ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಜನರ ಸಹಕಾರ ಅಗತ್ಯ

Last Updated 21 ಮೇ 2017, 5:38 IST
ಅಕ್ಷರ ಗಾತ್ರ

ತುರುವನೂರು: ಸರ್ಕಾರಿ ಯೋಜನೆ ಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಜನಸಾಮಾನ್ಯರು ಅವರೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.

ತುರುವನೂರು ಗ್ರಾಮದಲ್ಲಿ  ಹೋಬಳಿಯ ರೈತರು  ಜಿಲ್ಲಾಡಳಿತದ ಅಧಿಕಾರಿಗಳಿಗೆ ಹಾಗೂ ಶಾಸಕ ಟಿ.ರಘುಮೂರ್ತಿ ಅವರಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯು ತೀವ್ರ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಜಾನುವಾರು ರಕ್ಷಣೆಗೆ ಗೋಶಾಲೆ ಪ್ರಾರಂಭಿಸಲಾಗಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಳ್ಳಕೆರೆ ಕ್ಷೇತ್ರದ ಜನತೆಗೆ  ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಶಾಸಕರು ಸೂಚಿಸಿದ್ದಾರೆ. ಅದರಂತೆ ಸೌಲಭ್ಯಗಳನ್ನು ಕಾರ್ಯಗತಗೊಳಿಸ ಲಾಗುವುದು ಎಂದರು.

ಗ್ರಾಮದ ರಾಮಕೃಷ್ಣರೆಡ್ಡಿ ಮೂಕ ಪ್ರಾಣಿಗಳ ವೇದನೆ ಕಂಡು ಜಾಗ ಹಾಗೂ ಕುಡಿಯುವ ನೀರುಕಲ್ಪಿಸಿರುವ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಸರ್ಕಾರ ಜಿಲ್ಲೆಯಲ್ಲಿ 18 ಗೋಶಾಲೆಗಳನ್ನು ತೆರೆದಿದೆ.

ಅದರಲ್ಲಿ ಚಳ್ಳಕೆರೆ ತಾಲ್ಲೂಕಿಗೆ 8 ಗೋಶಾಲೆಗಳನ್ನು ನೀಡಿದೆ. ಗೋಶಾಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇತರೆ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ’ ಎಂದರು.

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು 15 ಎಕರೆ ಜಾಗವನ್ನು  ಮಂಜೂರು ಮಾಡಿದ್ದಾರೆ. 300 ಕುಟುಂಬಗಳಿಗೂ  ನಿವೇಶನ ಕಲ್ಪಿಸಲು 9 ಎಕರೆ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

ತುರುವನೂರು ಗ್ರಾಮವು ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರವಾಗಲು ಅಗತ್ಯ ಇರುವ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ. ಪದವಿ ಕಾಲೇಜು ನಿರ್ಮಾಣಕ್ಕೆ ಗ್ರಾಮದ ಸೂರ್ಯನಾರಾಯಣ ರೆಡ್ಡಿ 7 ಎಕರೆ ಜಮೀನು ನೀಡಿದ್ದಾರೆ ಎಂದರು.

ಉಪವಿಭಾಗಾಧಿಕಾರಿ ಟಿ. ರಾಘವೇಂದ್ರ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್, ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ, ಉಪ ತಹಸೀಲ್ದಾರ್ ನಾಗರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಕೌಸಲ್ಯಾ ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ಶಿವಣ್ಣ, ತಿಮ್ಮಾರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ವೇದಮೂರ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಚೌಡಮ್ಮ , ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾರಕ್ಕ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಮುಖಂಡರಾದ ರಾಮಕೃಷ್ಣ ರೆಡ್ಡಿ, ಮಂಜಣ್ಣ, ಗೌರಮ್ಮ, ಎನ್.ಟಿ.ಸ್ವಾಮಿ ಇದ್ದರು.

ಮೆರವಣಿಗೆ
ಅಭಿನಂದನಾ ಸಮಾರಂಭಕ್ಕೂ ಮುನ್ನ ತುರುವನೂರು ಗ್ರಾಮದ ಭುವನೇಶ್ವರಿ ಸರ್ಕಲ್‌ನಿಂದ ಎತ್ತಿನ ಗಾಡಿಯ ಮೂಲಕ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಉಪವಿಭಾಗಾಧಿಕಾರಿ ರಾಘವೇಂದ್ರ, ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ಅವರನ್ನು ರೈತರು ಮೆರವಣಿಗೆ ಮೂಲಕ ಗೋಶಾಲೆಗೆ ಕರೆತಂದರು.

* *

ಜಾನುವಾರಿಗೆ ಮೇವು, ಆರೋಗ್ಯ ತಪಾಸಣೆಗೆ, ಕುಡಿ ಯುವ ನೀರು ಪೂರೈಕೆಗೆ ಕ್ರಮ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕೈಗೊಂಡಿದ್ದು, ಸಾರ್ವಜನಿಕರ ಸಹಕಾರ ಅಗತ್ಯ
-ಎಂ.ಕೆ.ಶ್ರೀರಂಗಯ್ಯ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT