ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ತನಿಖೆಗೆ ಸರ್ಕಾರ ಸೂಚನೆ

Last Updated 21 ಮೇ 2017, 6:25 IST
ಅಕ್ಷರ ಗಾತ್ರ

ಕುಷ್ಟಗಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ 2007–12ರ ಹಣಕಾಸು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಕೆಲಸ ಕಾಮಗಾರಿಗಳಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ವಹಿಸಿದೆ.

ರಾಜ್ಯ ಲೋಕಾಯುಕ್ತರ ಆದೇಶದಂತೆ ಲೋಕಾಯುಕ್ತ ಪೊಲೀಸರಿಂದ ಈ ವಿಷಯ ಕುರಿತಂತೆ ಕೊಪ್ಪಳ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದೆ. ಸಂಬಂಧಿಸಿದ ಅವಧಿಯಲ್ಲಿನ ಕಾಮಗಾರಿಗಳಿಗೆ ಸೇರಿದ ಸುಮಾರು 16 ಅಂಶಗಳನ್ನು ಒಳಗೊಂಡಿರುವ ಅಗತ್ಯ ದಾಖಲೆಗಳನ್ನು ಪ್ರತ್ಯೇಕವಾಗಿ ತನಿಖೆ ಸಂದರ್ಭದಲ್ಲಿ ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಿರುವ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇಲ್ಲಿಯ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಕುರಿತು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಮೋಹನ್‌, ತುರ್ತಾಗಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು, ನಿರ್ಲಕ್ಷ್ಯ ತೋರಬಾರದು ಎಂದು ಸಭೆಯಲ್ಲಿ ತಾಕೀತು ಮಾಡಿದ್ದಾರೆ.

ಆಗಿದ್ದೇನು‘:  ಕಾಯ್ದೆ ರೂಪದಲ್ಲಿ ಜಾರಿಗೆ ಬಂದ  ನರೇಗಾ ಯೋಜನೆಯಲ್ಲಿ 2007 ರಿಂದ 2012ರ ಅವಧಿಯಲ್ಲಿನ ಅನುಷ್ಠಾನದಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದನ್ನು ಸ್ಪಷ್ವವಾಗಿ ಉಲ್ಲೇಖಿಸಿರುವ ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ 2013ನೇ ವರ್ಷದ ವರದಿಯನ್ನು ಆಧಾರವಾಗಿಟ್ಟುಕೊಂಡು, ರಾಜ್ಯ ಸರ್ಕಾರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ. ಅದರಂತೆ ಕೊಪ್ಪಳ ಲೋಕಾಯುಕ್ತ ಪೊಲೀಸ್‌ ಉಪ ಅಧೀಕ್ಷಕರು ನೀಡಿದ ನೋಟಿಸ್‌ ಎಲ್ಲ ಅಭಿವೃದ್ಧಿ ಅಧಿಕಾರಿಗಳಿಗೆ ತಲುಪಿವೆ.

ದಾಖಲೆಗಳು: ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅನುಮೋದಿತ ಮತ್ತು ಅನುಷ್ಠಾನಗೊಂಡ ಕಾಮಗಾರಿಗಳು. ಅನುಮೋದಿತ ಕ್ರಿಯಾಯೋಜನೆ, ಕೆಲಸದ ಬೇಡಿಕೆ, ಕೆಲಸದ ಆದೇಶ (ಫಾರ್ಮ್‌ ನಂ 6–9)ಗಳು, ತಾಂತ್ರಿಕ, ಆಡಳಿತಾತ್ಮಕ ಮಂಜೂರಾತಿ ಅಂದಾಜುಪತ್ರಿಕೆ, ಕಾರ್ಯನಿರ್ವಹಣಾ ಧಿಕಾರಿ ನೀಡಿದ ಎನ್‌ಎಂಆರ್‌, ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳಿಗೆ ಹಣ ಪಾವತಿ ಮಾಡಿದ ಆದೇಶ ಪ್ರತಿ, ಎಂಐಎಸ್‌ ದಾಖಲೆಗಳು, ಅಳತೆ ಪುಸ್ತಕ (ಎಂ.ಬಿ.ರೆಕಾರ್ಡ್‌್ಸ), ಸಾಮಗ್ರಿಗೆ ಪಾವತಿಸಿದ ಚೆಕ್‌ ಮತ್ತು ರಶೀದಿಗಳು ಸೇರಿದಂತೆ ಇತರೆ ಎಲ್ಲ ದಾಖಲೆಗಳನ್ನು ಅಭಿವೃದ್ಧಿ ಅಧಿಕಾರಿಗಳು ಕಲೆ ಹಾಕಬೇಕಿದೆ.

ಅಧ್ಯಕ್ಷರ ವಿವರ: ಅದೇ ರೀತಿ 2007–12ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿ, ಪಿಡಿಒಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ ಸಹಿತ ಮಾಹಿತಿ ಸಲ್ಲಿಸುವಂತೆಯೂ ಲೋಕಾಯುಕ್ತ ಪೊಲೀಸ್‌ ಡಿವೈಎಸ್‌ಪಿ ನೀಡಿರುವ ಆದೇಶದಲ್ಲಿ ಸೂಚಿಸಲಾಗಿದೆ.

ಸದ್ಯ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇತ್ತು, ಈ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದುನ್ನು ಬೆಳಕಿಗೆ ತರುವುದಕ್ಕಾಗಿ ಹಾಲಿ ಕಾಂಗ್ರೆಸ್‌ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ ಅದಕ್ಕಾಗಿ ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ ರಾಜ್ಯ ಸರ್ಕಾರದ ನೆರವಿಗೆ ಬಂದಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪೀಕಲಾಟ:  ಸಂಬಂಧಿಸಿದ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದ್ದು ಬೆಳಕಿಗೆ ಬಂದಿತ್ತು. ಕಾಮಗಾರಿ ಇಲ್ಲದೇ ನಕಲಿ ಬಿಲ್‌ಗಳ ಮೂಲಕ ಬೇಕಾಬಿಟ್ಟಿಯಾಗಿ ಚೆಕ್‌ಗಳನ್ನು ನೀಡಲಾಗಿತ್ತು. ಆದರೆ ಅನೇಕ ದಾಖಲೆಗಳು ಇಲ್ಲವೇ ಇಲ್ಲ. ಆಗ ಅಧಿಕಾರದಲ್ಲಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿಯಲ್ಲಿ ಬಹುತೇಕ ಜನ ನಿವೃತ್ತರಾಗಿದ್ದರೆ, ಕೆಲವರು ಮೃತಪಟ್ಟಿದ್ದಾರೆ. ದಾಖಲೆಗಳನ್ನು ಎಲ್ಲಿಂದ ತರುವುದು? ಲೋಕಾಯುಕ್ತರಿಗೆ ಯಾವ ರೀತಿ ಉತ್ತರಿಸುವುದು ಎಂಬ ಬಗ್ಗೆ ಚಿಂತೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲ ಅಭಿವೃದ್ಧಿ ಅಧಿಕಾರಿಗಳು ಹೇಳಿದರು.

* * 

ಲೋಕಾಯುಕ್ತರ ತನಿಖೆಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕಿದ್ದು ಈ ಬಗ್ಗೆ ನಿರ್ಲಕ್ಷ್ಯ ತೋರದಂತೆ ಗ್ರಾ.ಪಂ ಪಿಡಿಒಗಳಿಗೆ ತಾಕೀತು ಮಾಡಲಾಗಿದೆ.
ಡಾ.ಡಿ.ಮೋಹನ್‌,
ತಾ.ಪಂ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT