ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಮೇಲೆ ಮಹತ್ವದ ಜವಾಬ್ದಾರಿ

Last Updated 21 ಮೇ 2017, 6:39 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಯುವಕರ ಮೇಲೆ ಮಹತ್ವದ ಜವಾಬ್ದಾರಿ ಇದೆ’ ಎಂದು ಜಿಲ್ಲಾ ಯುವ ಕಾಂಗ್ರೆಸ್ ನೂತನ ಜಿಲ್ಲಾ ಘಟಕದ ಅಧ್ಯಕ್ಷ ರಾಹುಲ್ ಅರಕೇರಾ ಹೇಳಿದರು.

ಯಾದಗಿರಿ ವಿಧಾನಸಭಾ ಕ್ಷೇತ್ರದ ಶಹಾಪುರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಶುಕ್ರವಾರ ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಯುವ ಕಾಂಗ್ರೆಸ್‌ಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕಿದೆ. ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಯಕರ್ತರು ಎಲ್ಲಾ ವರ್ಗದ ಜನರಿಗೆ ಅದರ ಲಾಭ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಪಕ್ಷದ ವರ್ಚಸ್ಸು ಹೆಚ್ಚುತ್ತದೆ’ ಎಂದರು.

ಯುವ ಕಾಂಗ್ರೆಸ್ ಮುಖಂಡ ಮಾಣಿಕರಡ್ಡಿ ಕುರಕುಂದಿ ಮಾತನಾಡಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಅವಕಾಶ ಸಿಗಲಿ ಎಂಬ ದೃಷ್ಟಿಯಿಂದ ಪಕ್ಷದಲ್ಲಿ ಎಲ್ಲಾ ಸ್ಥಾನಗಳಿಗೆ ಆಂತರಿಕ ಚುನಾವಣೆ ಮೂಲಕ ಆಯ್ಕೆಗೆ ಕ್ರಮಕೈಗೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇದರಿಂದ ಕ್ರಿಯಾಶೀಲ ಯುವಕರಿಗೆ ಅವಕಾಶ ಸಿಕ್ಕಂತಾಗಿದೆ’ ಎಂದರು.

‘ಬಿಜೆಪಿ ನಾಯಕರು ಅಭಿವೃದ್ಧಿ ಕಡೆಗೆ ಗಮನ ನೀಡದೆ ಬರೀ ಮಾತಿನಲ್ಲೇ ಮೋಡಿ ಮಾಡುತ್ತಿದ್ದಾರೆ. ಜನರು ಅದಕ್ಕೆ ಕಿವಿಗೊಡಬಾರದು. ಮತಕ್ಷೇತ್ರದಲ್ಲಿ ಹಿರಿಯ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ಧಾರೆ.  ಸರ್ಕಾರದ ಯೋಜನೆಗಳನ್ನು ಯುವ ಕಾರ್ಯಕರ್ತರು ಜನರಿಗೆ ತಿಳಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ ಜನರ ವಿಶ್ವಾಸ ಗಳಿಸಬೇಕು’ ಎಂದು ಹೇಳಿದರು.

ಯಾದಗಿರಿ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಶಿವಪೂರ ಮಾತನಾಡಿ, ‘ಕಾಂಗ್ರೆಸ್ ಅನ್ನು ಬೂತ್‌ಮಟ್ಟದಿಂದ ಸಂಘಟಿಸುವ ಮೂಲಕ ಪಕ್ಷದ ಬಲವರ್ಧನೆಗೆ ಎಲ್ಲರೂ ಶ್ರಮಿಸುವುದರ ಜತೆಗೆ ಹಿರಿಯರಿಗೆ ಶಕ್ತಿ ತುಂಬಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರಗೌಡ ಗೋನಾಲ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಮಸ್ಕನಳ್ಳಿ, ಶಿವು ಮಾಸ್ತರ, ಸಾಬಣ್ಣ ಬಾಡಿಯಾಳ, ಶಿವು ಕೋಲಿವಾಡ, ಸಂಜಯಕುಮಾರ ಮುಂಡರಗಿ, ಮಲ್ಲು ಬೆಳಗೇರಾ, ಶರಣಪ್ಪ, ಸೂಗಪ್ಪ ಸಾಹು ಅರಕೇರಾ, ಬಸವರಾಜಪ್ಪಗೌಡ, ರಾಮು ಮುಂಡರಗಿ ಇದ್ದರು.ಇದಕ್ಕೂ ಮೊದಲು ನೂತನ ಪದಾಧಿಕಾರಿಗಳನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT