊಲೀಸರು ಶೌಚಾಲಯದೊಳಗೆ ಹಾಗೂ ಆಸ್ಪತ್ರೆ ಆವರಣದಲ್ಲಿ ಹುಡುಕಾಟ ನಡೆಸಿದ್ದರು. ಆತ ಸಿಗದಿದ್ದಾಗ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿದ್ದ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ಬಂಧಮುಕ್ತರಿಂದ ಸುಳಿವು: ಪೊಲೀಸ್ ವಶದಿಂದ ತಪ್ಪಿಸಿಕೊಂಡ ಬಳಿಕ ಕೆಲ ಕಾಲ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಶಂಕರ್, ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿರುವ ತನ್ನ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ವಿಶೇಷ ತಂಡ ಕಟ್ಟಿಕೊಂಡು ಶೋಧ ಕಾರ್ಯದಲ್ಲಿ ತೊಡಗಿದ್ದ ಕಾರಾಗೃಹದ ಸಿಬ್ಬಂದಿ, ಇಷ್ಟು ದಿನವಾದರೂ  ಆತ ಸಿಗದ ಕಾರಣಕ್ಕೆ ಹುಡುಕಾಟ ನಿಲ್ಲಿಸಿದ್ದರು.

‘ಸನ್ನಡತೆ ಆಧಾರದ ಮೇಲೆ ಇದೇ ಜ.26ರಂದು ಬಿಡುಗಡೆಯಾದ ಕೆಲ ಕೈದಿಗಳಿಗೆ, ಜೈಲಿನಿಂದ ಪರಾರಿಯಾಗಿರುವ ಹಾಗೂ ಪರೋಲ್ ಮೇಲೆ ಹೋಗಿ ಜೈಲಿಗೆ ಹಿಂದಿರುಗದ ಕೈದಿಗಳ ಫೋಟೊಗಳನ್ನು ಕೊಟ್ಟಿದ್ದೆವು. ಅವರ ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ಕೊಡುವಂತೆ ಕೋರಿದ್ದೆವು. ಬಿಡುಗಡೆಗೆ ಅನುಕೂಲ ಮಾಡಿಕೊಟ್ಟಿದ್ದೆವು ಎಂಬ ಕಾರಣಕ್ಕೆ ಅವರು ಈ ಕೆಲಸಕ್ಕೆ ಒಪ್ಪಿಕೊಂಡಿದ್ದರು’ ಎಂದು ಜೈಲು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ತಿಂಗಳ ಹಿಂದೆ ಕರೆ ಮಾಡಿದ್ದ ಬಂಧಮುಕ್ತನೊಬ್ಬ, ‘ಸರ್ ಹಿಂದೆ ನನ್ನ ಬ್ಯಾರಕ್‌ನಲ್ಲೇ ಇದ್ದ ಶಂಕರ್‌ನನ್ನು ಮಲ್ಲತ್ತಹಳ್ಳಿಯಲ್ಲಿ ನೋಡಿದೆ’ ಎಂದು ಹೇಳಿದ್ದ. ಆದರೆ, ಸ್ಥಳಕ್ಕೆ ತೆರಳುವಷ್ಟರಲ್ಲಿ ಆತ ಪರಾರಿಯಾಗಿದ್ದ. ಶಂಕರ್‌ನ ಪತ್ನಿಯನ್ನು ವಿಚಾರಣೆ ನಡೆಸಿದರೂ ಪ್ರಯೋಜನ ಆಗಿರಲಿಲ್ಲ.’

‘ಈಗ ಅದೇ ಬಂಧಮುಕ್ತ ಗುರುವಾರ ಸಂಜೆ ಗೋಪಾಲನ್ ಮಾಲ್‌ನಲ್ಲಿ ಶಂಕರ್‌ನನ್ನು ನೋಡಿ ಕರೆ ಮಾಡಿದ್ದ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದೆವು. ಅಲ್ಲಿನ ಸಿಬ್ಬಂದಿ ಮಾಲ್‌ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜರಾಜೇಶ್ವರಿನಗರ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿದರು.

ಮಾಲ್‌ಗೆ ತೆರಳಿದ ಅವರು, ದೂರದಿಂದ ಮೊಬೈಲ್‌ನಲ್ಲಿ ಶಂಕರ್‌ನ ಫೋಟೊ ತೆಗೆದು ನಮಗೆ  ಕಳುಹಿಸಿದರು. ನಾವು ಖಚಿತಪಡಿಸಿದ ಬಳಿಕ ವಶಕ್ಕೆ ಪಡೆದುಕೊಂಡರು.’

‘ಆತನ ಪೂರ್ವಾಪರದ ದಾಖಲೆ ಹಾಗೂ ಫೋಟೊಗಳನ್ನು ತೆಗೆದುಕೊಂಡು ತಕ್ಷಣ ರಾಜರಾಜೇಶ್ವರಿನಗರ ಠಾಣೆಗೆ ತೆರಳಿದೆವು. ತಲೆಗೆ ಸ್ಕಾರ್ಫ್‌ ಕಟ್ಟಿಕೊಂಡಿದ್ದ ಆತ, ಫ್ರೆಂಚ್ ಗಡ್ಡ ಬಿಟ್ಟಿದ್ದ. ಗುರುತು ಸಿಗಲಾರದ ಮಟ್ಟಿಗೆ ಆತನ ವೇಷ ಬದಲಾಗಿತ್ತು. ‘ನಾನು ಶಂಕರ್ ಅಲ್ಲ. ನಾನೊಬ್ಬ ರಿಯಲ್ ಎಸ್ಟೇಟ್ ಉದ್ಯಮಿ’ ಎಂದು ಆರಂಭದಲ್ಲಿ ಹೇಳಿದ ಆರೋಪಿ, ಆತನ ಹಿಂದಿನ ಫೋಟೊಗಳನ್ನು ತೋರಿಸುತ್ತಿದ್ದಂತೆಯೇ ಸುಮ್ಮನಾದ’ ಎಂದು  ಜೈಲು ಅಧಿಕಾರಿಗಳು ಮಾಹಿತಿ ನೀಡಿದರು.

‘ಎಸ್ಕೇಪ್’ ಹೆಸರು ಬಂದಿದ್ದು: ‘2011ರಲ್ಲಿ ಜೈಲಿನಿಂದ ಪರೋಲ್ ಮೇಲೆ ಆಚೆ ಹೋಗಿದ್ದ ಶಂಕರ್, ನಾಲ್ಕು ತಿಂಗಳಾದರೂ ವಾಪಸ್ ಬಂದಿರಲಿಲ್ಲ.  ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಯಿತು. ಪೊಲೀಸರು ಆತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, 2 ವರ್ಷಗಳ ಬಳಿಕ ಮತ್ತೆ ತಪ್ಪಿಸಿಕೊಂಡಿದ್ದರಿಂದ ‘ಎಸ್ಕೇಪ್’ ಶಂಕರ್‌ ಎಂಬ ಅಡ್ಡಹೆಸರು ಇಡಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

ಪತ್ತೆಯಾದ ಮೂರನೇ ಕೈದಿ
‘ಕಾರಾಗೃಹದ ಅಧಿಕಾರಿಗಳು ಪದೇ ಪದೇ ಬದಲಾಗುವ ಕಾರಣ ಅವರಿಗೆ ಪರಾರಿಯಾಗಿರುವ ಕೈದಿಗಳ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಆದರೆ, ಕೈದಿಗಳಿಗೆ ಆ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಹೀಗಾಗಿ, ಪ್ರತಿ ಸಲ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಾಗಲೂ ಪರಾರಿಯಾಗಿರುವ ಕೈದಿಗಳು ಹೊರಗೆ ಸಿಕ್ಕರೆ ಮಾಹಿತಿ ಕೊಡುವಂತೆ ಬಂಧಮುಕ್ತರಿಗೆ ಸೂಚಿಸಿರುತ್ತೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಇದೇ ತಂತ್ರ ಬಳಸಿ 2 ತಿಂಗಳಲ್ಲಿ ಮೂವರು ಕೈದಿಗಳನ್ನು ಪತ್ತೆ ಮಾಡಿದ್ದೇವೆ. ಪರೋಲ್ ಮೇಲೆ ಹೋಗಿದ್ದ ಕೃಷ್ಣಮೂರ್ತಿ ಎಂಬಾತ, ಆರು ತಿಂಗಳಾದರೂ ವಾಪಸಾಗಿರಲಿಲ್ಲ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ಸಿಗಂದೂರಿನಲ್ಲಿ ಆತನನ್ನು ನೋಡಿದ ಬಂಧಮುಕ್ತನೊಬ್ಬ, ನಮಗೆ ಕರೆ ಮಾಡಿ ಮಾಹಿತಿ ಕೊಟ್ಟ. ಕೂಡಲೇ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿ ಆತನನ್ನು ಬಂಧಿಸಿದೆವು.’

‘ಇದೇ ಏಪ್ರಿಲ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಶಿವಕುಮಾರ್, ಮೈಸೂರು ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದ. ಆತನ ಬಗ್ಗೆಯೂ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬರು ಸುಳಿವು ಕೊಟ್ಟಿದ್ದರು. ಅದೇ ರೀತಿ ಈಗ ಶಂಕರ್‌ನನ್ನು ಪತ್ತೆ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸಾರಿ ಸರ್..’
‘ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಆ ಕಾರಣಕ್ಕೆ ತಪ್ಪಿಸಿಕೊಂಡು ಹೋಗಿದ್ದೆ. ಮತ್ತೆ ಜೈಲಿಗೆ ಬಂದರೆ, ಕಠಿಣ ಶಿಕ್ಷೆ ನೀಡಬಹುದೆಂಬ ಭಯದಿಂದ ವಾಪಸಾಗಲಿಲ್ಲ. ಇನ್ನೆಂದೂ ಹೀಗೆ ಮಾಡಲ್ಲ. ಸಾರಿ ಸಾರ್...’ ಎಂದು ಶಂಕರ್ ವಿಚಾರಣೆ ವೇಳೆ ಕ್ಷಮೆ ಕೋರಿದ್ದಾಗಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT