ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವರಿಗೆ ಜ್ವರ, 12 ಮಂದಿಗೆ ಚಿಕುನ್‌ಗುನ್ಯಾ ಶಂಕೆ

Last Updated 21 ಮೇ 2017, 9:42 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಎಂ.ಕೋಡಿಹಳ್ಳಿ ಗ್ರಾಮದಲ್ಲಿ 12 ಮಂದಿಗೆ ಚಿಕುನ್‌ಗುನ್ಯಾ ಲಕ್ಷಣಗಳು ಕಂಡು ಬಂದಿವೆ. ಜ್ವರ, ಕೈಕಾಲು ಹಾಗೂ ಮಂಡಿಯ ಕೀಲುಗಳಲ್ಲಿ ನೋವು ಕಾಣಿಸಿಕೊಂಡಿದ್ದು, ನಡೆದಾಡಲು ತೀವ್ರ ತೊಂದರೆಯಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.

ಶನಿವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ನೇತೃತ್ವದ ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅವರು ಮಾಹಿತಿ ನೀಡಿದರು.
ಗ್ರಾಮದಲ್ಲಿ ಶೇ 75ಕ್ಕೂ ಹೆಚ್ಚು ಮಂದಿಗೆ ಜ್ವರ ಹಾಗೂ ಕೈಕಾಲು ನೋವು ಇದೆ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮದಲ್ಲಿ ಎಲ್ಲೆಲ್ಲಿಯೂ ಕಸದ ರಾಶಿ, ಒಡೆದ ಮಡಿಕೆಗಳು, ತೆಂಗಿನ ಚಿಪ್ಪುಗಳು ಹಾಗೂ ಮುಚ್ಚಿ ಹೋದ ಚರಂಡಿಗಳು ಕಣ್ಣಿಗೆ ರಾಚಿದವು. ಊರಿನ ಮುಖ್ಯರಸ್ತೆಯಲ್ಲಿ ಸಂಚರಿಸಿದ ತಂಡ ಅಲ್ಲಲ್ಲಿ ಸಂಗ್ರಹವಾಗಿದ್ದ ನೀರನ್ನು ಖಾಲಿ ಮಾಡಿಸಿತು. ‘ಇದರಿಂದಲೇ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅವುಗಳನ್ನು ಸರಿಯಾದ ರೀತಿ ವೀಲೇವಾರಿ ಮಾಡಿ’ ಎಂದು ಗ್ರಾಮಸ್ಥರಿಗೆ ಸೂಚಿಸಿತು.

ಚರಂಡಿಯ ನೀರು ಕುಡಿಯುವ ನೀರಿನ ಗೇಟ್‌ವಾಲ್ವ್‌ ಬಳಿ ಹರಿಯುತ್ತಿರುವುದನ್ನು ಗಮನಿಸಿದ ತಂಡ ಅದನ್ನು ದೂರವಾಣಿ ಮೂಲಕ ಪಿಡಿಒ ಗಮನಕ್ಕೆ ತಂದಿತು. ಕೆಲವು ಮನೆಗಳಲ್ಲಿ ನೀರನ್ನು ಸಂಗ್ರಹಿಸಿರುವ ತೊಟ್ಟಿಗಳನ್ನು ಪರಿಶೀಲಿಸಿ. ‘ಅದನ್ನು ಸರಿಯಾಗಿ ಮುಚ್ಚಿ, 4–5 ದಿನಗಳಿಗೆ ಒಮ್ಮೆ ತೊಳೆದು ಸ್ವಚ್ಛಗೊಳಿಸಬೇಕು’ ಎಂದು ಸೂಚಿಸಿತು.

ಬಿ.ಜಿ.ನಗರದ ವೈದ್ಯಾಧಿಕಾರಿ ಡಾ.ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಪರಿವೀಕ್ಷಕ ಸಿದ್ಧಲಿಂಗಪ್ಪ, ಆರೋಗ್ಯ ಸಹಾಯಕಿ ಅಮೀನಾ, ಅಶಾ ಕಾರ್ಯಕರ್ತೆ ವರಲಕ್ಷಮ್ಮ ಇದ್ದರು.

ಜಿ.ನಾಗತಿಹಳ್ಳಿ: ಜ್ವರ ಪೀಡಿತರಿಗೆ ಡೆಂಗಿ ಶಂಕ: ತಾಲ್ಲೂಕಿನ ಜಿ.ನಾಗತಿಹಳ್ಳಿ ಗ್ರಾಮದಲ್ಲಿ ಜ್ವರ ಪೀಡಿತರಾದವರಿಗೆ ಡೆಂಗಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಶಾಸಕ ಎನ್.ಚಲುವರಾಯಸ್ವಾಮಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಅಧಿಕಾರಿಗಳ ಮತ್ತು ಗ್ರಾಮಸ್ಥರ ಜತೆ ಸಭೆ ನಡೆಸಿದರು.       

ಈವರೆಗೆ 45 ಮಂದಿ ಜ್ವರ ಪೀಡಿತರಾಗಿದ್ದು, ಒಬ್ಬರಿಗೆ ಡೆಂಗಿ ಇರುವುದು ಖಾತ್ರಿಯಾಗಿದೆ. ಉಳಿದವರಿಗೂ ಡೆಂಗಿ ಇರಬಹುದು ಎಂಬ ಶಂಕೆಯಿಂದ ಚಿಕಿತ್ಸೆ ನೀಡಲಾಗಿದೆ. 20 ಮಂದಿ ಬಿ.ಜಿ.ನಗರದ ಆದಿಚುಂಚನಗಿರಿ ಅಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಮತ್ತೆ 24 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ  ಡಾ.ಧನಂಜಯ ಶಾಸಕರ ಗಮನಕ್ಕೆ ತಂದರು.

‘ಪ್ರತಿ ನೀರಿನ ತೊಂಬೆಯಲ್ಲೂ 1 ಅಡಿ ನೀರು ನಿಲ್ಲುತ್ತಿದ್ದು ಅದನ್ನು ಸ್ವಚ್ಛಗೊಳಿಸಲು ಆಗುತ್ತಿಲ್ಲ. ಹಾಗಾಗಿ ಶುದ್ಧ ನೀರಿನ ಘಟಕವನ್ನು ನಿರ್ಮಿಸಿ ಕೊಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.ಜ್ವರ ಪೀಡಿತರ ಮನೆಯೊಂದಕ್ಕೆ ಶಾಸಕರ ನೇತೃತ್ವದ ತಂಡ ಭೇಟಿ ನೀಡಿ ಅಹವಾಲು ಆಲಿಸಿತು.

ಚಲುವರಾಯಸ್ವಾಮಿ ಮಾತನಾಡಿ, ‘ತಾಲ್ಲೂಕಿನ ಶೇ 90ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ನೀರಿನ ಸಮಸ್ಯೆ ಇದೆ. ತೀವ್ರ ಸಮಸ್ಯೆ ಇರುವ ಗ್ರಾಮಗಳಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳಿಗೆ ಆದ್ಯತೆ ನೀಡಿ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬೆಟ್ಟಸ್ವಾಮಿಗೌಡರಿಗೆ ಸೂಚಿಸಿದರು.

ಗ್ರಾಮಸ್ಥರು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಡೆ ಗಮನಹರಿಸಬೇಕು. ಕಾಯಿಲೆ ನಿಯಂತ್ರಿಸಲು ತಾಲ್ಲೂಕು ಮತ್ತು ಜಿಲ್ಲಾಡಳಿತ ಸಿದ್ಧವಾಗಿವೆ. ಶುದ್ಧ ನೀರಿನ ಘಟಕವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಧೂಮೀಕರಣವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸಾಕ್ಷ್ಯಚಿತ್ರದ ಮೂಲಕ ಗ್ರಾಮಸ್ಥರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಹೇಳಿದರು.    

ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಇಇ ರಾಮಕೃಷ್ಣ, ತಹಶೀಲ್ದಾರ್ ಸಿ.ಶಿವಣ್ಣ, ಜಿಲ್ಲಾ ಪಂಚಾಯಿತಿ ಎಇಇ ಶ್ರೀನಿವಾಸ ಗೌಡ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಚಾರಕಿ ರೂಪಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಮ್ಮ, ಸದಸ್ಯ ಅಶೋಕ, ದೇವರಾಜು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT