ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಸ್ತುವಾರಿ’ ಎದುರೇ ಮುಖಂಡರ ಗದ್ದಲ

Last Updated 21 ಮೇ 2017, 5:55 IST
ಅಕ್ಷರ ಗಾತ್ರ

ಕಲಬುರ್ಗಿ: ಕಾಂಗ್ರೆಸ್ ಪಕ್ಷದ ಹೈದರಾಬಾದ್ ಕರ್ನಾಟಕ ಭಾಗದ ಉಸ್ತುವಾರಿ, ಆಂಧ್ರಪ್ರದೇಶದ ಡಾ. ಸಾಕೆ ಸೈಲಜಾನಾಥ ಅವರ ಎದುರೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಗದ್ದಲ ಮಾಡಿದ್ದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪಕ್ಷ ಸಂಘಟನೆಗಾಗಿ ಬಂದಿದ್ದ ಸೈಲಜಾನಾಥ ಮಾತನಾಡಿ, ‘ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಕೆಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ರಾಹುಲ್‌ಗಾಂಧಿ ಅವರ ಆಶಯವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಬೇಕು. ಭಿನ್ನಾಭಿಪ್ರಾಯ, ಸಲಹೆ–ಸೂಚನೆಗಳು ಇದ್ದಲ್ಲಿ ಪ್ರತ್ಯೇಕವಾಗಿ ನನ್ನನ್ನು ಭೇಟಿ ಮಾಡಿ ಹಂಚಿಕೊಳ್ಳಬಹುದು ಎಂದು ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಶಾಸಕ ಖಮರುಲ್ ಇಸ್ಲಾಂ ಮಾತನಾಡಿ, ‘ಜಿಲ್ಲಾ ಘಟಕದ ಅಧ್ಯಕ್ಷ ಭಾಗಣಗೌಡ ಪಾಟೀಲ ಸಂಕನೂರ ಅವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಹಿರಿಯರಿಗೆ ಗೌರವ ಕೊಡುತ್ತಿಲ್ಲ, ಸಭೆ ಸಮಾರಂಭಗಳಿಗೆ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು’ ಎಂದು ಗೊತ್ತಾಗಿದೆ.

ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ವೇದಿಕೆಯತ್ತ ಬಂದು ಅಸಮಾಧಾನ ಹೊರಹಾಕಿದರು. ಇದರಿಂದ ಕೆರಳಿದ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಇಲ್ಲಿ ಏನು ನಡೆಯುತ್ತಿದೆ. ಇದನ್ನು ಯಾರು ಮಾಡಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಿಮ್ಮಲ್ಲಿ ಅಸಮಾಧಾನವಿದ್ದರೆ ಒಬ್ಬೊಬ್ಬರಾಗಿ ಹಂಚಿಕೊಳ್ಳಿ. ಅದು ಬಿಟ್ಟು ಈ ರೀತಿ ಗಲಾಟೆ ಮಾಡಬೇಡಿ’ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.

‘ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಏಳು ಜನ ಶಾಸಕರು ಇದ್ದೇವೆ. ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬುದು ಗೊತ್ತಿದೆ. ಗಲಾಟೆ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಖಾರವಾಗಿಯೇ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಇಕ್ಬಾಲ್ ಅಹಮ್ಮದ್ ಸರಡಗಿ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಮಾರುತಿರಾವ್ ಡಿ.ಮಾಲೆ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸಗರ ಚುಲಬುಲ್, ಮೇಯರ್ ಶರಣಕುಮಾರ ಮೋದಿ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಬಾಗವಾನ್ ಇದ್ದರು.

* *

ಪಕ್ಷ ಸಂಘಟನಾ ಸಭೆಯಲ್ಲಿ ಯಾವುದೇ ರೀತಿಯ ಗದ್ದಲ ಆಗಿಲ್ಲ. ಎಲ್ಲಾ ಘಟಕದ ಸದಸ್ಯರು ತಮ್ಮ ಅಭಿಪ್ರಾಯ ಸಲಹೆ, ಸೂಚನೆ ನೀಡಲು ಅವಕಾಶ ನೀಡಲಾಗಿದೆ
ಭಾಗಣಗೌಡ ಪಾಟೀಲ ಸಂಕನೂರ
ಕಾಂಗ್ರೆಸ್  ಜಿಲ್ಲಾ  ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT