ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌದು ನಾನು ಕರ್ನಾಟಕದ ಸೇವಕ

Last Updated 21 ಮೇ 2017, 7:35 IST
ಅಕ್ಷರ ಗಾತ್ರ

ಬೆಳಗಾವಿ: ‘ಹೌದು, ನಾನು ಕರ್ನಾಟಕ ಸರ್ಕಾರದ ಸೇವಕ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಮತ್ತೊಮ್ಮೆ ಹೇಳುತ್ತೇನೆ ಕೇಳಿ; ನಾನು ಕರ್ನಾಟಕ ಸರ್ಕಾರದ ಸೇವಕ’ ಎಂದು ಹೇಳುವ ಮೂಲಕ ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಮುಖಂಡರಿಗೆ ತಿರುಗೇಟು ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಭಾಷಾ ಅಲ್ಪಸಂಖ್ಯಾತರ ಸಮಸ್ಯೆ ಹಾಗೂ ಸೌಲಭ್ಯಗಳ ಕುರಿತಾದ ಸಭೆಯಲ್ಲಿ ಎಂಇಎಸ್‌ ಮುಖಂಡ ಕಿರಣ್‌ ಠಾಕೂರ್‌, ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಒತ್ತಾಯಿಸಿದರು. ಅಲ್ಲದೇ ‘ನೀವು ಬಂದ ಮೇಲೆ ಮರಾಠಿ ಭಾಷೆಯಲ್ಲಿ ದಾಖಲೆಗಳು ಸಿಗುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಿ; ರಾಜ್ಯ ಸರ್ಕಾರದ ಸೇವಕನಾಗಿ ಕೆಲಸ ಮಾಡಬೇಡಿ’ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ, ‘ಹೌದು, ನಾನು ಕರ್ನಾಟಕ ಸರ್ಕಾರದ ಸೇವಕನೇ. ನಾನು ಇಲ್ಲಿ ವರ್ಗಾವಣೆಯಾಗಿ ಬರುವ ಮೊದಲೇ ಇವೆಲ್ಲ ಸಮಸ್ಯೆಗಳಿದ್ದವು. ನನ್ನ ಮಟ್ಟದಲ್ಲಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದೇನೆ. ಕೆಲವು ರಾಜ್ಯ ಮಟ್ಟದಲ್ಲಿ ಇತ್ಯರ್ಥವಾಗಬೇಕಾಗಿದೆ’ ಎಂದರು.

ರಾಜಕೀಯಕ್ಕೆ ಬಳಸಬೇಡಿ: ‘ನಿಮಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ. ಅದನ್ನು ಬಿಟ್ಟು ರಾಜಕೀಯ ಮಾಡಲು ಈ ವೇದಿಕೆಯನ್ನು ಬಳಸಬೇಡಿ’ ಎಂದು ಎಂಇಎಸ್‌ ಮುಖಂಡರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

‘ಭಾಷಾ ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡುವ ಕುರಿತು ಸರ್ಕಾರ ಹೊರಡಿಸಿದ್ದ ಆದೇಶವನ್ನು, 2004ರಲ್ಲಿ ತಿದ್ದುಪಡಿಗೋಸ್ಕರ ಹಿಂದಕ್ಕೆ ಪಡೆದಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ನನ್ನ ಮಟ್ಟದಲ್ಲಿ ಮಾಡಬಹುದಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ’ ಎಂದು ಅವರು ಸಮರ್ಥಿಸಿಕೊಂಡರು.

ಇದಕ್ಕೂ ಮೊದಲು ಮಾತನಾಡಿದ ಎಂಇಎಸ್‌ ಮುಖಂಡರಾದ ರೇಣು ಕಿಲ್ಲೇಕರ, ಸರಿತಾ ಪಾಟೀಲ, ಶಿವಾಜಿ ಸುಂಟಕರ, ಸಂಜಯ ಶಿಂಧೆ, ‘ಗಡಿ ಭಾಗದಲ್ಲಿರುವ ಮರಾಠಿ ಜನರಿಗೆ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆಗಳನ್ನು ನೀಡಬೇಕು. ಸಾರಿಗೆ ಸಂಸ್ಥೆಯ ಬಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮರಾಠಿಯಲ್ಲಿಯೇ ನಾಮಫಲಕ ಹಾಕಬೇಕು’ ಎಂದು ಒತ್ತಾಯಿಸಿದರು.

ಬಿಲ್‌ ತಡೆಗೆ ಚಿಂತನೆ:‘ರಾಜ್ಯ ಸರ್ಕಾರ ನೀಡುವ ಜಾಹೀರಾತಿನಲ್ಲಿ ಇದ್ದ ‘ಬೆಳಗಾವಿ’ ಹೆಸರನ್ನು ‘ಬೆಲಗಾಮ್‌’ ಎಂದು ತಿದ್ದಿ ಕೆಲವು ಮರಾಠಿ ಪತ್ರಿಕೆಗಳು ಪ್ರಕಟಿಸಿರುವುದು ಗಮನಕ್ಕೆ ಬಂದಿದೆ. ಇವುಗಳ ಬಿಲ್‌ ಪಾವತಿ ಮಾಡುವುದನ್ನು ತಡೆ ಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT