ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೂಳುನಗರ’ ಎಂದು ಹೆಸರು ಬದಲಿಸಿ

Last Updated 21 ಮೇ 2017, 9:59 IST
ಅಕ್ಷರ ಗಾತ್ರ

ಚಾಮರಾಜನಗರ: ಅಸಹನೀಯ ವಾತಾವರಣ ನಿರ್ಮಾಣವಾಗಿರುವ ಚಾಮರಾಜನಗರ ಜಿಲ್ಲೆಯ ಹೆಸರನ್ನು ‘ದೂಳುನಗರ’ ಎಂಬುದಾಗಿ ಬದಲಿಸಬೇಕು ಎಂದು ಕರ್ನಾಟಕ ಹೋರಾಟ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಸರ್ವೇ ಇಲಾಖೆ ಉಪನಿರ್ದೇಶಕ ಸೋಮಸುಂದರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ನಗರದ ಎಲ್ಲ ರಸ್ತೆಗಳು ದೂಳಿನಿಂದ ಕೂಡಿವೆ. ಜನರಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ರಾಮನಗರ ಜಿಲ್ಲೆಯನ್ನು ರೇಷ್ಮೆನಗರಿ, ಚನ್ನಪಟ್ಟಣವನ್ನು ಬೊಂಬೆನಗರ, ಮಂಡ್ಯವನ್ನು ಸಕ್ಕರೆನಾಡು ಎಂದು ಕರೆಯುವಂತೆ ಚಾಮರಾಜನಗರ ಜಿಲ್ಲೆಯನ್ನು ದೂಳ್‌ನಗರ ಎಂದು ಮರುನಾಮಕರಣ ಮಾಡಬೇಕು ಎಂದು ವ್ಯಂಗ್ಯವಾಡಿದರು.

ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ 20 ವರ್ಷ ಕಳೆದಿದೆ. ಆದರೆ, ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಇದನ್ನು ಜಿಲ್ಲಾಡಳಿತ ಹಾಗೂ ನಗರಸಭೆ ಸಮರ್ಪಕವಾಗಿ ಬಳಸಿಕೊಳ್ಳದೆ ಕಳಪೆ ಕಾಮಗಾರಿ ಮಾಡಿಸುತ್ತಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಬದಲು ಅಧಿಕಾರಿಗಳು ಅಭಿವೃದ್ಧಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.

ಒಳಚರಂಡಿ ಕಾಮಗಾರಿ ನೆಪವೊಡ್ಡಿ ನಗರದ 31 ವಾರ್ಡ್‌ಗಳ ಅಭಿವೃದ್ಧಿಗೆ ಅಡಚಣೆ ಉಂಟುಮಾಡಲಾಗಿದೆ. ರಸ್ತೆಗಳು ಹೊಲಗದ್ದೆಯಂತಾಗಿವೆ. ಚರಂಡಿಯಲ್ಲಿ ಹೂಳು ತುಂಬಿದ್ದು, ಮಳೆ ನೀರಿನಿಂದ ಬಡಾವಣೆಗಳು ಜಲಾವೃತವಾಗುತ್ತಿವೆ. ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ದೂರಿದರು.

ನಗರದಲ್ಲಿ ತಲೆದೋರಿರುವ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಾರ್ಕೆಟ್‌ ಗಿರೀಶ್, ಕಾರ್ಯಾಧ್ಯಕ್ಷ ನವೀನ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟರಾವ್‌ ಸಾಠೆ, ಮುಖಂಡರಾದ ಮನೋಜ್‌ ಕುಮಾರ್, ಮಧುಆಚಾರ್, ವಸಂತಕುಮಾರ್, ರಾಜು, ಕೃಷ್ಣ, ಪ್ರದೀಪ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT