ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆಗಳ ಕಡೂರು ತಾಲ್ಲೂಕು ಕಚೇರಿ

Last Updated 21 ಮೇ 2017, 8:31 IST
ಅಕ್ಷರ ಗಾತ್ರ

ಕಡೂರು : ತಾಲ್ಲೂಕಿನ ಶಕ್ತಿ ಕೇಂದ್ರವಾದ ತಾಲ್ಲೂಕು ಕಚೇರಿಯಲ್ಲಿಯೇ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುವ ಈ ಜಾಗದಲ್ಲಿ ಕನಿಷ್ಠ ಸೌಕರ್ಯ ಕಲ್ಪಿಸಲು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂಬುದು ಜನರ ಆರೋಪ.

ತಾಲ್ಲೂಕು ಕಚೇರಿಗೆ ಸುಸಜ್ಜಿತವಾದ ಎರಡು ಅಂತಸ್ತಿನ ಕಟ್ಟಡವಿದೆ. ಕೆಳ ಅಂತಸ್ತಿನಲ್ಲಿ ತಹಶೀಲ್ದಾರ್ ಕಚೇರಿ,ಅಭಿಲೇಖಾಲಯ, ಭೂಮಿ ಕೇಂದ್ರ, ಖಜಾನೆ ಮುಂತಾದ ಕಚೇರಿಗಳಿವೆ. ಮೇಲಂತಸ್ತಿನಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ, ಸರ್ವೆ ಇಲಾಖೆ ಕಚೇರಿಯಿದೆ. ಈ ಕಚೇರಿಯ ಹಿಂಭಾಗದಲ್ಲಿ ತಹಶೀಲ್ದಾರ್ ಅವರ ಅಧಿಕೃತ ನಿವಾಸವಿದೆ.

ದೊಡ್ಡದಾದ ತಾಲ್ಲೂಕು ಕಚೇರಿಯಲ್ಲಿ ಒಂದೂ ಶೌಚಾಲಯವಿಲ್ಲ. ಕಚೇರಿ ಸಿಬ್ಬಂದಿ ಉಪಯೋಗಕ್ಕಾಗಿ ಒಂದು ಶೌಚಾಲಯವಿದ್ದರೂ ಅದರ ಹತ್ತಿರವೇ ಯಾರೂ ಸುಳಿಯುವಂತಿಲ್ಲ. ಅಷ್ಟು ವಾಸನೆ ಅಲ್ಲಿ. ಸಾರ್ವಜನಿಕ ಉಪಯೋಗಕ್ಕಾಗಿ  ತಾಲ್ಲೂಕು ಕಚೇರಿಯ ಮುಂಭಾಗ ಪಕ್ಕದ ಪ್ರವಾಸಿ ಮಂದಿರಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಎರಡು ಶೌಚಾಲಯ ನಿರ್ಮಾಣ ಮಾಡಲು ಆರಂಭ ಮಾಡಿ ಎರಡು ವರ್ಷಗಳೇ ಕಳೆದಿವೆ. 

ಆ ಕಾಮಗಾರಿ ಅರೆಬರೆ ನಿರ್ಮಾಣವಾಗಿ ಕೆಲಸ ಸ್ಥಗಿತಗೊಂಡಿದೆ. (ಈ ಕಾಮಗಾರಿ ಜವಾಬ್ದಾರಿ ಯಾವ ಇಲಾಖೆಯದು ಅಥವಾ ಕಡೂರು ಪುರಸಭೆಯದೇ ಎಂಬುದು ಸ್ಪಷ್ಟವಿಲ್ಲ) ಈ ಅರ್ಧ ನಿರ್ಮಾಣವಾಗಿರುವ ಶೌಚಾಲಯವನ್ನೇ ಹಲವರು ಮೂತ್ರ ವಿಸರ್ಜನೆಗಾಗಿ ಬಳಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಾಗಲೀ ಅಥವಾ ತರೀಕೆರೆ ಉಪ ವಿಭಾಗಾಧಿಕಾರಿ ಗಳಾಗಲೀ ಮತ್ತು ಪ್ರತಿನಿತ್ಯ ಇಲ್ಲಿಯೇ ಇರುವ ತಹಶೀಲ್ದಾರ್ ಅವರಾಗಲೀ ಗಮನ ಹರಿಸಿಲ್ಲದಿರುವುದು ಸಾರ್ವಜ ನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

  ತಹಶೀಲ್ದಾರ್ ಕಚೇರಿಯ ಹಿಂಭಾಗದಲ್ಲಿರುವ ಅಧಿಕೃತ ನಿವಾಸ. ಅದು ಮುಚ್ಚಿ ಎಷ್ಟೋ ದಿನಗಳಾಗಿವೆ. ಪ್ರಸ್ತುತ ತಹಶೀಲ್ದಾರ್ ಅವರು ಇಲ್ಲಿ ವಾಸ ಮಾಡುತ್ತಿಲ್ಲ. ಹಾಗಾಗಿ ಈ ನಿವಾಸ ವಾಹನ ನಿಲ್ದಾಣವಾಗಿದೆ. ಈ ನಿವಾಸವನ್ನು ಯಾವುದಾದರೂ ಉಪಯೋಗಕ್ಕೆ ಬಳಸಿಕೊಳ್ಳುವ ಅವಕಾಶವಿದ್ದರೂ ಆ ಕಾರ್ಯವಾಗಿಲ್ಲ.

ತಾಲ್ಲೂಕು ಕಚೇರಿಯ ಮೇಲಂತಸ್ತಿನಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ವೃದ್ಧರು ಹೋಗುವುದೇ ಹರಸಾಹಸ. ಕೈಲಾಗದ ವೃದ್ಧರನ್ನು ಇಬ್ಬರು ಎತ್ತಿಕೊಂಡು ಹೋಗುವ ಪರಿಸ್ಥಿತಿಯಿದೆ. ಈ ಕಚೇರಿಯನ್ನು ಕೆಳ ಅಂತಸ್ತಿಗೆ ಸ್ಥಳಾಂತರಿಸಿದರೆ ಬಹಳ ಅನುಕೂಲವಾದೀತು.

ಈ ಕಚೇರಿ ಅವರಣದಲ್ಲಿಯೇ ಇರುವ ಹಳೆ ತಾಲ್ಲೂಕು ಕಚೇರಿಯಲ್ಲಿ ಈಗ ಆಟಲ್ ಜಿ ಜನಸ್ನೇಹಿ ಕೇಂದ್ರ, ಆಹಾರ ಮತ್ತು ಚುನಾವಣೆ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯೇ ಇರುವ ಪಹಣಿ ವಿತರಣಾ ಕೇಂದ್ರದ ಮುಂದೆ ನಿತ್ಯ ಸಾವಿರಾರು ಜನರು ಸರತಿ ನಿಲ್ಲುತ್ತಾರೆ. ಇತ್ತ ಆಹಾರ ಇಲಾಖೆಯ ಮುಂದೆ ಪಡಿತರ ಚೀಟಿಗಾಗಿಗೂ ನಿಲ್ಲುತ್ತಾರೆ. ಈ ಎರಡೂ ಕಚೇರಿಯ ಹಿಂದೆ ಜಿಲ್ಲಾ ಕೇಂದ್ರ ಉಪಕಾರಾಗೃಹವಿದೆ.

ಈ ಎಲ್ಲ ಕಚೇರಿಗಳು ಇರುವ ಸಂಕೀರ್ಣದಲ್ಲಿ ಮುಂದೆ  ವಿಶಾಲವಾದ ಜಾಗವಿದೆಯಾದರೂ ವ್ಯವಸ್ಥಿತ ವಾಹನ ನಿಲ್ದಾಣವಿಲ್ಲದ ಕಾರಣ ದಿನನಿತ್ಯ ನೂರಾರು ವಾಹನಗಳು ಅಡ್ಡಾದಿಡ್ಡಿ ನಿಲ್ಲುತ್ತವೆ. ಇದರಿಂದ ಕಚೇರಿಗಳಿಗೆ ಹೋಗುವವರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ.  ಮೇಲ್ನೋಟಕ್ಕೆ ಸುಸಜ್ಜಿತವಾಗಿರುವ ತಾಲ್ಲೂಕು ಕಚೇರಿ ಕಟ್ಟಡದಲ್ಲಿ ಹಲವಾರು ಪ್ರಮುಖ ಕೊರತೆಗಳಿದ್ದು ಸಂಬಂಧಿಸಿದವರು ಈ ಕೂಡಲೇ ಇದರತ್ತ ಗಮನ ಹರಿಸಬೇಕೆಂಬುದು ಜನತೆಯ ಒತ್ತಾಯವಾಗಿದೆ.

ಬಾಲುಮಚ್ಚೇರಿ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT