ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಸಂಘಟನೆ ಬಲಗೊಳಿಸಿ

Last Updated 21 ಮೇ 2017, 5:34 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲಾ ಕುರುಬರ ಸಂಘದ ಹಿಂದಿನ ಅಧ್ಯಕ್ಷರು ಹೊಸ ಅಧ್ಯಕ್ಷರಿಗೆ ಕಾಗದ ಪತ್ರಗಳನ್ನು ಹಸ್ತಾಂತರಿಸಿಲ್ಲ. ಸಂಘದ ಲೆಕ್ಕಪತ್ರ ಕೊಡದಿದ್ದರೆ ಸಮಾಜದ ಮುಖಂಡರು ಅವರ ಮನೆಯ ಎದುರು ಶಾಮಿಯಾನ ಹಾಕಿ ಕೊಂಡು ಧರಣಿ ನಡೆಸಬೇಕು’ ಎಂದು ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ರಂಗಯ್ಯನಬಾಗಿಲು ಸಮೀಪ ವಿರುವ ಜಿಲ್ಲಾ ಕುರುಬರ ಸಂಘದಲ್ಲಿ ಶನಿವಾರ ನಡೆದ ಜಿಲ್ಲಾ ಕುರುಬರ ಮಹಿಳಾ ಸಮಾಜ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಕುರುಬರ ಸಂಘದ ಕಟ್ಟಡವನ್ನು ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕೊಟ್ಟಿದ್ದೇವೆ. ಸರಿಯಾದ ಕಾಗದ ಪತ್ರಗಳಿಲ್ಲದ ಕಾರಣ ಐದು ತಿಂಗಳಿಂದ ಬಿಸಿಎಂ ಇಲಾಖೆಯಿಂದ ಬಾಡಿಗೆ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಸಂಬಂಧ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಕೂಡ ಇಲಾಖೆ ಅಧಿಕಾರಿಗೆ ಹೇಳಿದ್ದಾರೆ. ಆದರೂ ಅವರು ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೊಸದುರ್ಗ ಶಾಖಾ ಮಠಕ್ಕೆ 150 ಎಕರೆ ಆಸ್ತಿಯಿದೆ. 4 ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದ್ದೇವೆ. ಸಮಾಜದ ಹಿರಿಯರ ಎಲ್ಲಾ ಸಲಹೆಗಳನ್ನು ಗೌರವಿಸಿದ್ದೇನೆ. ಅಧಿಕಾರ ಹಂಚಿಕೊಂಡು ಕೆಲಸ ಮಾಡಬೇಕು. ಸಮುದಾಯಕ್ಕೆ ಅಡಚಣೆ ಮಾಡಿ ಸಮಾಜಕ್ಕೆ ಕೆಟ್ಟ ಹೆಸರು ತರಬಾರದು’ ಎಂದು ಕಿವಿ ಮಾತು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜದ ಅಭಿವೃದ್ಧಿಗಾಗಿ ₹60 ಕೋಟಿ ಅನುದಾನ ನೀಡಿದ್ದಾರೆ.  ಕುರುಬ ಸಮಾಜದ ಮಕ್ಕಳು ಐಎಎಸ್‌, ಕೆಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸಲು ಹರಿಹರದಲ್ಲಿ ₹6 ಕೋಟಿ ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ’ ಎಂದರು.

‘ಹೊಸದುರ್ಗದಲ್ಲಿ 15 ಎಕರೆಯಲ್ಲಿ ₹14 ಕೋಟಿ ವೆಚ್ಚದಲ್ಲಿ 4ಸಾವಿರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆಯನ್ನು  ಆರಂಭಿಸಲಾಗುತ್ತಿದೆ. ಕುರುಬ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದರ ಜೊತೆಗೆ ಬಡ ಮಕ್ಕಳಿಗೆ ಆರ್ಥಿಕ ನೆರವು ನೀಡಬೇಕಿದೆ. ಹಾಗಾಗಿ ಸಮಾಜದೊಳಗಿನ ಭಿನ್ನಾಭಿಪ್ರಾಯಗಳು ಮೊದಲು ಸರಿಪಡಿಸಿಕೊಳ್ಳಬೇಕಾಗಿದೆ’ ಎಂದರು.

‘ಕಾಗಿನೆಲೆ ಗ್ರಾಮೀಣಾಭಿವೃದ್ಧಿ ಸಂಸ್ಥೆ  ಆರಂಭಿಸಲಾಗಿದ್ದು, 10 ಸಾವಿರ ಮಹಿಳೆಯರನ್ನು ಸದಸ್ಯರನ್ನಾಗಿಸುವ ಗುರಿ ಇದೆ. ಈಗಾಗಲೇ 500 ಮಹಿಳೆಯರು ಸದಸ್ಯರಾಗಿದ್ದಾರೆ. ನಮ್ಮ ಸಮಾಜದ ಮಹಿಳೆಯರು ರಾಜಕೀಯದಲ್ಲೂ ಮುಂದೆ ಬರಬೇಕು. ಜಿಲ್ಲೆಯಲ್ಲಿ 5  ಸಾವಿರ ಮಹಿಳೆಯರನ್ನು ಸಂಘಟಿಸಿ. ವರ್ಷಕ್ಕೊಮ್ಮೆ ಮಠಕ್ಕೆ ಬನ್ನಿ, ನಿಮಗೆ ಉಡಿ ತುಂಬಿ ಗೌರವಿಸುತ್ತೇವೆ’ ಎಂದು ಸ್ವಾಮೀಜಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ‘ಸರ್ಕಾರ ಮಹಿಳೆಯರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸುವುದಕ್ಕಾಗಿ ‘ಕೌಶಲಕಾರ್‍’ ಎಂಬ ತರಬೇತಿ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ಸಮಾಜದ ಮಹಿಳೆಯರು ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಬಹುದು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಸುರೇಶ್‌ಬಾಬು, ಆರ್ಕಿಟೆಕ್ಟ್ ಸುಜಾತ, ಸಂಘದ ಸದಸ್ಯೆರಾದ ರೇಖಾ ಬಸವ ರಾಜ್, ಪುಷ್ಪವಲ್ಲಿ ಉಮಾಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಎಚ್. ಮಂಜಪ್ಪ, ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಬಿ.ಜಗನ್ನಾಥ್, ಎಂ.ವಿ.ಮಾಲತೇಶ್ ಅರಸ್, ಗಿರಿಬಾಬು ವೇದಿಕೆಯಲ್ಲಿದ್ದರು.

ಹೇಮಲತಾ ಪ್ರಾರ್ಥಿಸಿದರು. ನಿಹಾರಿಕ ಸ್ವಾಗತಿಸಿದರು. ಇದೇ ವೇದಿಕೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಕುರುಬ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷರಾದ ಬಾಲಮ್ಮ, ಶಾರದಮ್ಮ ಹಾಗೂ ಆರ್ಕಿಟೆಕ್ಟ್ ಸುಜಾತ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT