ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರಿ ತೇರು ಎಳೆಯಲು ಚಿಂತನೆ

Last Updated 21 ಮೇ 2017, 5:46 IST
ಅಕ್ಷರ ಗಾತ್ರ

ಹೊಸದುರ್ಗ: ಮಠ ಎಂದಾಕ್ಷಣ ಅಲ್ಲೊಬ್ಬ ಸ್ವಾಮೀಜಿ, ಒಂದಷ್ಟು ಧಾರ್ಮಿಕ ಪ್ರವಚನ ಭಕ್ತರ ಕಣ್ಣಿಗೆ ಕಟ್ಟುವ ಸಾಮಾನ್ಯ ಕಲ್ಪನೆಗಳಿವು.ಆದರೆ, ತಾಲ್ಲೂಕಿನ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ 6 ಅಡಿ ಎತ್ತರದ ಕನ್ನಡಾಂಬೆ ಭುವನೇಶ್ವರಿ ಮೂರ್ತಿ ಕೆತ್ತಿಸುವ ಮೂಲಕ ನಾಡಿನ ಸಂಸ್ಕೃತಿಯ ಹಿರಿಮೆ ಹೆಚ್ಚಿಸಲು ಮುಂದಾಗಿದ್ದಾರೆ.

ಲೇಪಾಕ್ಷಿ ಸ್ವಾಮೀಜಿ ಕೃಷಿ ಕಾಯಕದಿಂದ ಮಠದ ಅಭಿವೃದ್ಧಿ ಆಗಬೇಕು ಎಂಬ ಕಂಡಿದ್ದ ಕನಸು ಈಡೇರಿಸಲು ದಾಳಿಂಬೆ, ತೆಂಗು, ಅಡಿಕೆ, ಸಿರಿಧಾನ್ಯ ಬೆಳೆ ಬೆಳೆಯುವ ಮೂಲಕ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಶ್ರಮಿಸುತ್ತಿದ್ದಾರೆ. ಈ ಕಾರ್ಯದ ಜತೆಗೆ ₹ 10 ಕೋಟಿ ವೆಚ್ಚದಲ್ಲಿ ಶ್ರೀಮಠವನ್ನು ಪ್ರವಾಸಿ ತಾಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ₹ 2 ಕೋಟಿ ವೆಚ್ಚದಲ್ಲಿ ಶಿವಮೊಗ್ಗದ ಜೆ.ಎಸ್‌.ವಿವೇಕಾನಂದ ಶಿಲ್ಪಿ ಅವರಿಂದ ಕಲ್ಲಿನ ಭುವನೇಶ್ವರಿ ಮೂರ್ತಿ ಕೆತ್ತಿಸುತ್ತಿದ್ದಾರೆ.

‘ರಾಜ್ಯದ ವಿವಿಧೆಡೆ ಭುವನೇಶ್ವರಿ ದೇವಿ ಮೂರ್ತಿ ಇರಬಹುದು. ಆದರೆ, ನಾವು ಕೇವಲ ಮೂರ್ತಿ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಬದಲಾಗಿ ಈ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಪ್ರತಿ ವರ್ಷ ನವೆಂಬರ್‌ನಲ್ಲಿ ಕನ್ನಡಾಂಬೆ ಭುವನೇಶ್ವರಿ ತೇರು ಎಳೆಯುವ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಸಿಮೆಂಟ್‌ ಹಾಗೂ ಕಬ್ಬಿಣ ಬಳಸಿ ಆಕರ್ಷಕ ತೇರು ನಿರ್ಮಿಸಲಾಗುವುದು. ತೇರಿನ ಸುತ್ತಲು ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿಗಳ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಐದು ತಿಂಗಳ ಒಳಗೆ ಭುವನೇಶ್ವರಿ ಮೂರ್ತಿ ಕೆತ್ತನೆ ಹಾಗೂ ತೇರು ನಿರ್ಮಾಣದ ಕೆಲಸ ಮುಗಿಯಲಿದೆ’ ಎಂದು ಸ್ವಾಮೀಜಿ ವಿವರ ನೀಡಿದರು.

ಭಗೀರಥ ಗುರುಪೀಠವು ಪದ್ಮ ಮಹರ್ಷಿ ಪರಂಪರೆಯಲ್ಲಿ 13 ಜಗದ್ಗುರುಗಳನ್ನು ಹೊಂದಿದ್ದು, 650 ವರ್ಷಗಳ ಇತಿಹಾಸವಿದೆ. 1960ರಲ್ಲಿ ಲೇಪಾಕ್ಷಿ ಸ್ವಾಮೀಜಿ ಬ್ರಹ್ಮವಿದ್ಯಾನಗರ ದಲ್ಲಿ ಸರ್ಕಾರದಿಂದ 500 ಎಕರೆ ಜಮೀನು ಮಂಜೂರು ಮಾಡಿಸಿ, ನೂರಾರು ಬಡ ಕೃಷಿಕ ಕುಟುಂಬಗಳಿಗೆ ಅನ್ನದಾತರಾಗಿದ್ದರು. 1974ರಲ್ಲಿ ಗ್ರಾಮೀಣ ಭಾಗದಲ್ಲಿ ಉಪವೀರ ವಿದ್ಯಾ ಸಂಸ್ಥೆಯ ಶಾಲಾ–ಕಾಲೇಜು, ವಿದ್ಯಾರ್ಥಿನಿಲಯ ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ಜ್ಞಾನ ಒದಗಿಸಿದ್ದರು.

ಶ್ರೀಮಠದ ಆವರಣದಲ್ಲಿ ಲೇಪಾಕ್ಷಿಶ್ರೀ ಭವ್ಯವಾದ ಐಕ್ಯಮಂದಿರ, ಶಾಲಾ–ಕಾಲೇಜು, ಹಾಗೂ ಪ್ರಸಾದನಿಲಯ, ಸಮುದಾಯ ಭವನ, ಬಯಲು ರಂಗಮಂದಿರ ನಿರ್ಮಿಸಲಾ ಗಿದೆ. ಯುಗಧರ್ಮ ರಾಮಣ್ಣ ನೇತೃತ್ವದಲ್ಲಿ ಭಗೀರಥ ಜಾನಪದ ಸಾಂಸ್ಕೃತಿಕ ಟ್ರಸ್ಟ್‌ ಸ್ಥಾಪಿಸಲಾಗಿದೆ. ಈ ಟ್ರಸ್ಟ್‌ನಡಿ ನಾಡಿನ ಕಲೆ, ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉಳಿಸಿ, ಬೆಳೆಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿವೆ.

ಭಗೀರಥ ಮಹರ್ಷಿ ಬೃಹತ್‌ ಏಕಶಿಲಾಮೂರ್ತಿ,  ಚನ್ನಕೇಶವಸ್ವಾಮಿ ದೇಗುಲ, ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಆಯುರ್ವೇದ ಸಸ್ಯವನ ನಿರ್ಮಾಣ, ಭಗೀರಥ ಜನಪದ ಕಲಾ ಕ್ಷೇತ್ರ, ಜಾತಿ ಭೇದವಿಲ್ಲದೆ ಧಾರ್ಮಿಕ ಭಾವೈಕ್ಯ ಸಾರುವ ಸಾಧು–ಸಂತರ, ದಾರ್ಶನಿಕರ ಭಾವಚಿತ್ರ ಹಾಗೂ ಪ್ರತಿ ಮೆಯ ವಸ್ತು ಸಂಗ್ರಹಾಲಯ ಸ್ಥಾಪನೆ, ಯೋಗ ಹಾಗೂ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಎಲ್ಲಾ ಕಾಮಗಾರಿ ಅನುಷ್ಠಾನಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡ ಲಾಗಿದೆ ಎಂದು ಪುರುಷೋತ್ತಮಾ ನಂದ ಪುರಿ ಸ್ವಾಮೀಜಿ ತಿಳಿಸಿದರು.

* *

ವಿವಿಧೆಡೆ ಕನ್ನಡಾಂಬೆ ಭುವನೇಶ್ವರಿ ಮೂರ್ತಿ ಇದ್ದರೂ, ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ತೇರು ಎಳೆಯು ವುದು ರಾಜ್ಯದಲ್ಲೇ ಪ್ರಥಮವಾಗಲಿದೆ
– ಪುರುಷೋತ್ತಮಾನಂದಪುರಿ ಸ್ವಾಮೀಜಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT