ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಯತ್ತ ವಿಜಯಪುರ ದಾಪುಗಾಲು...

Last Updated 21 ಮೇ 2017, 7:03 IST
ಅಕ್ಷರ ಗಾತ್ರ

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಇದೀಗ ಸ್ವಚ್ಛತೆಯ ಪರ್ವ ಆರಂಭವಾಗಿದೆ. ತಿಂಗಳ ಹಿಂದೆ ನೆರೆಯ ‘ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೇವದಂಡ ಗ್ರಾಮದ ‘ಡಾ.ನಾನಾ ಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನದ’ ಕಾರ್ಯಕರ್ತರು ತಾವೇ ಕಸಬರಿಗೆ ಹಿಡಿದು ಬಂದು ಸ್ವಚ್ಛಗೊಳಿಸಿ ತೆರಳಿದ ಮೇಲೆ ಜಾಗೃತಿ ಹೆಚ್ಚಿದೆ.

ಇದರ ಬೆನ್ನಿಗೆ ಕೇಂದ್ರ ಸರ್ಕಾರ ಈಚೆಗೆ ಬಿಡುಗಡೆಗೊಳಿಸಿದ ಸ್ವಚ್ಛ ನಗರಿ ಪಟ್ಟಿಯಲ್ಲಿ ಇದೇ ಪ್ರಥಮ ಬಾರಿಗೆ ವಿಜಯಪುರ ಸ್ಥಾನ ಪಡೆದಿದೆ. ಈ ಹಿಂದಿನ ಎರಡು ಬಾರಿಯ ಪಟ್ಟಿಯಲ್ಲಿ ನಗರಕ್ಕೆ ಯಾವುದೇ ಸ್ಥಾನಮಾನ ದೊರಕಿರಲಿಲ್ಲ.

ಮೂರನೇ ಬಾರಿಗೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 434 ನಗರಗಳಲ್ಲಿ ವಿಜಯಪುರ 321ನೇ ಸ್ಥಾನ ಪಡೆದಿರುವುದು, ನಗರದ ಜನರಲ್ಲಿ ಹರ್ಷ ಮೂಡಿಸಿದೆ. ಜತೆಗೆ ಸ್ವಚ್ಛತೆಯ ಜಾಗೃತಿ ಮೂಡಲಾರಂಭಿಸಿದೆ.

ನಗರದ ಪ್ರಮುಖ ರಸ್ತೆಗಳ ಬದಿ, ಕಟ್ಟಡಗಳ ಮೇಲೆ ಸ್ವಚ್ಛತಾ ಅಭಿಯಾನದ ಗೋಡೆ ಬರಹಗಳು ಗೋಚರಿಸುತ್ತಿವೆ. ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಪಾಲಿಕೆ ಆಡಳಿತ ಸಹ ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು ನೀಡುತ್ತಿದೆ.

ಒಂದೆಡೆ ಪುರಾತನ ಬಾವಡಿಗಳ ಸ್ವಚ್ಛತಾ ಕಾರ್ಯ ಬಿರುಸಿನಿಂದ ನಡೆದಿದ್ದರೆ, ಇನ್ನೊಂದೆಡೆ ಕೊಳಕ್ಕೂ ಕಾಯಕಲ್ಪ ಕಲ್ಪಿಸುವ ಕಾಯಕವೂ ಆರಂಭಗೊಂಡಿದೆ. ತ್ಯಾಜ್ಯ ಬಾವಡಿಗಳಾಗಿದ್ದ ಆದಿಲ್‌ ಶಾಹಿ ಅರಸರ ಕಾಲದ ಬಾವಡಿಗಳಲ್ಲಿ ಈಗಾಗಲೇ ಕೆಲವು ಕಾಯಕಲ್ಪ ಕಂಡಿವೆ.

ಕೊಳಕ್ಕೆ ಕಾಯಕಲ್ಪ: ವಿಜಯಪುರದ ಹೃದಯ ಭಾಗದ ಐತಿಹಾಸಿಕ ಗಗನ ಮಹಲ್‌ ಬಳಿಯ ಕೊಳಕ್ಕೂ ಇದೀಗ ಕಾಯಕಲ್ಪ ಭಾಗ್ಯ ಒದಗಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೂಚನೆಯಂತೆ ಪಾಲಿಕೆ ಆಡಳಿತ ಸ್ವಚ್ಛತಾ ಕಾಮಗಾರಿ ಆರಂಭಿಸಿದೆ.

ಬೆರಳೆಣಿಕೆ ದಿನಗಳಲ್ಲೇ ಭಾರತೀಯ ಸರ್ವೇಕ್ಷಣಾ ಇಲಾಖೆಯ ಅನುಮತಿ ಪಡೆದು, ನಗರದ ತ್ಯಾಜ್ಯವನ್ನು ತನ್ನೊಡಲಲ್ಲಿ ಹುದುಗಿಸಿಟ್ಟುಕೊಂಡಿದ್ದ ನರಸಿಂಹ ದೇವರ ಕಂದಕದಲ್ಲಿ ಜೆಸಿಬಿ, ಹಿಟಾಚಿ, ಡಂಪರ್‌ಗಳನ್ನಿಳಿಸಿ ಹೂಳು ಹೊರ ಹಾಕುತ್ತಿದೆ.

‘ಎರಡು ಪುಟ್ಟ ಕೊಳಗಳು ಅಕ್ಕಪಕ್ಕದಲ್ಲಿದ್ದು ಒಂದು ಸಂಪೂರ್ಣ ಬತ್ತಿದೆ. ಇನ್ನೊಂದು ಕೊಳ ಶತಮಾನಗಳಿಂದ ಸದಾ ನೀರಿನ ಸೆಲೆಯಾಗಿದೆ. ಈ ಕೊಳಕ್ಕೆ ಟಿಪ್ಪು ಚೌಕ್‌ನಲ್ಲಿನ ಹೋಟೆಲ್‌ ಹಿಂಭಾಗದಿಂದ ಬರುವ ಗಟಾರಿನ ಸಂಪರ್ಕವಿದ್ದು, ಇದನ್ನು ತಪ್ಪಿಸಲು ಪಾಲಿಕೆ ಆಡಳಿತ ಕ್ರಮ ತೆಗೆದುಕೊಂಡಿದೆ’ ಎಂದು ಆಯುಕ್ತ ಹರ್ಷಶೆಟ್ಟಿ ತಿಳಿಸಿದರು.

‘ಮೂರು ದಿನಗಳಿಂದ ಹೂಳು ತೆಗೆಯುವ ಕೆಲಸ ಆರಂಭಿಸಲಾಗಿದೆ. ಕಂದಕಕ್ಕೆ ಸಂಪರ್ಕವಿರುವ ಗಟಾರನ್ನು ಬಸವೇಶ್ವರ ವೃತ್ತದಲ್ಲಿನ ಪ್ರಮುಖ ಗಟಾರಿಗೆ ಸಂಪರ್ಕಿಸಲಾಗುವುದು. ಖಾಲಿಯಿರುವ ಕೊಳದ ಹೂಳು ತೆಗೆದ ಬಳಿಕ, ನೀರು ತುಂಬಿರುವ ಕೊಳದ ಅಶುದ್ಧ ನೀರನ್ನು ಹೊರ ಹಾಕಲಾಗುವುದು.

ಮಳೆ ಹನಿಯುವುದರೊಳಗಾಗಿ ಎರಡೂ ಕೊಳಗಳ ಹೂಳು ತೆಗೆದು ಸ್ವಚ್ಛಗೊಳಿಸಲಾಗುವುದು. ಈ ಸಂದರ್ಭ ಗಗನ ಮಹಲ್ ಉದ್ಯಾನಕ್ಕೆ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆಯಂತೆ ತಾಜ್‌ ಬಾವಡಿಯಿಂದ ನೀರು ತರುವ ಯೋಜನೆಯಿದೆ. ಕೊಳದಲ್ಲಿ ನೀರು ಸಂಗ್ರಹಿಸಿದ ಬಳಿಕ ಬೋಟಿಂಗ್‌ ವ್ಯವಸ್ಥೆ ಕಲ್ಪಿಸುವ ಚಿಂತನೆ ಪಾಲಿಕೆ ಆಡಳಿತದ್ದು.

ಸ್ವಚ್ಛಗೊಳಿಸಲು ₹ 50 ಲಕ್ಷದ ಕ್ರಿಯಾಯೋಜನೆ ರೂಪುಗೊಂಡಿತ್ತು. ಯೋಜನೆ ವಿಸ್ತಾರಗೊಂಡಂತೆ ವೆಚ್ಚದ ಮೊತ್ತವೂ ಹೆಚ್ಚಲಿದೆ. ಸಚಿವರು ಭರವಸೆ ನೀಡಿದ್ದಾರೆ. ಸಿಎಸ್‌ಆರ್‌ ಫಂಡ್‌ನಡಿ ಅಗತ್ಯವಿರುವಷ್ಟು ದೇಣಿಗೆ ಕೊಡಿಸುವುದಾಗಿ ಹೇಳಿದ್ದಾರೆ. ನಿರೀಕ್ಷೆ ಯಿದೆ. ಅನುದಾನ ದೊರೆತರೆ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿ ರೂಪಿಸಲಾಗುವುದು’ ಎಂದು ಹರ್ಷಶೆಟ್ಟಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT