ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40 ಮಾತ್ರ ‘ಎ’ ದರ್ಜೆಯ ಉತ್ಪನ್ನ

Last Updated 21 ಮೇ 2017, 9:28 IST
ಅಕ್ಷರ ಗಾತ್ರ

ಮಡಿಕೇರಿ: ‘ತೋಟಗಾರಿಕಾ ಕ್ಷೇತ್ರದಲ್ಲಿ ಶೇ 30ರಿಂದ  ಶೇ 40ರಷ್ಟು ಮಾತ್ರ ಗುಣಮಟ್ಟದ (‘ಎ’ ದರ್ಜೆ) ಉತ್ಪನ್ನವನ್ನು ಬೆಳೆಯಲಾಗುತ್ತದೆ’ ಎಂದು ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಉಪ ಮಹಾ ನಿರ್ದೇಶಕ (ತೋಟಗಾರಿಕಾ ವಿಭಾಗ) ಡಾ.ಎ.ಕೆ. ಸಿಂಗ್ ವಿಷಾದಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ ಹಾಗೂ ತೋಟಗಾರಿಕೆ ಅಭಿವೃದ್ಧಿ ಸೊಸೈಟಿ ಆಶ್ರಯದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಹಾಗೂ ಮೂರು ದಿನಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಪೂರ್ಣ ಪ್ರಮಾಣದಲ್ಲಿ ‘ಎ’ ದರ್ಜೆಯ ಉತ್ಪನ್ನವನ್ನು ಬೆಳೆಯಲು ಪ್ರಯತ್ನಿಸಬೇಕು. ಆಗ ಮಾತ್ರ ಬೆಳೆಗಾರರು ಲಾಭ ಗಳಿಸಲು ಸಾಧ್ಯವಿದೆ. ರೈತರ ಆದಾಯ ಹಾಗೂ ಬೆಳೆಗಳ ಇಳುವರಿಯನ್ನು ದುಪ್ಪಟ್ಟು ಮಾಡ ಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ಆ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯೂ ಪ್ರಯತ್ನಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಪಶ್ಚಿಮಘಟ್ಟವು ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಸ್ಥಳ. ಸಾಂಪ್ರದಾಯಿಕ ಕೃಷಿ ವಿಧಾನದೊಂದಿಗೆ ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ವರದಾನ ಆಗಲಿದೆ. ಬರೀ ಬೆಳೆಯು ವುದು ಮಾತ್ರ ನಮ್ಮ ಕೆಲಸವಲ್ಲ; ಗ್ರಾಹಕರಿಗೆ ತಾಜಾ ಹಣ್ಣುಗಳನ್ನು ತಲುಪಿಸುವುದೂ ಅಷ್ಟೇ ಪ್ರಮುಖ’ ಎಂದು ಎಚ್ಚರಿಸಿದರು.

‘50 ವರ್ಷಗಳಿಂದ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ರೈತರ ಅಭ್ಯುದಯಕ್ಕೆ ಹೊಸ ಹೊಸ ಸಂಶೋ ಧನೆಗಳನ್ನು ಕೈಗೊಂಡಿದೆ. ಕೆಲವು ಸಂಶೋಧನೆಗಳು ಆಯಾ ಪ್ರದೇಶದ ಹವಾಮಾನಕ್ಕೆ ಒಗ್ಗಿಕೊಳ್ಳುವ ಸಾಧ್ಯತೆ ಕಡಿಮೆ ಇರಬಹುದು.

ಆಗ ರೈತರಲ್ಲಿ ಅರಿವು ಮೂಡಿಸುವುದು ಅಗತ್ಯ. ತೋಟಗಾರಿಕೆ ಬೆಳೆ ಬೆಳೆಯಲು ಸಾಕಷ್ಟು ಸೌಲಭ್ಯ ಗಳಿದ್ದು ರೈತರು ಅವುಗಳನ್ನು ಪಡೆದುಕೊಂಡು ಉತ್ಕೃಷ್ಟ ವಾದ ಬೆಳೆ ಮಾಡಬೇಕು. ಕೃಷಿ ಸಂಶೋಧಕರ ಸಲಹೆ, ಸೂಚನೆ  ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್. ದಿನೇಶ್ ಮಾತನಾಡಿ, ‘ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಹಿಂದೆ ಕಿತ್ತಳೆಯಿಂದಲೂ ಆದಾಯ ಬರುತ್ತಿತ್ತು. ಆದರೆ, ನಾನಾ ಕಾರಣಕ್ಕೆ ಕಿತ್ತಳೆ ಮಾಯವಾಗಿದೆ. ಇದಕ್ಕೆಲ್ಲಾ ಕಾರಣ ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಸಿಕೊಳ್ಳದೇ ಇರುವುದು. ಪರಿಸರ ಸ್ನೇಹಿ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಅದಾಯ ಹೆಚ್ಚಳದ ಜತೆಗೆ, ಉತ್ತಮ ಇಳುವರಿ ಸಿಗಲಿದೆ’ ಎಂದು ಸಲಹೆ ನೀಡಿದರು.

‘ಕಾಫಿ, ಕಾಳು ಮೆಣಸಿನೊಂದಿಗೆ ಜೇನುಕೃಷಿಯನ್ನು ಕೊಡಗಿನಲ್ಲಿ ಮಾಡಲಾಗುತ್ತಿತ್ತು. ಇದೀಗ ಜೇನುಕೃಷಿ ಕಡಿಮೆ ಯಾಗಿದೆ. ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಆದಾಯ ಜತೆಗೆ, ಬೇರೆ ಬೆಳೆಗಳಿಗೂ ಪೂರಕ ವಾತಾವರಣ ಸಿಗಲಿದೆ. ಕೃಷಿ ವಿಜ್ಞಾನಿಗಳ ಸಂಶೋಧನೆಗೆ ರೈತರಿಂದ ವಿಮರ್ಶೆ ಬರಬೇಕು. ಆಗಮಾತ್ರ ಮತ್ತಷ್ಟು ಪರಿಣಾಮಕಾರಿ ಸಂಶೋಧನೆ ತರಲು ಸಾಧ್ಯವಿದೆ. ರೈತರು ಸಂಶೋಧನಾ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು’ ಎಂದು ಕೋರಿದರು.

ಪ್ರಗತಿಪರ ಕೃಷಿಕ ಬೋಸ್‌ ಮಂದಣ್ಣ ಮಾತನಾಡಿ, ‘ಕಾಫಿಯೊಂದಿಗೆ ಬಹುಬೆಳೆ ಪದ್ಧತಿ ಅನುಸರಿಸುವುದು ಒಳ್ಳೆಯದು. ಭತ್ತದ ಬೆಳೆದ ಬಳಿಕ ಆರು ತಿಂಗಳು ಗದ್ದೆಗಳು ಖಾಲಿ ಉಳಿಯುತ್ತವೆ. ಈ ವೇಳೆ ನೀರಾವರಿ ವ್ಯವಸ್ಥೆ ಕಲ್ಪಿಸಿ ಕೊಂಡು ತರಕಾರಿ, ಹೂವಿನ ಬೆಳೆ ಮಾಡಲು ಸಾಧ್ಯ ವಿದೆ. ಪ್ರತಿವಾರ ಆದಾಯ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಪ್ರಗತಿಪರ ಕೃಷಿಕರಾಗಲು ಸಾಧ್ಯವಿದೆ’ ಎಂದು ನುಡಿದರು.

ಸಹಾಯಕ ಮಹಾ ನಿರ್ದೇಶಕ (ತೋಟಗಾರಿಕಾ ವಿಭಾಗ) ಡಾ.ಜಾನಕಿ ರಾಮ್, ಪಾರ್ಥ ಸಾರಥಿ, ಚೆಂಗಪ್ಪ, ಸೋಮ್‌ದತ್‌ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ, ಪ್ರಗತಿಪರ ಕೃಷಿಕರಾದ ಛಾಯಾ ನಂಜಪ್ಪ, ವೀರ ಅರಸು ಹಾಗೂ ಪ್ರೇಮಾ ಗಣೇಶ್‌ ಅವರನ್ನು ಸನ್ಮಾನಿಸಲಾಯಿತು.

‘5, 10 ಗ್ರಾಂ ಪ್ಯಾಕೆಟ್‌ನಲ್ಲೂ ಕೀಟನಾಶಕ ಲಭಿಸಲಿ’
ಮಡಿಕೇರಿ:  ‘ಬಿತ್ತನೆಬೀಜವು ಅರ್ಧ ಕೆ.ಜಿ, ಒಂದು ಕೆ.ಜಿ ಲೆಕ್ಕದಲ್ಲಿ ಮಾತ್ರ ಸಿಗುತ್ತದೆ. ಕೀಟನಾಶಕ ಸಹ ಲೀಟರ್‌ ಲೆಕ್ಕದಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಾಗುತ್ತದೆ. ಇದರಿಂದ ಸಣ್ಣ, ಅತೀ ಸಣ್ಣ ರೈತರಿಗೆ ಪ್ರಯೋಜನ ಇಲ್ಲ.

ಶಾಂಪೂ ಸಿಗುವಂತೆ 5 ಗ್ರಾಂ, 10 ಗ್ರಾಂ ಪ್ಯಾಕೆಟ್‌ನಲ್ಲೂ ಕೀಟ ನಾಶಕ ಲಭ್ಯವಾಗಬೇಕು. ಆಗಮಾತ್ರ, ಸಣ್ಣ ಪ್ರಮಾಣದ ಬೆಳೆಗಾರರು ತಮ್ಮ ಬೆಳೆಗಳನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗಲಿದೆ’ ಎಂದು ಭಾರತೀಯ ಕೃಷಿ ಅನು ಸಂಧಾನ ಸಂಸ್ಥೆಯ ಉಪ ಮಹಾ ನಿರ್ದೇಶಕ (ತೋಟಗಾರಿಕಾ ವಿಭಾಗ) ಡಾ.ಎ.ಕೆ. ಸಿಂಗ್ ಹೇಳಿದರು.

220 ತಳಿಯ ಮಾವಿನಹಣ್ಣು

ಮಡಿಕೇರಿ: ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ 220 ತಳಿಯ ಮಾವಿನ ಹಣ್ಣುಗಳು ಎಲ್ಲರ ಗಮನ ಸೆಳೆಯುತ್ತಿವೆ. ವಿದೇಶದ ತಳಿಯೂ ಲಭ್ಯ ಇವೆ. ಅಷ್ಟು ಮಾತ್ರವಲ್ಲದ ಸ್ಥಳೀಯ ಕಾಡು ಮಾವು ಕಣ್ಮನ ಸೆಳೆಯುತ್ತಿದೆ. ತೋಟಗಾರಿಕೆ ಇಲಾಖೆ ಪ್ರಾಯೋಗಿಕಾ ಕೇಂದ್ರದಲ್ಲಿ ಬೆಳೆದಿರುವ ಹಣ್ಣುಗಳೂ ಒಂದೇ ಸೂರಿನಡಿ ನೋಡಬಹುದು.

ಬೆಣ್ಣೆ ಹಣ್ಣು, ರಾಂಬೂಟಾನ್, ಕೊಕಮ್, ಕವಳೆ ಹಣ್ಣು, ಕದಂಬ ಹಣ್ಣು, ನೇರಳೆ, ಲಿಚ್ಚಿ ಮತ್ತು ಇತರೆ ಹಣ್ಣುಗಳು ವಸ್ತು ಪ್ರದರ್ಶನದಲ್ಲಿವೆ. ಹೂವಿನ ಬೆಳೆಗಳಾದ ಆರ್ಕಿಡ್ ಮತ್ತು ಆಂಥೋರಿಯಂ, ತರಕಾರಿ ಬೆಳೆಗಳ ಮಾಹಿತಿಯೂ ಸಿಗುತ್ತಿದೆ.

ರೈತರಿಂದ ದೂರವಾದ ಸಮ್ಮೇಳನ!

ಮಡಿಕೇರಿ: ಬೆಳೆಗಾರರಿಗೋಸ್ಕರ ಆಯೋಜಿಸಿರುವ ಸಮ್ಮೇಳನವು ಬೆಳೆಗಾರರಿಂದಲೇ ದೂರವಾಗಿದೆ. ಉದ್ಘಾಟನಾ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಹಾಜರಿದ್ದರು.

ಉಳಿದಂತೆ ರೈತರ ಸಂಖ್ಯೆ ಬಹಳ ಕಡಿಮೆಯಿತ್ತು. ವಿವಿಧ ವಿಚಾರಗೋಷ್ಠಿಗಳಲ್ಲಿ ಬೆಳೆಗಾರರ ಬದಲಿಗೆ ಕೃಷಿ ವಿಜ್ಞಾನಿಗಳು, ಸಿಬ್ಬಂದಿ ಮಾತ್ರಗಳು ಮಾತ್ರ ಭಾಷಣ ಆಲಿಸುವ ಸ್ಥಿತಿಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT