ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಒಣ ಹುಲ್ಲಿಗೆ ಹೆಚ್ಚಿದ ಬೇಡಿಕೆ

Last Updated 21 ಮೇ 2017, 5:21 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ತುಂಗಭದ್ರಾ ನದಿ ದಂಡೆ ಸನಿಹದ ಜಮೀನುಗಳಲ್ಲಿ ಬೆಳೆದ ಭತ್ತದ ಬೆಳೆ ಕಟಾವು ಆರಂಭವಾಗಿದ್ದು,ಒಣ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಈ ಬಾರಿ ನಾಲೆಗೆ ಭತ್ತದ ಬೆಳೆ ಬೆಳೆಯಲು ನೀರು ಬಿಡುಗಡೆ ಮಾಡಿರಲಿಲ್ಲ. ತಿಂಗಳಿಗೆ ಒಮ್ಮೆ ತೋಟದ ಬೆಳೆಗೆ ಮಾತ್ರ ನೀರು ಹರಿಸಲಾಗಿತ್ತು.

ಹೋಬಳಿ ವ್ಯಾಪ್ತಿಯ ವಾಸನ, ನಂದಿಗುಡಿ, ಗೋವಿನಹಾಳ್, ಉಕ್ಕಡಗಾತ್ರಿ, ಮಳಲಹಳ್ಳಿ, ಪಾಳ್ಯ ಹಾಗೂ ದೇವರಬೆಳೆಕೆರೆ ಹಳ್ಳದ ವ್ಯಾಪ್ತಿಯ ಸಂಕ್ಲೀಪುರ, ಗುಳದಹಳ್ಳಿ, ದೇವರಬೆಳೆಕೆರೆ ಹಾಗೂ ಕುಣಿಬೆಳೆಕೆರೆ ಜಮೀನುಗಳಲ್ಲಿ ಮಾತ್ರ ಪಂಪ್ ಸೆಟ್ ಆಸರೆಯಲ್ಲಿ ರೈತರು ಬೇಸಿಗೆ ಹಂಗಾಮಿಗೆ ಭತ್ತದ ಬೆಳೆ ಬೆಳೆದಿದ್ದರು.

ಈಗ ಭತ್ತದ ಒಣಹುಲ್ಲಿಗೆ ಬೇಡಿಕೆ ಬಂದಿದ್ದು, ರೈತರು ಕೊಳ್ಳಲು ಮುಂದಾಗಿದ್ದಾರೆ. ಹೊಳೆ ಆಚೆಗಿರುವ ಹಾವೇರಿ, ಧಾರವಾಡ ಜಿಲ್ಲೆಯ ರೈತರು ಒಂದು ಟ್ರ್ಯಾಕ್ಟರ್ ಹುಲ್ಲಿಗೆ ನಾಲ್ಕೈದು ಸಾವಿರ ರೂಪಾಯಿ ಧಾರಣೆ ನಿಗದಿ ಮಾಡಿ ಕೊಳ್ಳುತ್ತಿದ್ದಾರೆ. ಗದ್ದೆಯಲ್ಲಿ ಒಣಗಿದ ಹುಲ್ಲನ್ನು ಕಾರ್ಮಿಕರು ಜತನದಿಂದ ಸಂಗ್ರಹಿಸಿ ಟ್ರ್ಯಾಕ್ಟರ್‌ಗೆ ಹೇರುವ ದೃಶ್ಯ ಸಾಮಾನ್ಯವಾಗಿದೆ.

ಮಳೆ ಕೂಡ ಬಿಡುವು ಕೊಟ್ಟಿದ್ದು ಉತ್ತಮವಾದ ಒಣಗಿದ ಹುಲ್ಲು ಸಿಗುತ್ತಿದೆ ಎಂದು ಉಕ್ಕಡಗಾತ್ರಿ ಗ್ರಾಮದ ರೈತ ಚಾಮರಾಜ್ ಪಾಟೀಲ್, ಸಂಜೀವರೆಡ್ಡಿ ಮಾಹಿತಿ ನೀಡಿದರು.
ಸ್ಥಳೀಯ ರೈತರಿಗೆ ಒಣಹುಲ್ಲು ಸಿಗುತ್ತಿರುವುದು ಜಾನುವಾರಿನ ಹಸಿವನ್ನು ಸ್ವಲ್ಪಮಟ್ಟಿಗೆ ನೀಗಿಸಿದೆ. ನೆಂಟರು, ಬೀಗರ ಜಾನುವಾರಿಗೆ ಉಚಿತವಾಗಿ ಹುಲ್ಲನ್ನು ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಪ್ರಗತಿಪರ ರೈತ ಬೂದಿಹಾಳ್ ಹಾಲೇಶಪ್ಪ ನೀಡಿದರು.

ಪ್ರತಿ ಬಾರಿ ಭತ್ತದ ಹುಲ್ಲನ್ನು ಕೆಲವರು ಸುಟ್ಟು ಬೂದಿ ಮಾಡುತ್ತಿದ್ದರು. ಗೋಶಾಲೆ ನಡೆಸುವ ಮಂದಿಯೂ ಸಾಗಿಸುತ್ತಿದ್ದರು.  ಈ ಬಾರಿ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆ ಕಡಿಮೆ ಪ್ರದೇಶದಲ್ಲಿ ಬೆಳೆದಿದ್ದರೂ ಒಣಹುಲ್ಲಿಗೆ ಮಾತ್ರ ಉತ್ತಮ ಧಾರಣೆ ಹಾಗೂ ಬೇಡಿಕೆ ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT